ತುಣುಕು ಕಿರಿದು, ನೆರವು ಹಿರಿದು!

ಪ್ರಶಾಂತ ಸೊರಟೂರ.

Created by Digital Micrograph, Gatan Inc.

ಕಿರುಚಳಕ (nano technology) ಹಲವೆಡೆಗಳಲ್ಲಿ ಪಸರಿಸುತ್ತಿದೆ. ಅದರ ನೆರವುಗಳು ನಮ್ಮ ಬದುಕಿಗೆ ಹತ್ತಿರವಾಗುತ್ತಿವೆ. ಮೋರೆಗೆ ಹಚ್ಚುವ ಬಿಸಿಲು ತಡೆ ನೊರೆಯಿಂದ (sunscreen lotion) ಹಿಡಿದು ಮದ್ದರಿಮೆಯಲ್ಲಿ ಹೊಟ್ಟೆ ಹುಣ್ಣುಗಳನ್ನು ಕಂಡುಹಿಡಿಯುವವರೆಗೆ ’ಕಿರು ಚಳಕ’ ಬಳಕೆಯಾಗುತ್ತಿದೆ. ಏನಿದು ಕಿರು ಚಳಕ, ಅದರ ಬಳಕೆಗಳೇನು ಮುಂತಾದವುಗಳನ್ನು ಈ ಬರಹದಲ್ಲಿ ತಿಳಿದುಕೊಳ್ಳೋಣ.

ಕಿರುಚಳಕದ ಬಗ್ಗೆ ತಿಳಿಯುವ ಮುನ್ನ, ಕಿರುತುಣುಕುಗಳ (nano particles) ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಕಿರುತುಣುಕುಗಳೆಂದರೆ ಸುಮಾರು 1 ರಿಂದ 100 ನ್ಯಾನೋ ಮೀಟರ್ ಅಳತೆಯ ಪುಟಾಣಿ ಕಣಗಳು. (1 ನ್ಯಾ.ಮೀ = 10‍^-9 ಮೀ)  ಇನ್ನೊಂದು ಬಗೆಯಲ್ಲಿ ಹೇಳಬೇಕೆಂದರೆ ನಮ್ಮ ಇಡಿ ನೆಲ ಒಂದು ಮೀಟರ್ ಅಂತಾ ಹಿಡಿದುಕೊಂಡರೆ, ಒಂದು ಕಿರುತುಣುಕು ಒಂದು ಚಿಕ್ಕ ಕಲ್ಲಿನ ತುಂಡಿನಶ್ಟಾಗುವುದು. ಅಂದರೆ ತುಂಬಾನೇ ಪುಟ್ಟ-ಪುಟಾಣಿ ಕಣಗಳಿವು.

ಕಣಗಳನ್ನು ಚಿಕ್ಕದಾಗಿಸುತ್ತಾ ಹೋದಂತೆ ಒಂದು ಹಂತದ ಅಳತೆಯಲ್ಲಿ ಅವುಗಳು ತೋರುವ ಗುಣಗಳು ದೊಡ್ಡ ಕಣಗಳು ತೋರುವ ಗುಣಗಳಿಗಿಂತ ತುಂಬಾ ಬೇರೆಯದಾಗಿ ಬಿಡುತ್ತದೆ. ಇವೇ ಕಿರುತುಣುಕುಗಳು ಅಂದರೆ ನ್ಯಾನೋ ಕಣಗಳು.

ಹೊಸ ಗುಣಗಳನ್ನು ತೋರುವ ಈ ಅಳತೆ ಸಾಮಾನ್ಯವಾಗಿ 100 ನ್ಯಾ.ಮೀ. ಇಲ್ಲವೇ ಅದಕ್ಕಿಂತ ಕಡಿಮೆಯಾಗಿರುತ್ತದೆ.

ಕಿರುತುಣುಕುಗಳು ದೊಡ್ಡ ಕಣಗಳಿಗಿಂತ ಬೇರೆಯದೇ ಆದ ಬೆಳಕಿನ, ಬಿಸುಪಿನ (temperature), ಚದರುವ, ಹೀರುವ, ಸೆಳೆತದ ಗುಣಗಳನ್ನು ಹೊಂದಿಬಿಡುತ್ತವೆ. ಎತ್ತುಗೆಗೆ: ಚಿನ್ನದ ದೊಡ್ಡ ತುಣುಕುಗಳ ಗಟ್ಟಿಯು 1064° ಸೆಲ್ಸಿಯಸ್ಸಗೆ ಕರಗಿದರೆ ಕಿರುತುಣುಕುಗಳು 300 ಸೆಲ್ಸಿಯಸ್ಸಗೆ ಕರಗಿಬಿಡುತ್ತವೆ. ಕಿರುತುಣುಕುಗಳು ನೇಸರನ ಬೆಳಕನ್ನು ದೊಡ್ಡಕಣಗಳಿಗೆ ಹೋಲಿಸಿದಾಗ ಹೆಚ್ಚಿಗೆ ಹೀರಿಕೊಳ್ಳಬಲ್ಲವು ಇಲ್ಲವೇ ಚದರಿಸಬಲ್ಲವು. (ಹೀಗಾಗಿಯೇ ಅವುಗಳನ್ನು ಬಿಸಿಲು ತಡೆ ನೊರೆಯಾಗಿ ಬಳಸುತ್ತಾರೆ) ದೊಡ್ಡ ಕಣಗಳನ್ನು ಹೊಂದಿದ ವಸ್ತುಗಳಿಗಿಂತ ಕಿರುತುಣುಕುಗಳಿಂದ ಮಾಡಿದ ವಸ್ತಗಳು ಹೆಚ್ಚು ಗಟ್ಟಿಯಾಗಿರುತ್ತವೆ.

ಕಿರುತುಣುಕುಗಳನ್ನು ಬಳಕೆಗೆ ತರುವ ಕಲೆಯೇ ಕಿರುತುಣುಕು ಚಳಕ ಇಲ್ಲವೇ ಕಿರುಚಳಕ (nano technology).

ಕಿರುಚಳಕದ ಇನ್ನೊಂದಿಶ್ಟು ಬಳಕೆಗಳು ಇಂತಿವೆ:

  1. ತಂತಾನೇ ಚೊಕ್ಕವಾಗಬಲ್ಲ ಗಾಜು: ಕಿರುತುಣುಕಗಳಿಂದ ಮಾಡಿದ ಗಾಜುಗಳ ಮೇಲೆ ಬೆಳಕು ಬಿದ್ದಾಗ ಅವುಗಳು ತಮ್ಮ ಮೇಲಿರುವ ಕೊಳೆಯನ್ನು ಬಿಡಲು ತೊಡಗುತ್ತವೆ ಮತ್ತು ಅಂತ ಗಾಜುಗಳ ಮೇಲೆ ನೀರು ಹಾಕಿದರೆ ಎಲ್ಲ ಕಡೆ ಸಮನಾಗಿ ಹರಡುತ್ತದೆ. ಅಂದರೆ ಕಿರುತುಣುಕಗಳ ಗಾಜಿನ ಲೋಟ ತಂತಾನೇ ಕೊಳೆ ತೊಳೆದುಕೊಳ್ಳಬಲ್ಲವು
  2. ಉಡುಪುಗಳು: ಜಿಂಕ್ ಆಕ್ಸಾಯಿಡ್ ಕಿರುತುಣುಕುಗಳಿಂದ ಮಾಡಿದ ಬಟ್ಟೆಗಳು ಬಿಸಿಲನ್ನು ಮಯ್ಗೆ ತಾಗದಂತೆ ತಡೆಯಬಲ್ಲವು. ಕೂದಲೆಳೆಯಂತಿರುವ ಕಿರುತುಣುಕಗಳಿಂದ ಮಾಡಿದ ಉಡುಪುಗಳು ನೀರು ತಾಗದಂತೆ, ಕೊಳೆಯಾಗದಂತೆ ಮಾಡಬಲ್ಲವು. ಮುದುಡದ ಬಟ್ಟೆಗಳು ಕೂಡಾ ಕಿರುತುಣುಕಗಳ ಕೊಡುಗೆಗಳಲ್ಲೊಂದು.
  3. ಗೀಚು ತಡೆ: ಅಲ್ಯೂಮಿನಿಯಮ್ ಸಿಲಿಕೇಟ್ ಕಿರುತುಣುಕುಗಳಿಂದ ಮಾಡಿದ ಪಾಲಿಮರ್‍ ವಸ್ತುಗಳು ಗೀಚು, ಪರಚು ತಡೆ ಗುಣಗಳನ್ನು ಹೊಂದಬಲ್ಲವು.
  4. ಕಿರುತುಣುಕುಗಳಿಂದ ಮಾಡಿದ ಮಿಂಬಟ್ಟಲುಗಳು (battery) ಹೆಚ್ಚು ಕಸುವನ್ನು ಹೊಂದಬಲ್ಲವು.
  5. ಮದ್ದರಿಮೆಯಲ್ಲಿಯೂ ಕಿರುತುಣುಕುಗಳು ತನ್ನದೇ ಆದ ಕಾಣಿಕೆ ನೀಡುತ್ತಿವೆ. ಹುಣ್ಣುಗಳನ್ನು ವಾಸಿಮಾಡಲು ಮದ್ದನ್ನು ಕಿರುತುಣುಕಗಳ ಮೂಲಕ ಮಯ್ಯಿಯೊಳಗೆ ಬಿಡಲಾಗುತ್ತದೆ. ಕಿರುತುಣುಕುಗಳು ಹುಣ್ಣುಗಳನ್ನು ತಮ್ಮೆಡೆ ಸೆಳೆಯಬಲ್ಲವು ಹೀಗಾಗಿ ಸುಳುವಾಗಿ ಅವುಗಳಿಗೆ ಮದ್ದನ್ನು ಸಾಗಿಸಬಲ್ಲವು. ಕಿರುತುಣುಕು ಮತ್ತು ಹುಣ್ಣಗಳ ನಡುವಿರುವ ಈ ಸೆಳೆತ  ಬಳಸಿ ಹುಣ್ಣುಗಳನ್ನು ಕಂಡುಹಿಡಿಯಲೂ ಕಿರುತುಣುಕುಗಳನ್ನು ಬಳಸುತ್ತಿದ್ದಾರೆ.

ಒಟ್ಟಿನಲ್ಲಿ ಕಿರುತುಣುಕುಗಳು ತಮ್ಮ ಕಿರುತನದಿಂದಲೇ ಹಿರಿತನ ಮೆರೆಯುತ್ತಿವೆ.

ಮಾಹಿತಿ ಸೆಲೆ: ವಿಕಿಪೀಡಿಯಾ, How stuff works

ಪ್ರಶಾಂತ ಸೊರಟೂರ

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. ಪ್ರಶಾ೦ತ್ ಅವ್ರೆ,
    ತು೦ಬಾ ಚೆನ್ನಾಗ್ ಬ೦ದಿದೆ.
    ಕಶ್ಟವಾದ ವಿಶಯವನ್ನು, ಸರಳವಾಗಿ ಕನ್ನಡವಾಗಿಸುವಲ್ಲಿ ಯಶಸ್ವಿಯಾಗಿದ್ದಿರ.

  2. ಯಶವನ್ತ ಅವರೇ, ಹೂ ನಿಮ್ಮ ಮಾತಿಗೆ ನನ್ನ ನೆರೆಯಾದ ಒಪ್ಪಿಗೆ. ತುಂಬಾ ಚೆನ್ನಾಗಿದೆ ಬರಹ ಹಾಗೂ ಒಂದು ಹೊತ್ತಗೆ ಓದಿದ ಹಾಗೆ ನನಗೆ ಅನ್ನಿಸುತ್ತದೆ.

  3. ನಮ್ಮ ಸೋ ಕಾಲ್ಡ್ ಅರಿಮೆ-ಪಂಡಿತರು ಇನ್ನಾದರೂ ಇಂತಹ ಬರೆಹಗಳನ್ನು ನೋಡಿ ಅರಿಮೆ ಬರೆಹಗಳನ್ನು ಶಾಲೆಗೆ ಹೋಗುವ ಮಗುವಿನಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ತಿಳಿಯುವ ಹಾಗೆ ಬರೆಯುವ ಕೆಲಸ ಮಾಡಲಿ. ಎಲ್ಲರೂ ಪ್ರಶಾಂತರ ಬೆನ್ನು ತಟ್ಟಿದರೆ ಅವರು ಇಂತಹ ಬರೆಹಗಳನ್ನು ಇನ್ನೂ ಹೆಚ್ಚೆಚ್ಚು ಬರೆಯಲು ಹುರುಪು ಹೆಚ್ಚಬಹುದು! 🙂

  4. ಹೂ ಶಶಿ ಅವರೇ, ಅರಿಮೆ ಬರಹಗಳು ಈ ಬಗೆಯಲ್ಲಿ ಹೊರ ಬಂದರೆ ಅದು ಎಲ್ಲರಿಗು ತಿಳಿಯುವುದು.

  1. 18/11/2013

    […] ವರುಶಗಳಲ್ಲಿ ಮುಂಚೂಣಿಗೆ ಬರುತ್ತಿರುವ ಕಿರುಚಳಕ ಕುರಿತಾಗಿಯೂ ಪ್ರೊ.ರಾವ್ ತಮ್ಮ ಅರಕೆ […]

ಅನಿಸಿಕೆ ಬರೆಯಿರಿ:

%d bloggers like this: