ಡಬ್ಬಿಂಗ್ ಬಗ್ಗೆ ಸಿಂಪಲ್ಲಾಗ್ ಒಂದ್ ಮಾತು

Simpallag-Ondh-Love-Story-movie-stills-1

’ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದ ಒಂದು ನೋಟ

ಕನ್ನಡ ಚಿತ್ರ ನೋಡುಗರಿಗೆ ಇದು ಸುಗ್ಗಿಯ ಕಾಲ. ಕನ್ನಡ ಚಿತ್ರಗಳು ಸಾಲು ಸಾಲಾಗಿ ಒಂದರ ಹಿಂದೊಂದು ಬಿಡುಗಡೆ ಆಗ್ತಿವೆ. ಕನ್ನಡ ನೋಡುಗ ಎಲ್ಲಾ ಒಳ್ಳೆಯ ಸದಬಿರುಚಿಯ ಚಿತ್ರಗಳೆಲ್ಲವನ್ನೂ ಬಾಚಿ ತಬ್ಬಿ, ಎಂದಿನಂತೆ ಬೆನ್ತಟ್ಟುತ್ತಿದ್ದಾನೆ. ಸಾಮಾಜಿಕ ಚಿತ್ರವೇ ಆಗಿರಲಿ, ಅಯ್ತಿಹಾಸಿಕ ಚಿತ್ರವೇ ಆಗಿರಲಿ, ಹೊಸಬರೇ ಬರಲಿ, ಹಳಬರೇ ಇರಲಿ ಎಂದಿನಂತೆ ಕನ್ನಡ ನೋಡುಗ ಎಲ್ಲಾ ರೀತಿಯ ಒಳ್ಳೆಯ ಚಿತ್ರಗಳನ್ನು ಕಯ್ಹಿಡಿದಿದ್ದಾನೆ, ಮುಂದೆಯೂ ಕಯ್ಹಿಡಿಯುತ್ತಾನೆ.

ಈ ಮಾತಿಗೆ ಪೂರಕವಾಗಿ 200 ದಿನಗಳನ್ನು ಯಶಸ್ವಿಯಾಗಿ ಪೂರಯ್ಸಿದ ಚಿತ್ರ ಅದ್ದೂರಿ, 200 ದಿನಗಳನ್ನು ಯಶಸ್ವಿಯಾಗಿ ಪೂರಯ್ಸಿದ ಅಯ್ತಿಹಾಸಿಕ ಚಿತ್ರ ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಸಾರತಿ, ಗೊಂಬೆಗಳ ಲವ್, ಅಟ್ಟಹಾಸ, ಚಾರ್‍ಮಿನಾರ್‍, ಮಯ್ನಾ, ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ಬಚ್ಚನ್….ಅಬ್ಬಾ! ಒಂದಾ ಎರಡಾ ? ಇವುಗಳ ಹೊರತಾಗಿ ಲೂಸಿಯಾ, ಡಯ್ರೆಕ್ಟರ್‍ ಸ್ಪೆಶಲ್ ತರಹದ ಹೊಸತನದ ಚಿತ್ರಗಳನ್ನೂ ನೋಡಲು ಕನ್ನಡದ ನೋಡುಗ ಕಾತರದಿಂದ ಕಾಯುತ್ತಿದ್ದಾನೆ.

