ರುಪಾಯಿ ಯಾಕೆ ಕುಸಿಯುತ್ತಿದೆ?

ಚೇತನ್ ಜೀರಾಳ್.

M_Id_374611_indian_rupee

ಪೆಬ್ರವರಿ 2012ರಿಂದೀಚೆಗೆ ಬಾರತದ ರುಪಾಯಿ ಬೆಲೆ ಶೇ 10 ಕ್ಕಿಂತ ಮೇಲ್ಪಟ್ಟು ಕಡಿಮೆಯಾಗಿದೆ ಎನ್ನುತ್ತಿವೆ ವರದಿಗಳು. ಈಗ ಡಾಲರ್‍ 60 ರುಪಾಯಿಗಿಂತ ಹೆಚ್ಚಾಗಿರುವುದರಿಂದ, ಹೊರದೇಶದಿಂದ ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದ ಉದ್ದಿಮೆಗಳ ಲಾಬದ ಪ್ರಮಾಣದ ಮೇಲೆ ದೊಡ್ಡ ಹೊರೆಯಾಗುವುದರಿಂದ ಅದಕ್ಕೆ ತಕ್ಕ ರೀತಿಯಲ್ಲಿ ಈ ಹೊರೆಯನ್ನು ಮಂದಿಯ ಮೇಲೆ ಜಾರಿಸಲಾಗುತ್ತದೆ. ಹಾಗಾಗಿಯೇ ರೂಪಾಯಿ ಬೆಲೆ ಡಾಲರ್‍ ಎದುರು ಹೆಚ್ಚಾದಾಗ ಹಲವು ಸಾಮಾನುಗಳು ನಮಗೆ ತುಟ್ಟಿಯಾಗುತ್ತವೆ.

ಆದರೆ ರುಪಾಯಿ ಬೆಲೆ ಡಾಲರ್‍ ಎದುರು ಹೆಚ್ಚಾದಾಗ ಅದನ್ನು ನಾವು ರುಪಾಯಿಯ ಬೆಲೆ ಇಳಿಕೆ ಎಂದು ಕರೆಯುತ್ತೇವೆ. ಇದನ್ನು ನಾವು ಬೆಲೆ ಏರಿಕೆ ಎಂದು ಕರೆಯುವುದಿಲ್ಲ. ಒಂದು ಎತ್ತುಗೆಯ ಮೂಲಕ ಇದನ್ನ ತಿಳಿದುಕೊಳ್ಳೋಣ. ಸದ್ಯಕ್ಕೆ ಬಾರತದ ರುಪಾಯಿಯನ್ನು ನಿಂಬೆಹಣ್ಣುಗಳಿಗೆ ಹೋಲಿಸೋಣ. ಇವತ್ತು ಒಂದು ಡಾಲರ್‍ ಗೆ 50 ನಿಂಬೆಗಳನ್ನು ಕೊಳ್ಳಬಹುದು. ನಾಳೆ ಅದೇ ಬೆಲೆಗೆ 60 ನಿಂಬೆಗಳು ಸಿಗುತ್ತವೆ. ಅದೇ ಒಂದು ಡಾಲರ್‍ ಗೆ ಮುಂಚಿಗಿಂತ ಹೆಚ್ಚಿನ ನಿಂಬೆಹಣ್ಣುಗಳು ಸಿಗುವ ಹಾಗಿದ್ದರೆ, ನಿಂಬೆಹಣ್ಣಿಗೆ ಮುಂಚೆ ಇದ್ದ ಬೆಲೆ ಕಡಿಮೆಯಾಯಿತು ಎಂದು ಅರ್‍ತ ತಾನೆ? ಇದೇ ರೀತಿ ರುಪಾಯಿಯ ಬೆಲೆ ಕೂಡ ಇಳಿದಿದೆ.

ರುಪಾಯಿ ಬೆಲೆ ಯಾಕೆ ಇಳಿಕೆಯಾಗುತ್ತಿದೆ?

ಹೆಚ್ಚು ಕಡಿಮೆ ಕಳೆದ ಒಂದು ವರ್‍ಶದಿಂದ ರುಪಾಯಿ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಾ ಬಂದಿದೆ. ಪೆಟ್ರೋಲ್ ಹಾಗೂ ಇತರೆ ಸಾಮಾನುಗಳನ್ನು ಹೆರನಾಡುಗಳಿಂದ ತರಿಸಿಕೊಳ್ಳುವ ಬಾರತದ ಹಣಕಾಸಿನ ವ್ಯವಸ್ತೆಯ ಮೇಲೆ ಇದು ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಹಾಗಿದ್ದರೆ ರುಪಾಯಿ ತನ್ನ ಬೆಲೆ ಕಳೆದುಕೊಳ್ಳುತ್ತಿರುವುದಕ್ಕೆ ಇರುವ ಕಾರಣಗಳೇನು ಎಂದು ನೋಡೋಣ.
ರುಪಾಯಿಯ ಬೆಲೆಯ ಏರಿಳಿತಕ್ಕೆ ಹಲವಾರು ಹಣಕಾಸು ಏರ‍್ಪಾಡಿನ ಕಾರಣಗಳಿವೆ. ಮೊಟ್ಟ ಮೊದಲನೆಯದಾಗಿ ಬೇಡಿಕೆ ಹಾಗೂ ಪೂರಯ್ಕೆ ಹಮ್ಮುಗೆ. ಒಂದು ಬಗೆಯ ಹಣಕ್ಕೆ ಪೂರಯ್ಕೆಗಿಂತ ಹೆಚ್ಚಿನ ಬೇಡಿಕೆ ಇದ್ದಾಗ ಅದರ ಬೆಲೆ ತುಟ್ಟಿಯಾಗುತ್ತದೆ ಅನ್ನೋದು ಮೊದಲ ಕಟ್ಟಲೆ.

ಸ್ಟಾಕ್ ಮಾರುಕಟ್ಟೆಯ ಗೆಯ್ಮೆ

ಬಾರತದ ಶೇರು ಮಾರುಕಟ್ಟೆಗಳಲ್ಲಿ ಹೆರನಾಡಿನ ಬಂಡವಾಳ ಹೂಡಿಕೆ  (foreign investment) ಹೆಚ್ಚಿದೆ ಹಾಗೂ ಇದು ಹೆರನಾಡಿನ ಬಂಡವಾಳ ಹೂಡಿಕೆದಾರರನ್ನು ಹೆಚ್ಚು ನೆಚ್ಚಿಕೊಂಡಿದೆ. ಬಾರತದ ಹಣಕಾಸಿನ ಮಟ್ಟ ಚೆನ್ನಾಗಿರುವಾಗ ಹಾಗೂ ಶೇರು ಮಾರುಕಟ್ಟೆ ಬೇರೆ ದೇಶಗಳ ಹೋಲಿಕೆಯಲ್ಲಿ ಒಳ್ಳೆಯ ಮಟ್ಟದಲ್ಲಿರುವಾಗ ಹೆರನಾಡಿನ ಹೂಡಿಕೆದಾರರು ಬಾರತದಲ್ಲಿ ಹೆಚ್ಚಿನ ಹಣ ಹೂಡಲು ತಯಾರಾಗುತ್ತಾರೆ. ಇದಕ್ಕೆ ಅವರಿಗೆ ಬಾರತದ ಹಣ ಬೇಕಾಗುತ್ತದೆ, ಬೇಡಿಕೆ ಹೆಚ್ಚಾದಂತೆ ಬಾರತದ ಹಣದ ಬೆಲೆಯು ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ಈ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂಪಡೆಯಲು ಶುರುಮಾಡಿದಾಗ ತಮ್ಮಲ್ಲಿರುವ ಬಾರತದ ಹಣವನ್ನು ಮಾರಲು ಶುರುಮಾಡುತ್ತಾರೆ, ಹಾಗಾಗಿ ಬಾರತದ ಹಣದ ಬೆಲೆ ಕಡಿಮೆಯಾಗುತ್ತದೆ. ಕಳೆದ ಕೆಲವು ವರ್‍ಶಗಳಿಂದ ಬಾರತದ ಮಾರುಕಟ್ಟೆಯ ಸ್ತಿತಿ ಹಿಂದಿಗಿಂತಲೂ ಕೆಟ್ಟದಾಗಿದೆ, ಹಾಗಾಗಿ ಈ ಹೂಡಿಕೆದಾರರಿಗೆ ಸಿಗುತ್ತಿರುವ ಲಾಬವು ಕಡಿಮೆಯಾಗಿದೆ. ಯುರೋಪ್ ಒಕ್ಕೂಟದ ಮುಗ್ಗಟ್ಟಿನ ನಂತರ ಹೆರನಾಡಿನ ಹೂಡಿಕೆದಾರರಿಗೆ ಬಾರತಕ್ಕಿಂತ ಅಮೇರಿಕವೇ ನೆಚ್ಚಿನ ಹೂಡಿಕೆಯ ಜಾಗವಾಗಿದೆ, ಇದಕ್ಕೆ ಕಾರಣ ಅಮೇರಿಕದ ಹಣವೇ ಎಲ್ಲದಕ್ಕಿಂತ ಉತ್ತಮ ಅನ್ನುವ ನಂಬಿಕೆ ಅವರದ್ದಾಗಿದೆ. ಇಂದು ಬಂಗಾರದ ಬೆಲೆ ಹೆಚ್ಚಾಗಿದ್ದು, ಈ ಹೆಚ್ಚಳ ಕೇವಲ ಒಂದು ಹುಸಿಗುಳ್ಳೆ (bubble) ಅನ್ನುವ ನಂಬಿಕೆ ಹೂಡಿಕೆದಾರರಲ್ಲಿ ಇರುವುದರಿಂದ ಅಮೇರಿಕದ ಹಣವಾದ ಡಾಲರಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹೆಚ್ಚಿನ ಬೇಡಿಕೆಯು ಸಹ ಬಾರತದ ಹಣದ ಬೆಲೆ ಕಡಿಮೆಯಾಗಲು ಕಾರಣ.

ಬೆಲೆಯೇರಿಕೆ

ಮತ್ತೊಂದು ಮುಕ್ಯ ಕಾರಣವೆಂದರೆ ಬೆಲೆಯೇರಿಕೆ (inflation), ಇವತ್ತಿನ ಮಟ್ಟಿಗೆ ಬಾರತದಲ್ಲಿ ಇದು ಹೆಚ್ಚಿನಮಟ್ಟದಲ್ಲಿದೆ. ಹೆಚ್ಚಿನ ಬೆಲೆಯೇರಿಕೆಯು ಕೊಳ್ಳುಗನ ಶಕ್ತಿಯನ್ನು ಕುಂದಿಸುತ್ತವೆ. ಇದು ಸಹ ಬಾರತದ ಹಣದ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಎತ್ತುಗೆಗೆ ಇವತ್ತು ಒಂದು ಟಿವಿಯ ಬೆಲೆ 100 ರುಪಾಯಿ ಅಂದುಕೊಳ್ಳೋಣ. ನಾಳೆ ಇದೇ ಟಿವಿಯ ಬೆಲೆ 150 ರುಪಾಯಿಯಾಗಿದೆ ಎಂದರೆ ಬಾರತದ ಹಣದ ಬೆಲೆ ನಿನ್ನೆಗಿಂತ ಇವತ್ತು ಕಡಿಮೆಯಾಗಿದೆ ಎಂದು ಅರ್‍ತ. ಹೀಗಾದಾಗ ಬಾರತದಲ್ಲಿ ಜನರು ಕೊಳ್ಳುವುದನ್ನು ಕಡಿಮೆ ಮಾಡುತ್ತಾರೆ, ಉದ್ದಿಮೆಗಳಿಗೆ ಇದರಿಂದ ನಶ್ಟವಾಗುತ್ತದೆ, ಇದು ದೇಶದ ಹಣಕಾಸು ಏರ‍್ಪಾಡಿನ ಮೇಲೆ ಪರಿಣಾಮ ಬೀರುತ್ತದೆ.

ಕರೆಂಟ್ ಅಕವ್ಂಟ್ ಡೆಪಿಸಿಟ್ (Current Account Deficit)

ಒಂದು ದೇಶದ ಒಟ್ಟು ಹೊರಕಳಿಸುವ (export) ಉತ್ಪನ್ನಕ್ಕಿಂತ ಒಳತರುವ (import) ಉತ್ಪನ್ನ ಹೆಚ್ಚಾಗಿದ್ದಲ್ಲಿ ಅದನ್ನು ಕರೆಂಟ್ ಅಕವ್ಂಟ್ ಡೆಪಿಸಿಟ್ ಎಂದು ಕರೆಯುತ್ತಾರೆ. ಹೀಗಾದಾಗ ಆ ದೇಶವು ಉಳಿದ ದೇಶಗಳ ಮುಂದೆ ಸಾಲಗಾರನಾಗಿ ನಿಲ್ಲುತ್ತದೆ. ಹೆಚ್ಚಿನ ಡೆಪಿಸಿಟ್ ಎಂದರೆ ಒಂದು ದೇಶ ತಾನು ಗಳಿಸುತ್ತಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಕರ್‍ಚು ಮಾಡುತ್ತಿದೆ ಎಂದು ಅರ್‍ತ. ಇದು ಒಂದು ದೇಶದ ಹಣಕಾಸಿನ ಏರ‍್ಪಾಡಿಗೆ ಒಳ್ಳೆಯದಲ್ಲ. ಹೊರಗಿನಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಹೆರನಾಡಿನ ಹಣವನ್ನು ಕೊಳ್ಳಬೇಕಾಗುತ್ತದೆ, ಹೆರನಾಡಿನ ಹಣಕ್ಕೆ ಹೆಚ್ಚಿನ ಬೇಡಿಕೆ ಬಂದಲ್ಲಿ ಆ ನಾಡಿನ ಹಣಕ್ಕೆ ಬೆಲೆ ಕಡಿಮಾಗುತ್ತದೆ. ಇವತ್ತಿನ ಮಟ್ಟಿಗೆ ಬಾರತದ ಆದಾಯ ಕೊರತೆಯು ಮಿತಿಗಿಂತ ತುಸು ಹೆಚ್ಚೇ ಇದೆ.

ದೇಶದಲ್ಲಿ ನಡೆಯುವ ಆಗುಹಗಳು

ಹೋದ ವರ್‍ಶ ಬಾರತದಲ್ಲಿ ಹಲವಾರು ಲಂಚಕೋರತನದ ಹಗರಣಗಳು ಹೊರಬಂದವು. ಈ ಮುಂಚೆ ಇದು ಇರಲಿಲ್ಲವೆಂದಲ್ಲ, ಆದರೆ ಈಗ ಹೊರಬಂದಿರುವುವವು ಲಕ್ಶ ಕೋಟಿ ರುಪಾಯಿಗಳಲ್ಲಿ ಆಗಿರುವ ಹಗರಣಗಳು ಹಾಗೂ ದೊಡ್ಡ ದೊಡ್ಡ ಮಂದಿ ಜಯ್ಲಿಗೆ ಹೋಗುತ್ತಿರುವುದು. ಇಂತಹ ಬೆಳವಣಿಗೆಗಳಿಗೆ ಪಾರ್‍ಲಿಮೆಂಟ್ ಕಡಿವಾಣ ಹಾಕುವಲ್ಲಿ ಸೋತಿದೆ. ಇದರ ಜೊತೆಗೆ ಸರ್‍ಕಾರ ಹೊಸ ವ್ಯಾಪಾರ ನೀತಿ ಹಾಗೂ ಸುದಾರಣೆಗಳನ್ನು ತರುವಲ್ಲಿ ಎಡವಿದೆ. ಇಂತಹ ವಿಶಯಗಳು ಹೊರದೇಶದ ಹೂಡಿಕೆದಾರರಿಗೆ ಬಾರತದ ಮೇಲೆ ಕೆಟ್ಟ ಅನಿಸಿಕೆ ಮೂಡಿಸುತ್ತದೆ ಮತ್ತು ಅವರು ತಮ್ಮ ಹೂಡಿಕೆಯನ್ನು ಹಿಂಪಡೆಯುವಂತೆ ಮಾಡುತ್ತದೆ.

ಆರ್‍. ಬಿ. ಅಯ್ ನಡುಬರುವಿಕೆ (interference)

ಒಂದು ದೇಶದ ಸರಿಯಾದ ಬೆಳವಣಿಗೆಗೆ ಸರಿಯಾದ ಹಣಕಾಸಿನ ಏರ‍್ಪಾಡು ಇರಬೇಕು. ಬಾರತದ ಹಣಕಾಸು ಏರ‍್ಪಾಡು ಹಾದಿ ತಪ್ಪುತ್ತಿರುವ ಸೂಚನೆ ಕಂಡಾಗ ಆರ್‍.ಬಿ.ಅಯ್ (Reserve Bank of India) ನಡುವೆ ಬರುತ್ತದೆ. ರುಪಾಯಿ ಬೆಲೆ ಕುಸಿಯುತ್ತಿದೆ ಎಂದರೆ ಪೆಟ್ರೋಲ್ ಉದ್ದಿಮೆ ಮತ್ತು ಹೊರದೇಶದಿಂದ ಸಾಮಾನುಗಳನ್ನು ತರಿಸಿಕೊಳ್ಳುವ ಉದ್ದಿಮೆಗಳಿಗೆ ಹೊಡೆತ ಬೀಳುತ್ತದೆ. ಆದರೆ ಡಾಲರ್‍ ಲೆಕ್ಕದಲ್ಲಿ ವ್ಯಾಪಾರ ಮಾಡುವ ಸಾಪ್ಟ್ವೇರ್‍ ಉದ್ದಿಮೆಗೆ ಮತ್ತು ಹೊರದೇಶಕ್ಕೆ ಮಾರುವವರಿಗೆ ಲಾಬ ಮಾಡಿಕೊಡುತ್ತದೆ. ಹಣದ ಮಟ್ಟವನ್ನು ಆರ್‍.ಬಿ.ಅಯ್ ಯಾವಾಗಲೂ ಗಮನಿಸುತ್ತಿರುತ್ತದೆ. ಅದರ ಬೆಲೆ ಇಳಿಮುಕವಾಗುತ್ತಿರುವ ಸೂಚನೆ ಕಂಡರೆ ತನ್ನಲ್ಲಿರುವ ಹೊರದೇಶದ ಕರೆನ್ಸಿಯನ್ನು ಮಾರುತ್ತದೆ ಇದರಿಂದ ಬೀಳುತ್ತಿರುವ ರುಪಾಯಿಯ ಬೆಲೆಯನ್ನು ಕೊಂಚಮಟ್ಟಿಗೆ ಹಿಡಿದಿಡಲು ಪ್ರಯತ್ನ ಪಡುತ್ತದೆ.

ರುಪಾಯಿ ಬೆಲೆ ಕಳದುಕೊಂಡರೆ ನಮ್ಮ ಮೇಲೆ ಏನು ಪರಿಣಾಮ ಬೀರುತ್ತದೆ?

  • ಹೊರಗಿನಿಂದ ತರಿಸಿಕೊಂಡಿರುವ ಸಾಮಾನುಗಳು, ಎತ್ತುಗೆಗೆ ಕಚ್ಚಾ ಎಣ್ಣೆ, ಗೊಬ್ಬರ, ಅವ್ಶದಿಗಳು, ಅದಿರು ಮತ್ತು ಎಣ್ಣುಕ (computer), ಪೋನ್ ಮುಂತಾದವುಗಳು ತುಟ್ಟಿಯಾಗುತ್ತವೆ.
  • ರುಪಾಯಿ ಬೆಲೆ ಇಳಿಮುಕವಾದರೆ ಹೊರದೇಶದಿಂದ ಸಾಮಾನು ತರಿಸಿಕೊಳ್ಳುವ ಉದ್ದಿಮೆಗಳಿಗೆ ತೊಂದರೆಯಾದರೆ, ಹೊರದೇಶಕ್ಕೆ ಕಳಿಸುವ ಉದ್ಯಮಗಳಿಗೆ ಲಾಬ ತರುತ್ತದೆ.
  • ನೀವು ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದು, ಡಾಲರ್‍ ಲೆಕ್ಕದಲ್ಲಿ ಗಳಿಸುತ್ತಿದ್ದರೆ, ಡಾಲರಿಗೆ ಹೆಚ್ಚಿನ ರುಪಾಯಿಗಳನ್ನು ಪಡೆಯುತ್ತೀರಿ.
  • ನೀವು ಹೊರದೇಶದಲ್ಲಿ ಓದುತ್ತಿದ್ದರೆ, ನಿಮ್ಮ ಕರ್‍ಚು ಹೆಚ್ಚುತ್ತದೆ ಕಾರಣ ಡಾಲರ್‍ ಪಡೆಯಲು ಹೆಚ್ಚಿನ ರುಪಾಯಿಗಳನ್ನು ನೀಡಬೇಕಾಗುತ್ತದೆ.
  • ನೀವು ಈಗ ಹೊರದೇಶಕ್ಕೆ ಸುತ್ತಾಡಲು ಹೋಗುವುದಾದರೆ ಹೆಚ್ಚಿನ ದುಡ್ಡು ಕೊಡಬೇಕಾಗುತ್ತದೆ.

ಹೀಗೆ ಹಲವಾರು ವಿಶಯಗಳು ಬಾರತದ ಹಣಕಾಸು ಏರ‍್ಪಾಡಿನ ಗತಿಯನ್ನು ನಿರ್‍ದಾರ ಮಾಡುತ್ತವೆ. ಮತ್ತು ಇವುಗಳ ಪರಿಣಾಮ ರುಪಾಯಿಯ ಬೆಲೆಯ ಮೇಲೆ ಬೀಳುತ್ತದೆ ಮುಂದೆ ಇದು ದೇಶದ ಹಣಕಾಸು ಏರ‍್ಪಾಡಿನ ಮೇಲೆ ತನ್ನ ಪರಿಣಾಮ ತೋರುತ್ತದೆ.

ಚಿತ್ರ: www.indianexpress.com

4 ಅನಿಸಿಕೆಗಳು

  1. ಬಾಳೆಹಣ್ಣು ಸುಲಿದಶ್ಟು ಸಲೀಸಾಗಿ ಅರ್ತ ಆಯ್ತು. ಒಳ್ಳೆಯ ಬರಹ ಚೇತನ್ ಜೀರಾಳ್.

  2. ಒಳ್ಳೆಯ ಬರಹ ಚೇತನ್,
    ಆದರೆ, ಒಂದೇ ಒಂದು ತಿದ್ದುಪಡಿಯಿದೆ. ಬಂದರಿಗಿಳಿಯುವ (imported) ಉತ್ಪನ್ನಗಳಿಗಿಂತ ಬಂದರಿಂದೊರಡುವ (exported) ಉತ್ಪನ್ನ/ಸೇವೆಗಳು ಹೆಚ್ಚಿದಲ್ಲಿ ಅದನ್ನು ‘ಮಾರಾಟದ ಕೊರತೆ’ (trade deficit) ಅನ್ನುತ್ತಾರೆ. ಮಾರಾಟದ ಕೊರತೆಯು ‘ಇರುವ ಲೆಕ್ಕದ ಕೊರತೆ’, ಇಲೆಕೊ (Current Accound Deficit, CAD)ಗೆ ಒಂದು ಸಲುವು ಮಾತ್ರ. ‘ಇಲೆಕೊ’ಗೆ ಮಾರಟದ ಕೊರತೆಯ ಜೊತೆ ಬೆಳವಣಿಗೆಯ ಮಟ್ಟದಲ್ಲಿ ಇಳಿಮುಕವಾಗುವುದು, ಬೆಲೆಯೇರಿಕೆ, ಮತ್ತು ನೀವು ತಿಳಿಸಿಕೊಡುತ್ತಿರುವ ರುಪಾಯಿ-ಬೆಲೆ ಇಳಿಕೆಗಳೆಲ್ಲಾ ಸಲುವುಗಳು. ಬಾರತವೆಂಬ ಪಾಪರ್ ಕುಟುಂಬಕ್ಕೆ ‘ಇಲೆಕೊ’ ದಿಟವಾದ ಬೆಡಂಬೂತವೇ ಸರಿ! ಹಣದರಿಮೆಯಲ್ಲಿ ರುಪಾಯಿ-ಬೆಲೆ ಕುಸಿತ, ಇಲೆಕೊ ಮುಂತಾದ ಲೆಕ್ಕಗಳು ಯಿನ್-ಯಾಂಗ್ (yin yang) ತರದಲ್ಲಿ ಕೆಲಸ ಮಾಡುತ್ತವೆ. ಅವು ಒಂದಕ್ಕೊಂದು ಸಲುವುಗಳು!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.