ಗೂಗಲ್ ಮತ್ತು ಯಾಹೂ ಅಮೇರಿಕದ ಬೇಹುಗಾರಿಕೆಯ ಸಲಕರಣೆಗಳು!

– ಪ್ರಶಾಂತ ಸೊರಟೂರ.

NSA-Prism-Information

ಇದೇ ಜೂನ್-6 ರಂದು ದಿ ಗಾರ‍್ಡಿಯನ್ ಮತ್ತು ವಾಶಿಂಗ್ಟನ್ ಪೋಸ್ಟ್ ಸುದ್ದಿಹಾಳೆಗಳು ಅಮೇರಿಕಾದ ಆಳ್ವಿಕೆಯಿಂದಲೇ ನಡೆಯುತ್ತಿರುವ ಬೇಹುಗಾರಿಕೆ ಕೆಲಸವನ್ನು ಹೊರಗೆಡುವಿದ್ದವು. PRISM ಎಂಬ ಹೆಸರಿನಿಂದ ಕರೆಯಲಾಗುವ ಈ ಗುಟ್ಟು ಯೋಜನೆಯನ್ನು ಅಮೇರಿಕಾ ಕಾವಲು ಕೂಟ (National Security Agency-NAS) ನಡೆಸುತ್ತಿದ್ದು, ಮಿಂಬಲೆ ಬಳಕೆದಾರರ ಮಾಹಿತಿಗಳನ್ನು ಅವರಿಗೆ ಅರಿವಿಲ್ಲದಂತೆ ತಡಕಾಡುತ್ತಿರುವುದು, ಕಲೆಹಾಕುತ್ತಿರುವುದು ಬೆಳಕಿಗೆ ಬಂದಿತು.

ಇದರಲ್ಲಿ ಇನ್ನೊಂದು ಗಮನ ಸೆಳೆದ ವಿಶಯವೆಂದರೆ ಅಮೇರಿಕಾದ ಕಂಪನಿಗಳಾದ ಗೂಗಲ್, ಯಾಹೂ, ಪೇಸಬುಕ್, ಮಯ್ಕ್ರೋಸಾಪ್ಟ್, ಯೂಟ್ಯೂಬ್ ಮುಂತಾದ ಮಿಂಬಲೆ ಸೇವೆ ಒದಗಿಸುವ ಕಂಪನಿಗಳು ತಾವಾಗಿಯೇ ಇದರಲ್ಲಿ ಕಯ್ ಜೋಡಿಸಿರುವ ಸುದ್ದಿ. ಕೂಡಣ ತಾಣಗಳು (social networks) ದುಡ್ಡಿಗಾಗಿ ಒಬ್ಬರ ವಯಕ್ತಿಕ ವಿಶಯಗಳನ್ನು ಹಂಚಿಕೊಳ್ಳುತ್ತವೆ ಅನ್ನುವ ದೂರು ಆಗಾಗ ಕೇಳಿಬರುತ್ತಿದ್ದರೂ ಅಮೇರಿಕಾದ ಸರಕಾರದೊಡನೆ ಈ ಬಗೆಯ ಒಪ್ಪಂದ ಮಾಡಿಕೊಂಡಿರುವ ವಿಶಯ ತಿಳಿದುಬರುತ್ತಿರುವುದು ಇದೇ ಮೊದಲೆನ್ನಬಹುದು.

ಸೆಪ್ಟೆಂಬರ್ 11, 2001 ರಲ್ಲಿ ನಡೆದ ದಾಳಿಯಿಂದ ಕಂಗೆಟ್ಟಿದ್ದ ಜಾರ‍್ಜ ಬುಶ್, ಹಲವು ಕಟ್ಟಲೆಗಳನ್ನು ಮೀರಿ ದಿಗಿಲುಗಾರರ ಬೇಹು ಯೋಜನೆಯನ್ನು (terrorist surveillance program) ಹುಟ್ಟುಹಾಕಿದ್ದರು. ಇದು ಹಲವಾರು ಟೀಕೆಗಳಿಗೆ ಗುರಿಯಾದದ್ದರಿಂದ ಅದನ್ನು ಕಯ್ಬಿಡಲಾಗಿತ್ತು. ಮಿಂಬಲೆಯ ಮೂಲಕ ಜಗತ್ತಿನೆಲ್ಲೆಡೆಯ ಮಾಹಿತಿಯನ್ನು ಕಲೆಹಾಕುವ ಗುರಿಯಿಟ್ಟುಕೊಂಡು 2007 ರಲ್ಲಿ PRISM ಎಂಬ ಹೊಸ ಬೇಹು ಯೋಜನೆಯನ್ನು ಅಮೇರಿಕಾ ಗುಟ್ಟಾಗಿ ಅಣಿಗೊಳಿಸಿದ್ದು ಈಗ ಸುದ್ದಿಯಾಗಿದೆ.

PRISM ಬೇಹು ಯೋಜನೆಯಲ್ಲಿ ಅಮೇರಿಕಾದ ಕಾವಲು ಕೂಟ (NSA) ಯಾವುದೇ ಅಪ್ಪಣೆಯಿಲ್ಲದೇ ಮಿಂಬಲೆ ಬಳಕೆದಾರರ ಮಾಹಿತಿಯನ್ನು ನೇರವಾಗಿ ಗೂಗಲ್, ಯಾಹೂ ಮುಂತಾದವರ ಮಿಂಬಲೆ ಒದಗುಗಳಿಂದಲೇ (website servers) ಎತ್ತಿಕೊಳ್ಳಬಹುದಾದ ಒಪ್ಪಿಗೆ ಪಡೆದಿದ್ದು, ಇಲ್ಲಿಯವರೆಗೆ ಹೀಗೆ ಮಾಹಿತಿ ಒದಗಿಸಿದ ಕಂಪನಿಗಳಲ್ಲಿ ಗೂಗಲ್ ಮತ್ತು ಯಾಹೂ ಮುಂಚೂಣಿಯಲ್ಲಿರುವುದು ಸುದ್ದಿಯಾಗಿದೆ.

ಸುದ್ದಿಹಾಳೆಗಳಲ್ಲಿ ಈ ವಿಶಯ ಬಯಲಾದ ಮೇಲೆ ಅಮೇರಿಕಾದ ನಾಡೊಡೆಯ ಬರಾಕ್ ಓಬಾಮಾ ಈ ಬಗೆಯ ಯೋಜನೆಯನ್ನು ಸರಕಾರ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದು ಅಮೇರಿಕಾವನ್ನು ದಿಗಿಲುಗಾರರಿಂದ (terrorist) ಕಾಪಾಡುವ ನಡೆ ಎಂದು ಅವರು ಬಣ್ಣಿಸಿದರೂ, ಅದರಾಚೆಗೆ ಜಗತ್ತಿನಲ್ಲಿ ತನ್ನ ಒಡೆತನ ಕಾಪಾಡಿಕೊಳ್ಳಲು ಬೇಹುಗಾರಿಕೆ ನಡೆಸುವ ಅಮೇರಿಕಾದ ಎಂದಿನ ನಡೆ ಎಂದು ಜಗತ್ತು ಮಾತನಾಡಿಕೊಳ್ಳುತ್ತಿದೆ.

ಮಾಹಿತಿಸೆಲೆ: www.wikipedia.com, www.popsci.com ಮತ್ತು ಇತರ ಮಿಂಬಲೆ ಸುದ್ದಿತಾಣಗಳು.

ಚಿತ್ರ: http://www.newsrib.com

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.