ಸಾಲು ಸಾಲು ಚಿತ್ರಗಳನ್ನು ಇತರೆ ನುಡಿಯ ಚಿತ್ರಗಳ ಪಯ್ಪೋಟಿಗಳ ನಡುವೆಯೂ ಗೆಲ್ಲಿಸುವ ತಾಕತ್ತು ಕನ್ನಡ ನೋಡುಗನಿಗಿದೆ ಎಂಬುದು ಪದೇ-ಪದೇ ಸಾಬೀತಾಗುತ್ತಲಿದೆ. ಡಬ್ಬಿಂಗ್ ಬಂದ್ರೂ ಅಶ್ಟೆ, ಕನ್ನಡದ ಸದಬಿರುಚಿಯ ಚಿತ್ರಗಳನ್ನು ಎಂದಿಗೂ ಕಯ್ಬಿಡೋದಿಲ್ಲ. ಅಂತದ್ರಲ್ಲಿ ಡಬ್ಬಿಂಗ್ ಬಂದುಬಿಟ್ರೆ ಕನ್ನಡ ನೋಡುಗ ಕನ್ನಡ ಚಿತ್ರಗಳನ್ನ ನೋಡೋದಿಲ್ಲ ಅನ್ನುವ ನೆಪವೊಡ್ಡಿ, ಇಲ್ಲ ಸಲ್ಲದ ಆರೋಪ ಹೊರೆಸಿ ಎಲ್ಲವನ್ನೂ ತನ್ನ ತಾಯ್ನುಡಿಯಲ್ಲೇ ಪಡೆಯಬೇಕೆನ್ನುವ ಆಯ್ಕೆಯನ್ನೇ ಕಸಿದುಕೊಂಡಿರುವುದು ಕನ್ನಡ ನೋಡುಗನಿಗೆ ಮಾಡುತ್ತಿರುವ ಅವಮಾನ, ದಬ್ಬಾಳಿಕೆಯಲ್ಲವೇ ?

ತಮಿಳುನಾಡು, ಕೇರಳ ರಾಜ್ಯಗಳ ಜೊತೆ ಗಡಿಬಾಗವನ್ನು ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನಲ್ಲಿ ಮಾರಾಟ ಮಾಡುತ್ತಿರುವ ಚಿತ್ರದ ಸಿ.ಡಿ. ನೋಡಿ ಗಾಬರಿಯಾಯಿತು. ಗಡಿನಾಡಾದರೂ ಇಲ್ಲಿನ ಕನ್ನಡಿಗರಿಗೆ ಕನ್ನಡ ಬಿಟ್ಟು ಬೇರೆ ನುಡಿಗಳ ಅರಿವಿರಲಿಲ್ಲ. ಅಂಗಡಿಯೊಂದರಲ್ಲಿ ಮಾರಾಟ ಮಾಡಲು ಇಟ್ಟಿದ್ದ ಇಂಗ್ಲಿಶ್ ಮೂಲದ ಚಿತ್ರಗಳು ತಮಿಳಿಗೆ ಡಬ್ ಆಗಿ ಬರುತ್ತಿವೆ. ಅಂಗಡಿಯವರು ಈ ರೀತಿಯ ಚಿತ್ರಗಳು ಚೆನ್ನಾಗಿ ಮಾರಾಟವಾಗುತ್ತಿವೆ ಅನ್ನೋದನ್ನ ಕೇಳಿ ಗರಬಡಿದಂತಾಯಿತು. ಕನ್ನಡದಲ್ಲಿ ಡಬ್ಬಿಂಗ್ ಇದ್ದಿದ್ರೆ ಜನ ಈ ಚಿತ್ರವನ್ನು ಕನ್ನಡದಲ್ಲಿ ನೋಡುತ್ತಿದ್ದರು. ತಮಿಳು ಅವತರಣಿಕೆಯಿಂದ ಜನ ತಮಿಳನ್ನ ಕಲಿತು ತಮಿಳು ಚಿತ್ರಗಳತ್ತ ವಾಲುತ್ತಾರೆ ಅನ್ನುವ ಅಂಗಡಿಯವರ ಮಾತು ದಿಟವಲ್ಲವೇ ?

ಬರಿ ಕನ್ನಡ ಮಾತ್ರ ಬಲ್ಲ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ತೆಲುಗಿನ ಚಿತ್ರ! ಹುಲ್ಲಹಳ್ಳಿಗೂ ತೆಲುಗಿಗೂ ಎಲ್ಲಿಂದೆಲ್ಲಿಯ ನಂಟು! ಸಾಲುಸಾಲಾಗಿ ಹತ್ತಾರು ಒಳ್ಳೆಯ ಕನ್ನಡ ಚಿತ್ರಗಳು ಬರುತ್ತಿದ್ದರೂ ನಂಜನಗೂಡಿನಂತಹ ತಾಲೂಕಿನಲ್ಲಿ ಕನ್ನಡದ ಚಿತ್ರವಿಲ್ಲದಿರುವುದು ಕನ್ನಡ ಮಾರುಕಟ್ಟೆಯನ್ನು ಚಿತ್ರರಂಗದ ಮಂದಿ ಎಶ್ಟರ ಮಟ್ಟಿಗೆ ನಿಬಾಯಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಕನ್ನಡ ಮಾರುಕಟ್ಟೆಯನ್ನು ಚಿಕ್ಕದು ಎಂದು ಬೊಬ್ಬೆ ಹೊಡೆಯುವವರು ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ನಾಡಿನ ಒಳಗೂ, ಹೊರಗೂ ವಿಸ್ತರಿಸುವತ್ತ ಗಮನಹರಿಸಲಿ. ಇನ್ನೊಂದೆಡೆ ಡಬ್ಬಿಂಗ್ ಇನ್ನಶ್ಟು ಕನ್ನಡ ನೋಡುಗರನ್ನು ಹುಟ್ಟು ಹಾಕುತ್ತದೆ. ಹಾಗಾಗಿ ಡಬ್ಬಿಂಗ್ ಕನ್ನಡಕ್ಕೆ, ಕನ್ನಡ ಚಿತ್ರೋದ್ಯಮಕ್ಕೆ ಪೂರಕವೇ ಹೊರತು ಮಾರಕವಲ್ಲ.

“ತಮಿಳು, ತೆಲುಗು ಬಾಶೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಬೇಕೆಂದೇ ಸಿನಿಮಾದಲ್ಲಿನ ಪಾತ್ರಗಳಿಗೆ ಪರಬಾಶೆಯ ನಟರನ್ನು ಆಯ್ಕೆ ಮಾಡಿಕೊಂಡಿದ್ದು” – ಇದು ಇತ್ತೀಚೆಗೆ ತೆರೆಕಂಡ ಬಚ್ಚನ್ ಚಿತ್ರದ ಸಿನಿಮಾ ನಿರ್‍ದೇ ಶಕ ಶಶಾಂಕ್ ಹೇಳಿಕೆ. ಈ ರೀತಿ ನಾವು ಬೇರೆ ನಿರ್‍ದೇದಶಕರು (ಉಪೇಂದ್ರ, ಚಂದ್ರು) ಸಹ ಮಾಡಿರುವುದನ್ನು ಈ ಹಿಂದೆ ನೋಡಿದ್ದೇವೆ. ಮುಂದೆಯೂ ನೋಡುತ್ತೇವೆ. ನೋಡಿ ಹೇಗಿದೆ ಕನ್ನಡ ನೋಡುಗನನ್ನು ನಡೆಸಿಕೊಳ್ಳುವ ಚಿತ್ರರಂಗದವರ ಮನಸ್ತಿತಿ! ಇತರೆ ಬಾಶಿಕರಿಗೆ ಕನ್ನಡ ಸಿನಿಮಾವೊಂದನ್ನು ತೋರಿಸಲು ಹೊರಗಿನಿಂದ ನಟರನ್ನು ಆರಿಸಿ, ಅವವೇ ನುಡಿಯಲ್ಲಿ ಡಬ್ ಮಾಡಿ ತಮಿಳು, ತೆಲುಗು ನೋಡುಗರ ಮುಂದಿಡುತ್ತಾರೆ. ಆದರೆ ಎಲ್ಲವನ್ನೂ ತಮ್ಮ ತಾಯ್ನುಡಿಯಲ್ಲಿ ಪಡೆದುಕೊಳ್ಳಬೇಕೆನ್ನುವ ಕನ್ನಡ ನೋಡುಗನಿಗೆ ಅಸಂವಿದಾನಿಕ ಡಬ್ಬಿಂಗ್ ನಿಶೇದವನ್ನು ಹೇರಿ ಗ್ನಾನ-ವಿಗ್ನಾನ, ಮಾಹಿತಿ ಮನರಂಜನೆಗಳೆಲ್ಲದಕ್ಕೂ ಬೇರೆ ನುಡಿಯನ್ನು ನೆಚ್ಚಿಕೊಳ್ಳುವಂತ ಹೀನಾಯ ಸ್ತಿತಿಯನ್ನು ತಂದೊಡ್ಡಿದಾರೆ.

ನಟ-ನಟಿ,ನಿರ್‍ದೇಶಕ ಇತ್ಯಾದಿಯಾಗಿ ಯಾರೆಂದೇ ಗೊತ್ತಿಲ್ಲದೆ ಸಿನೆಮ ಚೆನ್ನಾಗಿದೆ ಅಂತ ಕನ್ನಡ ನೋಡುಗ ಮುಗಿಬಿದ್ದು ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರ ನೋಡ್ತಿದಾನೆ. ಚಿತ್ರಮಂದಿರದವರು ಬೆಚ್ಚಿ ಬೀಳುವಂತ ಪ್ರತಿಕ್ರಿಯೆ ಬಂದಿದೆ. ದಂಡಿಯಾಗಿ ಡಬ್ಬಿಂಗ್ ಚಿತ್ರಗಳು ಇವತ್ತು ಇದ್ದಿದ್ದರೂ ಕನ್ನಡ ನೋಡುಗ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರವನ್ನು ಇಶ್ಟೇ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದ ಅಲ್ಲವೇ? ಒಳ್ಳೆಯ ಚಿತ್ರಗಳನ್ನು ಕನ್ನಡ ನೋಡುಗ ಎಂದಿಗೂ ಬೆನ್ತಟ್ಟುತ್ತಾನೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಡಬ್ಬಿಂಗ್ ಬೇಡ ಎಂದು ಕನ್ನಡ ನೋಡುಗನ ಮೇಲೆ ಗೂಬೆ ಕೂರಿಸುವುದು ಸರಿಯೇ?

ಕೊನೆಯದಾಗಿ, ಇತ್ತೀಚೆಗೆ ಹೊರಬಂದ ತನ್ನ ನಿಲುವರಿಕೆಯಲ್ಲಿ ಬಿಜೆಪಿ ಕಣ್ಮುಚ್ಚಿಕೊಂಡು, ಡಬ್ಬಿಂಗ್ ನಿಂದ ಕನ್ನಡಕ್ಕಾಗುವ ಒಳಿತನ್ನು ಯೋಚಿಸದೆ ಡಬ್ಬಿಂಗ್ ತಡೆಯನ್ನು ಮುಂದುವರೆಸುವುದಾಗಿ ಹೇಳಿಕೊಂಡಿದೆ. ಇದು ಅದರ ಕನ್ನಡ ಪರದ ನಿಲುವೇನು ಎಂಬುದನ್ನು ತಿಳಿಸುತ್ತದೆ. ಬಿಜೆಪಿ ನಾಡು-ನುಡಿ-ನಾಡಿಗರ ಹಿತವನ್ನು ಬದಿಗೊತ್ತಿ ಕನ್ನಡ ಚಿತ್ರರಂಗದ ಕೆಲ ಮಂದಿಯ ಹಿತವನ್ನು ಕಾಪಾಡುವ ಕುರುಡು ಆಳ್ಮೆಯನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಸಾರಿಕೊಳ್ಳುತ್ತಿದೆ. ಡಬ್ಬಿಂಗ್ ಕನ್ನಡಕ್ಕೆ ಪೂರಕ ಎನ್ನುವ ಸಿಂಪಲ್ಲಾದ ಒಂದು ಮಾತು ಇವರಿಗೆಲ್ಲ ಏಕೆ ಅರ‍್ತವಾಗುತ್ತಿಲ್ಲ?

ಮಲ್ಲೇಶ್ ಬೆಳವಾಡಿ ಗವಿಯಪ್ಪ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks