ಕಾಣದ ತಲೆಕಾಪು

kaNada_talekaapu

ತಲೆಕಾಪು (ಹೆಲ್ಮೆಟ್) ಬಳಸಿ ಅಂದ ಕೂಡಲೇ ಅದರ ಎದುರಾಗಿ, ತಪ್ಪಿಸಿಕೊಳ್ಳುವಂತ ಹಲವು ಮಾತುಗಳು ಕೇಳ ತೊಡಗುತ್ತವೆ. ಗಾಡಿ ಓಡಿಸುಗರು ತಮ್ಮ ತಲೆಯನ್ನು ಕಾಪಾಡಿಕೊಳ್ಳಲು ತಲೆಕಾಪು ಬಳಸುವುದಕ್ಕಿಂತ ಪೋಲೀಸರಿಂದ ಪಾರಾಗಲು ಬಳಸುವುದೇ ಹೆಚ್ಚು. ಸ್ವೀಡನ್ನಿನ ಅನಾ ಹಾಪ್ಟ್ (Anna Haupt) ಹಾಗೂ ತೆರೆಸೀ ಅಲ್ಸ್ಟಿನ್ (Terese Alstin) ಅವರಿಗೆ ಮಂದಿ ತಲೆಕಾಪು ಬಳಸಲು ಏಕೆ ಹಿಂಜರಿಯುತ್ತಾರೆ, ಈ ನಿಟ್ಟಿನಲ್ಲಿ ಏನಾದರೂ ಪರಿಹಾರಗಳಿವೆಯೇ ಅಂತಾ ತಿಳಿದುಕೊಳ್ಳಲು ತಲೆಕಾಪು (ಹೆಲ್ಮೆಟ್) ವಿಶಯವನ್ನೇ ತಮ್ಮ ಓದಿನಲ್ಲಿ ಅರಕೆಯ ವಿಶಯವನ್ನಾಗಿ ಆಯ್ಕೆ ಮಾಡಿಕೊಂಡುರು. ಆಗ ಸ್ವೀಡನ್ ನಾಡಿನಲ್ಲಿ ಹದಿನಯ್ದು ಹರೆಯ ದಾಟಿರದ ಮಕ್ಕಳಿಗೆ ಕಾಲಬಂಡಿ ತಲೆಕಾಪು (bicycle helmet) ಕಡ್ದಾಯ ವಾಗಿತ್ತು. ಇದೇ ಕಟ್ಟಲೆಯನ್ನು ಮುಂದಕ್ಕೆ ಎಲ್ಲರಿಗಾಗಿಯೂ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿದ್ದವು.

ತಲೆಕಾಪು (ಹೆಲ್ಮೆಟ್) ಎಲ್ಲರೂ ಬಳಸುವಂತೆ ಮಾಡುವ ಮುನ್ನ ತಲೆಕಾಪಿನ ಬಗ್ಗೆ ಯಾಕೆ ವಿರೋದವಿದೆ ಅಂತ ತಿಳಿಯುವ ಸಲುವಾಗಿ ಅನಾ ಮತ್ತು ತೆರೆಸೀ ಹಲವು ಕಾಲಬಂಡಿಗರನ್ನು(cyclist) ಕೇಳಿದಾಗ ಹಲವು ಬಗೆಯ ವಿಶಯಗಳು ಹೊರ ಬಂದವು. ತಲೆಕಾಪು ತುಂಬಾ ತೂಕ, ಅದನ್ನು ಎತ್ತಿಕೊಂಡು ಓಡಾಡುವುದು ಒಂದು ತಲೆನೋವು ಅನ್ನುವಂತ ಮಾತಗಳನ್ನು ಕೆಲವರು ಆಡಿದರೆ ಮತ್ತೇ ಕೆಲವರು ಇದಕ್ಕೆ ಪರಿಹಾರವಾಗಿ ಅದು ಸಣ್ಣದಿರಬೇಕು, ಅದನ್ನು ಮಡಚಿ ಒಂದು ಕಿಸೆಯಲ್ಲಿ ಇಟ್ಟುಕೊಳ್ಳುವ ಹಾಗೆ ಇರಬೇಕು ಎಂದರು. ಆದರೆ ಅದರಲ್ಲೇ ಒಬ್ಬರು ತಲೆಕಾಪು ಕಾಣದಂತಿರಬೇಕು ಅನ್ನುವ ಮಾತು ಅನಾ ಮತ್ತು ತೆರೆಸೀ ಅವರನ್ನು ತಟ್ಟನೇ ಸೆಳೆಯಿತು.

ಇದನ್ನೇ ಜಗತ್ತು ಕೂಡ ಬಯಸುತ್ತದೆ, ಜಗತ್ತನ್ನು ಬೆರಗೊಳಿಸುವ ಹೊಳಹು ಅಂತನಿಸಿ ಆ ನಿಟ್ಟಿನಲ್ಲಿ ಕೆಲಸಕ್ಕೆ ತೊಡಗಿದರು. ಹಾವ್ಡಿಂಗ್ (Hovding) ಎನ್ನುವ ಗುಂಪು  ಉಂಟು ಮಾಡಿ, ಸುಮಾರು ಏಳು ವರುಶ ಬಿಟ್ಟುಬಿಡದೇ ಅರಕೆ ಕೆಲಸ ಮಾಡಿದರು ಜೊತೆಗೆ ಇದಕ್ಕಾಗಿ ಹತ್ತು ಮಿಲಿಯನ್ ಡಾಲರ್ ಹಣವನ್ನೂ (ಸುಮಾರು ಅಯ್ವತ್ತು ಕೋಟಿ ರುಪಾಯಿಗಳು) ಹೂಡಿದಿರು. ಅವರ ಈ ದುಡಿಮೆ, ಅರಕೆಯಿಂದಾಗಿ ಈಗ ಹೊಸದೊಂದು ತಲೆಕಾಪು ಹೊರಹೊಮ್ಮಿದೆ. ಅದೇ ಕೆಳಗಿನ ಚಿತ್ರದಲ್ಲಿ ತೋರಿಸಿರುವ ಕಣ್ಣಿಗೆ ಕಾಣದ ತಲೆಕಾಪು.

ಮೇಲಿನ ತಿಟ್ಟ ನೋಡಿದರೆ ಕಣ್ಣಿಗೆ ಕಾಣದ ತಲೆಕಾಪು ಬಗ್ಗೆ ಏನೂ ತಿಳಿಯದು ಅಲ್ಲವೇ !? ತಲೆಕಾಪುವಿನ ಬಾಗಗಳು ಮತ್ತು ಅವುಗಳ ನೆರವುಗಳ ಕುರಿತು ಈಗ ತಿಳಿದುಕೊಳ್ಳೋಣ

ಹಾವ್ಡಿಂಗ್

ಹಾವ್ಡಿಂಗ್ ಒಂದು ಕುತ್ತಿಗೆಪಟ್ಟಿ, ಈ ಕುತ್ತಿಗೆಪಟ್ಟಿಯಲ್ಲಿ ಒಂದು ಮಡಚಿರುವ ಗಾಳಿಚೀಲವನ್ನು (airbag) ಒಳಗೊಂಡಿರುತ್ತದೆ. ಅದು ಅಪಗಾತದ ಹೊತ್ತಿನಲ್ಲಿನಲ್ಲಶ್ಟೇ ಕಾಣಿಸಿಕೊಳ್ಳುವಂತದು. ಗಾಳಿಚೀಲ ಹೊಂದಿದ ಹಾವ್ಡಿಂಗ್ ಪಟ್ಟಿ ಕಾಲಬಂಡಿಗರ (cyclist) ತಲೆಯ ಸುತ್ತ ಸುತ್ತಿರುತ್ತದೆ. ಅಪಗಾತದ ಹೊತ್ತಿನಲ್ಲಿ ಕಾಲಬಂಡಿಗರ ಹಟಾತ್ತಾದ ನಡವಳಿಕೆಯನ್ನು ಅದರಲ್ಲಿರುವ ಅರಿವುಗೆಗಳು (sensors) ತಿಳಿದುಕೊಂಡು ಗಾಳಿಚೀಲ ಉಬ್ಬಿ, ತಲೆಯನ್ನು ಸುತ್ತುವರೆಯುತ್ತವೆ. ಈ ಕುತ್ತಿಗೆಪಟ್ಟಿಯು ತಲೆಕಾಪಿನಲ್ಲಿ ಒಂಚೂರು ಕಾಣುವ ಬಾಗ ಅನ್ನಬಹುದು. ಇದನ್ನು ನಮ್ಮ ಉಡುಪು, ಮಯ್ಗೆ ಹೊಂದುಕೊಳ್ಳುವ ಬಣ್ಣದಲ್ಲಿದ್ದರೇ ಅದನ್ನೂ ಕೂಡ ಕಾಣಿಸದಂತೆ ಮಾಡಬಹುದು.

06_how_cykelhjalm_airbag_20110125_030733_1

ಗಾಳಿಚೀಲ

ಅಪಗಾತದ ಹೊತ್ತಿನಲ್ಲಿ ಗಾಳಿಚೀಲ ಊದಿಕೊಂಡು ತಲೆಯನ್ನು ಸುತ್ತುತದೆ. ಈ ಗಾಳಿಚೀಲ ಊದಿಕೊಳ್ಳುವುದಕ್ಕೆ ಬರಿ 0.1 ಕ್ಶಣಗಳು ಸಾಕಾಗುವುದರಿಂದ ತಲೆಗೆ ಪೆಟ್ಟಾಗುವ ಮುಂಚೆನೇ ಇಡೀಯಾಗಿ ಊದಿಕೊಳ್ಳುತ್ತವೆ. ಅಪಗಾತದ ಪೆಟ್ಟನ್ನು ತಡೆದುಕೊಂಡಾದ ಮೇಲೆ ಗಾಳಿಚೀಲ ಮತ್ತೇ ಮೊದಲಿನ ಪಾಡಿಗೆ ಮರಳುತ್ತದೆ.

ಆವಿ ಊದುಕ (gas inflator)

ಇದು ಕುತ್ತಿಗೆಪಟ್ಟಿಯಲ್ಲಿದ್ದು, ಇದರಲ್ಲಿ ಹೊತ್ತಾವಿಯನ್ನು (helium) ತುಂಬಿರುತ್ತಾರೆ. ಗಾಳಿಚೀಲವನ್ನು ಉಬ್ಬಿಸುವ ಬಾಗವಿದು.

ಅರಿವುಗೆಗಳು (sensors)

ಗಾಳಿಚೀಲದ ಕೆಲಸವನ್ನು ಈ ಅರಿವುಗೆಗಳನ್ನು ಅಂಕೆಯಲ್ಲಿಡುತ್ತವೆ. ಕಾಲಬಂಡಿಗನ ಹಟಾತ್ತಾದ ನಡವಳಿಕೆಯನ್ನು ಅರಿತುಕೊಂಡು ತಟ್ಟನೇ ಗಾಳಿಚೀಲ ಉಬ್ಬಿಕೊಳ್ಳುವಂತ ಸಂದೇಶಗಳನ್ನು ಕಳುಹಿಸುತ್ತವೆ.

ಮುಂದಿನ ಹೆಣಿಗೆ ಹಾಗೂ ಒತ್ತುಗುಂಡಿ (frontzip and switch)

ಹಾವ್ಡಿಂಗನ್ನು ಕತ್ತು ಸುತ್ತಲೂ ಹಾಕಿ ಮುಂದಿನ ಹೆಣಿಗೆಯನ್ನು ಎಳೆಯಬೇಕು. ಈ ಹೆಣಿಗೆಯನ್ನು ನೆರೆಯಾಗಿ ಮುಚ್ಚಿದರೆ ಹಾವ್ಡಿಂಗ್ ಸರಿಯಾಗಿ ಕೆಲಸ ಮಾಡುತ್ತದೆ. ಇದರ ಮೇಲೆ ಹಾವ್ಡಿಂಗ್ ಒತ್ತುಗುಂಡಿ ಇರುತ್ತದೆ. ಹೆಣಿಗೆಯನ್ನು ಮುಚ್ಚಿದ ಮೇಲೆ ಈ ಒತ್ತುಗುಂಡಿಯನ್ನು ಕುತ್ತಿಗೆಪಟ್ಟಿಯ ಬಲ ಬಾಗಕ್ಕೆ ಬಿಗಿಯಬೇಕು. ಹೀಗೆ ಒತ್ತುಗುಂಡಿಯನ್ನು ಬಿಗಿದಾಗ ಒಂದು ಚಿಕ್ಕ LED ದೀಪ ಬೆಳಗುವಂತೆ ಮತ್ತು ದನಿ ಕೇಳಿಬರುವಂತೆ ಮಾಡಲಾಗಿದೆ.

ಬ್ಯಾಟರಿ ಹಾಗು ಕಪ್ಪುಪೆಟ್ಟಿಗೆ

ಕುತ್ತಿಗೆಪಟ್ಟಿಯ ಮುಂದೆ ಒಂದು ಪ್ಲಾಸ್ಟಿಕ್ ಬಾಗವನ್ನು ಮಾಡಲಾಗಿದೆ. ಅದರಲ್ಲಿ ಎಲ್.ಇ.ಡಿ ಗುರುತು ಇದೆ. ಹಾವ್ಡಿಂಗ್ ಬಿಗಿದ ಕೂಡಲೇ ಇದು ಬೆಳಗುತ್ತದೆ. ಇದರ ಜೊತೆಗೆ ಆರು ಎಲ್.ಇ.ಡಿಗಳು ಕೂಡ ಇವೆ. ಬ್ಯಾಟರಿ ಮಟ್ಟ ಕಡಿಮೆ ಆದ ಹಾಗೆ ಒಂದೊಂದು ಎಲ್.ಇ.ಡಿ ಆರಿ ಹೋಗುತ್ತವೆ. ಬರಿ ಗುರುತಿನ ಎಲ್.ಇ.ಡಿ ಬೆಳಕು ಬರುತ್ತಿದೆ ಅಂದರೆ ಬ್ಯಾಟರಿ ಕಸುವು ತುಂಬಾ ಕಡಿಮೆ ಮಟ್ಟದಲ್ಲಿ ಇದ್ದಾಗ ಹಾವ್ಡಿಂಗ್ ಕೂಗುತ್ತದೆ, ಆಗ ಬ್ಯಾಟರಿಯನ್ನು ಮರುಹುರುಪಿಸಬೇಕು (recharge). ಹಾವ್ಡಿಂಗ್ ಒಳಗೆ ಒಂದು ಕಪ್ಪುಪೆಟ್ಟಿಗೆ ಇದೆ. ಒಂದು ಅಪಗಾತದ ಹೊತ್ತಿನ ಮುನ್ನ 10 ಕ್ಶಣಗಳು ಹಾಗೂ ಅಪಗಾತದ ಆದಮೇಲಿನ 10 ಕ್ಶಣಗಳ ಕಾಲಬಂಡಿಗನ ನಡವಳಿಕೆ ಕುರಿತಾದ ತಿಳಿಹಗಳನ್ನು (data) ಕೂಡಿಟ್ಟುಕೊಳ್ಳುತ್ತದೆ.

ತಮ್ಮದೇ ತಲೆಯನ್ನು ಕಾಪಾಡುವ ತಲೆಕಾಪುವನ್ನು ಎಲ್ಲರೂ ಒಪ್ಪಿ ಬಳಸುವಂತಾಗಲಿ, ಬೆಲೆಬಾಳುವ ಬದುಕು ಉಳಿಯುವಂತಾಗಲಿ.

ಮನದಮಾತು: ಇಂಗ್ಲೀಶ ಕಲಿಕೆಯಿಂದಲೇ ಎಲ್ಲವನ್ನೂ ಸಾದಿಸಬಹುದು ಅಂತ ಕುರಿಯಂತೆ ಹಿಂಬಾಲಿಸುತ್ತಿರುವ ಮಂದಿಗೆ ತಾಯ್ನುಡಿಯಲ್ಲಿಯೇ ಕಲಿಕೆ ಮಾಡಿ ಹೊಸ ಹೊಸ ಹೊಳಹುಗಳನ್ನು ಹೊಮ್ಮಿಸುತ್ತಿರುವ ಸ್ವೀಡನ್, ಜಪಾನ್, ಪ್ರಾನ್ಸಿನಂತಹ ನಾಡುಗಳು ಕಣ್ಣು ತೆರೆಸುತ್ತಿವೆ, ತಾಯ್ನುಡಿಯಲ್ಲಿ ಕಲಿಕೆ ಎಲ್ಲಕ್ಕಿಂತ ಹಿರಿದು ಅನ್ನುವ ಸಂದೇಶ ಸಾರುತ್ತಿವೆ.

ಮಾಹಿತಿ ಸೆಲೆ : http://www.hovding.com/en/us/ , http://www.hovding.com/en/how/

ವಿವೇಕ್ ಶಂಕರ್

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: