F1 ಕಾರಿನ ಕಟ್ಟಣೆ

– ಕಾರ‍್ತಿಕ್ ಪ್ರಬಾಕರ್

ಕಳೆದ ಬರಹವನ್ನು ಮುಂದುವರೆಸುತ್ತಾ, F1 ಪಯ್ಪೋಟಿಯ ಕಟ್ಟಲೆಗಳಿಂದಾಗಿ ಗಾಳಿದೂಡುಕದಂತಹ (turbocharger) ಕಸುವು ಹೆಚ್ಚಿಸುವ ಯಾವುದೇ ಏರ‍್ಪಾಡು ಇಲ್ಲದ್ದಿದ್ದರು 2.4 ಲೀಟರ್ ಅಳತೆಯ ಸಾದಾರಣ ಬಿಣಿಗೆಯಲ್ಲಿ ವೇಗಹೆಚ್ಚಿಸುವ ಸಲುವಾಗಿ ಕಾರಿನಲ್ಲಿ ಏನೇನು ಬದಲಾವಣೆಗಳನ್ನು ತರಲಾಗಿದೆ? ಅಶ್ಟು ಚಿಕ್ಕ ಬಿಣಿಗೆ (engine) ಮತ್ತು ತುಂಬಾ ಕಡಿಮೆ ತೂಕವಿರುವ ಈ ಕಾರು ಗಂಟೆಗೆ 360 ಕಿಲೋ ಮೀಟರ್ ವೇಗದಲ್ಲಿ ಓಡುವಾಗ ಉಂಟಾಗುವ ತೊಂದರೆಗಳೇನು? ಆ ತೊಂದರೆಗಳನ್ನು ಮೀರಿ ವೇಗ ಮತ್ತು ಸ್ತಿರತೆಯನ್ನು ಕಾಪಾಡಿಕೊಳ್ಳುವುದು ಹೇಗೆ? ತಿಳಿಯಬೇಕೆ? ಬನ್ನಿ ಮುಂದೆ ನೋಡೋಣ.

2010_-_VJM03

ಮೊದಲಿಗೆ ಕಾರುಗಳ ವಿನ್ಯಾಸವನ್ನು ಅರಿಯೋಣ. ಕಾರಿಗೆ ಹೊದಿಕೆಗಳಿರದ 4 ಗಾಲಿಗಳಿರುತ್ತವೆ. ಗಾಲಿಗಳು ತಿರುಗಲಿಕ್ಕೆ ಎಶ್ಟು ಬೇಕೋ ಅಶ್ಟೇ ಬೆಂಬಲ ಹೊಂದಿರುತ್ತವೆ. ಮುಂದಿನ ಗಾಲಿಗಳ ಮುಂದೆ ಮತ್ತು ನಡುವೆ ರೆಕ್ಕೆಗಳು ಇದ್ದು, ರೆಕ್ಕೆಯ ನಂತರದ ಆಕಾರವು ಸುಳುವಾಗಿ ಆಚೀಚೆಗೆ ಹರಡಿ ದೊಡ್ಡದಾಗುವಂತೆ ಅಣಿಗೊಂಡಿರುತ್ತದೆ. ಕಾರು ನಡುವಿನ ಆಕಾರವು ಓಡಿಸುಗ ಕೂರಲಿಕ್ಕೆ ಅಣಿಗೊಳಿಸಿರಲಾಗುತ್ತದೆ. ಓಡಿಸುಗನ ಕುಳ್ಳೆಡೆಯ (seat) ಹಿಂದೆ, ಪೆಟ್ರೋಲ್ ಚೀಲ ಅಳವಡಿಸಿದ್ದು, ಅದಕ್ಕೆ ಹೊಂದಿಕೊಂಡಂತೆ ಬಿಣಿಗೆಯನ್ನು ಇರಿಸಲಾಗಿರುತ್ತದೆ. ಬಿಣಿಗೆಗೆ ಹಲ್ಲುಗಾಲಿ ಏರ‍್ಪಾಡನ್ನು ಹೊಂದಿಸಿ ಅದರಿಂದ ಹೊರಬರುವ ತಿರುಗು-ಸರಳು (axle) ಹಿಂದಿನ ಗಾಲಿಗಳಿಗೆ ಹೊಂದಿಸಲಾಗಿರುತ್ತದೆ ಹೀಗೆ ಬಿಣಿಗೆಯಿಂದ ಹೊಮ್ಮುವ ಕಸುವು ಹಿಂದಿನಗಾಲಿಗಳಿಗೆ ಸಾಗಿ ಅಲ್ಲಿಂದ ಇಡೀ ಕಾರು ಓಡುತ್ತದೆ.

ಹಿಂದಿನ ಗಾಲಿಗಳ ನಡುವೆಯೂ ರೆಕ್ಕೆಗಳು ಇರುತ್ತವೆ. ಇದರ ಜೊತೆಗೆ ಕಾರಿನ ಹೊರ ಮಯ್ ಮೇಲೆ ಮತ್ತು ಕೆಳಗಡೆ ನುಣುಪಾದ ರೆಕ್ಕೆಯಂತಹ ಆಕಾರಗಳನ್ನು ಅಳವಡಿಸಲಾಗಿರುತ್ತದೆ. ಬೇರೆ ಕಾರುಗಳಲ್ಲಿ ಬಿಣಿಗೆಯನ್ನು ಅಡಿಗಟ್ಟಿನ (chassis) ಮೇಲೆ ಹೊಂದಿಸಿದ್ದರೆ, F1 ಕಾರಿನಲ್ಲಿ ಬಿಣಿಗೆಯೇ, ಕಾರಿನ ಮತ್ತು ಉಳಿದ ಎಲ್ಲಾ ಬಾಗಗಳ ತೂಕ ಹೊರಬೇಕಾಗುತ್ತದೆ. ಬಿಣಿಗೆಗೆ ಹೊಂದಿಸಿದ ಹಲ್ಲುಗಾಲಿಯ ಏರ‍್ಪಾಡು ಮತ್ತು ಅದರಿಂದ ಹೊರಬರುವ ತಿರುಸರಳುಗಳ ತೂಕವು ಬಿಣಿಗೆಯ ಮೇಲೇಯೇ ಇರುತ್ತದೆ. ಹಾಗಾಗಿ ಬಿಣಿಗೆಯು ಕಾರಿನ ಎಶ್ಟು ತಳಬಾಗದಲ್ಲಿ ಇರಸಲು ಸಾದ್ಯವೊ ಅಶ್ಟು ತಳಬಾಗದಲ್ಲಿ ಇರಿಸಲಾಗಿರುತ್ತದೆ. ಇದರಿಂದಾಗಿ ಕಾರಿನ ಸೆಳೆತದ ನಡುವು (center of gravity) ನೆಲಕ್ಕೆ ಹತ್ತಿರವಾಗಿರುತ್ತದೆ. ಅದು ನೆಲಕ್ಕೆ ಹತ್ತಿರವಾದಶ್ಟು ಗಾಲಿಗಳ ನೆಲಹಿಡಿತ (road grip) ಹೆಚ್ಚಿ, ಕಾರು ವೇಗವನ್ನು ಪಡೆದುಕೊಳ್ಳಲು ನೆರವಾಗುತ್ತದೆ.

bmw-saub-f1-08-half-2012-1-886x665 Internal_Arrangements F1 ಕಾರುಗಳ ವಿನ್ಯಾಸದಲ್ಲಿ ಗಾಳಿ ಹೊಯ್ದಾಟದ ಕುರಿತು ಅರಕೆ ನಡೆಸುವ ’ಗಾಳಿಕಸುವರಿಮೆ’ (aerodynamics) ದೊಡ್ಡ ಕಾಣಿಕೆ ನೀಡಿದೆ. ಉಕ್ಕಿನ ಹಕ್ಕಿಗಳನ್ನು ಬಾನೆತ್ತರಕ್ಕೆ ತೇಲಿಸುವ ಈ ಅರಿಮೆಯ ಅರಕೆಗಳು, ನೆಲದಮೇಲೂ ತನ್ನ ಅಚ್ಚೊತ್ತಿದೆ ಎಂದರೆ ತಪ್ಪಾಗಲಾರದು. ಸಣ್ಣ ಬಿಣಿಗೆಯಿಂದ ಹೊರತರುವ ಕಸುವು ಹಲ್ಲುಗಾಲಿ ಏರ‍್ಪಾಡಿನಲ್ಲಿ (transmission) ವೇಗವಾಗಿ ಬದಲಾಗಿ ಕಾರನ್ನು ಮುಂದೆ ಓಡಿಸಿದರೆ, ಕಾರು ಓಡುವಾಗ ಸುತ್ತಣ ಗಾಳಿಯಿಂದ ಕಸುವನ್ನು ತಯಾರಿಸಿ ವೇಗ ಕಾಯ್ದುಕೊಳ್ಳುವುದು F1 ಕಾರಿನ ಮೇಲ್ಮೆಯೇ ಸರಿ. wing_shapes_&_air_flow

ಕಾರಿನ ತೂಕ ಕಡಿಮೆ ಇರುವುದರಿಂದ ವೇಗ ಹೆಚ್ಚಿದಂತೆಲ್ಲಾ ಗಾಳಿಯಲ್ಲಿ ತೇಲುವ ಸಾದ್ಯತೆ ಹೆಚ್ಚಿರುತ್ತದೆ. ಕಾರು ನೆಲಕಚ್ಚಿ ಹಿಡಿಯುವಂತೆ ಮಾಡಲಿಕ್ಕಾಗಿಯೇ ಕಾರಿನ ಹಿಂದೆ ಮತ್ತು ಮುಂದೆ ರೆಕ್ಕೆಗಳನ್ನ ಅಳವಡಿಸಲಾಗಿರುತ್ತದೆ. ನೆಲ ಹಿಡಿತ ಹೆಚ್ಚಿಸಲು ರೆಕ್ಕೆಯ ಸುತ್ತ ಗಾಳಿ ಹೊಯ್ದಾಟವನ್ನು ಬಳಸಿ ಕೆಳಕಸುವನ್ನು (down force) ಉಂಟುಮಾಡಲಾಗುತ್ತದೆ. ಹೊರ ಮಯ್ಯಿ ಆಕಾರ ಮತ್ತು ಹೊರ ಮಯ್ಯಿ ಮೇಲಿನ ರೆಕ್ಕೆಗಳು ಗಾಳಿಯಿಂದ ಉಂಟಾಗುವ ಎಳೆತವನ್ನು ಕಡಿಮೆ ಮಾಡುತ್ತವೆ.

downforce ಹೀಗೆ ಚಿಕ್ಕ ಬಿಣಿಗೆ ಇದ್ದರೂ ಗಾಳಿ ಹೊಯ್ದಾಟದ ಸರಿಯಾದ ಬಳಕೆಯಿಂದ, ವಿನ್ಯಾಸದಲ್ಲಿನ ಜಾಣ್ಮೆಯಿಂದ F1 ಕಾರುಗಳು ಬಿರುಗಾಳಿಯಂತಹ ವೇಗ ಪಡೆದುಕೊಂಡಿವೆ.

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. 11/07/2013

    […] F1 ಓಟದ ಮಾತು ಮುಂದುವರೆಸುತ್ತಾ, ಬಿರುಗಾಳಿಯಂತಹ ವೇಗದಲ್ಲಿ ಕಾರನ್ನು ಓಡಿಸಿ, ಪಯ್ಪೋಟಿಯನ್ನು ಗೆದ್ದು ಪಡೆದುಕೊಳ್ಳುವುದಾದರೂ ಏನು? ಇದಕ್ಕೂ ಮುನ್ನ ಕಾರು ತಯಾರಿಕೆಯಲ್ಲಿ ತಗಲುವ ಕರ‍್ಚು ಎಶ್ಟು? ತಿಳಿದಿಕೊಳ್ಳುವ ಬನ್ನಿ. […]

  2. 01/08/2013

    […] ಸಾಕಶ್ಟು ಹೆಣಗಾಟ ನಡೆಸುತ್ತಾರೆ. ಪಾರ್‍ಮುಲಾ-ಒನ್ ಪಯ್ಪೋಟಿಯಲ್ಲಿ (F1 competition) ಇದೇ ಬಗೆಯ ಚಳಕಗಳಲ್ಲಿ ಮಾಗಿದ್ದ […]

  3. 08/10/2016

    […] F1 ಓಟದ ಮಾತು ಮುಂದುವರೆಸುತ್ತಾ, ಬಿರುಗಾಳಿಯಂತಹ ವೇಗದಲ್ಲಿ ಕಾರನ್ನು ಓಡಿಸಿ, ಪಯ್ಪೋಟಿಯನ್ನು ಗೆದ್ದು ಪಡೆದುಕೊಳ್ಳುವುದಾದರೂ ಏನು? ಇದಕ್ಕೂ ಮುನ್ನ ಕಾರು ತಯಾರಿಕೆಯಲ್ಲಿ ತಗಲುವ ಕರ‍್ಚು ಎಶ್ಟು? ತಿಳಿದಿಕೊಳ್ಳುವ ಬನ್ನಿ. […]

ಅನಿಸಿಕೆ ಬರೆಯಿರಿ:

Enable Notifications OK No thanks