ಸಿಬಿಎಸ್ಇ: ಆಶಯ ಮತ್ತು ದಿಟ

CBSE

ವಲಸೆಯಾಗಬಹುದಾದ ಕೆಲಸಗಳಲ್ಲಿ ತೊಡಗಿರುವವರ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಕೇಂದ್ರ ಸರ‍್ಕಾರ ಸಿಬಿಎಸ್ಇ (Central Board of Secondary Education) ಪಟ್ಯಕ್ರಮ ಶುರುಮಾಡಿತು. ಇದರ ಜೊತೆಗೇ ದೇಶದ ಹಲವಾರು ಕಡೆಗಳಲ್ಲಿ ಕೇಂದ್ರೀಯ ವಿದ್ಯಾಲಯ (KV) ಶಾಲೆಗಳನ್ನು ಕೇಂದ್ರ ಸರ್‍ಕಾರವೇ ತೆರೆಯಿತು. ಇದರ ಮೂಲ ಉದ್ದೇಶ ವಲಸೆಯಾಗಬಹುದಾದ ಕೆಲಸಗಳಲ್ಲಿ ತೊಡಗಿರುವವರು ಒಂದು ಊರಿನಿಂದ ಇನ್ನೊಂದು ಊರಿಗೆ ವಲಸೆಯಾದಾಗ ಅವರ ಮಕ್ಕಳು ಓದುತ್ತಿರುವ ಪಟ್ಯಕ್ರಮದಲ್ಲಿ ಏರುಪೇರಾಗದೆ, ಓದಿನ ಮುಂದುವರಿಕೆ ಸುಳುವಾಗಿರಲಿ ಎಂಬುದು.

ಶಾಲೆಯೊಂದು ಸಿಬಿಎಸ್ಇ ಪಟ್ಯಕ್ರಮ ಅನುಸರಿಸಲು ಏನು ಮಾಡಬೇಕು?
ಕಲಿಕೆ ಎಂಬ ವಿಶಯವು ಜಂಟಿ ಪಟ್ಟಿಯಲ್ಲಿರುವುದರಿಂದ, ಅದರಲ್ಲಿ ರಾಜ್ಯ ಸರ‍್ಕಾರಗಳ ಪಾತ್ರವಿದ್ದೇ ಇದೆ. ಹಾಗಾಗಿ, ಯಾವುದೇ  ಶಾಲೆ ಸಿಬಿಎಸ್ಇ  ಪಟ್ಯಕ್ರಮವನ್ನು ಅನುಸರಿಸಲು, ಮೊದಲಿಗೆ ಆಯಾ ರಾಜ್ಯ ಸರ‍್ಕಾರದಿಂದ ನಿರಾಕ್ಶೇಪಣಾ ಪತ್ರ (NOC) ಪಡೆಯಬೇಕಾಗುತ್ತದೆ. ಶಾಲೆಗಳು ನಿರಾಕ್ಶೇಪಣಾ ಪತ್ರವನ್ನು ಹೊಂದಿದ್ದಲ್ಲಿ ಮಾತ್ರ ಸಿಬಿಎಸ್ಇ ಬೋರ‍್ಡ್ ತನ್ನ ಪಟ್ಯಕ್ರಮವನ್ನು ಅನುಸರಿಸಲು ಶಾಲೆಗಳಿಗೆ ಮಾನ್ಯತೆ ನೀಡುತ್ತದೆ. ಕರ‍್ನಾಟಕ ರಾಜ್ಯ ಸರ‍್ಕಾರದಿಂದ ನಿರಾಕ್ಶೇಪಣಾ ಪತ್ರ ಪಡೆಯಬೇಕಾದಲ್ಲಿ, ಕೆಲವು ನಿಯಮಗಳನ್ನು ಪಾಲಿಸಬೇಕು. ಅದರಲ್ಲಿರುವ ಮುಕ್ಯವಾದ ನಿಯಮಗಳು:

  • ಒಂದರಿಂದ ಅಯ್ದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತ್ರುಬಾಶೆ ಅತವಾ ಕನ್ನಡ ಮಾದ್ಯಮವನ್ನು ಹೊಂದಿರತಕ್ಕದ್ದು.
  • ರಾಜ್ಯದಿಂದ ರಾಜ್ಯಕ್ಕೆ ವರ್‍ಗಾವಣೆಗೆ ಬದ್ದರಾದ ಅಕಿಲ ಬಾರತ ಸೇವೆ, ಕೇಂದ್ರ ಸರ‍್ಕಾರದ ಸೇವೆ ಮತ್ತು ಕೇಂದ್ರ ಸರ‍್ಕಾರದ ಉದ್ದಿಮೆಗಳಿಗೆ ಸೇರಿದ ಪೋಶಕರ ಮಕ್ಕಳಿದ್ದಲ್ಲಿ (ಇದನ್ನು ಪುಶ್ಟೀಕರಿಸಲು ಸಂಬಂದಪಟ್ಟ ಇಲಾಕೆ/ ಸಂಸ್ತೆ ಗಳಿಂದ ದ್ರುಡೀಕರಣ ಪತ್ರ ಸಲ್ಲಿಸುವುದು).
  • ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಕೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್‍ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ತೆಗಳು  ಅತವಾ ವಾಣಿಜ್ಯ ಸಂಸ್ತೆಗಳಲ್ಲಿ ಕೆಲಸ ಮಾಡುವ ಪೋಶಕರ ಮಕ್ಕಳಿದ್ದಲ್ಲಿ (ಇದನ್ನು ಪುಶ್ಟೀಕರಿಸಲು ಸಂಬಂದಪಟ್ಟ ಬ್ಯಾಂಕ್/ ಸಂಸ್ತೆಗಳಿಂದ ದ್ರುಡೀಕರಣ ಪತ್ರ ಸಲ್ಲಿಸುವುದು).

ಸರಿ, ಕರ‍್ನಾಟಕ ರಾಜ್ಯದಲ್ಲಿ ಮತ್ತು ಸುತ್ತಮುತ್ತಲಿನ ಕೆಲ ರಾಜ್ಯಗಳಲ್ಲಿ ಸಿಬಿಎಸ್ಇ ಪಟ್ಯಕ್ರಮವನ್ನು ಅನುಸರಿಸುವ ಶಾಲೆಗಳು ಎಶ್ಟಿವೆ ಎಂದು ನೋಡಿದಾಗ ಅಚ್ಚರಿ ಕಾದಿತ್ತು! ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ಕರ‍್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಶಾಲೆಗಳು ಸಿಬಿಎಸ್ಇ ಪಟ್ಯಕ್ರಮ ಅನುಸರಿಸುತ್ತಿರುವುದು ಕಂಡುಬರುತ್ತದೆ. ಕೆಳಗಿನ ಚಿತ್ರವನ್ನು ನೋಡಿದರೆ ಕಳೆದ ಮೂರು ವರ್‍ಶಗಳಲ್ಲಿ ಕರ‍್ನಾಟಕ ರಾಜ್ಯದಲ್ಲಿ  ಸಿಬಿಎಸ್ಇ  ಪಟ್ಯಕ್ರಮ ಅನುಸರಿಸುವ ಶಾಲೆಗಳು ತುಂಬಾ ಹೆಚ್ಚುತ್ತಿರುವುದು ಕಂಡು ಬರುತ್ತದೆ.

cbse_3yrs

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಬಾರತದ ಹಣಕಾಸು ರಾಜದಾನಿ ಎಂದೇ ಪ್ರಸಿದ್ದವಾಗಿರುವ ಮುಂಬಯ್ ನಗರವನ್ನು ಹೊಂದಿರುವ ಮತ್ತು ಆರ್‍ತಿಕವಾಗಿ ಕರ‍್ನಾಟಕ ರಾಜ್ಯಕ್ಕಿಂತ ಮುಂದಿರುವ ಮಹಾರಾಶ್ಟ್ರ ರಾಜ್ಯದಲ್ಲಿ, ಸಹಜವಾಗಿ, ವಲಸೆಯಾಗಬಹುದಾದ ಕೆಲಸಗಳಲ್ಲಿ ದುಡಿಯುವವರ ಎಣಿಕೆ ಹೆಚ್ಚಾಗಿ ಇರುವ ಸಾದ್ಯತೆ ಇದ್ದರೂ ಅಲ್ಲಿ ಸಿಬಿಎಸ್ಇ  ಪಟ್ಯಕ್ರಮ ಅನುಸರಿಸುವ ಶಾಲೆಗಳ  ಎಣಿಕೆ  ಕರ‍್ನಾಟಕ ರಾಜ್ಯಕ್ಕಿಂತ ಕಮ್ಮಿಯಿದೆ. ತಮಿಳುನಾಡು ಮತ್ತು ಆಂದ್ರಪ್ರದೇಶಗಳಲ್ಲಿ ಕರ್‍ನಾಟಕಕ್ಕಿಂತ ಹೆಚ್ಚು ಮಂದಿಯೆಣಿಕೆ ಇದ್ದರೂ ಅಲ್ಲಿ ಸಿಬಿಎಸ್‍ಇ ಶಾಲೆಗಳ ಎಣಿಕೆ ಕರ್‍ನಾಟಕದಲ್ಲಿನ ಸಿಬಿಎಸ್‍ಇ ಶಾಲೆಗಳ ಎಣಿಕೆಗಿಂತಾ ಕಮ್ಮಿಯಿದೆ.

ಕರ‍್ನಾಟಕ ರಾಜ್ಯದ ಒಳನಾಡಿನಲ್ಲಿರುವಂತ ಪುಟ್ಟ ಊರುಗಳಾದ ನಿಪ್ಪಾಣಿ,  ಚನ್ನರಾಯಪಟ್ಟಣ, ಶಿರಸಿ, ಕೊಪ್ಪ ಇತ್ಯಾದಿ ಊರುಗಳಲ್ಲೂ ಸಿಬಿಎಸ್ಇ ಶಾಲೆಗಳು ತೆರೆದುಕೊಳ್ಳುತ್ತಿರುವುದನ್ನು ನೋಡಿದರೆ, ನಿರಾಕ್ಶೇಪಣಾ ಪತ್ರವನ್ನು ನೀಡಲು ಪಾಲಿಸಬೇಕಾದ ನಿಯಮಗಳನ್ನು ನಿಜಕ್ಕೂ ಪಾಲಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಇಲ್ಲಿ ಯಾರೂ ಯಾಕೆ ಇರುವ ನಿಯಮಗಳನ್ನು ಅನುಸರಿಸುತ್ತಿಲ್ಲ? ನಿಯಮಗಳನ್ನು ಮೀರಿ ನಿರಾಕ್ಶೇಪಣಾ ಪತ್ರ ಪಡೆದುಕೊಳ್ಳುತ್ತಿರುವುದನ್ನು ನೋಡಿಯೂ ಸರ್‍ಕಾರವೇಕೆ ಸುಮ್ಮನಿದೆ? ಇವುಗಳು ಪ್ರಶ್ನೆಯಾಗಿಯೇ ಉಳಿದಿವೆ.

ಮಾಹಿತಿ ಸೆಲೆ: http://cbse.gov.in/

ಬಾಬು ಅಜಯ್

(ಚಿತ್ರ: http://cbse.nic.in)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.