ಆ ಸಗ್ಗದೆಡೆಗೆ, ತಂದೆಯೇ, ನನ್ನ ನಾಡು ಎಚ್ಚರಗೊಳ್ಳಲಿ

ಇಂದು ರಬೀಂದ್ರನಾತ ಟಾಕೂರರ ಹುಟ್ಟುಹಬ್ಬ. ಅವರ ‘Where the mind is without fear’ (ಬಾಂಗ್ಲಾ: Chitto Jetha Bhayshunyo) ಎಂಬ ಹೆಸರಿನ ಕವನದ ಎಲ್ಲರಕನ್ನಡದ  ಒಂದು ಒಬ್ಬೆ ಇಲ್ಲಿದೆ. 1900ರಲ್ಲಿ ಬರೆಯಲಾದ ಈ ಕವನ 1901ರ ಜುಲಯ್ನಲ್ಲಿ ‘ನಯ್ವೇದ್ಯ’ ಹೊತ್ತಗೆಯಲ್ಲಿ ಕಾಣಿಸಿಕೊಂಡಿತು. ಬಾಂಗ್ಲಾ ನುಡಿಯಲ್ಲಿ ತಾವೇ ಬರೆದ ಈ ಕವನವನ್ನು ರಬೀಂದ್ರರು ಇಂಗ್ಲಿಶಿಗೆ ನುಡಿಮಾರಿಸಿದ್ದು 1911ರಲ್ಲಿ. ಲಂಡನ್ನಿನ ಇಂಡಿಯಾ ಸೊಸಯ್ಟಿ 1912ರಲ್ಲಿ ಹೊರತಂದ ‘ಗೀತಾಂಜಲಿ’ ಇಂಗ್ಲಿಶ್ ನುಡಿಮಾರಿನ ಕವನ ಗೊಂಚಲಿನಲ್ಲಿ 35ನೇ ಕವನವಾಗಿ ಇದು ಕಾಣಿಸಿಕೊಂಡಿತು. ಆಗ ಬಾರತೀಯ ಪ್ರಾರ‍್ತನೆ(ಇಂಡಿಯನ್ ಪ್ರೇಯರ್) ಎಂಬ ಹೆಸರು ಹೊಂದಿದ್ದ ಈ ಕವನವನ್ನು ರಬೀಂದ್ರರು 1917ರಲ್ಲಿ ಕಲಕತ್ತೆಯಲ್ಲಿ ನಡೆದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಕೂಟದಲ್ಲಿ ಓದಿದರು. ಬಾರತ ಮತ್ತು ಬಾಂಗ್ಲಾ ದೇಶಗಳೆರಡರಲ್ಲೂ ಈ ಕವನ ಹೆಸರುವಾಸಿ. ಅಮೆರಿಕೆಯ ಅದ್ಯಕ್ಶ ಬರಾಕ್ ಒಬಾಮ 2010ರಲ್ಲಿ ಬಾರತದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದಾಗ ಈ ಕವನದ ಮೊದಲೆರಡು ಸಾಲುಗಳನ್ನು ಬಳಸಿದ್ದರು.

tagore

ಇಂಗ್ಲಿಶ್ ಮೂಲ: ರಬೀಂದ್ರನಾತ ಟಾಕೂರ
ಎಲ್ಲರಕನ್ನಡಕ್ಕೆ: ಶಶಿಕುಮಾರ್

ಅಂಜಿಕೆಯಿಲ್ಲದ ಮನವಿರುವೆಡೆ, ತಲೆ ಮೇಲೆತ್ತಿ ನಡೆವೆಡೆಗೆ
ಅರಿವು ತೆರೆದಿರುವೆಡೆಗೆ
ಇಕ್ಕಟ್ಟಿನ ಮನೆಯಡ್ಡಗೋಡೆಗಳಿಂದ
ಜಗವು ಚೂರುಚೂರಾಗಿರದೆಡೆಗೆ
ನನ್ನಿಯಾಳದಿ ಪದಗಳು ಹೊಮ್ಮಿ ಬರುವೆಡೆಗೆ
ದಣಿವರಿಯದ ಹೆಣಗಾಟದಿ ಬದ್ದುತನದೆಡೆ ತೋಳು ಚಾಚುವೆಡೆಗೆ
ಹಳೆವಾಡಿಕೆಯ ಕಳೆಗೆಟ್ಟ ಮರಳುಗಾಡಿನೆಡೆ
ತೆಳುತಿಳಿವಿನ ಹೊನಲು ದಾರಿ ತಪ್ಪಿ ಹರಿದಿಲ್ಲದೆಡೆ
ಎಂದೂ ಬೆಳೆವ ನೆನಹು, ಎಸಕದೆಡೆ
ಮನವು ನಿನ್ನಿಂದ ಮುನ್ನಡೆವೆಡೆಗೆ
ಬಿಡುಗಡೆಯ ಆ ಸಗ್ಗದೆಡೆಗೆ, ತಂದೆಯೇ, ನನ್ನ ನಾಡು ಎಚ್ಚರಗೊಳ್ಳಲಿ

(ಚಿತ್ರ: amarnath-ghosh.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications