ಬಾರತದ ಹಣಕಾಸಿನ ಮಟ್ಟದಲ್ಲಿ ಕುಸಿತ

rating down

ಇತ್ತೀಚಿಗೆ ಸ್ಟ್ಯಾಂಡರ‍್ಡ್ & ಪೂರ್‍ಸ್ ಅನ್ನೋ ಸಂಸ್ತೆ ಬಾರತದ ಯೋಗ್ಯತೆಯನ್ನು BBB ಮಯ್ನಸ್ ಗೆ ಇಳಿಸಿರುವ ಸುದ್ದಿ ಎಲ್ಲಾ ಪ್ರಮುಕ ಸುದ್ದಿಹಾಳೆ ಹಾಗೂ ಮಾದ್ಯಮದಲ್ಲಿ ಪ್ರಸಾರವಾಗಿತ್ತು. ಇದು ಜಾಗತೀಕವಾಗಿ ಬಾರತದ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಅಂತ ಸುದ್ದಿ ಮಾದ್ಯಮದಲ್ಲಿ ಮಾತನಾಡಲಾಗುತ್ತಿತ್ತು. ಸರಿ ಹಾಗಾದ್ರೆ ಒಂದು ಸಂಸ್ತೆ ನೀಡುವ ಯೋಗ್ಯತೆ ಒಂದು ದೇಶದ ಆರ‍್ತಿಕತೆಯ ಮೇಲೆ ಅಶ್ಟೊಂದು ಪರಿಣಾಮ ಬೀರುತ್ತದಾ? ಆ ಸಂಸ್ತೆ ನೀಡುವ ಯೋಗ್ಯತೆಯನ್ನು ಹೂಡಿಕೆದಾರರು ಗಂಬೀರವಾಗಿ ತಗೋತಾರಾ? ಮುಂದೆ ನೋಡೋಣ

ಏನಿದು ಎಸ್ & ಪಿ ?

ಎಸ್ &  ಪಿ ಅನ್ನೋದು  ಸ್ಟ್ಯಾಂಡರ‍್ಡ್ & ಪೂರ್‍ಸ್ ಅನ್ನೋ ಸಂಸ್ತೆಯ ಚಿಕ್ಕ ಹೆಸರು. ಈ ಸಂಸ್ತೆ ಅಮೇರಿಕ ದೇಶದಲ್ಲಿದೆ. ಇದು ಹಣಕಾಸು ಕ್ಶೇತ್ರದಲ್ಲಿ ತನ್ನ ಸೇವೆಯನ್ನ ಒದಗಿಸುತ್ತದೆ. ಈ ಸಂಸ್ತೆಯು ಶೇರು ಮಾರುಕಟ್ಟೆಯಲ್ಲಿ ನೀಡುವ ತನ್ನ ಸುಟ್ಟುಗೆಗೆ (indices)  ಹೆಸರುವಾಸಿಯಾಗಿದೆ. ವಿಶ್ವದ ಮೂರು ಪ್ರಮುಕ ಕ್ರೆಡಿಟ್ ರೇಟಿಂಗ್ ನೀಡುವ ಸಂಸ್ತೆಗಳಲ್ಲಿ ಇದು ಸಹ ಒಂದು.

ಕ್ರೆಡಿಟ್ ರೇಟಿಂಗ್ ಎಂದರೇನು?

ಕ್ರೆಡಿಟ್ ರೇಟಿಂಗ್ ಎಂದರೆ ಒಬ್ಬ ಸಾಲಗಾರನು ತಾನು ಪಡೆದಿರುವ ಸಾಲವನ್ನು ಮರುಪಾವತಿ ಮಾಡವ ಸ್ತಿತಿಯಲ್ಲಿದ್ದಾನೆಯೇ ಅನ್ನುವುದನ್ನು ನಿರ‍್ದರಿಸುತ್ತದೆ. ಇದು ಮುಕ್ಯವಾಗಿ ವ್ಯಾಪಾರ ಮಾಡುವ ಸಂಸ್ತೆಗಳಿಗೆ ಅತವಾ ಸರ‍್ಕಾರಕ್ಕೆ ನೀಡಲಾಗುತ್ತದೆ. ಈ ಕ್ರೆಡಿಟ್ ರೇಟಿಂಗ್ ಅನ್ನು ಕ್ರೆಡಿಟ್ ರೇಟಿಂಗ್ ಸಂಸ್ತೆಗಳು ನಿರ‍್ದಾರ ಮಾಡುತ್ತವೆ. ಈ ರೇಟಿಂಗ್ ಯಾವುದೇ ಗಣಿತದ ಸೂತ್ರವನ್ನು ಹೊಂದಿಲ್ಲ, ಬದಲಾಗಿ ಈ ಸಂಸ್ತೆಗಳು ತಮ್ಮ ಅನುಬವ ಹಾಗೂ ವಿವೇಚನೆಯನ್ನು ಉಪಯೋಗಿಸಿ ಆ ಸಂಸ್ತೆಯ ಅತವಾ ಸರ‍್ಕಾರದ ಹೊರಜಗತ್ತಿಗೆ ಸಿಗುವ ಹಾಗೂ ಕಾಸಗಿ ಮಾಹಿತಿಯನ್ನು ಆದರಿಸಿ ನೀಡುತ್ತವೆ.

ಒಂದು ಸರ‍್ಕಾರ ಅತವಾ ಸಂಸ್ತೆಗಳು ತಮಗೆ ಬೇಕಾಗಿರುವ ಸಾಲ ಪಡೆಯಲು ನೀಡುವ ಬಾಂಡ್ ಗಳನ್ನು ಕರೀದಿ ಮಾಡಲು ವ್ಯಕ್ತಿಗಳು ಮತ್ತು ಸಂಸ್ತೆಗಳು ಆ ಸರ‍್ಕಾರ ಅತವಾ ಸಂಸ್ತೆಯ ಸಾಲ ತೀರಿಸುವ ಯೋಗ್ಯತೆಯನ್ನು ಅಳೆಯಲು ಈ ಕ್ರೆಡಿಟ್ ರೇಟಿಂಗ್ ಅನ್ನು ಉಪಯೋಗ ಮಾಡುಕೊಳ್ಳುತ್ತವೆ. ಕಡಿಮೆ ರೇಟಿಂಗ್ ಹೊಂದಿರುವ ಸಂಸ್ತೆ ಅತವಾ ಸರ್‍ಕಾರ ಹೆಚ್ಚಾಗಿ ಜನರು ಹೂಡಿರುವ ಸಾಲವನ್ನು ಹಿಂದಿರುಗಿಸಲು ಶಕ್ತಿ ಹೊಂದಿರುವುದಿಲ್ಲ ಎಂದು ಈ ಕ್ರೆಡಿಟ್ ರೇಟಿಂಗ್ ಸಂಸ್ತೆಗಳು ಅಬಿಪ್ರಾಯ ಪಡುತ್ತವೆ. ಈ ಅಬಿಪ್ರಾಯಕ್ಕೆ ಬರಲು ಆ ಸಂಸ್ತೆ ಅತವಾ ಸರ್‍ಕಾರದ  ಇತಿಹಾಸ ಹಾಗೂ ಅವರ ಹಣಕಾಸು ನಿರ‍್ವಹಣೆಯನ್ನು ನೋಡುತ್ತವೆ.

ಸೋವರೇನ್ ಕ್ರೆಡಿಟ್ ರೇಟಿಂಗ್

ಸೋವರೇನ್ ಕ್ರೆಡಿಟ್ ರೇಟಿಂಗ್ ಅಂದ್ರೆ ಒಂದು ದೇಶಕ್ಕೆ ನೀಡಲಾಗುವ ಯೋಗ್ಯತೆ. ಈ ಯೋಗ್ಯತೆಯು ಆ ದೇಶದಲ್ಲಿ ಹೂಡಿಕೆ ಮಾಡಲು ಇರುವ ವಾತಾವರಣದ ಅಪಾಯದ ಮಟ್ಟವನ್ನು ತಿಳಿಸುತ್ತದೆ. ಈ ರೇಟಿಂಗ್ ಅನ್ನು ಹೊರದೇಶದಲ್ಲಿ ಹೂಡಿಕೆ ಮಾಡಲು ಇಚ್ಚಿಸುವ ಸಂಸ್ತೆಗಳು ಅತವಾ ವ್ಯಕ್ತಿಗಳು ಉಪಯೋಗಿಸುತ್ತಾರೆ. ಇದರಲ್ಲಿ ಆ ದೇಶದ ರಾಜಕೀಯ ಸ್ತಿತಿಗತಿಯನ್ನು ಪರಿಗಣಿಸಲಾಗಿರುತ್ತದೆ. ಒಂದು ದೇಶದ ಯೋಗ್ಯತೆಯನ್ನು AAA ನಿಂದ D ವರೆಗೂ ನೀಡಲಾಗುತ್ತದೆ. AAA ಅಂದರೆ ಆ ದೇಶದ ರಾಜಕೀಯ ಪರಿಸ್ತಿತಿ ಹಾಗೂ ಹಣಕಾಸು ನಿರ್‍ವಹಣೆ ಚೆನ್ನಾಗಿದೆಯಂದೂ. D ಎಂದರೆ ಆ ದೇಶದಲ್ಲಿ ವ್ಯಾಪಾರ ಮಾಡಲು ಲಾಯಕ್ಕಿಲ್ಲವೆಂದು ಅರ‍್ತ.

ನಮ್ಮ ದೇಶಕ್ಕೆ ಏನು?

ಈಗ ಬಾರತದ ಯೋಗ್ಯತೆಯನ್ನು BBB ಯಿಂದ BBB- ಇಳಿಸಲಾಗಿದೆ. ಇದರ ಅರ್‍ತ ಇಲ್ಲಿಯವರೆಗೂ ನಡು-ಕೆಳ ಹಂತದಲ್ಲಿದ್ದ ಸ್ತಿತಿಯನ್ನು ಒಂದು ಹಂತ ಕೆಳಗೆ ಇಳಿಸಲಾಗಿದೆ. ಅಂದರೆ ದೇಶದ ಆರ‍್ತಿಕ ಹಾಗೂ ರಾಜಕೀಯ ಸ್ತಿತಿಗಳು ಉತ್ತಮವಾಗಿಲ್ಲದ ಕಾರಣ ಒಂದು ಹಂತ ಕೆಳಗೆ ಇಳಿಸಲಾಗಿದೆ. ಇದಕ್ಕೆ ಸಂಸ್ತೆ ನೀಡುವ ಕಾರಣ ಬಾರತದಲ್ಲಿ ಹೆಚ್ಚುತ್ತಿರುವ ಹಣಕಾಸು ಮುಗ್ಗಟ್ಟು ಮತ್ತು ಸಾಲ. ಜೊತೆಜೊತೆಗೆ ಬರುತ್ತಿರುವ ಆದಾಯ ಕಡಿಮೆಯಾಗಿದೆ. ಬ್ರಿಕ್ (BRIC) ದೇಶಗಳಲ್ಲಿ ನಮ್ಮ ದೇಶದ ಯೋಗ್ಯತೆಯೇ ಅತಿ ಕಡಿಮೆಯಾಗಿದೆ. ಈ ಹಂತಕ್ಕಿಂತ ಒಂದು ಹಂತ ಕೆಳಗೆ ಹೋದಲ್ಲಿ ಅಂದರೆ BB+ ಆದಲ್ಲಿ ದೇಶದಲ್ಲಿ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು ಅನ್ನೋ ಸಂದೇಶ ಹೂಡಿಕೆದಾರರಿಗೆ ನೀಡಲಾಗುತ್ತದೆ.

ಇದರ ಬಗ್ಗೆ ನಮ್ಮ ರಾಜಕೀಯ ಪಕ್ಶಗಳು, ಸರ್‍ಕಾರಗಳು ಏನೇ ಹೇಳಿದರೂ ನಮ್ಮ ದೇಶದಲ್ಲಿ ಉತ್ಪಾದನ ಸಾಮರ್‍ತ್ಯ ಕಡಿಮೆಯಾಗಿದೆ ಅನ್ನುವುದು ಸತ್ಯ. ಹೂಡಿಕೆದಾರರು ಈ ರೇಟಿಂಗ್ ಅನ್ನು ಗಂಬಿರವಾಗಿಯೇ ಪರಿಗಣಿಸುತ್ತಾರೆ. ಒಂದು ಹಂತದಲ್ಲಿ ವಿದೇಶ ಬಂಡವಾಳದ ಹರಿವು ಕಡಿಮೆಯಾದರೆ ಅದರ ನೇರ ಪರಿಣಾಮ ಉದ್ಯೋಗ ಕ್ಶೇತ್ರದಲ್ಲಿ ಆಗಲಿದೆ. ಹೆಚ್ಚಿನ ಬಂಡವಾಳವಿಲ್ಲದೆ ಉದ್ಯಮಗಳನ್ನು ಹುಟ್ಟುಹಾಕಲು ಆಗುವುದಿಲ್ಲ. ದೇಶದ ಆರ್‍ತಿಕ ಮಟ್ಟ ಕುಸಿಯುತ್ತದೆ.

ಮುಕ್ಯವಾಗಿ ಮುಂದುವರಿದ ದೇಶದ ಸಾಲಿಗೆ ಸೇರಬೇಕೆನ್ನುವ ಬಾರತದ ಕನಸು ನನಸಾಗಬೇಕಾದರೆ ಸರ್‍ಕಾರ ತನ್ನ ಉದ್ಯಮ ನೀತಿಗಳನ್ನು ಸರಿಪಡಿಸಬೇಕಾಗಿದೆ ಇದರ ಜೊತೆಜೊತೆಗೆ ಸರ್‍ಕಾರ ತನ್ನ ಸಂಬಂದವನ್ನು ವಿವಿದ ರಾಜ್ಯಗಳ ಜೊತೆಗೆ ಚೆನ್ನಾಗಿ ಇಟ್ಟುಕೊಳ್ಳಬೇಕು. ಉದ್ಯಮಗಳನ್ನು ಆಯಾ ರಾಜ್ಯದಲ್ಲಿ ಸ್ತಾಪಿಸಲು ಹೆಚ್ಚಿನ ಅದಿಕಾರವನ್ನು ಆಯಾ ರಾಜ್ಯಗಳಿಗೆ ನೀಡಬೇಕು. ಬಾರತ ಒಂದು ದೇಶವಾಗಿ ಮುಂದೊರೆಯಬೇಕಾದರೆ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಮಾನವಾದ ಅದಿಕಾರ ಹಂಚಿಕೆಯಾಗಬೇಕು. ನೀವೇನಂತೀರಿ?

– ಚೇತನ್ ಜೀರಾಳ್

(ಚಿತ್ರ: www.minimally-invasive-marketing.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: