ತಲೆ ತುಂಬಿರುವುದ ತಿಳಿವ ಅಲೆಯುಲಿ

ಪ್ರಶಾಂತ ಸೊರಟೂರ.

1_MiMiBa_EEG_2

ಇಂದಿನ ಎಡೆಬಿಡದ ಬದುಕಿನಲ್ಲಿ ಹತ್ತು ಹಲವು ವಿಶಯಗಳು ನಮ್ಮ ತೆಲೆಯಲ್ಲಿ ಬೀಡುಬಿಟ್ಟಿರುವಾಗ ಒಮ್ಮೆಲೆ ಹಾಡತೊಡಗುವ ಅಲೆಯುಲಿ (mobile phone) ನಮ್ಮ ತಲೆಯಲ್ಲಿ ಸಿಡುಕಿನ ಅಲೆಯನ್ನು ಎಬ್ಬಿಸದಿರದು. ಆ ಕರೆ ಎಶ್ಟೇ ಹತ್ತಿರದವರಾಗಿದ್ದರು ಮನವು ಸಿಡಿಮಿಡಿಗೊಳ್ಳುತ್ತದೆ. ಕರೆ ಈಗಲೇ ಬರಬೇಕಿತ್ತಾ ಅನ್ನಿಸುತ್ತದೆ.

ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಇತ್ತೀಚಿಗೆ AT&T ಕಂಪನಿಯ ಕಾರ‍್ಯಕ್ರಮವೊಂದರಲ್ಲಿ `ಗುಡ್ ಟಯಮ್ಸ್ ಪ್ರೊಜೆಕ್ಟ್ ’ ಹೆಸರಿನ ಏರ‍್ಪಾಡೊಂದನ್ನು ತೋರಿಸಲಾಗಿತ್ತು. ತಲೆಯಲ್ಲಿ ಹಲವು ವಿಚಾರಗಳು ಇರುವಾಗ, ಅಲೆಯುಲಿ ಕೂಗತೊಡಗಿದರೆ ಆ ಕರೆ ಮಾಡಿದವರಿಗೆ ‘ನಿಮ್ಮ ಕರೆಗೆ ನನಗೀಗ ಓಗೊಡಲು ಆಗದು’ ಅನ್ನುವಂತ ಇಲ್ಲವೇ ನಮಗೆ ಬೇಕಿರುವಂತ  ಹಿನ್ನುಡಿಯನ್ನು ಈ ಏರ‍್ಪಾಡು ತಂತಾನೇ ನೀಡಬಲ್ಲುದು.

`ಗುಡ್ ಟಾಯಮ್ಸ್ ಪ್ರೊಜೆಕ್ಟ್’ನಲ್ಲಿ ತಿಳಿಸಿರುವಂತೆ, ಕರೆ ಪಡೆಯುತ್ತಿರುವವರ ತಲೆಯಲ್ಲಿ ಹಲವು ವಿಚಾರಗಳಿವೆ ಅನ್ನುವುದನ್ನು ತಿಳಿದುಕೊಳ್ಳಲು ಕಿವಿಯೋಲೆಯಂತೆ ಹಾಕಿಕೊಳ್ಳಬಹುದಾದ `ಮಿದುಳು ಅಲೆ ತಿಳಿಯುಕ’ಗಳು (brain wave sensors) ಮತ್ತು ಅಲೆಯುಲಿಯಲ್ಲಿ ಇದರ ಬಳಕ (app) ಇರಬೇಕು. ತಿಳಿಯುಕಗಳು (sensors) ಮಿದುಳು ಹಲವು ಕೆಲಸಗಳಲ್ಲಿ ತೊಡಗಿರುವುದನ್ನು ಅಲೆಯುಲಿಗೆ ತಿಳಿಸುತ್ತದೆ, ಆಗ ಅಲೆಯುಲಿಯಲ್ಲಿರುವ ಬಳಕ, ಕರೆ ಪಡೆಯುವವರು ಬೇರೆ ಏನೋ ಕೆಲಸದಲ್ಲಿದಾರೆ ಅನ್ನುವಂತಹ ಮಾತುಗಳನ್ನು ಕರೆ ಮಾಡಿದವರಿಗೆ ಸಾಗಿಸುತ್ತದೆ.

ಮಿದುಳಿನಲ್ಲಿ ನಡೆಯುತ್ತಿರುವುದನ್ನು ತಿಳಿದುಕೊಳ್ಳಲು ಬಳಸುವ ಇಂತಹ ಅಳವಡಿಕೆಗಳ ಹಿನ್ನೆಲೆಯಾಗಿರುವುದು electroencephalography (EEG) ಎಂಬ ಹಳೆಯ ಚಳಕು (technology). ಕನ್ನಡದಲ್ಲಿ ಇದನ್ನು `ಮಿಂಚು-ಮಿದುಳ-ಬರಹ’ (ಮಿಮಿಬ) ಅನ್ನಬಹುದು. ‘ಮಿಮಿಬ’ದಲ್ಲಿ ತಲೆಯ ಮೇಲೆ ಚಿಕ್ಕ ಚಿಕ್ಕ ಮಿಂಚುಕಡ್ಡಿಗಳನ್ನು ಅಳವಡಿಸಿ (ಚಿತ್ರದಲ್ಲಿ ತೋರಿಸಿರುವಂತೆ) ಮಿದುಳಿನಲ್ಲಿ ಏಳುವ ಅಲೆಗಳಿಂದ ಒಳಗಿನ ಏರುಪೇರುಗಳನ್ನು ತಿಳಿದುಕೊಳ್ಳಬಹುದು. ಈ ಬಗೆಯ ಏರ‍್ಪಾಟನ್ನು ಮದ್ದರಿಮೆಯಲ್ಲಿ (medical science) ಮಿದುಳು ಗಡ್ಡೆಗಳಂತಹ ತೊಡಕುಗಳನ್ನು ತಿಳಿಯಲು ಈಗಾಗಲೇ ಬಳಸಲಾಗುತ್ತಿದೆ. ತಲೆ ಬಿಸಿ ಯಾಕೆ? ಈ ಚಳಕಿನಿಂದ ಬೇಡದಾಗ ಕರೆ ಮಾಡುವವರನ್ನು ನಿಮ್ಮ ಅಲೆಯುಲಿ ತಂತಾನೇ ದೂರವಿಡುವ ಕಾಲ ದೂರವಿಲ್ಲ…ಈಗಲೇ ಬೇಕಾದರೆ ಇಲ್ಲಿ ತೋರಿಸಿರುವಾತನಂತೆ ಕಾಣಲು ನೀವು ತಯಾರಿರಬೇಕಶ್ಟೆ!

(ಸುದ್ದಿ ಸೆಲೆ: ಪಾಪ್ಯುಲರ್ ಸಯನ್ಸ್.ಕಾಮ್, ವಿಕೀಪೀಡಿಯಾ ಮತ್ತು ಇತರ ಮಿಂಬಲೆ ತಾಣಗಳು)

ಪ್ರಶಾಂತ ಸೊರಟೂರ

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಬಹುಶಃ ಮಿದುಳಿನ ಸಂಜ್ಞೆಗಳನ್ನು ಅರ್ಥ ಮಾಡಿಕೊಂಡು ಡಿಕೋಡ್ ಮಾಡಬಲ್ಲ ಚಳಕು ಬರಲು ಹೆಚ್ಚಿನ ದಿನಗಳಿಲ್ಲ. ಮುಂದಿನ ಹಂತದಲ್ಲಿ ಮುಖ ನೋಡಿ ತಲೆಬಿಸಿ ಅರ್ಥ ಮಾಡಿಕೊಳ್ಳುವ ಮೊಬೈಲ್ ಫೋನ್ ಗಳು ಬರಬಹುದು.

ಅನಿಸಿಕೆ ಬರೆಯಿರಿ:

%d bloggers like this: