ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ.

ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ.

IRNSS-chitra

ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ ಯಾವುದೇ ನೆಲೆಯನ್ನು ಅರಿತುಕೊಳ್ಳಲು ಜಿ.ಪಿ.ಎಸ್.(Global Positioning System- GPS) ತುಂಬಾ ಬಳಕೆಯಾಗುತ್ತಿದೆ. ಇದಕ್ಕಾಗಿ ಅಮೇರಿಕಾ ಅಣಿಗೊಳಿಸಿದ ನೆಲದ ಸುತ್ತ ತಿರುಗುವ ಸುತ್ತುಗಗಳು (satellite) ಕಳುಹಿಸುವ ಸಂದೇಶಗಳನ್ನು ಒರೆಗೆಹಚ್ಚಿ ನೆಲೆಯನ್ನು ಕಂಡುಹಿಡಿಯಲಾಗುತ್ತಿದೆ. ಈಗ  ಇಸ್ರೋ ಕೂಡ ಈ ನಿಟ್ಟಿನಲ್ಲಿ ತನ್ನ ಮೊದಲ ಹೆಜ್ಜೆ ಇಡಲು ಸಜ್ಜಾಗಿದೆ.

IRNSS (Indian Regional Navigation Satellite System) ಇದು ಬಾರತ ಮತ್ತು ಅದರ ಸುತ್ತ 1500 ಕಿ.ಮೀ. ಸುತ್ತಳತೆಯಲ್ಲಿನ ಯಾವುದೇ ನೆಲೆಯನ್ನು ಕರಾರುವಕ್ಕಾಗಿ ತಿಳಿದುಕೊಳ್ಳಲು ಹಾರಿಸಲಾಗುತ್ತಿರುವ ಸುತ್ತುಗಗಳ ಏರ‍್ಪಾಟು. ಈ ಯೋಜನೆಯಲ್ಲಿ ಒಟ್ಟು 7 ಸುತ್ತುಗಗಳು ಬಾನಿನಲ್ಲಿ ಅಣಿಗೊಳ್ಳಲಿದ್ದು, ಇದರ ಮೊದಲ ಹಂತವಾಗಿ ಇಂದು IRNSS-1A ಬಾನ್ತೆರೆ ಸೇರಲಿದೆ. 2015 ರ ಹೊತ್ತಿಗೆ ಉಳಿದ 1B,1C,1D,1E,1F,1G ಸುತ್ತುಗಗಳು ಬಾನ್ತರೆಗೆ ಏರುವುದರೊಂದಿಗೆ, ನೆಲೆಯನ್ನು ತೋರಿಸಿಕೊಡುವ ಏರ‍್ಪಾಟನ್ನು ಸಜ್ಜುಗೊಳಿಸಲಿವೆ.

A4perige

IRNSS-1A ಸುತ್ತುಗವನ್ನು PSLV-C22 ಎಂಬ ಏರುಬಂಡಿ ಬಾನ್ತರೆಗೆ ಹೊತ್ತೊಯ್ಯಲಿದ್ದು, ಹಾರುವ ಮೊದಲ ಹಂತದಲ್ಲಿ  ಅದರ ಏರುತೂಕ (lift-off mass) 1425 kg ಆಗಿರುತ್ತದೆ. ಏರುನೆಲೆಯಿಂದ (launch pad) ಬಾನಿಗೆ ಚಿಮ್ಮಿದ ಮೇಲೆ ನಾಲ್ಕು ಹಂತಗಳ ಬಳಿಕ ನೆಲದಿಂದ ಸರಿಸುಮಾರು 500 ಕಿ.ಮೀ. ಎತ್ತರದಲ್ಲಿ IRNSS-1A, ಏರುಬಂಡಿ PSLV-C22 ಇಂದ ಬೇರ‍್ಪಡಲಿದೆ.

ಏರುಬಂಡಿಯಿಂದ ಬೇರ‍್ಪಟ್ಟ ಮೇಲೆ IRNSS-1A ನೆಲದ ಸುತ್ತ ಮೊಟ್ಟೆಯಾಕಾರದ ತಿರುಗುದಾರಿಯಲ್ಲಿ (elliptical orbit) ಸುತ್ತಲಿದೆ. ಹೀಗೆ ಸುತ್ತುವಾಗ ನೆಲದಿಂದ ಅದರ ಕಿರುದೂರ (perigee) 285 ± 5 ಕಿ.ಮೀ. ಮತ್ತು ಹಿರಿಯದೂರ (apogee) 20650  ± 675 ಕಿ.ಮೀ. ಆಗಿದ್ದು, ಅದರ ತಿರುಗುದಾರಿ ನೆಲದ ಅಡ್ಡಗೆರೆಗೆ ಮೊದಲಿಗೆ 17° ಮತ್ತು ಕೊನೆಯ ಹಂತದಲ್ಲಿ 29° ಕೋನದಲ್ಲಿ ಅಣಿಗೊಳ್ಳಲಿದೆ.

IRNSS-1A ಸುತ್ತುಗದ ಬಾಗಗಳು :

IRNSS-1A parts

ನೇಸರ ಪಟ್ಟಿಗಳು (solar panel): ಸುತ್ತುಗಕ್ಕೆ ಬೇಕಾಗುವ ಕಸುವನ್ನು ನೇಸರ ಪಟ್ಟಿಗಳಿಂದ ಪಡೆಯಲಾಗುತ್ತದೆ. ಈ ಪಟ್ಟಿಗಳು ನೇಸರನ (ಸೂರ‍್ಯನ) ಬೆಳಕು ಬಳಸಿ ಕಸುವನ್ನು ಉಂಟುಮಾಡಬಲ್ಲವು.

ಬಾನುಲಿ ಕಹಳೆ (global horn): ನೆಲೆಯನ್ನು ಕಂಡುಹಿಡಿಯಲು ಕಳುಹಿಸಲಾಗುವ ರೇಡಿಯೋ ಅಲೆಯ ಸಂದೇಶಗಳನ್ನು ಕಹಳೆಯಂತೆ/ಪೀಪಿಯಂತೆ ಕಾಣುವ ಈ ಸಲಕರಣೆಯಿಂದ ಇತರ ನಿಲುಕುಗಳತ್ತ (antenna) ಚಿಮ್ಮಲಾಗುತ್ತದೆ.

ನಿಲುಕು (antenna): ಈ ಸಲಕರಣೆಯಿಂದ ಸಂದೇಶಗಳನ್ನು ರೇಡಿಯೋ ಅಲೆಗಳನ್ನಾಗಿ ಮಾರ‍್ಪಡಿಸಲಾಗುತ್ತದೆ.

ಬೆಳಕು ಹಿಂಪುಟಿಕೆ (retro-reflector): ನೆಲದಲ್ಲಿರುವ ಸುತ್ತುಗವನ್ನು ಹಿಡಿತದಲ್ಲಿಡುವ ನೆಲೆಗೆ ಈ ಸಲಕರಣೆ ಮೂಲಕ ಸಂದೇಶಗಳನ್ನು ಕಳುಹಿಸಲಾಗುತ್ತದೆ.

ಅಣಿಗೊಳಿಸುವ ಮೋಟರ್ ( apogee motor): ಮೇಲೆ ತಿಳಿಸಿರುವಂತೆ ಸುತ್ತುಗವು ಮೊದಲಿಗೆ 17° ಕೋನದಲ್ಲಿ ನೆಲದ ಸುತ್ತ ತಿರುಗಲಿದ್ದು, ಆಮೇಲೆ ಈ ಮೋಟರ್ ಬಳಸಿ ಸುತ್ತಗವನ್ನು ಹಂತ ಹಂತವಾಗಿ 29° ಕೋನಕ್ಕೆ ಹೊಂದಿಸಲಾಗುತ್ತದೆ.

ಅರಿಲು ಅರಿವುಗೆಗಳು (star sensors): ಸುತ್ತುಗದ ತಿರುಗುವ ಕೋನವನ್ನು ಹೊಂದಿಸಲು ಈ ಅರಿವುಗೆಗಳು ನೆರವಾಗುತ್ತವೆ.

ತಳ್ಳು-ಉರುವಲು ಗೂಡು (propellant tank): IRNSS-1A ಮೇಲೆ ಹಾರಲು ಬಳಸುವ ಉರುವಲನ್ನು ಇಲ್ಲಿ ಕೂಡಿಡಲಾಗುತ್ತದೆ.

IRNSS ಕುರಿತು ಕನ್ನಡಿಗರಿಗೆ ಇನ್ನೊಂದು ಹೆಮ್ಮೆಯ ವಿಶಯವೆಂದರೆ ಈ ಯೋಜನೆಯ ಮುಕ್ಯ ನೆಲೆ ಕರ‍್ನಾಟಕದಲ್ಲಿರುವುದು. ಹಾಸನದ ಬಳಿಯ ಬ್ಯಾಲಾಳು ಎಂಬಲ್ಲಿ IRNSS ಯೋಜನೆಯ ಹೆಚ್ಚಿನ ಕೆಲಸಗಳು ನಡೆಯಲಿವೆ.

ಬನ್ನಿ, IRNSS ಯೋಜನೆಯ ಮೂಲಕ ನಮ್ಮ ಕೂಡಣವನ್ನು ಬಾನರಿಮೆಯ ಎತ್ತರಕ್ಕೆ ಕೊಂಡೊಯ್ಯಲು ಮತ್ತೊಂದು ದಿಟ್ಟ ಹೆಜ್ಜೆ ಇಡುತ್ತಿರುವ ’ಇಸ್ರೋ’ (ISRO) ಕೂಟಕ್ಕೆ ಗೆಲುವಾಗಲೆಂದು ಹಾರಯ್ಸೋಣ.

ಮಾಹಿತಿ ಸೆಲೆ: www.isro.gov.in, www.wikipedia.com, www.yourdictionary.com

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ಒಳ್ಳೆಯ ಬರಹ…ಚೆನ್ನಾಗಿದೆ.

  2. ಗಿರೀಶ್ ನನ್ನಿ.

  1. 25/07/2013

    […] ಅಮೇರಿಕಾದ GPS ನಂತಹ ಏರ‍್ಪಾಟನ್ನು ಕಟ್ಟಲು, IRNSS-1A ಹಾರಿಸಿದ ಇಸ್ರೋ INSAT-3D ಮೂಲಕ ಬಾನಂಗಳದಲ್ಲಿ […]

  2. 05/01/2014

    […] ಬೆನ್ನಿಗೆ ಇತ್ತೀಚಿನ ಮಂಗಳಯಾನ, IRNSS-1A, INSAT-3D ಹಮ್ಮುಗೆಗಳ ಗೆಲುವಿನ ಬೆಂಬಲವಿದ್ದರೂ […]

ಅನಿಸಿಕೆ ಬರೆಯಿರಿ:

%d bloggers like this: