ಕತೆಗಳ ’ಕತೆ’

– ಬರತ್ ಕುಮಾರ್.

ಮೊದಮೊದಲು ನನಗೆ ಈ ‘ಕತೆ’ ಎಂದರೆ ಏನೇನೊ ನಿಲುವುಗಳಿದ್ದವು. ಇದು ಎಲ್ಲಿಂದಲೊ ಬರುತ್ತೆ. ಅದನ್ನು ಕಟ್ಟಲು ನನಗೆ ಸಾದ್ಯವಾಗುವುದಿಲ್ಲ ಅಂತೆಲ್ಲ ಅಂದುಕೊಂಡಿದ್ದೆ. ಆದರೆ ನಾವು ಕಂಡ ಮನುಶ್ಯರು, ವಸ್ತುಗಳು, ವಿಶಯಗಳು, ನಮ್ಮ ಸುತ್ತಮುತ್ತಲಿರುವುದನ್ನ ನೋಡುತ್ತ ಹೋದರೆ ಇಲ್ಲವೆ ಈಗಾಗಲೆ ಕಂಡವನ್ನು ನೆನಪಿಸುತ್ತಾ ಹೋದಂತೆ ಕತೆ ಹುಟ್ಟುವುದು ಎಂಬ ಅರಿವು ತಾನಾಗಿಯೇ ನನಗೆ ಬಂತು. ನೆನಪುಗಳಿಗೆ ಒಂದು ಸಂದರ್ಬವನ್ನು ಒದಗಿಸಿ ಅದಕ್ಕೆ ಎಣಿಕೆಯನ್ನು ಪೋಣಿಸಿದರೆ ಸೊಗಸಾದ ಕತೆಗಳು ಹುಟ್ಟುತ್ತವೆ ಎಂಬುದು ಮನದಟ್ಟಾಯಿತು. ಆದರೆ ಬರೀ ನೆನಪುಗಳನ್ನು ಮಾತ್ರ ಬರೆದರೆ ಅದು ಕತೆಯಾಗುವುದಿಲ್ಲ, ಒಂದು ದಾಕಲೆ ಮಾತ್ರ ಆಗುತ್ತದೆ. ಆದರೆ ಕತೆಯು ಬರೀ ದಾಕಲೆಯಲ್ಲ.

ಕತೆಯು ಮೇಲ್ಮಟ್ಟದಲ್ಲಿ ಏನನ್ನೊ ಹೇಳುತ್ತಿರುತ್ತದೆ ಆದರೆ ಒಳಗೆ ಆಳವಾಗಿ ನೋಡಿದಾಗ ಬೇರೇನೊ ಅರಿಮೆಗಳು ದೊರಕುತ್ತವೆ. ಕತೆಗೆ ಒಂದು ಮುಕ ಮತ್ತು ಒಂದು ಮನಸ್ಸು ಇರುತ್ತದೆ. ಮುಕ ಮತ್ತು ಮನಸ್ಸು ಇವೆರಡೂ ಕತೆಗೆ ಬೇಕು. ಇವೆರಡರ ಕೆಲಸವು ಕೂಡ ಬೇರೆ ಬೇರೆಯಾಗಿರುತ್ತದೆ.  ಎತ್ತುಗೆಗೆ ಕತೆಯಲ್ಲಿ ಬರುವ ಎರಡು ಪಾತ್ರಗಳು ಎರಡು ಬೇರೆ ಬೇರೆ ಪರಿಚೆಗಳನ್ನು ಬೇರೆ ಬೇರೆ ಹಿನ್ನಲೆಯನ್ನು ಪ್ರತಿನಿದಿಸುತ್ತಿರಬಹುದು. ಆ ಎರಡು ಪಾತ್ರಗಳು ಆ ವ್ಯಕ್ತಿಗಳ ಒಡನಾಟ ಮಾತ್ರವಾಗಿರದೆ ಆಯ ಪರಿಚೆಗಳ, ಹಿನ್ನೆಲೆಗಳ ಒಡನಾಟವೂ ಆಗಿರುತ್ತದೆ. ಕತೆ ಹೇಳುವಾಗಲೂ ಅಶ್ಟೆ, ಓದುಗನ ಗಮನವನ್ನು ಸೆಳೆಯಲು ಕೆಲವು ಚಳಕಗಳನ್ನು ಬಳಸಬೇಕಾಗುತ್ತದೆ. ಕತೆಯಲ್ಲಿ ಬರುವ ಈ ಪಾತ್ರ ಹೀಗೀಗೆ ಇರುತ್ತೆ/ಇದೆ ಎಂದು ಒಂದೇ ಸಾಲಿನಲ್ಲಿ ಹೇಳಿದರೆ ಅಶ್ಟು ಪರಿಣಾಮಕಾರಿಯಾಗಿರುವುದಿಲ್ಲ. ಅದರ ಬದಲು ಕತೆಯು ಮುಂದುವರಿಯುತ್ತಿರುವಾಗಲೇ ಪಾತ್ರದ ಪರಿಚೆಗೆ ತಕ್ಕಂತಹ ಕುಳ್ಳಿಹಗಳನ್ನು ಹುಟ್ಟಿಸಬೇಕು. ಆ ಕುಳ್ಳಿಹಗಳ ಮೂಲಕ ಅದನ್ನು ಓದುಗನಿಗೆ ದಾಟಿಸಬೇಕಾಗುತ್ತದೆ. ನೀಳ್ಗತೆಯಾದರೆ, ಆಗಾಗ ಅಲ್ಲಲ್ಲಿ ಮರಿಕತೆಗಳನ್ನು ಹೇಳುವುದರ ಮೂಲಕ ಓದುಗನಿಗೆ ಬೇಸರವಾಗದಂತೆ ನೋಡಿಕೊಳ್ಳಬಹುದು. ಕತೆ ಹುಟ್ಟಿಸುವುದು ಮಾಡುಗತನದ ಕೆಲಸವಾದುದರಿಂದ ಇಂತಿಶ್ಟೆ ಕಟ್ಟಲೆಗಳು ಇದ್ದರೆ ಕತೆ ಚೆನ್ನಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ.

ಕತೆಗಳ ಮೂಲಕ ಬದುಕನ್ನು, ಸಮಾಜವನ್ನು, ನಮ್ಮ ಸುತ್ತಮುತ್ತಲಿನ ಆಗುಹಗಳನ್ನು ಚೆನ್ನಾಗಿ ಅರ್ತ ಮಾಡಿಕೊಳ್ಳವುದು ಸಾದ್ಯವಾದರೆ ಅಂತಹ ಕತೆಗೂ ಒಂದು ಅರ‍್ತ ಬರುತ್ತದೆ. ಮಂದಿಯ ಬಗೆಯಲ್ಲಿ ಅಚ್ಚಳಿಯದೆ ನಿಲ್ಲುತ್ತದೆ. ಆದ್ದರಿಂದ ಬೇರೆ ಬೇರೆ ಹಿನ್ನೆಲೆಯುಳ್ಳವರು ಕತೆಗಳನ್ನು ಬರೆಯಬೇಕಾಗುತ್ತದೆ. ಯಾಕಂದರೆ ಪಳಗಿಕೆಗಿಂತ ಮಿಗಿಲಾದ ‘ಕತೆಗಳ ಗಣಿ’ ಇನ್ನಾವುದೂ ಇಲ್ಲ ಎಂಬುದು ನನ್ನ ನಿಲುವು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: