ಗಟ್ಟು ಮಾಡಿ ಅಂಕ ಗಳಿಸುವುದು ಕಲಿಕೆಯೇ?

Rote-11998-99, 10 ನೇ ತರಗತಿಯಲ್ಲಿ ಓದುತ್ತಿದ್ದ ವರ್‍ಶ. ಕಾಡುಗುಡಿ ಎನ್ನುವ ಊರು. ಇಲ್ಲಿರುವ ಸರ್‍ಕಾರಿ ಶಾಲೆ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿತ್ತು. ಅಕ್ಕ-ಪಕ್ಕದ ಹತ್ತಾರು ಹಳ್ಳಿಗಳಿಂದ ಕಾಡುಗುಡಿ ಸರ್‍ಕಾರಿ ಶಾಲೆಗೆ ಮಕ್ಕಳು ಸೇರುತ್ತಿದ್ದರು. ಹಾಗಾಗಿ ಹೆಚ್ಚಿನ ವಿದ್ಯಾರ್‍ತಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದೆವು. ಎಲ್ಲಾ ವರ್‍ಗದ ಮಕ್ಕಳು ಇಲ್ಲಿ ಕಲಿಯುತ್ತಿದ್ದರೂ ಬಹುತೇಕ ಮಕ್ಕಳು ಬಡತನ ರೇಕೆಗಿಂತ ಗೆಳಗಿನವರು. ಆದರೆ ಕಲಿಕೆಯಲ್ಲಿ ಬಹಳ ಮುಂದಿದ್ದರು. ಅನೇಕ ಗೆಳೆಯ-ಗೆಳತಿಯರು ಒಬ್ಬರಿಗೊಬ್ಬರು ಉತ್ತಮ ಪಯ್ಪೋಟಿಯೊಂದಿಗೆ ಕಲಿಕೆಯಲ್ಲಿ ಮುಂದಿದ್ದರು.

ಹೀಗಿರುವಾಗ 10ನೇ ತರಗತಿಯ ಪಲಿತಾಂಶ ಬಂತು. ಇಡೀ ಶಾಲೆಯಲ್ಲಿ ಹಬ್ಬದ ವಾತಾವರಣ. ಬಹಳಶ್ಟು ಗೆಳೆಯ-ಗೆಳತಿಯರು ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದರು. ಅದರಲ್ಲೂ ಗಣಿತದ ಜ್ಯಾ, ತ್ರಿಜ್ಯ, ವ್ಯಾಸ, ಮಾತ್ರುಕೆ, ಪ್ರಮೇಯ, ಲ.ಸ.ಅ, ಮ.ಸ.ಅ ಹಾಗೂ ವಿಗ್ನಾನದ ಅಪದಮನಿ, ಅಬಿದಮನಿ, ದ್ಯುತಿ ಸಂಶ್ಲೇಶಣೆ….ಅಬ್ಬಾ ಗೊತ್ತು ಗುರಿಯಿಲ್ಲದ, ಅರ್‍ತವಾಗದ ಹೊತ್ತಗೆಯ ತುಂಬಾ ತುಂಬಿ ತುಳುಕುತ್ತಿದ್ದ ಈ ರೀತಿಯ ಕಶ್ಟಕರ ಪದಗಳನ್ನು ಬಾಯಿಗಟ್ಟು ಮಾಡಿಕೊಂಡು ಅಂಕಗಳನ್ನು ಗಳಿಸುವುದು ಕನ್ನಡ ಮಾದ್ಯಮ ವಿದ್ಯಾರ್‍ತಿತಗಳ ಸಾದನೆಯೇ ಸರಿ! ಇನ್ನುಳಿದ ವಿದ್ಯಾರ್‍ತಿಗಳಿಗೆ ಆಡುಪದಗಳನ್ನು ಬಳಸಿ ಪಟ್ಯವನ್ನು ಸುಳುವಾಗಿಸದೆ ನಮಗರ್‍ತವಾಗದ ಪದಗಳನ್ನು ಬಳಸಿದ್ದು 10ನೇ ತರಗತಿಗೆ ಬರುವಶ್ಟರಲ್ಲಿ ಗಣಿತ, ವಿಗ್ನಾನಗಳು ಕಬ್ಬಿಣದ ಕಡಲೆಯಂತಾಗಿ ಅವರಿಂದ ದೂರ ಉಳಿದಿದ್ದವು.

ಮುಂದೆ ನಾವು ಪಿ.ಯು.ಸಿ ಗೆ ಸೇರಲು ಅಣಿಯಾದೆವು. ಕುಶಿಯಿಂದ ವಿಗ್ನಾನ ವಿಬಾಗ ಸೇರಲು ಹೋದ ನನಗೆ ಆಶ್ಚರ್‍ಯ ಮತ್ತು ನಿರಾಶೆ! ಕಾರಣ ವಿಗ್ನಾನ ವಿಬಾಗವನ್ನು ಆರಿಸಿಕೊಂಡಿದ್ದು 3 ಜನ ಗೆಳೆಯರು ಮಾತ್ರ! ಒಳ್ಳೆಯ ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಪಾಸಾಗಿದ್ದರೂ, ಗಣಿತದ ಲೆಕ್ಕಗಳನ್ನು ಸುಳುವಾಗಿ ಬಿಡಿಸುತ್ತಿದ್ದ, ವಿಗ್ನಾನದ ವಿಶಯಗಳಿಗೆ ಆಡುಬಾಶೆಯಲ್ಲಿ ಪಟಪಟನೆ ಉತ್ತರಿಸುತ್ತಿದ್ದ, ಗಣಿತ-ವಿಗ್ನಾನಗಳು ತಮ್ಮಿಶ್ಟದ ವಿಶಯಗಳಾಗಿದ್ದರೂ ಅವರು ಆರಿಸಿಕೊಂಡದ್ದು ಕಲೆ ಮತ್ತು ವಾಣಿಜ್ಯ ವಿಬಾಗವನ್ನ!
ಇದಕ್ಕೆ ಬಲವಾದ ಕಾರಣ,

  • ಉನ್ನತ ಕಲಿಕೆ ಕನ್ನಡ ಮಾದ್ಯಮದಲ್ಲಿ ಸಿಗದಿರುವುದು.
  • ಅರ್‍ತವಾಗದ ಪದಗಳನ್ನು ತುಂಬಿ ವಿಶಯಗಳನ್ನು ಕಬ್ಬಿಣದ ಕಡಲೆಯನ್ನಾಗಿಸಿದರ ಪರಿಣಾಮ ತಾಯ್ನುಡಿಯಲ್ಲಿಯೇ 10 ನೇ ತರಗತಿಯಲ್ಲೇ ಗಣಿತ-ವಿಗ್ನಾನಗಳು ಇಶ್ಟೊಂದು ಕಶ್ಟವಿರುವಾಗ ಮುಂದೆ ಇಂಗ್ಲೀಶಿನಲ್ಲಿ ಇನ್ನಶ್ಟು ಕಶ್ಟವಾಗುವುದೆನ್ನುವ ಬಯ ಮೂಡಿದ್ದು.

ಇದರ ಪರಿಣಾಮವಾಗಿ, ಹೆಚ್ಚಿನದನ್ನು ಸಾದಿಸುವ ಪ್ರತಿಬೆಯನ್ನು ಹೊಂದಿದ್ದ ಅನೇಕ ಗೆಳೆಯ ಗೆಳತಿಯರು ತಮ್ಮಿಶ್ಟದ ವಿಶಯಗಳನ್ನು ಆರಿಸಿಕೊಳ್ಳಲಾಗದೆ ಬೇರೊಂದು ವಿಶಯವನ್ನು ಆರಿಸಿಕೊಂಡು ಮುಂದೆ ತಮ್ಮ ವಿದ್ಯಾಬ್ಯಾಸವನ್ನು ಮೊಟಕುಗೊಳಿಸಿ ಅವಕಾಶವಂಚಿತರಾದರು. ಕನ್ನಡ ಮಾದ್ಯಮದಲ್ಲಿನ ಕಲಿಕೆ ಆಡುಪದಗಳಿಂದ ಸುಳುವಾಗಿದ್ದಿದ್ದರೆ, ಉನ್ನತ ಕಲಿಕೆ ಕನ್ನಡ ಮಾದ್ಯಮದಲ್ಲಿದ್ದಿದ್ದರೆ ಇವರೆಲ್ಲರ ನಿಜವಾದ ಪ್ರತಿಬೆ ಹೊರಬರುತ್ತಿತ್ತು, ಇವರು ಹೆಚ್ಚಿನದನ್ನೇನಾದರೂ ಸಾದಿಸುತ್ತಿದ್ದರು ಎನ್ನುವ ವಿಶಯ ಇಂದಿಗೂ, ಮುಂದೆಯೂ ಕಾಡುತ್ತಿರುತ್ತದೆ.

ಇದು ಬರಿ ಕಾಡುಗುಡಿ ಸರ್‍ಕಾರಿ ಶಾಲೆಯ ಪ್ರತಿಬೆಗಳ ಪ್ರತಿ ವರ್‍ಶದ ಕತೆಯಲ್ಲ. ಇಂದಿನ ಕಲಿಕೆ ವ್ಯವಸ್ತೆಯ ಲೋಪಗಳಿಂದ ನಾಡಿನಾದ್ಯಂತ ಎಣಿಸಲಾರದಶ್ಟು ಕನ್ನಡದ ಪ್ರತಿಬೆಗಳು ಹೊರಬರದೆ ಎಳೆಯದರಲ್ಲಿಯೇ ಚಿವುಟಿಹೋಗುತ್ತಿವೆ. ಇದು ನಾಡಿಗೆ ಆಗುತ್ತಿರುವ ದೊಡ್ಡ ನಶ್ಟ. ಇದು ನಾಡಿನ ಏಳಿಗೆಯನ್ನು ಕುಂಟಿತಗೊಳಿಸುತ್ತಿದೆ. ಇನ್ನಾದರೂ ನಾಡಿನ ಕಲಿಕೆಯ ವ್ಯವಸ್ತೆ ಬದಲಾಗಲಿ. ಜಗತ್ತೇ ಕನ್ನಡ ನಾಡಿನತ್ತ ನೋಡುವಂತ ಉನ್ನತ ಕಲಿಕೆ ನಾಡಿಗರಿಗೆ ಕನ್ನಡದಲ್ಲಿ ಸಿಗಲಿ. ನಾಡಿನ ಮಕ್ಕಳ ಪ್ರತಿಬೆ ಹೊರಬರಲಿ. ಆ ಮೂಲಕ ಕನ್ನಡ ನಾಡು ಏಳಿಗೆ ಹೊಂದಲಿ ಎಂದು ಹಾರಯ್ಸೋಣ.

ಮಲ್ಲೇಶ ಬೆಳವಾಡಿ ಗವಿಯಪ್ಪ

(ಚಿತ್ರ: http://www.readfast.co.uk)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.