ನಮ್ಮ ರಾಜಕಾರಣಿಗಳು ವಯಸ್ಕರಲ್ಲವೇ?

shettar

ಲಾಲ್ ಕ್ರಿಶ್ಣ ಅಡ್ವಾಣಿ ಬಿಜೆಪಿಗೆ ಬಿಡುವೋಲೆಯನ್ನು ಬರೆದು ಕೊಟ್ಟಿರುವುದು ಇಂದು ಎಲ್ಲೆಲ್ಲೂ ಸುದ್ದಿ. ಅಡ್ವಾಣಿಯವರ ಈ ಹೆಜ್ಜೆಗೆ ಕಾರಣ ರಾಶ್ಟ್ರಮಟ್ಟದ ಆಳ್ಮೆಗಾರಿಕೆಯಲ್ಲಿ ಗುಜರಾತಿನ ಮುಕ್ಯಮಂತ್ರಿ ನರೇಂದ್ರ ಮೋದಿ ಮೇಲೇರಿಕೆಯೇ ಇರಬೇಕೆಂದು ಮಾದ್ಯಮಗಳು ಒಕ್ಕೊರಲಿನಲ್ಲಿ ಬರೆದುಕೊಂಡಿವೆ. ಇದೆಲ್ಲದಕ್ಕೂ ಕರ‍್ನಾಟಕವನ್ನು ಇಶ್ಟು ದಿನ ಆಳುತ್ತಿದ್ದ ಇಲ್ಲಿಯ ಬಿಜೆಪಿಗೂ ಏನು ನಂಟು ಎಂದು ತಿಳಿದುಕೊಳ್ಳಲು ಈ ವಿಶಯದ ಬಗ್ಗೆ ಇತ್ತೀಚಿನ ವರೆಗೂ ಕರ‍್ನಾಟಕದ ಮುಕ್ಯಮಂತ್ರಿಯಾಗಿದ್ದ ನಮ್ಮ ಜಗದೀಶ್ ಶೆಟ್ಟರ್ ಕೊಟ್ಟಿರುವ ಹೇಳಿಕೆಗಿಂತ ಹೆಚ್ಚು ದೂರ ಹೋಗಬೇಕಿಲ್ಲ. ಅವರ ಹೇಳಿಕೆ ಇಂದಿನ ವಿ.ಕ.ದ ಮುಂಪುಟದಲ್ಲಿದೆ:

ಅಡ್ವಾಣಿ ಅವರು ರಾಜೀನಾಮೆ ಹಿಂತೆಗೆದುಕೊಂಡು ನಮ್ಮೆಲ್ಲರಿಗೂ ಮಾರ‍್ಗದರ‍್ಶನ ಮಾಡಬೇಕು. ರಾಶ್ಟ್ರೀಯ ನಾಯಕರು ಅವರ ಮನವೊಲಿಸುತ್ತಾರೆ, ಎಲ್ಲವೂ ಸುಕಾಂತ್ಯಗೊಳ್ಳಲಿದೆ.

ಅಲ್ಲ, ನಮ್ಮ ಆಳ್ಮೆಗಾರರು ವಯಸ್ಕರಲ್ಲವೇ? ಇವರಿಗೆಂತಹ ಮಾರ‍್ಗದರ‍್ಶನ ಬೇಕು? ತಮ್ಮ ದಾರಿಯನ್ನು ತಾವೇ ನೋಡಿಕೊಳ್ಳುವ ಯೋಗ್ಯತೆ ಇವರಿಗೆ ಇಲ್ಲವೇ? ಇಲ್ಲದಿದ್ದರೆ ಇವರು ಆರೂವರೆಕೋಟಿ ಕನ್ನಡಿಗರ ನಾಡನ್ನು ಆಳಲು ಹೊರಟಿರುವುದೇಕೆ? ದಾರಿತೋರುಗರಾಗಿ ದೆಹಲಿಯಿಂದ ಯಾರಾದರೂ ಬಾರದಿದ್ದರೆ ಇವರೆಲ್ಲ ಕಗ್ಗತ್ತಲಲ್ಲಿ ಮುಳುಗಿರುತ್ತಿದ್ದರೇ? ಹೋಗಲಿ, ಅಡ್ವಾಣಿಯನ್ನು ದೇವರಂತೆ ಕಾಣುವ ಜಗದೀಶ್ ಶೆಟ್ಟರಿಗೆ ಆ ದೇವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳುವ ಯೋಗ್ಯತೆಯಾದರೂ ಇದೆಯೇ?

ಅಂತಹ ಯೋಗ್ಯತೆಯನ್ನು ಯಾವುದೇ ರಾಶ್ಟ್ರೀಯ ಪಕ್ಶ ಕರ‍್ನಾಟಕದ ಆಳ್ಮೆಗಾರರಿಂದ ಎಂದಿಗೂ ಬಯಸಿಲ್ಲ, ಇನ್ನು ಮುಂದೆಯೂ ಬಯಸುವುದಿಲ್ಲ. ಬಾರತದ ಮಟ್ಟದ ನಡಾವಳಿಗಳ ಹೊಣೆಯನ್ನು ಒಂದು ಚೂರೂ ರಾಜ್ಯ ನಾಯಕರೊಡನೆ ಅವುಗಳು ಹಂಚಿಕೊಂಡಿಲ್ಲ ಎಂಬುದು ಕೂಡ ಸ್ಪಶ್ಟವಾಗಿದೆ. ಶೆಟ್ಟರ್ ಈ ದಿಟವನ್ನು ಬಹಳ ಚೆನ್ನಾಗಿ ಹೇಳಿದ್ದಾರೆ: ಆ ದೇವರ ಮನವೊಲಿಸುವ ಕೆಲಸವೂ ’ರಾಶ್ಟ್ರೀಯ’ ನಾಯಕರುಗಳದೇ!

ಅಂದಹಾಗೆ ಇವರದೇನು ಕೆಲಸ ಎಂದು ಕೇಳಿಯೇ ಬಿಡೋಣವೇ? ಆ ಮನವೊಲಿಕೆ ನಡೆಯುತ್ತಿದ್ದಾಗ ಪಕ್ಕದಲ್ಲಿ ಕಯ್ ಮುಗಿದು ಯಾರಿಗೆ ಲಾಟರಿ ಹೊಡೆಯುತ್ತದೆ ಎಂದು ನೋಡುವುದಶ್ಟೇ ಇವರ ಕೆಲಸವೇನು? ಹಾಗೆ ನೋಡುವುದಕ್ಕೂ ಇದೆಲ್ಲ ತೀರ‍್ಮಾನವಾಗುವ ಸೇರುವೆಗಳಿಗೆ ತಮಗೆ ಕರೆಯೋಲೆ ಬರಬೇಡವೇ? ಅದೂ ಬರುವುದಿಲ್ಲವಲ್ಲ?! ಅಶ್ಟೊಂದು ಎತ್ತರದ ’ವರಿಶ್ಟ’ರುಗಳೇ ಈ ರಾಶ್ಟ್ರೀಯ ಪಕ್ಶಗಳಲ್ಲಿರುವುದು, ಇಡೀ ಬಾರತದ ಆಳ್ಮೆಯನ್ನು ತಮ್ಮ ಕಯ್ಯಲ್ಲಿ ಹಿಡಿದುಕೊಂಡಿರುವುದು.

ಜಗದೀಶ್ ಶೆಟ್ಟರ್ ಅವರದಾಗಲಿ ಈಗಿನ ಕಾಂಗ್ರೆಸ್ ಮುಕ್ಯಮಂತ್ರಿ ಸಿದ್ದರಾಮಯ್ಯನವರದಾಗಲಿ ಏನಿದ್ದರೂ ಇಂತಹ ನಡಾವಳಿಗಳು ನಡೆದಾಗ ಅಡಿಮೆಯಲ್ಲಿ ಒಣಗುತ್ತಿರುವ ತಮ್ಮ ನಾಲಿಗೆಗಳಿಂದ ಒಂದಾದರ ಮೇಲೊಂದು ಸಲಾಮು ಹೊಡೆಯುವ ಕೆಲಸ ಮಾತ್ರ.

ಇದೆಲ್ಲ ಸಾಲದು ಎಂಬಂತೆ ಮೇಲೆ ಉಪ್ಪಿನಕಾಯಿ ಬೇರೆ: ’ಎಲ್ಲವೂ ಸುಕಾಂತ್ಯಗೊಳ್ಳಲಿದೆ’! ಯಾವ ಸುಕ? ಯಾವ ಅಂತ್ಯ? ಇವರಿಗೆ ಸುಕವೆಂದರೂ ಗೊತ್ತಿಲ್ಲ! ಅಂತ್ಯವೆಂದರೂ ಗೊತ್ತಿಲ್ಲ! ಅದರಲ್ಲಿ ತಮ್ಮ ಪಾತ್ರವೇನೆಂದೂ ಗೊತ್ತಿಲ್ಲ! ಅದೆಲ್ಲದರ ತೀರ‍್ಮಾನವೂ ’ವರಿಶ್ಟ’ರದೇ! ’ಸುಕಾಂತ್ಯವಾಗಲಿದೆ ’ಎನ್ನದೆ ಹೋದರೆ ಲಾಟರಿ ಹೊಡೆಯಬಾರದ ಕಡೆ ಹೊಡೆದುಬಿಟ್ಟರೆ ’ಈ ಆಳು ಸುಕವಿಲ್ಲ’ ಎಂಬ ಮಾತು ಬಂದರೆ?!

ಅಡ್ವಾಣಿ ಹೋಗಿ ಮೋದಿ ಬಂದುಬಿಟ್ಟರೆ ಅದು ಸುಕಾಂತ್ಯವೋ, ಮೋದಿಯ ಬದಲು ಅಡ್ವಾಣಿಯೇ ಮುಂಚೂಣಿಗೆ ಬಂದರೆ ಅದು ಸುಕಾಂತ್ಯವೋ ಎನ್ನುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇವರು ಮಾತನಾಡದೆ ಹೋದರೆ ಆಳಿನ ಅಡಿಮೆ ಕಡಿಮೆಯಾಯಿತೆಂದು ಚಾಟಿಯೇಟು ಬಿದ್ದರೆ? ಹೀಗೆ ಆಳುಗಳಂತೆ ಸಾಕುತ್ತಿವೆ ರಾಶ್ಟ್ರೀಯ ಪಕ್ಶಗಳು ನಮ್ಮನ್ನು, ನಾವೂ ಸಾಕಿಸಿಕೊಳ್ಳುತ್ತಿದ್ದೇವೆ. ಈಗ ಬಿಜೆಪಿಯಲ್ಲಿ ಈ ಹುಳುಕು ಎದ್ದು ಕಾಣುತ್ತಿದೆ, ಆದರೆ ಕಾಂಗ್ರೆಸ್ಸಿನಲ್ಲೂ ಇದು ಇಶ್ಟೇ ಮಟ್ಟದಲ್ಲಿದೆ.

(ಚಿತ್ರ: http://in.com)

ಕಿರಣ್ ಬಾಟ್ನಿ.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: