ಅರಿಮೆಗಾರ ಜಯ್ಲುಪಾಲು!

31 ವರ್ಶದ ಓಮೀದ್ ಕೊಕಬೀ ಇರಾನ್ ಮೂಲದವರು. ಅವರು ಅಮೇರಿಕಾದ ಟೆಕ್ಸಾಸ್ ಕಲಿಕೆವೀಡಿನಲ್ಲಿ 2010ರಿಂದ ಪಿ.ಎಚ್.ಡಿ ಮಾಡುತ್ತಿದ್ದರು. ತಾಯಿಯ ಹದುಳ ಕಾಯಲೆಂದು ಇರಾನಿಗೆ ಹೋದವರು ಹಿಂತಿರುಗಲೇ ಇಲ್ಲ. ಮೊದಲಿಗೆ ಅವರಿಗೆ ವಿಸಾ ವಿಳಂಬವಾಗಿತ್ತು. ತದನಂತರ ವಿಸಾ ಸಿಕ್ಕಿ 2011 ಜನವರಿ 30 ರಂದು ಅಮೇರಿಕಾಗೆ ಹಿಂತಿರುಗುತ್ತಿದ್ದಾಗ ಬಾನೋಡ ನಿಲ್ದಾಣದಲ್ಲೇ ಸೆರೆಹಿಡಿದ ಇರಾನ್ ಆಳ್ವಿಕೆಯು ಅವರನ್ನ ಜಯ್ಲಿಗಟ್ಟಿತ್ತು. ಅಮೇರಿಕಾದ ಬದ್ದ ವಯ್ರಿಯಾಗಿರುವ ಇರಾನ್ ಆಳ್ವಿಕೆಯು ತನ್ನದೇ ನಾಡಿನ ಓಮೀದ್ ಮೇಲೆ ಗುಡಾಚಾರದ ನೆಪವೊಡ್ಡಿ (ಹಗೆ ನಾಡಿನ ಜೊತೆ ಕಯ್ಜೋಡಿಸಿದ ತಪ್ಪಿಗಾಗಿ) ತಕ್ಕ ವಿಚಾರಣೆಯನ್ನೂ ನಡೆಸದೆ ಅವರನ್ನು ಜಯ್ಲಿಗಟ್ಟಿದೆ.

08_ಓಮೀದ್

ತಮ್ಮ ಹತ್ತಿರದವರಿಗೆ ಅವರು ಬರೆದ ತೆರದ ಪತ್ರದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ನನಗೀಗ ಬರೇ ಮೂವತ್ತು ವರ‍್ಶ. ಆಗಲೇ 2 ವರ‍್ಶ ಜಯ್ಲಿನಲ್ಲಿ ಕಳೆದಿದ್ದೇನೆ. ಅರಿಮೆಯ ಅರಕೆಯನ್ನು ಮಾಡಲು ಹಾತೊರೆಯುತ್ತಿದ್ದೇನೆ. ಆದರೆ, ಏನೇ ತೊಂದರೆ ಬಂದರೂ ಕಾಳಗಕ್ಕೆ ನಂಟಿದ ಅರಕೆಯನ್ನು ಮಾಡುವುದಿಲ್ಲ ಎಂದು ತೀರ‍್ಮಾನಿಸಿರುವುದೇ ನಾ ಮಾಡಿದ ತಪ್ಪೇನು” ಎಂದು ಅವಲತ್ತುಕೊಂಡಿದ್ದಾರೆ. ಓಮೀದ್ ಅವರನ್ನು ಇರಾನ್ ದೇಶದ ಆಳ್ವಿಕೆಯವರು ಕಾಳಗಕ್ಕೆ ಸಂಬಂದಿಸಿದ ಅರಕೆಯಲ್ಲಿ ಇರಾನಿನವರ ಜೊತೆ ಕಯ್ಜೊಡಿಸಲು ಕೇಳಕೊಂಡಿತ್ತು. ಜಯ್ಲಿಗೆ ಅಟ್ಟುವ ಮುನ್ನವೂ, ನಂತರವೂ ಅವರ ಮೇಲೆ ಒತ್ತಡ ಹೇರಲಾಗಿತ್ತು. ಆದರೆ, ಓಮೀದ್ ಅದಕ್ಕೆ ಸೊಪ್ಪು ಹಾಕಿರಲಿಲ್ಲ. “2005ರಿಂದಲೂ ನನಗೆ ಇರಾನ್ ಆಳ್ವಿಕೆಯು ಕರೆಯೋಲೆ ಕೊಡುತ್ತಿತ್ತು. ಇರಾನಿನ ಅಣುಹುರುಪು ಸಂಸ್ತೆಯಲ್ಲಿ ನನಗೆ ಪೂರ‍್ತಿ ಕಲಿಕಾವೇತನದ ಜೊತೆ ಪಿ.ಎಚ್.ಡಿ ಪದವಿಗೆ ಕರೆಯೋಲೆ ಕೊಡಲಾಗಿತ್ತು. ನಾನು ಬೇಡವೆಂದೇ ಹೇಳುತ್ತಿದ್ದೆ” ಎಂದು ತಿಳಿಸಿದ್ದಾರೆ.

ಅವರು ಬೇರೆ ಓಲೆಗಳಲ್ಲಿ ತಾವು ಯಾವ ತಪ್ಪೂ ಮಾಡಿಲ್ಲವೆಂದು, ತಮ್ಮನ್ನು ಸೆರೆಹಿಡಿಯುವುದರಿಂದಿಡಿದು ವಿಚಾರಣೆ ನಡೆಸಿ ತೀರ‍್ಪು ಕೊಡುವವರೆಗೆ ಆಳ್ವಿಕೆಯೇ ಹಲವಾರು ಕಟ್ಟಳೆಗಳನ್ನು ಮುರಿದಿದ್ದಾರೆಂದೂ ಹೇಳಿದ್ದಾರೆ. ಅವರ ಬಿಡುಗಡೆಗಾಗಿ ಇಲ್ಲವೇ ಆರೋಪವನ್ನು ಸಾಬೀತುಪಡಿಸಲು ಸರಿಯಾದ ವಿಚಾರಣೆಯನ್ನು ನಡೆಸಬೇಕಾಗಿ ಹಲವಾರು ಅರಿಮೆಗಾರರು ಇರಾನ್ ಆಳ್ವಿಕೆಯನ್ನು ಕೇಳಿಕೊಂಡಿದ್ದಾರೆ. ಅಮೇರಿಕಾದ ಪುರುಳರಿಮೆಗಾರರ ಕೂಡಣ, ಅರಿಮೆಯ ಏಳಿಗೆಗಾಗಿರುವ ಅಮೇರಿಕಾದ ಅರಿಮೆಗಾರರ ಒಕ್ಕೂಟ, ಅಂತರರಾಶ್ಟ್ರೀಯ ಬೆಳಕಿನರಿಮೆಗಾರರ ಒಕ್ಕೂಟ ಮತ್ತು ತುಡಿವ ಅರಿಮೆಗಾರರ ಕೂಟಗಳು ಇರಾನ್ ಆಳ್ವಿಕೆಯ ಮೇಲೆ ಒತ್ತಡ ಹೇರಿವೆ.

ಜಯ್ಲಿನಲ್ಲಿದ್ದಾಗ ಅವರ ಮೇಲೂ, ಅವರ ಮನೆಯವರ ಮೇಲೂ ಆಳ್ವಿಕೆಗೆ ಸಂಬಂದಿಸಿದ ಬೇರೆ ಬೇರೆ ಸಂಸ್ತೆಯವರು ಒತ್ತಡ ಹೇರಿದ್ದರು ಮತ್ತು ಆಮಿಶವೊಡ್ಡಿದ್ದರು. ಕಾರ‍್ಬನ್ ಡಯಾಕ್ಸಯ್ಡಿನ ಹೆಚ್ಚುಬಲದ ಲೇಸರ್ ಬಳಸಿ ಅಣು ಉರುವಲನ್ನು ಬೇರ‍್ಪಡಿಸಿ ಹಸನು ಮಾಡುವ ಕೆಲಸಕ್ಕಾಗಿ ಅವರನ್ನು ಕೇಳಲಾಗಿತ್ತು. ಅವರಲ್ಲಿ ಇಂತಾ ಚಳಕಕ್ಕೆ ಬೇಕಾದ ಪಾರುಪತ್ತೆಯ ನಿಪುಣತೆ ಇದೆ ಎಂದು ಇರಾನ್ ಆಳ್ವಿಕೆಯ ಅಣು ಸಂಸ್ತೆಯವರಿಗೆ ತಿಳಿದಿತ್ತು. ಕಾರ್ಬನ ಡಯಾಕ್ಸಯ್ಡ್ ಲೇಸರ್ ಚಳಕವು ಅಣುಉರುವಲನ್ನು ಬೇರ್ಪಡಿಸಿ ಹಸನು ಮಾಡುಲು ತಕ್ಕುದಾದ ಚಳಕ ಎಂದೇ ಎಣಿಸಲಾಗಿದೆ.

ಇಂದಿನ ಇರಾನ್ ಆಳ್ವಿಕೆ ಅಮೇರಿಕಾ ಬೆಂಬಲಿತ ‘ಶಾ’ ಆಳ್ವಿಕೆಯನ್ನು ಕೊನೆಗಾಣಿಸಿ 1970ರ ಹತ್ತರ ಇಸ್ಲಾಂ ಕ್ರಾಂತಿಯ ನಂತರದಲ್ಲಿ ಆಡಳಿತ ನಡೆಸಲು ಆರಂಬಿಸಿತು. ಶಾ ರಾಜರು ಅಮೇರಿಕಾದ ಬುಟ್ಟಿಯಲ್ಲಿದ್ದರು.  ರಾಜರ ಆಳ್ವಿಕೆಯ ನಂತರ ಇಸ್ಲಾಂವಾದಿಗಳ ಆಳ್ವಿಕೆಗೆ ಸಿಕ್ಕಿರುವ ಇರಾನಿನವರ ಪಾಡು ಬೆಂಕಿಯಿಂದ ಬಾಣೆಲೆಗೆ ಬಿದ್ದಂತಾಗಿದೆ. ಇಂದಿನ ಆಳ್ವಿಕೆಯು ಅಣುಸಿಡಿಮದ್ದನ್ನು ತಯಾರಿಸಲು ಒದ್ದಾಡುತ್ತಿದೆ. ಅದು ಅಮೇರಿಕಾ ಮತ್ತು ಇಸ್ರೇಲ್ ನಾಡುಗಳ ಬಹುದೊಡ್ಡ ಹಗೆ. ಇಸ್ರೇಲ್ ದೇಶವನ್ನು ನಲದಿಂದಲೇ ಹೊಸಕಿಹಾಕುವ ಆಣೆಯನ್ನೇ ಮಾಡಿದೆ. ಹಾಗಾಗಿ ಇಸ್ರೇಲ್ ಮತ್ತು ಅದರ ಬಹುದೊಡ್ಡ ಬೆಂಬಲಿಗ ಅಮೇರಿಕಾ ನಾಡುಗಳು ಇರಾನ್ ದೇಶವನ್ನು ಬಹಿಶ್ಕಾರ ಹಾಕಿದ್ದು ಅಣುಸಿಡಿಮದ್ದುಗಳನ್ನು ತಯಾರಿಸದಂತೆ ತಡೆಯುತ್ತಿವೆ. ಹಾಗಾಗಿ, ಇರಾನ್ ಆಳ್ವಿಕೆಯು ಅಮೇರಿಕಾದಲ್ಲಿ ಕಲಿಯುತ್ತಿರುವ ತನ್ನ ನಾಡವರ ಮೇಲೆ, ಮತ್ತು ತಮ್ಮ ಜೊತೆ ಕಯ್ಜೋಡಿಸದವರನ್ನು ಗುರಿಯಾಗಿಸಿಕೊಂಡು ಅವರಿಗೆ ಕೋಟಲೆ ಕೊಡುತ್ತಿದೆ.

ಇರಾನಿನ ಹಲವು ಅರಿಮೆಗಾರರು ತಮ್ಮದೇ ಆಳ್ವಿಕೆಯಿಂದ ತೊಂದರೆಗೊಳಗಾಗುತ್ತಿದ್ದಾರೆ. ತಮಗಾಗುತ್ತಿರುವ ತೊಂದರೆಗಳ ನಡುವೆಯೂ ಅಲ್ಲಿನ ಅರಿಮೆಗಾರರು ಬದುಕುವಿರೋದಿ ಅರಕೆಗಳನ್ನು ನಡೆಸುವುದಿಲ್ಲವೆಂದು ತೀರ‍್ಮಾನ ತೆಗೆದುಕೊಳ್ಳುತ್ತಿರುವುದು ಮಾದರಿ ನಡೆ. ಓಮೀದ್ ಅವರ ಜೊತೆ ಜಯ್ಲಿನಲ್ಲಿ ಕೆಲಕಾಲ ಕಳೆದಿದ್ದ ಹಿರಿಯ ಅರಿಮೆಗಾರೊಬ್ಬರು ಬಿಡುಗಡೆಯಾಗಿದ್ದಾರೆ. ಓಮೀದ್ ಬಿಡುಗಡೆಗಾಗಿ ಹೋರಾಡುತ್ತಿರುವವರ ಜೊತೆ ಅವರೂ ಕಯ್ಜೋಡಿಸಿದ್ದಾರೆ.

ತಿಟ್ಟ: http://www.nature.com/news/

ಓಮೀದ್ ಅವರ ಬಿಡುಗಡೆಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ತಿಳಿದುಕೊಳ್ಳಲು: http://freeomid.org 

– ಸಿದ್ದರಾಜು ಬೋರೇಗವ್ದ

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks