’ಮಿಲ್ಸ್ ಅಂಡ್ ಬೂನ್’ ಕನ್ನಡದಲ್ಲಿ ಏಕಿಲ್ಲ?

ರತೀಶ ರತ್ನಾಕರ
sisters 1

ಒಲವಿನ ಕಾದಂಬರಿಗಳಿಗೆ ಹೆಸರುವಾಸಿಯಾದ ಇಂಗ್ಲೆಂಡಿನ ‘ಮಿಲ್ಸ್ ಅಂಡ್ ಬೂನ್’ ಪ್ರಕಾಶನದವರು, ಅತಿ ಹೆಚ್ಚು ಮಾರಟವಾದ ತಮ್ಮ ಇಂಗ್ಲೀಶ್ ಕಾದಂಬರಿಗಳಲ್ಲಿ ಕೆಲವನ್ನು ಇಂಡಿಯಾದ ನುಡಿಗಳಿಗೆ ನುಡಿಮಾರು ಮಾಡಿ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ ಮೊನ್ನೆಯ ಎಕನಾಮಿಕ್ ಟಯ್‍ಮ್ಸ್ ಸುದ್ದಿಹಾಳೆಯಲ್ಲಿ ಮೂಡಿ ಬಂದಿತ್ತು. ಹಿಂದಿ, ತಮಿಳು, ಮಲಯಾಳಂ ಹಾಗೂ ಮರಾಟಿ ನುಡಿಗಳಲ್ಲಿ ಮಿಲ್ಸ್ ಅಂಡ್ ಬೂನ್ ಅವರ ಒಲವಿನ ಕಾದಂಬರಿಗಳು ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ.

ಈ ಸುದ್ದಿಯನ್ನು ಓದಿದರೆ ‘ಮಿಲ್ಸ್ ಅಂಡ್ ಬೂನ್’ ನಂತಹ ಹಲನಾಡಿನ ಕಂಪನಿಗಳು (multi national companies) ಇಂಡಿಯಾದ ಮಾರುಕಟ್ಟೆಯ ಅಳವನ್ನು ಸರಿಯಾಗಿ ತಿಳಿದುಕೊಂಡಂತಿದೆ ಎನಿಸುತ್ತದೆ. ಈಗಾಗಲೇ ಇವರು ತಮ್ಮ ಇಂಗ್ಲೀಶ್ ಹೊತ್ತಗೆಗಳನ್ನು ಜಗತ್ತಿನೆಲ್ಲೆಡೆ ಮಾರಾಟ ಮಾಡುತ್ತಿದ್ದಾರೆ, ಅದರಲ್ಲಿ ಕೆಲವು ಹೊತ್ತಗೆಗಳನ್ನು ಇಂಡಿಯಾದ ನುಡಿಗಳಿಗೆ ನುಡಿಮಾರು ಮಾಡಿ ಅಚ್ಚುಹಾಕುವುದರಿಂದ ಹೆಚ್ಚು ಓದುಗರನ್ನು ತಲುಪಲಿದ್ದಾರೆ. ಈ ಮೂಲಕ ತಮ್ಮ ಮಾರುಕಟ್ಟೆಯನ್ನು ಬೆಳೆಸುತ್ತಾ ಹೆಚ್ಚಿನ ಗಳಿಕೆಯನ್ನು ಕೂಡ ಮಾಡಲಿದ್ದಾರೆ.

‘ಮಿಲ್ಸ್ ಅಂಡ್ ಬೂನ್’ನವರು ಮುಂದಿನ ಹೆಜ್ಜೆಯಾಗಿ ಇಂಡಿಯಾದ ಬೇರೆ ಬೇರೆ ನುಡಿಯ ಬರಹಗಾರರನ್ನು ಗುರುತಿಸಿ ಅವರ ಕತೆ-ಕಾದಂಬರಿಗಳನ್ನು ಅಚ್ಚುಹಾಕುವ ಉದ್ದೇಶವನ್ನೂ ಹೊಂದಿದ್ದಾರೆ. ಇದು ಇಲ್ಲಿನ ಬರಹಗಾರರಿಗೆ ಒಂದು ಒಳ್ಳೆಯ ಅವಕಾಶವಾಗಿದೆ. ಅಲ್ಲದೇ, ಇಲ್ಲಿಯ ಸೊಗಡು ಇರುವ ಕತೆ ಕಾದಂಬರಿಗಳ ಮೂಲಕ ಇವರು  ಮಂದಿಗೆ ಮತ್ತಶ್ಟು ಹತ್ತಿರವಾಗಲಿದ್ದಾರೆ.

‘ಮಿಲ್ಸ್ ಅಂಡ್ ಬೂನ್’ ನಂತೆಯೆ ಹೆಚ್ಚಿನ ಹಲನಾಡಿನ ಕಂಪನಿಗಳು ಇಂಡಿಯಾದ ಮಂದಿಯನ್ನು ಅವರ ನುಡಿಗಳ ಮೂಲಕ ತಲುಪುತ್ತಿವೆ. ಎತ್ತುಗೆಗೆ, ಮ್ಯಾಕ್‍ಡೊನಾಲ್ಡ್ ರವರು ಕರ್ನಾಟಕದಲ್ಲಿ ಕನ್ನಡ ಹಾಡುಗಳನ್ನು ಕೇಳಿಸಿ, ಕನ್ನಡದಲ್ಲಿ ಮೆನುಗಳನ್ನು ಕೊಟ್ಟು ಮತ್ತು ಕನ್ನಡ ಟಿವಿ ಕಾರ್ಯಕ್ರಮಗಳಿಗೆ ಬಯಲರಿಕೆಯನ್ನು ನೀಡಿ ಕನ್ನಡಿಗ ಕೊಳ್ಳುಗರನ್ನು ತಲುಪುತ್ತಿದ್ದಾರೆ. ಹಾಗೆಯೇ, ಕೆಎಪ್‍ಸಿ ಯವರು ಮಸಾಲೆ ಬಯಸುವ ಇಲ್ಲಿನ ಮಂದಿಯ ನಾಲಿಗೆಯನ್ನರಿತು ಗ್ರಿಲ್ಡ್ ಕೋಳಿಗಳನ್ನು ತಮ್ಮ ಮೆನುವಿನಲ್ಲಿ ನೀಡಿ ಕೊಳ್ಳುಗರನ್ನು ಸೆಳೆಯುತ್ತಿದ್ದಾರೆ.

ಆದರೆ ಇಲ್ಲಿಯೇ ಹುಟ್ಟಿ ಬೆಳೆದ ಕೆಲವು ಉದ್ದಿಮೆಗಳು ಮಂದಿಯನ್ನು ತಲುಪಲು ಕೇವಲ ಇಂಗ್ಲೀಶ್ ಮತ್ತು ಹಿಂದಿ ಸಾಕು ಎಂಬ ನಿಲುವನ್ನು ಹೊಂದಿರುವಂತೆ ಕಾಣುತ್ತವೆ. ಹೆಚ್ಚಿನ ಹಣಮನೆ(ಬ್ಯಾಂಕ್)ಗಳಲ್ಲಿ ಹಣ ಕಟ್ಟಲು ಬಳಸುವ ಚಲನ್, ಚೆಕ್‍ಗಳನ್ನು ಕೇವಲ ಹಿಂದಿ ಮತ್ತು ಇಂಗ್ಲೀಶ್ ನಲ್ಲಿ ಅಚ್ಚು ಹಾಕಲಾಗಿರುತ್ತದೆ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಕಾಪಿ ಡೇ ನಂತಹ ಅಂಗಡಿಗಳು, ಕೊಳ್ಳುಗರ ಒತ್ತಾಯದ ಬಳಿಕವೂ, ಕನ್ನಡ ಹಾಡುಗಳನ್ನು ಕರ್ನಾಟಕದ ತಮ್ಮ ಅಂಗಡಿಗಳಲ್ಲಿ ಮೊಳಗಿಸಲು ಮುಂದಾಗಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದ ಕಂಪನಿಗಳು ಕಂಡುಕೊಳ್ಳದ ಮಾರುಕಟ್ಟೆಯ ಗುಟ್ಟನ್ನು ಹೆರನಾಡಿನಲ್ಲಿ ಬೆಳೆದ ಕಂಪನಿಗಳು ಕಂಡುಕೊಂಡಂತಿವೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸುದ್ದಿ ಎಂದರೆ, ‘ಮಿಲ್ಸ್ ಅಂಡ್ ಬೂನ್’ನವರು ಹಿಂದಿ, ತಮಿಳು, ಮರಾಟಿ ಹಾಗು ಮಳಯಾಳದಲ್ಲಿ ತನ್ನ ಹೊತ್ತಗೆಗಳನ್ನು ಹೊರತರುತ್ತಿದೆ. ಆದರೆ, ಈ ಪಟ್ಟಿಯಲ್ಲಿ ನಮ್ಮ ಕನ್ನಡದ ಹೆಸರು ಇಲ್ಲ! ಅಂದರೆ, ಕನ್ನಡದಲ್ಲಿ ಮಿಲ್ಸ್ ಅಂಡ್ ಬೂನ್ ಅವರ ಕಾದಂಬರಿಗಳು ಅಚ್ಚಾಗುವುದಿಲ್ಲ. ಕನ್ನಡಿಗರಲ್ಲಿ ಓದುಗತನದ ಮತ್ತು ಕನ್ನಡತನದ ಕೊರತೆಯಿಂದಾಗಿ ಪಟ್ಟಿಯಲ್ಲಿ ಕನ್ನಡದ ಹೆಸರು ಬಾರದೇ ಉಳಿದಿರಬಹುದು ಎಂದೆನಿಸುತ್ತದೆ.

ಮಾಹಿತಿ ಸೆಲೆ: economictimes

(ಚಿತ್ರ: romanticnovelistsassociationblog.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: