ಚಿನ್ನದ ಬೆಲೆಯೇಕೆ ಇಳಿದಿದೆ?

ಪ್ರಿಯಾಂಕ್ ಕತ್ತಲಗಿರಿ.

pada_pada

ಚಿನ್ನದ ಬೆಲೆ ಕಳೆದ ಹತ್ತು ವರುಶಗಳಲ್ಲಿ ಏರುತ್ತಲೇ ಸಾಗಿತ್ತು. 2011ರ ಕೊನೆಯ ಹೊತ್ತಿಗೆ, ಚಿನ್ನದ ಬೆಲೆ ಹಿಂದೆಂದು ಕಾಣದಶ್ಟು ಹೆಚ್ಚಾಗಿತ್ತು. 2011ರ ಕೊನೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 33,000 ರುಪಾಯಿ ಇದ್ದ ಬೆಲೆ, ಇವತ್ತಿಗೆ 25,000 ರುಪಾಯಿಗೆ ಇಳಿದಿದೆ. “ಚಿನ್ನದಲ್ಲಿ ದುಡ್ಡು ತೊಡಗಿಸಿದರೆ ಮೋಸ ಇಲ್ಲ”, “ಚಿನ್ನದಲ್ಲಿ ಹಣ ಹೂಡಿದರೆ ಅದು ಎಂದೆಂದಿಗೂ ಹಸಿರಾಗೇ ಇರುತ್ತದೆ” ಎನ್ನುತ್ತಿದ್ದವರೆಲ್ಲಾ, ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಚಿನ್ನದ ಬೆಲೆ ಬೀಳುತ್ತಿರುವುದಾದರೂ ಏಕೆ? ಮುಂದೆ ಓದಿ.

“ಚಿನ್ನವನ್ನು ಎಲ್ಲರೂ ಕೊಂಡುಕೊಳ್ಳುತ್ತಾರೆ, ಹಾಗಾಗಿ, ಚಿನ್ನದ ಬೆಲೆ ಎಂದಿಗೂ ಇಳಿಯಲ್ಲ” ಎಂಬ ನಂಬಿಕೆ ಹುಸಿಯಾದುದು. ಹಿನ್ನೆಲೆಯಲ್ಲಿ ನೋಡಿದರೆ, ಚಿನ್ನದ ಬೆಲೆಯೂ ಏಳು-ಬೀಳುಗಳನ್ನು ಕಂಡಿತ್ತು. 1971ರಲ್ಲಿ ಅಮೇರಿಕವು ಗೋಲ್ಡ್ ಸ್ಟಾಂಡರ‍್ಡಿನಿಂದ ಹೊರನಡೆದ ಮೇಲೆ, ಒಂದು ಅವುನ್ಸಿಗೆ $35 ಇದ್ದ ಚಿನ್ನದ ಬೆಲೆ, 1980ರ ಹೊತ್ತಿಗೆ $835 ನಶ್ಟಾಗಿತ್ತು. ಅಲ್ಲಿಂದ ಶುರುವಾದ ಚಿನ್ನದ ಬೆಲೆಯ ಬೀಳಿಕೆ, 2001ರ ಹೊತ್ತಿಗೆ ಒಂದು ಅವುನ್ಸಿಗೆ $250 ನಶ್ಟಕ್ಕೆ ಬಂದು ನಿಂತಿತ್ತು.2003ರಿಂದ 2011ರವರೆಗೆ ಮತ್ತೆ ಏರಿಕೆಯನ್ನೇ ಕಂಡ ಚಿನ್ನದ ಬೆಲೆಯು, 2011ರ ಹೊತ್ತಿಗೆ ಒಂದು ಅವುನ್ಸಿಗೆ $1,890 ನಶ್ಟಕ್ಕೆ ಬೆಳೆದು ನಿಂತಿತ್ತು. ಈಗ ಮತ್ತೆ ಇಳಿಕೆಯನ್ನು ಕಾಣುತ್ತಿರುವ ಚಿನ್ನದ ಬೆಲೆಯು ಮೊನ್ನೆ ಶುಕ್ರವಾರದ ಹೊತ್ತಿಗೆ ಒಂದು ಅವುನ್ಸಿಗೆ $1501 ಮಟ್ಟಕ್ಕೆ ಬಂದಿದೆ.

ಚಿನ್ನದ ಬೆಲೆಯು ಹಲವಾರು ಆಗು-ಹೋಗುಗಳ ಮೇಲೆ ನಿಂತಿದೆ. ಜಗತ್ತಿನ ಹಲ ನಾಡುಗಳ ಹಣಕಾಸು ಏರ‍್ಪಾಡಿನಲ್ಲಿ ತೊಂದರೆಗಳು ಕಾಣ ತೊಡಗಿದಾಗ, ಶೇರು ಮಾರುಕಟ್ಟೆಯಿಂದ ಚಿನ್ನದೆಡೆಗೆ ಹಣವು ಹರಿಯತೊಡಗುತ್ತದೆ. 2007-2008ರ ಹೊತ್ತಿಗೆ ಅಮೇರಿಕಾದಲ್ಲಿ ಕಂಡುಬಂದ ಹಣಕಾಸು ಗಂಡಾಂತರ, ಆಮೇಲೆ ಯುರೋಪ್ ಒಕ್ಕೂಟದಲ್ಲಿ ಕಂಡುಬಂದ ಹಣಕಾಸು ಗಂಡಾಂತರವು, ಹಲವು ಹೂಡಿಕೆದಾರರನ್ನು ಚಿನ್ನದತ್ತ ಮುಕಮಾಡುವಂತೆ ಮಾಡಿತ್ತು. 2010-2011ರಲ್ಲಿ ಸುಮಾರು 26 ಬಿಲಿಯನ್ ಡಾಲರುಗಳಶ್ಟು ಹಣವು ಚಿನ್ನದ ಮಾರುಕಟ್ಟೆಯಲ್ಲಿ ಹೂಡಿಕೆಯಾಗಿತ್ತು. ಇವೆಲ್ಲಾ ಕಾರಣಗಳಿಂದಾಗಿ, ಚಿನ್ನದ ಬೆಲೆಯು ಏರುತ್ತಾ ಸಾಗಿತ್ತು.

ಸುಮಾರು 2012-ರ ನಡುವಿನ ಹೊತ್ತಿಗೆ ಯುರೋಪ್ ಒಕ್ಕೂಟವನ್ನು ಹಣಕಾಸಿನ ಗಂಡಾಂತರದಿಂದ ಪಾರು ಮಾಡಲಾಗಿತ್ತು. “ಚಿನ್ನವು ಇನ್ನೂ ಏರಲು ಕಾರಣಗಳಿಲ್ಲ” ಎಂಬುದನ್ನು ಅರಿತ ಕೆಲ ನುರಿತ ಹೂಡಿಕೆದಾರರು, ಚಿನ್ನದಲ್ಲಿ ತೊಡಗಿಸಿದ್ದ ತಮ್ಮ ಹೂಡಿಕೆಯಿಂದ ಹೊರಬರಲು (ಮಾರಲು) ತೊಡಗಿದರು. ಹೀಗೆ, ಚಿನ್ನವು ಹೆಚ್ಚು ಬೆಲೆ ಹೊಂದಿರುವಾಗಲೇ ಮಾರುವುದು ಲಾಬ ತರುವ ಕೆಲಸ ಎಂಬುದನ್ನು ಕಂಡುಕೊಂಡವರಲ್ಲಿ, ಹೆಸರಾಂತ ಹೂಡಿಕೆದಾರ ಜಾರ‍್ಜ್ ಸೋರೋಸ್ ಕೂಡಾ ಒಬ್ಬರು.

ಚಿನ್ನದ ಇಳಿಕೆಗೆ ಇನ್ನೊಂದು ಕಾರಣವೆಂದರೆ ಸಿಪ್ರಸ್ ದೇಶ. ಇತ್ತೀಚೆಗೆ ಹಣಕಾಸು ಗಂಡಾಂತರ ಎದುರಿಸಿದ್ದ ಸಿಪ್ರಸ್ ದೇಶವನ್ನು, ಯುರೋಪ್ ಒಕ್ಕೂಟ ಪಾರುಮಾಡಿತ್ತು. ಹೀಗೆ ಪಾರುಮಾಡುವಾಗ ಹಾಕಲಾಗಿದ್ದ ಶರತ್ತುಗಳಿಗೆ ತಲೆಬಾಗಿ, ಸಿಪ್ರಸ್ ದೇಶ ತನ್ನಲ್ಲಿನ ಕೆಲ ಚಿನ್ನದ ಗಟ್ಟಿಯನ್ನು ಮಾರುಕಟ್ಟೆಯಲ್ಲಿ ಮಾರಬೇಕಾಗಿದೆ. ಮತ್ತು, ಹೀಗೆ ಮಾರುವ ಮೂಲಕ 200 ಮಿಲಿಯನ್ ಯೂರೋ ದುಡ್ಡನ್ನು ಒಟ್ಟುಮಾಡಬೇಕಾಗಿದೆ.

ಹೀಗಾಗಿ, ಇವತ್ತಿನ ದಿನ ಚಿನ್ನದ ಮಾರುಕಟ್ಟೆಯಲ್ಲಿ ಕೊಳ್ಳುಗರಿಗಿಂತ ಮಾರುವವರೇ ಹೆಚ್ಚಿರುವುದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.

ಮಾಹಿತಿ ಸೆಲೆ:

  1. http://economictimes.indiatimes.com/opinion/columnists/swaminathan-s-a-aiyar/gold-to-be-a-lousy-investment-in-the-next-decade/articleshow/19537567.cms
  2. http://www.bloomberg.com/news/2013-04-17/cyprus-central-bank-must-approve-gold-sale-finance-chief-says.html

ಪ್ರಿಯಾಂಕ್ ಕತ್ತಲಗಿರಿ

(ಚಿತ್ರ: www.bloomberg.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಚಿನ್ನದ ಬೆಲೆ ಏರಿದ್ದರಿಂದ ಯುರೋಪಿನ ಆರ್ಥಿಕ ಸಂಕಟ ದೂರವಾಗಿದ್ದಂತೂ ನಿಜ. ಫ್ಯೂಚರ್ ಮಾರ್ಕೆಟ್ ಸಹಾಯದಿಂದ ಚಿನ್ನದ ಬೆಲೆಯನ್ನು ಈ ಕಾರಣಕ್ಕಾಗಿಯೇ ವ್ಯವಸ್ಥಿತವಾಗಿ ಏರಿಸಲಾಗಿತ್ತೇ ಎಂಬ ಅನುಮಾನವೂ ಅನೇಕ ಸಲ ಕಾಡದೇ ಇರಲಾರದು

ಅನಿಸಿಕೆ ಬರೆಯಿರಿ: