ಪೊಕ್ಸ್-ವ್ಯಾಗನ್ ನಿಂದ ಹೊಸ ಹೊಳಹು

hybrid

ಮುಂಬೊತ್ತಿನ ಬಂಡಿಗಳೆಂದೇ ಹೆಸರುವಾಸಿಯಾಗಿರುವ ಬೆರಕೆ (ಹಯಬ್ರೀಡ್) ಕಾರುಗಳು ಇತ್ತೀಚಿಗೆ ಮುಂದುವರೆದ ದೇಶಗಳಲ್ಲಿ ಚುರುಕಾಗಿ ಹೊರಬರುತ್ತಿದ್ದು, ಇದೀಗ ಜಗತ್ತಿನೆಲ್ಲೆಡೆ ಹೆಸರುಗಳಿಸಿರುವ ಜರ್‍ಮನಿಯ ಮುಂಚೂಣಿ ಕಾರು ತಯಾರಿಕೆ ಕೂಟ ಪೋಕ್ಸ್-ವ್ಯಾಗನ್ ಹೊಸದಾದ ಹೊಳಹು ಕಾರೊಂದನ್ನು (concept car) ಎಲ್ಲರ ಮುಂದಿಟ್ಟಿದೆ.

ಬೆರಕೆ (ಹಯಬ್ರೀಡ್) ಕಾರುಗಳೆಂದರೆ ಎರಡು ಇಲ್ಲವೇ ಅದಕ್ಕಿಂತ ಹೆಚ್ಚಿನ ಶಕ್ತಿಸೆಲೆಗಳನ್ನು ಹೊಂದಿರುವ ಕಾರುಗಳು. ಹೆಚ್ಚಾಗಿ ಬೆರಕೆ ಕಾರುಗಳು, ಒಳ ಉರಿಯುವಿಕೆ ಬಿಣಿಗೆ (internal combustion engine) ಮತ್ತು ಮಿಂಚು ಓಡುಕಗಳ (electric motor) ಬೆರೆತವಾಗಿರುತ್ತವೆ. ಹೀಗೆ ಎರಡು ಬಗೆಯ ಕಸುವು ನೀಡುವ ಸೆಲೆಗಳನ್ನು ಬೆರೆಸುವುದರಿಂದ ಹಲವಾರು ಪ್ರಯೋಜನಗಳಿವೆ. ಕಡಿಮೆ ಕೆಡುಕು ಗಾಳಿ ಉಗುಳುವ, ಹೆಚ್ಚಿನ ಕಸುವು ನೀಡಬಹುದಾದ, ಕಡಿಮೆ ಉರುವಲು ಬಳಸುವ ಕಾರುಗಳು ಇವಾಗಿರುತ್ತವೆ.

ಇತ್ತೀಚಿಗೆ ನಡೆದ ಕತಾರ್‍ ಅಟೋ ಶೋನಲ್ಲಿ XL-1 ಎಂಬ ಹೆಸರಿನಿಂದ ಪೋಕ್ಸ್-ವ್ಯಾಗನ್ ಈ ಬೆರಕೆ ಕಾರನ್ನು ತೋರಿಸಿತ್ತು. ಡೊಲ್ಪಿನಂತಿರುವ, ಕಣ್ಮನ ಸೆಳೆವ ಈ ಹೊಳಹು ಕಾರು (concept car) ಎರಡು ಉರುಳೆಯ ಡಿಸೇಲ್ ಬಿಣಿಗೆ ಹೊಂದಿದ್ದು 35 kW ಕಸುವು ಹೊಮ್ಮಿಸುತ್ತದೆ ಇದರ ಜೊತೆಗೆ ಬೇಕಿರುವಾಗ ಬಳಸಬಹುದಾದ 20 kW ಕಸುವಿನ ಮಿಂಚೋಡುಕವನ್ನೂ (electric motor) ಹೊಂದಿದೆ. ರೆಕ್ಕೆಯಂತಿರುವ ಇದರ ಬಾಗಿಲುಗಳೂ ಕೂಡಾ ಎಲ್ಲರನ್ನೂ ಸೆಳೆಯುವಂತಿವೆ.

ತನ್ನ ನೋಟದ ಜೊತೆಗೆ ಎಲ್ಲರ ಗಮನ ಸೆಳೆಯುವುದು ಈ ಕಾರು ಹೊಮ್ಮಿಸುವ ’ಉರುವಲಿನ ಅಳವುತನ’ (fuel efficiency). ಈ ಕಾರು ಡಿಸೇಲ್ ಬಿಣಿಗೆಯಿಂದಶ್ಟೇ ಓಡಿಸಿದಾಗ 100 ಕಿ.ಮೀ. ಸಾಗಲು ಬೇಕಾಗುವ ಡಿಸೇಲ್ 2 ಲೀಟರಶ್ಟೇ ಹಾಗೆನೇ ಮಿಂಚೋಡುಕ ಮತ್ತು ಡಿಸೇಲ್ ಬಿಣಿಗೆ ಎರಡೂ ಬಳಸಿ ಓಡಿಸಿದಾಗ ಬೇಕಿರುವ ಉರುವಲು ಬರೀ 0.9 ಲೀಟರ್‍ ಅಂದ್ರೆ ಈಗಿರುವ ಕಾರುಗಳ ಮೂರು-ನಾಲ್ಕು ಪಟ್ಟು ಅಳವುತನ ಹೊಂದಿದ ಕಾರು ಇದಾಗಲಿದೆ.

2013 ರಲ್ಲಿ XL1 ಮಾದರಿಯ ಮೊದಲ ಕೆಲವು ಕಾರುಗಳನ್ನು ಹೊರತರಲಿದ್ದು ಆಮೇಲೆ ಈ ಕುರಿತು ಹೆಚ್ಚಿನ ಯೋಜನೆಯನ್ನು ಹಾಕಿಕೊಳ್ಳುವುದಾಗಿ ಪೋಕ್ಸ್-ವ್ಯಾಗನ್ ತಿಳಿಸಿದ್ದು, ಜರ್‍ಮನಿ, ಅಮೆರಿಕಾ ಮತ್ತು ಚೀನಾ ದೇಶಗಳ ನುಣುಪಾದ ಬೀದಿಗಳಲ್ಲಿ ಜುಮ್ಮ ಅಂತ ಓಡಾಡಲು ಸಜ್ಜಾಗಲಿವೆ.

ಮಾಹಿತಿ ಸೆಲೆಗಳು:

  • www.popsci.com
  • www.wikipedia.com 

ಜಯತೀರ್‍ತ್ ನಾಡಗವ್ಡ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: