ಉಂಚಳ್ಳಿ ಅರ‍್ಬಿಗೆ ಪ್ರವಾಸ – 3

unchalli-3

{ಕಳೆದ ವಾರದ ಕಂತಿನಲ್ಲಿ: ನಮ್ಮ ಹಾಗೆಯೇ ಕಾಡಲ್ಲಿ ಕಣಿವೆಗೆ ಇಳಿದು, ಬಂಡೆಗಳನ್ನು ದಾಟಿ ಇದೇ ಬಂಡೆ ಮೇಲೆ ಕುಳಿತು ಮಯ್ ಮರೆತು ಅರ್‍ಬಿಯನ್ನು ನೋಡುತ್ತ ಕುಳಿತಿದ್ದಿರಬಹುದು. ಇದರ ಅಂದವನ್ನು ಹಾಡಿ ಹೊಗಳಿದ್ದಿರಬಹುದು. “ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್” ಎಂದು ಇಲ್ಲೇ ಎಲ್ಲೋ ಕುಳಿತೇ ಬರೆದಿರಲೂಬಹುದು! ಎಲ್ಲ ನೆನಸಿಕೊಂಡು ಒಂದು ಕ್ಶಣ ಮಯ್ನವಿರೆದ್ದಿತು…}

ಸೂರ್‍ಯ ಆ ಬಂಡೆಯ ಹಿಂದೆ ಹೋಗಿ ಸುಮಾರು 5 ನಿಮಿಶ ಆಗಿದ್ದಿರಬಹುದು. ಹೊತ್ತು ನೋಡಿದೆವು. ಸುಮಾರು 4:15 ಆಗಿತ್ತು. ಈಗ ಹೊರಟರೆ ಇನ್ನು 5:15 ಅಶ್ಟರಲ್ಲಿ ಮೇಲೆ ಹೋಗಿರುತ್ತೇವೆಂದುಕೊಂಡು ಎದ್ದೆವು. ಅರ್‍ಬಿಯನ್ನು ಬಿಟ್ಟು ಬರುವುಕ್ಕೆ ನಮಗೆ ಮನಸ್ಸೇ ಇಲ್ಲ. ಎರಡು ಹೆಜ್ಜೆ ಇಟ್ಟು ಮತ್ತೆ ತಿರುಗಿ, “ಕೊನೆಯ ಸಲ ನೋಡೋಣ” ಅಂತ ನೋಡಿದೆ. ಜಗ್ಗು ಕೂಡ ತೀರಾ ಹಿಗ್ಗಿನಿಂದ ನೋಡುತ್ತ ಹೊರಡುವುದಕ್ಕೆ ಅಣಿಯಾಗುತ್ತಿದ್ದ. ನಾನು ಮುಂದೆ ತಿರುಗಿದೆ. ಜಗ್ಗು ಹಿಂದೆಯಿಂದ, ಆ ತಡೆಯಿಲ್ಲದ ಚೆಲುವನ್ನು ನೋಡ್ತಾ, ತಡೆಯೋದಕ್ಕೆ ಆಗದೆ “fallsಗೆ ನಮಸ್ಕಾರ ಹಾಕಿದೆ ಕಣೋ!” ಎಂದು ಕೂಗಿ ಹೇಳಿದ.

ಇಶ್ಟು ಹೊತ್ತಿಗಾಗಲೇ ಮೋಡಗಳು ಬಹಳ ದಟ್ಟವಾಗಿ ಕವಿದಿದ್ದವು. ಅರ್‍ಬಿ ನೋಡಿಕೊಂಡು ಮಯ್ ಮರೆತಿದ್ದ ನಮಗೆ ಇದು ಗೊತ್ತೇ ಆಗಲಿಲ್ಲ. “ಮೋಡ ಬಹಳ ಇದೆ, ಈಗ ಮಳೆ ಹುಯ್ದರೆ ಕಶ್ಟ ಇದೆ” ಎಂದುಕೊಂಡೆ. ಸಿಕ್ಕಾಪಟ್ಟೆ ಜಾರುವ ಪಾಚಿ ಕಲ್ಲಿನ ಮೇಲೆ ಇನ್ನು ಎರಡು ಹೆಜ್ಜೆ ಇಟ್ಟೆವು. ಮಳೆ ಹುಯ್ಯುವುದಕ್ಕೆ ತೊಡಗಿತು! ಒಂದು ಕ್ಶಣ ಅರ್‍ಬಿಯ ನೀರೇ ಚಿಮ್ಮುತ್ತಿರಬಹುದೆಂಬ ಅನುಮಾನ. ಆದರೆ ಅದು ಮಳೆಯೇ ಎಂದು ಗೊತ್ತಾಗುವುದಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಮನಸಲ್ಲಿ ಯಾವ ಯೋಚನೆ ಬಂದಿತ್ತೋ ಗೊತ್ತಿಲ್ಲ. ಮೆಲ್ಲಗೆ ಜಗ್ಗು ಕಡೆ ತಿರುಗಿ ಮೆಳ್ಳಗಣ್ಣಿಂದ ಅವನನ್ನು ನೋಡುತ್ತ “ಮಗನೇ, ಇವತ್ತು ಏನೋ ಕಾದಯ್ತೆ ನಮ್ಗೆ” ಅಂತ ಹೇಳೊ ಹಾಗೆ ಮೆಲ್ಲಗೆ ನಕ್ಕೆ. “ಸಿವಾ, ಇವತ್ತು ನಾವು ಗೂಟ ಹೊಡಿಸ್ಕೊಳ್ಳೋ chance ಬಾರಿ ಅಯ್ತೆ ಅಂತನ್ನಿಸ್ತಯ್ತೆ” ಎನ್ನುವ ಹಾಗೆ ಅವನ ನಗೆ. ಮಾತಿಲ್ಲ. ಸುಮ್ಮನೆ ಮೆಲ್ಲಗೆ ಹೆಜ್ಜೆ ಇಡುತ್ತ, ಜಾರದೇ ಇರುವಹಾಗೆ ಒಂದೊಂದು ಅಡಿಯನ್ನೂ ಪರೀಕ್ಶೆ ಮಾಡಿ ಇಡುತ್ತ ನಡೆದೆವು, ಹೆಚ್ಚು ಕಡಿಮೆ ಕುಳಿತುಕೊಂಡೇ ಮುಂದೆ ಸಾಗಿದೆವು. ಒಣಗಿದ್ದ ಕಲ್ಲಿನ ಮೇಲಿನ ಪಾಚಿಯು ಈಗ ಕೊಂಚ ಮಳೆನೀರು ತಗುಲಿ ತುಂಬಾ ಜಾರುಕಲಾಗಿತ್ತು.

ಈಗ ಅರ್‍ಬಿಯ ಎದುರಿನ ಬಂಡೆಯ ಕೆಳಗೆ ಇಳಿಯ ಬೇಕು. ನಾವು ಹತ್ತಿ ಬಂದ ದಾರಿ ಈಗ ಮಳೆ ಶುರುವಾದಮೇಲೆ ತೀರಾ ಜಾರುಕಲು, ಮತ್ತೆ ಇಳಿಜಾರು ಕೂಡ. ಅದಲ್ಲದೇ ಅದು ಹೊಳೆಯ ಬದಿಯಲ್ಲೇ ಇದೆ. ಜಾರಿದರೆ ನೇರವಾಗಿ ಹೊಳೆಗೆ ಬಲಿ. “ಶ್ಯಾಮ ಅವರು ಬಂದ ಕಡೆ ಇಂದ ಹೋಗೋಣ” ಎಂದು ಹೇಳಿ ಜಗ್ಗು ಮೇಲಿನ ಕಡೆ ಕಯ್ ತೋರಿಸಿದ. ಇಶ್ಟು ಹೊತ್ತಿಗಾಗಲೇ ಅವನು ನನಗಿಂತ ಸುಮಾರು ನಾಲ್ಕಯ್ದು ಅಡಿ ಮುಂದಿದ್ದ. “ಅವರು ಬಂದದ್ದು ಅಲ್ಲಿಂದ ಅಲ್ಲ ಕಣೊ, ಕೆಳಗಿಂದ” ಎಂದು ಹೇಳಿದೆ. “ಗುರು ಕೂತಿದ್ದಿದ್ದು ಕೆಳಗಾ?” ಎಂದು ಕೇಳಿದ. “ಹವ್ದು ಕಣೋ ಕೆಳಗೆ ಮೇಲಲ್ಲ” ಎಂದು ಹೇಳಿದೆ. ನಾವು ಕುಳಿತಿದ್ದ ಜಾಗದಿಂದ ಸುಮಾರು 25 ಅಡಿ ದೂರ ಬಂದಿದ್ದೆವು. ಅದು ಆ ಮೇಲಿನ ಬಂಡೆಯ ಏಣು. ಮಳೆ ಈಗಾಗಲೇ ನಾವು ಇಡಿಯಾಗಿ ನೆನೆದು ತೊಪ್ಪೆಯಾಗುವಶ್ಟು ಜೋರಾಗಿ ಸುರಿಯುತ್ತಿತ್ತು.

ಅಲ್ಲಿಂದ ಕೆಳಗೆ ಇಳಿದು ಹೋಗುವುದಕ್ಕೆ ಆಗುತ್ತಿರಲಿಲ್ಲ. ಬಲಗಡೆ ಇನ್ನು ಸುಮಾರು ಎರಡು ಅಡಿ ಎತ್ತರದಲ್ಲಿ ನಡೆದು ಹೋಗುವಶ್ಟು ಸಲೀಸಾದ ದಾರಿಯಿದೆ. ಅಲ್ಲಿ ಬೇಕರಿ ಬನ್ಗಳನ್ನು ಬೋರಲು ಹಾಕಿದ ಹಾಗೆ ಕಲ್ಲು ಸವೆದು ನುಣುಪಾಗಿದೆ. ನೋಡಿದರೆ ತುಸು ಒರಟಿರಬಹುದೇನೊ ಎನ್ನಿಸಿತು. ಆದರೆ ಇನ್ನೂ ಗಮನ ಕೊಟ್ಟು ನೋಡಿದಾಗ ಬಹಳ ನುಣುಪು ಎಂದು ಗೊತ್ತಾಯ್ತು. ನೀರು ಬಿದ್ದ ಕೊಡಲೇ ಅದರ ಮೇಲೆ ಇದ್ದ ಓಣ ಪಾಚಿಯೆಲ್ಲ ಈಗ ಜೀವ ತುಂಬಿದಂತೆ ಕಾಣಿಸುತ್ತಿದೆ. ಕೊಂಚ ಇಳಿಜಾರಿದೆ. ಆದರೆ ಆ ಬನ್ ಕಲ್ಲುಗಳ ಮುಂದೆ ಕೆಳಕ್ಕೆ ಇಳಿಜಾರು ಬಂಡೆ. ಅದಂತೂ ಸಮತಟ್ಟಾದ ನುಣುಪಾದ ಮೇಲ್ಮಯ್. ತೀರಾ ಪಾಚಿ. ಅಲ್ಲಿ ಕಾಲಿಟ್ಟರೆ ಒಂದು ಇಪ್ಪತ್ತಡಿಯಿಂದ ಜಾರಿ ನೀರಿಗೆ ಬೀಳುವುದಂತೂ ಕಂಡಿತ.

ಈಗ ನಮ್ಮ ಹತ್ತಿರ ಇದ್ದುದು ಎರಡೇ ಆಯ್ಕೆ. ಒಂದು, ಆ ಬನ್ ಕಲ್ಲುಗಳ ಮೇಲೆ ತೀರ ಎಚ್ಚರದಿಂದ ನಡೆದು ಹೋಗುವುದು. ಸುಮಾರು 25 ಅಡಿ ನಡೆದರೆ ಆ ಕಡೆಯ ಬಂಡೆಗೆ ಸೇರಬಹುದಾಗಿತ್ತು. ಎರಡು, ನಾವು ಬಂದ ದಾರಿ. ಈಗ ನಿಂತ ಜಾಗದಿಂದ ಇನ್ನೂ ಎಡಕ್ಕೆ ಹೋಗಿ, ಆ ಸಮತಟ್ಟಾದ ಬಂಡೆಯ ಮೇಲೆ ಇಳಿಯ ಬೇಕು. ಅಲ್ಲಿಂದ ಇಳಿದು ಹೊಳೆಯ ಹತ್ತಿರಕ್ಕೆ ಹೋದರೆ ತೀರದಲ್ಲಿ ಅಲ್ಲಲ್ಲಿ ಸಣ್ಣ ಉಬ್ಬು ತಗ್ಗುಗಳಿವೆ, ಒರಟಾದ ಮೇಲ್ಮಯ್ ಇದೆ. ದಡದಲ್ಲೇ ನಡೆದು ಹೋಗಿ ಆ ಕಡೆಗಿನ ಬಂಡೆಗೆ ಸೇರಬಹುದು. ನಾನು “ಈ ಬನ್ ಕಲ್ಲುಗಳ ಮೇಲೇನೇ ಹೋಗೋಣ, ನೀರಿನ ಹತ್ರ ಹೋದ್ರೆ ಸ್ಯಾನೆ ಅಪಾಯ” ಅಂದೆ. ಜಗ್ಗು ಅದಕ್ಕೆ, “ಏ ಇಲ್ಲ! ಅದು ನೋಡು, ಎಲ್ಲೂ ಹಿಡ್ಕೊಳ್ಳೋಕ್ಕೆ ಏನೂ ಇಲ್ಲ. ಅದಲ್ಲದೆ ನೀರಿಂದ ಬಾಳ ಮೇಲಿದೆ, ನೀರಿಗೂ ಅದಕ್ಕೂ ನಡುವೆ ಬರೀ ಜಾರೋ ಬಂಡೆ ಅಶ್ಟೆ, ಅಲ್ಲೂ ಹಿಡ್ಕೊಳ್ಳೋದಕ್ಕೆ ಏನೂ ಇಲ್ಲ. ಸ್ವಲ್ಪ ಜಾರಿದ್ರೂ ನೇರವಾಗಿ ಸುಮಾರು ಇಪ್ಪತ್ತಡಿಯಿಂದ ಜಾರಿ ನೀರಿಗೆ ಬೀಳೋದೆ, ಅದು ಬೇಡ” ಎಂದ. ನೀರ ಹತ್ತಿರ ಹೊಗುವುದೇ ಬೇಡ ಎಂದುಕೊಂಡಿದ್ದ ನನಗೆ ಅವನು ಹೇಳಿದ್ದು ದಿಟ ಎನ್ನಿಸಿತು.

ಇಬ್ಬರೂ ಈಗ ತೀರಾ ಗಂಬೀರವಾಗಿದ್ದೆವು. ಹೆಚ್ಚು ಮಾತಿಲ್ಲ. ಮನಸಾಳದಲ್ಲಿ “ಇನ್ನು ನಾವು ಉಳೀತೀವೋ ಇಲ್ವೋ” ಅನ್ನುವ ಉನ್ನಿಕೆ. ಆದರೆ ಮೇಲೆ ಮಾತ್ರ ಆ ಯೋಚನೆ ಬರುದಕ್ಕೆ ಬಿಡದ ನಮ್ಮ survival instinctಉ ಈಗ ನಮ್ಮನ್ನು ನಾವು ಉಳಿಸಿಕೊಳ್ಳುವುದು ಹೇಗೆ ಎನ್ನುವ ಯೋಚನೆಯನ್ನಶ್ಟೆ ನಮ್ಮ ಒಳಬಗೆಯಲ್ಲಿ ಇರಿಸಿತ್ತು. ಬೇರೆ ಯಾವ ಯೋಚನೆ ಕೂಡ ಇಲ್ಲ. ಮಯ್ ಎಲ್ಲಾ ಕಣ್ಣಾದಶ್ಟು ಎಚ್ಚರ. ಹಿನ್ನೆಲೆಯಲ್ಲಿ ಅರ್‍ಬಿಯ ಸದ್ದು ಕೇಳುತ್ತಿದ್ದರೂ ಅದರ ಕಡೆ ತುಸು ಗಮನವೂ ಇಲ್ಲ. ಇಶ್ಟು ಹೊತ್ತೂ ಸೊಗಸು ಎಂಬ, ನಿಸರ್‍ಗದ ಮೇಲ್ಮೆಯ ಒಂದು ಪಾಲಶ್ಟೆ ನೋಡಿದ್ದೆವು. ಅದರ ಮೇಲ್ಮೆಯ ಇನ್ನೋಂದು ಪಾಲಾದ ಬಯಂಕರತೆ ಈಗ ನಮಗೆ ಕಾಣಿಸಿಕೊಂಡಿತು.

ಎರಡನೆ ಆಯ್ಕೆ ಆರಿಸಿಕೊಂಡೆವು. ಜಗ್ಗು ಇಳಿದು ಅಲ್ಲಿ ನಿಂತು ನೋಡಿದನು. “ಒಂದು ಹೆಜ್ಜೆನೂ ಇಡೋ ಅಂಗೆ ಇಲ್ಲ ಕಣೋ, ಜಾರುತ್ತೆ” ಎಂದನು. ಆ ಇಳಿಜಾರು ಬಂಡೆಯಲ್ಲಿ ಸುಮಾರು 12 ಅಡಿ ಮುಂದೆ ಒಂದು ಸಣ್ಣ ದಿಂಡಿನ ಹಾಗೆ ಇತ್ತು. ಆ ದಿಂಡಿನ ಹಿಂದೆ ಒಂದು ಸಣ್ಣ ಹಳ್ಳ. “ಆ ಸಣ್ಣ ಹಳ್ಳ ಇದೆ ಕಣೋ. ಜಾರಿ ಸರಿಯಾಗಿ ಆ ಹಳ್ಳಕ್ಕೆ ಬಿದ್ರೆ ನಾವು ಉಳಿತೀವಿ” ಎಂದನು ಜಗ್ಗು. ಆ ದಿಂಡಿಂದ ಮುಂದೆ ಹಾಗೇ ಜಾರಿ ಹೋದರೆ ನೀರಿಗೆ ಬೀಳುವುದೇ. “ಆದ್ರೂ ಅಲ್ಲಿಗೆ ಜಾರಿಕೊಂಡು ಹೋಗಬಹುದಾ” ಎಂದು ಜಗ್ಗು ಯೋಚನೆ ಮಾಡುತ್ತಿದ್ದ. ನಾನು “ಕೂತ್ಕೊಂಡು ಜಾರಬಹುದು, ಅನ್ಸುತ್ತೆ” ಎಂದೆ. ಜಗ್ಗು ಕೂಡ “ಕೂತ್ಕೊಂಡು ಜಾರಬಹುದು ಅನ್ಸುತ್ತೆ” ಎಂದನು. ಕೊಂಚ ಮುಂದೆ ಬಂದು ಕುಳಿತು ಸರ್ ಎಂದು ಜಾರಿದ. ಕಣ್ಣು ಮಿಟುಕಿಸುವುದರಲ್ಲಿ ಅವನ ಕಾಲು ಆ ದಿಂಡಿಗೆ ಹೊಡೆದು, ಆಗಲೇ ಹಳ್ಳದ ಮೇಲೆ ಕುಳಿತಿದ್ದ.

ಒಳ್ಳೆ ವಂಡರ್‍ಲಾ ಜಾರೋ ಬಂಡಿ ತರ. ಈಗ ನೆನೆಸಿಕೊಂಡರೆ ನಗು ಬರುತ್ತದೆ. ಆದರೆ ಆ ಹೊತ್ತಲ್ಲಿ ಮಾತ್ರ ನಮಗೆ “ಹರೀತಿತ್ತು”. ನಾನಂತೂ ತೀರಾ ಕುತ್ತು ಎನಿಸಿದರೆ ಅಲ್ಲೇ ಕುಳಿತಲ್ಲೇ ಇರುಳೆಲ್ಲ ಕಳೆದು, ಮರುದಿನ ಬೆಳಿಗ್ಗೆನೋ ಮದ್ಯಾನದ ಹೊತ್ತಿಗೋ ಬಿಸಿಲು ಬಂದು ಬಂಡೆಗಳು ಒಣಗಿದ ಮೇಲೆ ಎದ್ದು ಹೋಗುವುದಕ್ಕೂ ರೆಡಿ ಇದ್ದೆ. ಜೀವ ಮುಕ್ಯ ಆಗಿತ್ತು. ಎಲ್ಲರೂ 1-2 ದಿನ ಆತಂಕ ಪಡಬಹುದು. ನಾ ಬದುಕಿ ಹಿಂದಿರುಗಿದ ಮೇಲೆ ಮುಂದೆ ಟ್ರೆಕ್ಕಿಂಗಿಗೆ ಮನೆಯವರು ಕಳಿಸದೇ ಇರಬಹುದು. ಆದರೆ ಸದ್ಯಕ್ಕೆ ಜೀವ ಉಳಿಸಿಕೊಳ್ಳುವುದೇ ಮುಕ್ಯ.

ನಾನೂ ಕೂಡ ಜಗ್ಗು ಜಾರಿದ ಮೇಲೆ ಬಂಡೆ ಮೇಲೆ ಇಳಿದು ಕುಳಿತು ಜಾರಿದೆ. ಸರ್ ಅಂತ 12 ಅಡಿ ಜಾರಿ ನನ್ನ ಅಡಿಗಳು ಆ ದಿಂಡಿಗೆ ಹೊಡೆದವು. ಆ ರಬಸದಲ್ಲಿ ಸ್ವಲ್ಪ ಬಲಗಡೆಗೆ ವಾಲಿದೆ. ಸರಿಯಾಗಿ ಆ ಹಳ್ಳದಲ್ಲಿ ಬಂದು ಕುಳಿತೆ. “ಯಾವುದೇ rapid movements ಮಾಡ್ಬೇಡ. ಈಗ adrenalilne pump ಆಗ್ತಿರುತ್ತೆ. ನಿದಾನವಾಗಿ ಹೋಗೋಣ” ಎಂದು ಜಗ್ಗು ಎಚ್ಚರಿಸಿದ. ಹಾಗೇ ಮುಂದೆ ಮೆಲ್ಲಗೆ ತೆವಳಿಕೊಂಡು ಮುಂದೆ ಹೋದನು. ನಾನು ಅವನನ್ನು ಹಿಂಬಾಲಿಸಿದೆ.

– ಸಂದೀಪ್ ಕಂಬಿ.

(ಚಿತ್ರ: ಗವ್ತಮ್ ಶೇಟ್ಲೂರ್)

(ಮುಂದಿನ ವಾರ ಕೊನೆಯ ಕಂತು)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಸೂಪರ್ ಕಣ್ಲಾ .. ನೆನ್ನೆ ಮೊನ್ನೆ ನಡೆದ ಹಾಗೆ ಬರೀತಾ ಇದ್ದೀಯ. … ಚಿಂದಿ!!!

    ಆ ಬಂಡೆ ಮೇಲೆ ನಾನು ಜಾರಿದ್ದು ನೆನನ್ಸ್ಕೊಂಡ್ರೆ .. ಯಪ್ಪಾ .. “near death experience” …

  1. 10/06/2013

    […] {ಕಳೆದ ವಾರದ ಕಂತಿನಲ್ಲಿ:- ನಾನೂ ಕೂಡ ಜಗ್ಗು ಜಾರಿದ ಮೇಲೆ ಬಂಡೆ ಮೇಲೆ ಇಳಿದು ಕುಳಿತು ಜಾರಿದೆ. ಸರ್ ಅಂತ 12 ಅಡಿ ಜಾರಿ ನನ್ನ ಅಡಿಗಳು ಆ ದಿಂಡಿಗೆ ಹೊಡೆದವು. ಆ ರಬಸದಲ್ಲಿ ಸ್ವಲ್ಪ ಬಲಗಡೆಗೆ ವಾಲಿದೆ. ಸರಿಯಾಗಿ ಆ ಹಳ್ಳದಲ್ಲಿ ಬಂದು ಕುಳಿತೆ. “ಯಾವುದೇ rapid movements ಮಾಡ್ಬೇಡ. ಈಗ adrenalilne pump ಆಗ್ತಿರುತ್ತೆ. ನಿದಾನವಾಗಿ ಹೋಗೋಣ” ಎಂದು ಜಗ್ಗು ಎಚ್ಚರಿಸಿದ. ಹಾಗೇ ಮುಂದೆ ಮೆಲ್ಲಗೆ ತೆವಳಿಕೊಂಡು ಮುಂದೆ ಹೋದನು. ನಾನು ಅವನನ್ನು ಹಿಂಬಾಲಿಸಿದೆ…} […]

ಅನಿಸಿಕೆ ಬರೆಯಿರಿ: