ದುಡ್ಡು, ಹೆಂಡ, ಸೀರೆ, ಮೂಗುಬಟ್ಟು, ವೋಟು.

bangalore_turnout_polls630xcv

ಮೊನ್ನೆ ಮೇ 5 ರಂದು ನಡೆದ ಚುನಾವಣೆಯಲ್ಲಿ ಕರ್‍ನಾಟಕದಲ್ಲಿ ಒಟ್ಟು ಶೇ. 70 ಮತದಾನವಾಗಿದೆ. ಹೋದ ಸಾರಿ ಆದ ಮತದಾನಕ್ಕಿಂತ ಈ ಬಾರಿ ಕೊಂಚ ಹೆಚ್ಚಾಗಿಯೇ ಮತದಾನವಾಗಿದೆ ಅನ್ನೋದು ತುಸು ಸಮಾದಾನವಾದರೂ ನಲಿವು ಪಡುವ ವಿಚಾರವೇನಲ್ಲ. ಮಂದಿಯಾಳ್ವಿಕೆಯನ್ನು ಹೊಂದಿರುವ ಈ ನಾಡಿನ ಆಳ್ವಿಕೆಯಲ್ಲಿ ಪ್ರತಿಯೊಬ್ಬ ಆಳಿನ ಪಾತ್ರ ಮುಕ್ಯವಾದುದು. ಹಾಗಾಗಿಯೇ ಅಯ್ದು ವರ್‍ಶಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಡಿನ ಆಳೂ ಬಾಗವಹಿಸಿ ಮತದಾನ ಮಾಡಬೇಕು. ಇದರ ಕುರಿತು ಸರ್‍ಕಾರ ಹಾಗೂ ಚುನಾವಣಾ ಇಲಾಕೆ ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಬಂದಿದೆ. ಆದರೂ ಕೂಡ ಮತದಾನದಲ್ಲಿ ಪಾಲ್ಗೊಂಡವರ ಸಂಕ್ಯೆ ಕಡಿಮೆಯಿದೆ. ಇದಕ್ಕೆ ಕಾರಣಗಳನ್ನು ಎರಡುವರ್‍ಗಗಳಲ್ಲಿ ಹುಡುಕುವ ಪ್ರಯತ್ನ ಮಾಡಿದ್ದೇನೆ.

  1. ನಗರ ಪ್ರದೇಶದಲ್ಲಿ ಬಾಗವಹಿಸದ ಓದಿಕೊಂಡವರು: ಈ ಬಾರಿಯ ಮತದಾನದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಆಗಿರುವ ಮತದಾನ ಬೇರೆ ಎಲ್ಲಾ ಜಿಲ್ಲೆಗಳಿಗಿಂತ ಕಮ್ಮಿಯಿದೆ. ಆದರೆ ಹೆಚ್ಚು ಓದಿಕೊಂಡವರು ಇರುವ ಈ ಜಿಲ್ಲೆಯಲ್ಲಿ ಅದಕ್ಕೆ ತಕ್ಕಂತೆ ಮತದಾನ ಆಗಬೇಕಾಗಿತ್ತು. ಆದರೆ ಹಾಗಾಗಿಲ್ಲ. ಕಾರಣ ಈ ವರ್‍ಗದ ಜನರಿಗೆ ಸದ್ಯದ ರಾಜಕಾರಣಿಗಳು ಮಾಡುವ ಹಗರಣ, ಅವರ ಕೆಲಸಗಳ್ಳತನದಿಂದಾಗಿ ತಾವೂ ಮತದಾನ ಮಾಡಿದರೂ, ಮಾಡದಿದ್ದರೂ ಒಂದೇ ಅನ್ನೋ ನಂಬಿಕೆ ಹಾಗೂ ಸಿನಿಕತೆ ಬಲವಾಗಿ ತಲೆಯಲ್ಲಿದೆ. ಆದರೆ ಇದೇ ವರ್‍ಗದವರೂ ಮುಂದೆ ಸರ್‍ಕಾರ ಅದನ್ನು ಸರಿಯಾಗಿ ಮಾಡಲಿಲ್ಲ, ಇಲ್ಲಿ ಈ ಕೆಲಸ ಸರಿಯಾಗಿಲ್ಲ, ಇದನ್ನು ಹೀಗೆ ಮಾಡಬಹುದಿತ್ತು ಅನ್ನೋ ಹರಟೆಯಲ್ಲಿ ಕಾಣಸಿಗುತ್ತಾರೆ. ನಿಜ ಯಾವೊಂದು ವ್ಯವಸ್ತೆಯೂ ಮೊದಲಿನಿಂದಲೂ ಸರಿಯಾಗಿರುವುದಿಲ್ಲ, ಅದನ್ನು ಸರಿಮಾಡಬೇಕಾದವರು ನಾವುಗಳೇ. ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ನಾವು ಬೇರೆಯವರನ್ನು ತೆಗಳುವ ಹಕ್ಕನ್ನು ಕಳೆದುಕೊಳ್ಳುತ್ತೇವೆ.
  2. ಗ್ರಾಮೀಣ ಬಾಗದಲ್ಲಿ ಹೆಚ್ಚು (ಹುಚ್ಚು) ಮತದಾನ: ಪ್ರತಿ ಸಾರಿಯಂತೆ ಈ ಸಾರಿಯೂ ಗ್ರಾಮೀಣ ಬಾಗದಲ್ಲಿ ಹೆಚ್ಚು ಆಳುಗಳು ಮತದಾನ ಮಾಡಿದ್ದಾರೆ. ಹಾಗಾದ್ರೆ ಹೆಚ್ಚು ಓದದ ಇವರಿಗೆ ಮತದಾನದ ಅರಿವು ಮೂಡಿಸಿದ್ದು ಯಾರು? ಅದು ದುಡ್ಡು!! ಹವ್ದು ಇವತ್ತಿನ ಹಳ್ಳಿಗಳ ಚುನಾವಣೆಯನ್ನು ಗಮನಿಸಿದರೆ ದುಡ್ಡು ಕೊಟ್ಟರೆ ಮಾತ್ರ ಮತದಾನ ಮಾಡುತ್ತೇವೆ ಅನ್ನೋ ಹಂತಕ್ಕೆ ಆಳುಗಳು ಬಂದು ನಿಂತಿದ್ದಾರೆ. ಈ ಕೆಟ್ಟ ಸ್ತಿತಿಗೆ ಒಂದೆ ಕಡೆಯಲ್ಲಿ ರಾಜಕಾರಣಿಗಳು ದುಡ್ಡು ಕೊಟ್ಟು ಜನರಿಗೆ ಇದರ ರುಚಿ ಹಚ್ಚಿಸಿ ಈಗ ಪರಿಪಾಟಲು ಪಡುತ್ತಿವೆ. ಒಂದೆರೆಡು ವಾರದ ಸುಕಕ್ಕಾಗಿ ತಮ್ಮ ಏಳಿಗೆಯನ್ನೇ ಗೊತ್ತಿಲ್ಲದೇ ತ್ಯಾಗ ಮಾಡುತ್ತಿರುವ ಜನರು. ದುಡ್ಡು, ಹೆಂಡ, ಸೀರೆ, ಮೂಗುಬೊಟ್ಟು ಮುಂತಾದ ವಸ್ತುಗಳಿಗೆ ತಮ್ಮ ಬವಿಶ್ಯವನ್ನು ಮತ್ತೊಬ್ಬರ ಕಯ್ಯಲ್ಲಿ ಕೊಟ್ಟು ಕುಳಿತುಕೊಳ್ಳುತ್ತಿದ್ದಾರೆ. ಗುಳೆ ಹೋದ ಜನರನ್ನು ಸಹ ದುಡ್ಡು ಕೊಟ್ಟು ಕರೆಸಿ, ಮತದಾನ ಮಾಡಿಸುವ ಕೆಲಸವೂ ಆಗಿದೆ. ಇನ್ನೊಂದೆಡೆ ಯಾವುದೇ ಸರ್‍ಕಾರ ಬಂದರೂ ತಮ್ಮ ಗೋಳು ತೀರುವುದಿಲ್ಲ ಎಂದು ಹಲವರು ಮತದಾನವೇ ಮಾಡುವುದಿಲ್ಲ.

ಈ ಮೇಲಿನ ಎರಡೂ ಕವಲುಗಳಲ್ಲೂ ಸಮಸ್ಯೆಗಳಿವೆ. ಮೊದಲನೆಯದರಲ್ಲಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ಆಮೇಲೆ ಸರ್‍ಕಾರವನ್ನು ದೂಶಿಸುವ ಗುಣ ಕಾಣಿಸುತ್ತಿದೆ. ಎರಡನೆಯದರಲ್ಲಿ ಮತದಾನ ಮಾಡಬೇಕು ಅಂದ್ರೆ ದುಡ್ಡು ಕೊಡಬೇಕು ಅನ್ನೋ ಹುಚ್ಚುತನ. ಈ ಎರಡು ಕವಲಿನ ಜನರಿಗೆ ಕಲಿಕೆಯ ಅವಶ್ಯಕತೆ ಇದೆ. ಮೊದಲನೆಯ ಕವಲಿಗಿಂತ ಎರಡನೆಯ ಕವಲಿನ ಜನರಿಗೆ ಕಲಿಕೆ ಆಗಲೇಬೇಕಾಗಿದೆ. ಈ ಜನರಿಗೆ ಕಲಿಕೆಯ ಮೂಲಕವೇ ಒಂದು ಜನಾಂಗದ ಅಬಿವ್ರುದ್ದಿ ಸಾದ್ಯ ಅನ್ನೋದನ್ನ ತಿಳಿಸಬೇಕಾಗಿದೆ. ಹಾಗೆಯೇ ಒಂದು ನಾಡು ಕಟ್ಟುವಲ್ಲಿ, ಮಂದಿಯಾಳ್ವಿಕೆಯಲ್ಲಿ ಜನರ ಪಾತ್ರ ಹಾಗೂ ಅವರ ನಡವಳಿಕೆಗಳು ಹೇಗಿರಬೇಕು ಅನ್ನುವುದರ ತಿಳಿವು ಮೂಡಿಸಬೇಕಾಗಿದೆ, ಮತದಾನ ಈ ನಾಡಿನ ಪ್ರತಿಯೊಬ್ಬನ ಹಕ್ಕು ಅನ್ನೋದು ಅವರಿಗೆ ಮನವರಿಕೆ ಮಾಡಸಬೇಕಿದೆ. ಆಗ ಮಾತ್ರ ಮಂದಿಯಾಳ್ವಿಕೆಯ ನಿಜವಾದ ಸತ್ವ ಹೊರಬರಲು ಸಾದ್ಯ. ಇಲ್ಲವಾದರೆ ಮಂದಿಯಾಳ್ವಿಕೆ ಅನ್ನೋ ಈ ವ್ಯವಸ್ತೆಗೆ ಬೆಲೆಯೇ ಇಲ್ಲಾ!!

ಚೇತನ್ ಜೀರಾಳ್

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Maaysa says:

    ಆ ಆ ಊರಿಂದ ಹೊರಗಿರೋರು ಕೂಡ ವೋಟುಗಳನ್ನೂ ಹಾಕನ್ನು ಚಲಾಯಿಸಲಾರರು .

ಅನಿಸಿಕೆ ಬರೆಯಿರಿ: