ಎವರೆಸ್ಟ್ ಗೆದ್ದು ಇಂದಿಗೆ 60 ವರುಶ!

everest-Tenzing-Norgay

ಈ ಚಿತ್ರವನ್ನು ಇದೇ ದಿನ ಸರಿಯಾಗಿ 60 ವರುಶಗಳ ಹಿಂದೆ ತೆಗೆಯಲಾಗಿತ್ತು, ಅಂದರೆ ಮೇ 29, 1953. ಆದರೆ ಈ ನೆರಳುತಿಟ್ಟ ಸಾಮಾನ್ಯವಾದುದಲ್ಲ. ಮಾನವ ಇತಿಹಾಸದ ಮರೆಯಲಾಗದ ಒಂದು  ಕ್ಶಣವನ್ನು ಸೆರೆಹಿಡಿದಿದೆ ಇದು. ಎವರೆಸ್ಟ್ ಬೆಟ್ಟದ ತುತ್ತತುದಿಯಲ್ಲಿ ನಿಂತು ತಮ್ಮ ಮಂಜು ಕೊಡಲಿಯನ್ನು ತೋರಿಸುತ್ತಿರುವ ತೇನ್ಸಿಂಗರ ಚಿತ್ರವಿದು, ತೆಗೆದವರು ಎಡ್ಮಂಡ್ ಹಿಲರಿ. ಆಗಶ್ಟೇ ಇಬ್ಬರೂ ಎವೆರಸ್ಟಿನ ತುದಿಯನ್ನು ತಲುಪಿದ್ದರು. ಇತಿಹಾಸದಲ್ಲೇ, ಎಲ್ಲದಕ್ಕೂ ಎತ್ತರದ ತುದಿಯ ಮೇಲೆ ಅಡಿಯಿಟ್ಟ ಮೊದಲಿಗರಾಗಿದ್ದರು.

ಎವರೆಸ್ಟ್ ನಡೆಪಾಡನ್ನು (expedition) ಕಯ್ಗೊಂಡು, ತಂಡದ ಇತರೆ 400 ಮಂದಿಯೊಂದಿಗೆ ಬೆಟ್ಟದ ಕೆಳಗೆ ತಳಬಿಡಾರವನ್ನು (base camp) ಹೂಡಿ ಆಗಲೇ 2 ತಿಂಗಳುಗಳಾಗಿದ್ದವು.  ಮಯ್ ಸೆಟೆದುಕೊಳ್ಳುವಶ್ಟು ಚಳಿ, ಮಂಜು ಮುಚ್ಚಿದ ಹಾದಿ, ತೀರಾ ಎತ್ತರದಲ್ಲಿ ಉಸಿರುಗಾಳಿಯ ಕೊರತೆ ಮತ್ತು ಗಾಳಿಯ ಒತ್ತಡದ ಕೊರತೆಯಿಂದ ಉಂಟಾಗುವ ತೊಂದರೆಗಳು, ಹೀಗೆ ಮುಂತಾದ ಎಶ್ಟೋ ಸವಾಲುಗಳನ್ನು ಮೀರಿ ಈ ಜೋಡಿ ತುದಿಯನ್ನು ತಲುಪಿತ್ತು. ಆದರೆ ಅಲ್ಲಿ ಹೆಚ್ಚು ಹೊತ್ತು ಇರಲಾಗಲಿಲ್ಲ, ಬರೀ 15 ನಿಮಿಶ, ಬಳಿಕ ಕೆಳಗಿಳಿದರು. ತೇನ್‍ಸಿಂಗರಿಗೆ ಕ್ಯಾಮೆರಾ ಬಳಸಲು ಬರುತ್ತಿರಲಿಲ್ಲವಂತೆ. ಹಾಗಾಗಿ ಹಿಲರಿಯವರು ತುದಿ ತಲುಪಿದ್ದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಲೇ ಇಲ್ಲ!

ನೇಪಾಳದಲ್ಲಿ ಹುಟ್ಟಿದ್ದ ಬಾರತೀಯ ನಾಗರೀಕರಾದ ಶೇರ್‍ಪಾ ತೇನ್ ಸಿಂಗರಿಗೆ ಇದು ಎವರೆಸ್ಟ್ ತುದಿಗೆ ಕಯ್ಗೊಂಡ 7ನೇ ಪ್ರಯತ್ನವಾಗಿತ್ತು. ಅವರ ಹಿಂದಿನ 6 ನಡೆಪಾಡುಗಳು ಸೋಲನ್ನು ಕಂಡಿದ್ದವು. ನ್ಯೂಜೀಲ್ಯಾಂಡಿನ ಎಡ್ಮಂಡ್ ಹಿಲರಿಯವರದು ಇದು ಎರಡನೇ ಪ್ರಯತ್ನವಾಗಿತ್ತು. 1951ರಲ್ಲಿ ನ್ಯೂಜೀಲ್ಯಾಂಡಿನ ಒಂದು ತಂಡದ ಜೊತೆ ಎವರೆಸ್ಟ್ ಹತ್ತುವ ನಡೆಪಾಡನ್ನು ಕಯ್ಗೊಂಡು, ಕೊನೆಗೆ ಹತ್ತಲಾಗದೇ ನಡೆಪಾಡನ್ನು ಕಯ್ಬಿಟ್ಟು, ಹಿಲರಿಯವರು ತಂಡದೊಂದಿಗೆ ಹಿಂದಿರುಗಿದ್ದರು. ಆದರೆ ಈ ಸಲ ತೇನ್‍ಸಿಂಗ್ ಮತ್ತು ಹಿಲರಿಯವರುಗಳು ಜಾನ್ ಹಂಟ್ ಎಂಬವರು ಮುಂದಾಳುತನ ವಹಿಸಿದ್ದ ಬ್ರಿಟೀಶ್ ತಂಡವೊಂದರ ಬಾಗವಾಗಿದ್ದರು.

ಈ ತಂಡವು ಮಾರ್‍ಚ್ 1953ರಲ್ಲಿ ಸುಮಾರು 400ಮಂದಿ ಸದಸ್ಯರುಗಳೊಂದಿಗೆ ಎವೆರಸ್ಟ್ ಬೆಟ್ಟದ ಅಡಿಯಲ್ಲಿ ತಳಬಿಡಾರ ಹೂಡಿತು. ಈ ತಂಡದಲ್ಲಿ ಸುಮಾರು 360 ಹೊರೆ ಹೊರುವವರೇ ಇದ್ದರು. ಮತ್ತು ಇಪ್ಪತ್ತು ಮಂದಿ ಶೇರ್‍ಪಾ ಹಾದಿತೋರುಗರಿದ್ದರು. ಮೆಲ್ಲಗೆ ಮೇಲೆ ಹತ್ತುತ್ತ, ಅಲ್ಲಲ್ಲಿ ನಡುಬಿಡಾರಗಳನ್ನು ಹೂಡುತ್ತ ಕೊನೆಗೆ ಬೆಟ್ಟದ ತೆಂಕು ಕೊಳ್ಳದಲ್ಲಿ (South Col) ಈ ತಂಡ ತನ್ನ ಕೊನೆಯ ಬಿಡಾರವನ್ನು ಹೂಡಿತು. ಇದು ಕಡಲಮಟ್ಟದಿಂದ ಸುಮಾರು 25,900 ಅಡಿ ಎತ್ತರದಲ್ಲಿದೆ. ಮೇ 26ರಂದು ತಂಡದ ಬವ್ರ್ಡಿಲನ್ ಮತ್ತು ಇವಾನ್ಸ್ ಅವರುಗಳು ಮೊದಲು ತುದಿಯನ್ನು ತಲುಪಲು ಪ್ರಯತ್ನಿಸಿದರು. ತುದಿಯಿಂದ ಸುಮಾರು 300 ಅಡಿ ದೂರದ ವರೆಗೂ ತಲುಪಿದ್ದರು. ಆದರೆ ಇವಾನ್ಸ್ ಅವರ ಉಸಿರುಗಾಳಿ ಉರುಳೆಯಲ್ಲಿ (oxygen cylinder) ತೊಂದರೆಯುಂಟಾದರಿಂದ ಹಿಂದಿರುಗಬೇಕಾಯ್ತು.

ಕೊನೆಗೆ ಜಾನ್ ಹಂಟ್ ಅವರು ಹಿಲರಿ ಮತ್ತು ತೇನ್ಸಿಂಗರನ್ನು ಕಳಿಸಿದರು. ತೆಂಕು ಕೊಳ್ಳದಲ್ಲಿ ಮಂಜುಮಳೆ ಮತ್ತು ಬಿರುಗಾಳಿ ಎದ್ದು ಎರಡು ದಿನಗಳ ಕಾಲ ಇಬ್ಬರೂ ಮುಂದುವರೆಯಲಾಗಲಿಲ್ಲ. ಆದರೆ ಮೇ 28ರಂದು ಹೊರಟು ಈ ಜೋಡಿ ಸುಮಾರು 27,900 ಅಡಿ ಎತ್ತರದಲ್ಲಿ ಗುಡಾರ ಹಾಕಿತು. ಮಾರನೇ ದಿನ ಬೆಳಿಗ್ಗೆ ಅಲ್ಲಿಂದ ತಮ್ಮ ಗುರಿಯತ್ತ ತಲುಪಲು ಸಜ್ಜಾಗಿ ಮುನ್ನಡೆಯಿತು. ತುದಿ ಮುಟ್ಟಲು ಕೊನೆಯದಾಗಿ 40 ಅಡಿ ಎತ್ತರದ ಬಂಡೆಯನ್ನು ದಾಟಬೇಕಿತ್ತು. ಹಿಲರಿಯವರು ಆ ಬಂಡೆ ಮತ್ತು ಮಂಜಿನ ನಡುವಿದ್ದ ಒಂದು ಬಿರುಕನ್ನು ಗಮನಿಸಿ ಅದರ ನೆರವು ಪಡೆದು ಬಂಡೆ ಹತ್ತಿ ತುದಿಯನ್ನು ತಲುಪಿದರಂತೆ. ಹಿಂದೆಯೇ ಇದ್ದ ತೇನ್‍ಸಿಂಗ್, ಅವರನ್ನು ಹಿಂಬಾಲಿಸಿ 29,028 ಅಡಿ ಎತ್ತರದ ತುದಿಯನ್ನು ಮುಟ್ಟಿದರು. ಮುಂದೆ ಈ ಬಂಡೆಗೆ ‘ಹಿಲರಿ ಹೆಜ್ಜೆ’ (Hillary Step) ಎಂಬ ಹೆಸರು ಕೊಡಲಾಯ್ತು.

ಇದಾದ ಬಳಿಕ, ಇಲ್ಲಿಯವರೆಗೂ ಹಲವು ಮಂದಿ ಎವರೆಸ್ಟ್ ಏರಿದ್ದಾರೆ. ಇತ್ತೀಚಿಗೆ, ಹಿಲರಿ ಮತ್ತು ತೇನ್ ಸಿಂಗರ ಸಾದನೆಯ 60ನೇ ವರುಶದ ಗುರುತಿನ ಸಲುವಾಗಿ ನ್ಯೂಜೀಲ್ಯಾಂಡಿನ ತಂಡವೊಂದು ಎವರೆಸ್ಟ್ ತುದಿಯನ್ನೇರಿ ಬಂತು. ಕೆಲವೇ ದಿನಗಳ ಹಿಂದೆ 80ರ ಇಳಿವಯಸ್ಸಿನ ಜಪಾನಿಯರೊಬ್ಬರು ಎವೆರಸ್ಟ್ ತುದಿಯನ್ನೇರಿ ದಾಕಲೆ ಬರೆದರು. ಅರುಣಿಮಾ ಸಿನ್ಹಾ ಎಂಬ 26 ವರುಶದ ಉತ್ತರ ಪ್ರದೇಶದ ಹುಡುಗಿ ಕೂಡ ಕೆಲವೇ ದಿನಗಳ ಹಿಂದೆ ಎವರೆಸ್ಟ್ ತುದಿಯನ್ನು ಹತ್ತಿ ಬಂದಿದ್ದಾರೆ. ಮೊದಲು ವಾಲೀಬಾಲ್ ಆಟಗಾರ್‍ತಿಯಾಗಿದ್ದ ಇವರು ಏಪ್ರಿಲ್ 2011ರಲ್ಲಿ ಹಳಿಬಂಡಿಯಿಂದ ಹೊರ ತಳ್ಳಲ್ಪಟ್ಟು ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೆ ಎವರೆಸ್ಟ್ ಹತ್ತುವ ಪಣ ತೊಟ್ಟ ಇವರು, ಅದನ್ನು ಗೆದ್ದು, ಒಂದೇ ಕಾಲಿನಲ್ಲಿ ಎವರೆಸ್ಟ್ ತುದಿ ತಲುಪಿದ ಜಗತ್ತಿನ ಮೊದಲ ಹೆಣ್ಣು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾಹಿತಿ ಸೆಲೆ: ವಿಕಿಪೀಡಿಯಾ

ಸಂದೀಪ್ ಕಂಬಿ.

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.