ಮಲಗಲಿ ನನ್ನೊಲವು ಸುವ್ವಾಲಿ

touch

ಅವಳು ಒಳಬರದ
ಮೂರೂ ದಿನವೂ
ನಾನೂ ಹೊರಗಾಗುತ್ತೇನೆ!

ಬಾಲ್ಕನಿಯಲಿ ಬೆಚ್ಚಗೆ ಕುಳಿತು
ಬೆಂಕಿ ಇಲ್ಲದ ಅಡುಗೆ ಅಟ್ಟು,
ಕೊಂಚ ದ್ರಾಕ್ಶಾರಸ ಗುಟುಕಿಸಿ
ಮುತ್ತಿನ ಮಲ್ಲಿಗೆ ಕಟ್ಟುತ್ತಾ,
ಕಣ್ಣಲಿ ತುಂಬಿದ ಪ್ರೀತಿಯ
ಎದೆಗಿಳಿಸಿಕೊಳ್ಳುತ್ತೇವೆ,
ಅವನರತ.

ಒಮ್ಮೊಮ್ಮೆ
ನೋವಿಗೆ ಬಿಗಿದಪ್ಪುತ್ತಾಳೆ
ನನ್ನ ಕಣ್ಣಲಿ ಅವಳು ಅಳುತ್ತಾಳೆ
ನನ್ನ ಚಡಪಡಿಕೆ ಕಂಡು
ಮೂದಲಿಸುತ್ತಾಳೆ.

ಅವಳ ನಾಬಿಯ ಹೊಕ್ಕ ಬೆರಳಿನಿಂದ
ನೋವು ನನಗೂ ವರ್‍ಗವಾಗಲೆಂದು,
ನನ್ನ ಕಯ್ ಅಲ್ಲೇ ನಡುವಿನಲ್ಲೇ ಬಿಡಾರ ಹೂಡಿದೆ.
ಮತ್ತೊಂದು ತಲೆಗೆ ತಳವಾಗಿದೆ.

ಈ ತೆರೆದ ಕಿರು ಹಜಾರದಲ್ಲಿ
ಹಿನ್ನಲೆಗೆ ಒಂದು ಸಣ್ಣ ರಾಗಾಲಾಪ,
ಮಿಟುಕಿ ಮಿನುಗುವ ಸಣ್ಣ ಸೊಡರು
ಅವಳ ನಿದ್ದೆಗೆ ನನ್ನ ಲಾಲಿ
ಮಲಗಲಿ ನನ್ನೊಲವು ಸುವ್ವಾಲಿ.

ರಾಜೇಂದ್ರ ಪ್ರಸಾದ್

(ಚಿತ್ರ: www.goodreads.com)

ಇವುಗಳನ್ನೂ ನೋಡಿ

1 ಅನಿಸಿಕೆ

ಅನಿಸಿಕೆ ಬರೆಯಿರಿ: