ಬಿರಿಯುತಿದೆ ಬೆಳಗು

belagu

ಬುವಿಗಿಳಿದಿದೆ ಪನಿಪನಿಗಳ ಪರದೆ
ಸವಿಗೊರಳುಸಿರಿನ ದನಿದನಿಗಳ ಶಾರದೆ
ಹಸಿರೆಲೆಗಿದೆ ಎಳೆಬಿಸಿಲಿನ ಬಯಕೆ
ಬನವಬರಸೆಳೆದಿದೆ ಕವಳದ ಹೊದಿಕೆ

ಇಬ್ಬನಿಯು ಇಳಿದಿದೆ ಇಳೆಯ ಇಕ್ಕೆಲದಲ್ಲಿ
ಇಂಚರ ಸುಳಿದಿದೆ ಜೀವ ಸಂಕುಲದಲ್ಲಿ
ದರೆಗಿಳಿದಿದೆ ಕಂಚುಅಂಚಿನ ಕುಂಚ
ಹಸಿರು ಮಂಚದ ಕೊಂಚ ಪ್ರಪಂಚ

ಹಸಿರಂಚಲಿ ಮಿಂಚುವ ಸಂಚಿದೆ ಅನುಹನಿಗೆ
ನುಸಿಯುತ್ತಿಹ ನೇಸರನಿಗೆ ಕನಸು ಕಸಿಯುವ ಸಲುಗೆ
ಕಿಡಿಬಿಸಿಲಿನ ಮಡಿಯುಟ್ಟಿವೆ ವನ ಟಿಸಿಲಿನ ಕುಡಿ
ಅಂಗಳದಲ್ಲುದುರುತ್ತಿದೆ ಅರಳು ಅರಶಿನ ಹುಡಿ

ಗಿರಿ ಶಿಕರದಿ ಬಿರಿಯುತ್ತಿದೆ ಬೆಚ್ಚನೆ ಬೆಳಗು
ಬರಿ ಬಯಲಲಿ ಮೆರೆಯುತ್ತಿದೆ ಹಚ್ಚನೆ ಸೆರಗು
ಮನದಡವಿದೆ, ಮಯ್ಕೊಡವಿದೆ ಮಳೆತಂಪಿನ ಚಳಿಗೆ
ಹೊರಗಡಿ ಇಟ್ಟಿಹ ಮನಸಿಗೆ ಹೊಸ ಕನಸಿನ ಬೆಸುಗೆ

ಗಿರೀಶ್ ಕಾರ‍್ಗದ್ದೆ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: