ಇಂಗ್ಲಿಶ್! ಇಂಗ್ಲಿಶ್! ಆದರೆ ಡಿಗ್ರಿ ಪಡೆದರೂ ಕೆಲಸವಿಲ್ಲ!

ಬಾಬು ಅಜಯ್

Job-fair

ಇತ್ತೀಚಿನ ಒಂದು ವರದಿಯಂತೆ ಇಂಡಿಯಾದಲ್ಲಿ ಸುಮಾರು 47% ಡಿಗ್ರಿ ಓದಿದವರು ಯಾವುದೇ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತಕ್ಕವರಲ್ಲವಂತೆ. ಡಿಗ್ರಿ ಓದಿದವರಲ್ಲಿ ಸುಮಾರು ಅರ್‍ದದಶ್ಟು ಮಂದಿ ಯಾವುದೇ ಕೆಲಸಕ್ಕೆ ಬೇಕಾದ ಚಳಕಗಳನ್ನು ಬೆಳೆಸಿಕೊಂಡಿಲ್ಲ ಎಂದು ಹೇಳುತ್ತಿರುವ ಈ ವರದಿ ಬಹಳ ಗಂಬೀರವಾಗಿ ತೆಗೆದುಕೊಳ್ಳಬೇಕಾದ ವಿಶಯವಾಗಿದೆ. ಈ ವರದಿಯು ಡಿಗ್ರಿ ಓದಿದವರ ಇಂಗ್ಲೀಶ್ ಬಾಶೆಯ ಮೇಲಿನ ಹಿಡಿತ ಮತ್ತು ಕಾಗ್ನಿಟಿವ್ ಚಳಕಗಳ (Cognitive skills) ಬಗ್ಗೆ ಹೆಚ್ಚು ಒತ್ತು ನೀಡಿತ್ತು.

ಏನಿದು  ಕಾಗ್ನಿಟಿವ್ ಚಳಕ?

ಇದು ಹಲಬಗೆಯ ಕೆಲಸಗಳನ್ನು ಮಾಡಬಲ್ಲ ಮನುಜನ ಮೆದುಳಿನ ಅಳವು ಎಂದು ಕರೆಯಬಹುದು. ಇದನ್ನು ಸಾಮಾನ್ಯವಾಗಿ ನೆನಪಿನ ಶಕ್ತಿ, ಮಾತು, ಹೊಸ ವಿಶಯವನ್ನು ಅರಿತುಕೊಳ್ಳಬಲ್ಲ ಅಳವು ಮತ್ತು ಬರೆದುದನ್ನು ಓದಿ ಅರಿತುಕೊಳ್ಳಬಲ್ಲ ಚಳಕ, ಇವುಗಳನ್ನು ಸೂಚಿಸಲು ಬಳಸುತ್ತಾರೆ (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ) ಈ ಮೇಲೆ ಹೇಳಿದ ವರದಿಯು ಹೊರಗೆಡವುತ್ತಿರುವ ಒಂದು ಎಚ್ಚರಿಕೆಯ ಅಂಕಿ-ಅಂಶವು, ಶಾಲೆ ಮತ್ತು ಉನ್ನತ ಕಲಿಕೆಯ ಮಟ್ಟದಲ್ಲಿ ಎಡವುತ್ತಿರುವ ನಮ್ಮ ಕಲಿಕೆಯೇರ್‍ಪಾಡಿನ ಬಗ್ಗೆ ಸಾರಿ ಹೇಳುತ್ತಿದೆ. ಈ ಅಂಕಿ-ಅಂಶವು ಇಡೀ ಬಾರತದ ಮಟ್ಟಿಗೆ ಹೇಳುತ್ತಿದ್ದರೂ, ಕರ್‍ನಾಟಕದ ಸ್ತಿತಿಗತಿ ಇದಕ್ಕಿಂತ ಬಾರೀ ಏನು ಬೇರೆ ಇರಲಾರದು.

ನಾವು ಎಡವುತ್ತಿರುವುದು ಎಲ್ಲಿ?

ಕಲಿಕೆಯ ಮಾದ್ಯಮ ಯಾವುದಿರಬೇಕು ಎಂಬ ಬಗ್ಗೆ ಒಂದು ಸಮಾಜವಾಗಿ ನಾವು ದಿಟವನ್ನು ಒಪ್ಪಿಕೊಳ್ಳುವ ಹಾಗೆ ಕಾಣುತ್ತಿಲ್ಲ. ಜಗತ್ತಿನಲ್ಲಿ ಇದುವರೆಗೆ ನಡೆದ ಸಂಶೋದನೆಗಳೆಲ್ಲವೂ, ತಾಯ್ನುಡಿಯಲ್ಲಿನ ಕಲಿಕೆಯೇ ಮೇಲು ಎಂದು ಸಾರಿದ್ದರೂ, ನಮ್ಮಲ್ಲಿ ಮಾತ್ರ ಇಂಗ್ಲೀಶ್ ಮಾದ್ಯಮದೆಡೆಗೆ ಒಲವು ಹೆಚ್ಚಿದೆ. ನಮ್ಮ ಪರಿಸರದಲ್ಲಿಲ್ಲದ ನುಡಿಯಲ್ಲಿ ಓದಲು ತೊಡಗುವುದು ನಮ್ಮ ಜನರ ಕಾಗ್ನಿಟಿವ್ ಚಳಕಗಳಿಗೆ ದೊಡ್ಡ ಹೊಡೆತ ನೀಡಬಲ್ಲುದು.

ಉನ್ನತ ಕಲಿಕೆಯು ಹೆಚ್ಚಾಗಿ ಇಂಗ್ಲೀಶಿನಲ್ಲಿ ದಕ್ಕುವುದು ಎಂಬಂತಹ ಏರ್‍ಪಾಡು ಕಟ್ಟಿಕೊಂಡಿರುವುದರಿಂದ, ಇಂಗ್ಲೀಶಿನಲ್ಲಿರುವ ವಿಶಯಗಳನ್ನು ಅರಿಯಲು ಸಿಕ್ಕಲು ಸಿಕ್ಕಲೆನಿಸಿ, ಕಲಿಕೆಯಲ್ಲಿ ಹಲವರು ಹಿಂದೆ ಬೀಳುತ್ತಿದ್ದಾರೆ. ಉನ್ನತ ಕಲಿಕೆಯನ್ನು ಕನ್ನಡದಲ್ಲೂ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ. ಇದೇ ರೀತಿಯ ಪ್ರಯತ್ನ ಇತರೆ ನುಡಿಗಳಲ್ಲೂ ನಡೆಯಬೇಕಾಗಿದೆ.

ಹಾಗಿದ್ದರೆ ಕನ್ನಡ ಮಾದ್ಯಮದಲ್ಲಿ ಓದಿದವರೂ ಯಾಕೆ ಹಿಂದೆ ಬಿದ್ದಿರುವರು?

ಕರ‍್ನಾಟಕದಲ್ಲಿ ಹಲವು ಮಕ್ಕಳು ಕನ್ನಡ ಮಾದ್ಯಮದಲ್ಲೇ (ಅತವಾ ತಮ್ಮ ತಾಯ್ನುಡಿಯ ಮಾದ್ಯಮದಲ್ಲಿ) ಓದುತ್ತಿದ್ದಾರೆ. ಕರ್‍ನಾಟಕದ ಹಲವೆಡೆ ಕನ್ನಡ ಮಾದ್ಯಮ ಶಾಲೆಗಳೇ (ಅತವಾ ಜನರ ತಾಯ್ನುಡಿಯ ಶಾಲೆಗಳಾದ ಉರ್‍ದು, ತಮಿಳು, ತೆಲುಗು, ಮರಾಟಿ ಮಾದ್ಯಮ ಶಾಲೆಗಳು) ಹೆಚ್ಚಿದ್ದು, ಅವುಗಳಲ್ಲಿ ಸಾಕಶ್ಟನ್ನು ಸರಕಾರವೇ ನಡೆಸುತ್ತಿದೆ. ಸರ‍್ಕಾರ ನಡೆಸುತ್ತಿರುವ ಎಲ್ಲಾ ಶಾಲೆಗಳಲ್ಲೂ ಮೂಲಬೂತ ಸವ್ಕರ‍್ಯಗಳು ಒಂದೇ ತೆರನಾಗಿಲ್ಲ. ಹಲವು ಸರಕಾರಿ ಶಾಲೆಗಳು ಶಿಕ್ಶಕರ ಕೊರತೆ ಎದುರಿಸುತ್ತಿದೆ. ಎಲ್ಲಾ ಸರಕಾರೀ ಶಾಲೆಗಳಲ್ಲಿ ಗುಣಮಟ್ಟದ ಕಲಿಕೆ ನೀಡಲು ಸಾದ್ಯವಾಗಿಲ್ಲ. ಹಾಗಾಗಿ, ಕನ್ನಡ ಮಾದ್ಯಮದಲ್ಲಿ ಓದಿದವರೆಲ್ಲರೂ ಕಲಿಕೆಯಲ್ಲಿ ಮಿಂಚಲು ಸಾದ್ಯವಾಗಿಲ್ಲ. ಉನ್ನತ ಕಲಿಕೆಯು ಕೂಡ ಹೆಚ್ಚಾಗಿ ಇಂಗ್ಲೀಶ್ ಮಾದ್ಯಮದಲ್ಲೇ ಇರುವುದರಿಂದ, ಕನ್ನಡ ಮಾದ್ಯಮದಲ್ಲಿ ಮೊದಲ ಹಂತದ ಕಲಿಕೆ ನಡೆಸಿದ ಹಲವರಿಗೆ ಇದೊಂದು ತೊಡಕಾಗಿದೆ.

ಹಾಗಾದರೆ ಶಾಲೆಯಲ್ಲಿನ ಕಲಿಕೆ ಹೇಗಿರಬೇಕು?

ಯಾವುದೇ ಹೊಸ ಬಾಶೆಯನ್ನು ಮಕ್ಕಳಿಗೆ ಕಲಿಸುವ ಮುನ್ನ ಕೆಲವು ಮುಕ್ಯ ನಿಯಮಗಳನ್ನ ಪಾಲಿಸಬೇಕು ಎಂದು ಗ್ಲೋಬಲ್ ರಿಸರ‍್ಚ್  ಹೇಳುತ್ತದೆ .

 1. ಮಕ್ಕಳು ಶಾಲೆ ಸೇರುವ ಮುನ್ನ ತಮ್ಮ ತಾಯ್ನುಡಿಯಲ್ಲಿ ಮಾತನಾಡುವುದನ್ನು ಮಾತ್ರ ಕಲಿತಿರುತ್ತಾರೆ. ಶಾಲೆ ಸೇರಿದಾಕ್ಶಣ ಇಲ್ಲಿಯವರೆಗೆ ಅವರು ತಾಯ್ನುಡಿಯಲ್ಲಿ  ಕಲಿತಿದ್ದ ಪದಗಳನ್ನು ಓದಲು ಮತ್ತು ಬರೆಯಲು ಕಲಿಯಬೇಕು.
 2. ಮಕ್ಕಳು ಪ್ರತಿ ನಿಮಿಶಕ್ಕೆ ಕನಿಶ್ಟ 45-60 ಪದಗಳನ್ನು ಸರಾಗವಾಗಿ ಓದಲು ಕಲಿತರೆ ಮಾತ್ರ ಅವರು ಓದುತ್ತಿರುವ ಪದಗಳು ಅರ‍್ತವಾಗತೊಡಗುವುದು. ಇದು ತಾಯ್ನುಡಿಯಲ್ಲಿದ್ದರೆ ಮಾತ್ರ ಸಾದ್ಯ.
 3. ಒಮ್ಮೆ ಮಕ್ಕಳು ತಾಯ್ನುಡಿಯಲ್ಲಿರುವ ಪದಗಳನ್ನು ಸರಾಗವಾಗಿ ಓದಲು ಮತ್ತು ಅರ‍್ತ ಮಾಡಿಕೊಳ್ಳಲು ಕಲಿತಾಗ ಮಾತ್ರ ಇಂಗ್ಲೀಶ್ ಅತವ ಬೇರೊಂದು ನುಡಿಯನ್ನು ಕಲಿಯಲು ಅವರಿಗೆ ಯಾವುದೇ ತೊಡಕಾಗುವುದಿಲ್ಲ. ಈ ಕಲಿಕೆಯೇ ಮಕ್ಕಳ ಮುಂದಿನ ಕಲಿಕೆಗೆ ಅಡಿಪಾಯವಿದ್ದಂತೆ.

ಹಾಗಾದರೆ ಕಲಿಕೆ ಏರ್‍ಪಾಡಿನಲ್ಲಿ ಬೇರೊಂದು ನುಡಿಯನ್ನು ಕಲಿಸುವ ರೀತಿ ಏನು?

ಯಾವುದೇ ಹೊಸ ನುಡಿಯನ್ನು ಮಕ್ಕಳಿಗೆ ಕಲಿಸಬೇಕಾದರೆ ಕೆಲವು ನಿಯಮಗಳನ್ನ ಪಾಲಿಸಬೇಕು ಎಂದು ಯುನೆಸ್ಕೋ ಸಾಕಶ್ಟು ವಯ್ಗ್ನಾನಿಕ ಪುರಾವೆಗಳಿಂದ ಪ್ರತಿಪಾದಿಸುತ್ತದೆ. ಅವುಗಳೇನೆಂದು ಕೆಳಗೆ ನೋಡೋಣ.

 1. ಮೊದಲು ಮಕ್ಕಳ ಜೊತೆಯಲ್ಲಿ ಇನ್ನೊಂದು ನುಡಿಯಲ್ಲಿ ಮಾತನಾಡತೊಡಗಬೇಕು. ಮತ್ತು, ಮಕ್ಕಳಿಗೂ   ಮಾತನಾಡಲು ಕಲಿಸಬೇಕು.
 2. ನಂತರ ಇನ್ನೊಂದು ನುಡಿಯಲ್ಲಿ (ಇಂಗ್ಲೀಶ್) ಓದಲು/ಬರೆಯಲು ಸುಲಬವಾಗಿ ಕಲಿಯಬಲ್ಲರು. ಇಂತಹ ಪದ್ದತಿಯಲ್ಲಿ ಮಕ್ಕಳು ತಾವು ಕಯ್ಗೂಡಿಸಿಕೊಂಡ ‘ತಾಯ್ನುಡಿಯಲ್ಲಿ ಓದುವ/ಬರೆಯುವ ಚಳಕ’ದ ಮೂಲಕ ಇನ್ನೊಂದು ನುಡಿಯನ್ನು ಓದುವ/ಬರೆಯುವ ಚಳಕವನ್ನು ಕಯ್ಗೂಡಿಸಿಕೊಳ್ಳಬಲ್ಲರು.

ಈ ಮೇಲಿನ ನಿಯಮಗಳು ಯಾವುದೇ ಹೊಸ ಬಾಶೆಯನ್ನು ಮನುಶ್ಯನಿಗೆ ಕಲಿಸುವಾಗ ಪಾಲಿಸಬೇಕಾದದ್ದು. ಆದರೆ  ಕರ‍್ನಾಟಕದ ಕಲಿಕೆಯೇರ‍್ಪಾಡಿನಲ್ಲಿ ಈ ಯಾವ ನಿಯಮಗಳೂ ಪಾಲನೆಯಾಗುತ್ತಿಲ್ಲ.

ಉನ್ನತ ಕಲಿಕೆ ಕನ್ನಡದಲ್ಲಿದ್ದರೆ, ಇಂಗ್ಲೀಶ್ ಕಲಿಕೆಗೆ ತೊಂದರೆಯಾಗುವುದೇ?

ಮೊದಲ ಹಂತದ ಮತ್ತು ಉನ್ನತ ಕಲಿಕೆ ಇವೆರಡೂ ಕನ್ನಡದಲ್ಲಿದ್ದರೇನೇ ಸರಿ ಎಂದಾಕ್ಶಣ, ಅಂತಹ ಏರ್‍ಪಾಡಿನಲ್ಲಿ ಇಂಗ್ಲೀಶ್ ಕಲಿಯಲು ತೊಂದರೆಯಾಗಬಲ್ಲುದಲ್ಲವೇ ಎಂಬ ಪ್ರಶ್ನೆ ಹಲವರಲ್ಲಿ ಏಳುತ್ತದೆ. ಯುನೆಸ್ಕೋ ಮತ್ತು ಬೇರೆ ಬೇರೆ ಸಂಶೋದನೆಗಳು ಹೇಳುವಂತಹ ನಿಯಮಗಳನ್ನ ಪಾಲಿಸಿದರೆ ಯಾವುದೇ ಹೊಸ ನುಡಿ (ಇಂಗ್ಲೀಶ್ ಅತವ ಮತ್ತಾವುದೋ) ಕಲಿಯಲು ಯಾವುದೇ ತೊಡಕಾಗುವುದಿಲ್ಲ.

ಜಗತ್ತಿನ ಯಾವುದೇ ಏಳಿಗೆ ಹೊಂದಿದ ದೇಶ ನೋಡಿದರೆ ಅವುಗಳು ತಾಯ್ನುಡಿಯಲ್ಲೇ ತಮ್ಮ ಕಲಿಕೆಯೇರ್‍ಪಾಡು ಕಟ್ಟಿಕೊಂಡಿರುವುದು ಕಂಡುಬರುತ್ತದೆ. ಎತ್ತುಗೆಗೆ: ಜರ್‍ಮನಿ, ಜಪಾನ್, ಇಸ್ರೇಲ್, ಇತ್ಯಾದಿ. ನಮ್ಮ ನಾಡು ಕೂಡ ಇಂತ ಏಳಿಗೆ ಹೊಂದಿದ ನಾಡುಗಳ ಜೊತೆ ಸ್ಪರ‍್ದಿಸಬೇಕಾದರೆ, ನಾವು ಕೂಡ ಆ ನಾಡುಗಳಂತೆ ಉದ್ದಿಮೆಗಳನ್ನು ಕಟ್ಟಬೇಕಾದರೆ ಮೊದಲ ಹಂತದ ಕಲಿಕೆಯಿಂದ ಹಿಡಿದು ಉನ್ನತ ಕಲಿಕೆಯವರೆಗೆ ನಮ್ಮ ನುಡಿಯಲ್ಲೇ ಕಲಿಕೆಯೇರ‍್ಪಾಡು ಕಟ್ಟಿಕೊಳ್ಳಬೇಕು.

ಮಾಹಿತಿ ಸೆಲೆ: indiainfoline, economictimes

(ಚಿತ್ರ: w10.naukri.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. Mahesh Bhat says:

  ಇಂಗ್ಲಿಷ್ ಭಾಷೆ ಗೊತ್ತಿರುವುದೊಂದೇ ಕೆಲಸ ಸಿಗುವುದಕ್ಕೆ ಮಾನದಂಡವಾಗಿದ್ದರೆ ಬಹುತೇಕ ಜನರು ಇಂಗ್ಲಿಷ್ ಬಲ್ಲ ಫಿಲಿಫೈನ್ಸ್ ನಂತಹ ದೇಶಗಳು ಯಾವತ್ತೋ ಮುಂದುವರಿದ ದೇಶವಾಗಬೇಕಿತ್ತು. ಕೇವಲ 3 ವರ್ಷದ ಹಿಂದೆ ಜಪಾನ್ ದೇಶದ ಸುಜುಕಿ ಕಂಪನಿಯ ಸಿಇಓ ಅವರ ಸಂದರ್ಷನ ನಮ್ಮ ಸಿಎನ್ಎನ್ ಐಬಿಎನ್ ಚಾನೆಲ್ ನಲ್ಲಿ ಬಂದಿತ್ತು. ಅದರಲ್ಲಿ ಅವರು ದುಭಾಷಿಯನ್ನಿಟ್ಟುಕೊಂಡು ಸಂಪೂರ್ಣ ಜಪಾನಿ ಭಾಷೆಯಲ್ಲೇ ಮಾತನಾಡಿದ್ದರು. ಸುಜುಕಿ ಕಂಪನಿಯ ಮುಖ್ಯಸ್ಥರಿಗೆ ಇಂಗ್ಲಿಷ್ ಗೊತ್ತಿಲ್ಲದೇ ಹೋದರೂ ಜಗತ್ತಿನಾದ್ಯಂತ ತಮ್ಮ ಮಾರಾಟಜಾಲ ಕಟ್ಟಿಕೊಳ್ಳುವುದು ಕಷ್ಟವಾಗಲಿಲ್ಲ. ಅದೇ ಜಪಾನಿಗೆ ಸಮೀಪದ ದೇಶವಾದ ಫಿಲಿಫೈನ್ಸ್ ನಲ್ಲಿ ಅತಿ ಹೆಚ್ಚು ಇಂಗ್ಲಿಷ್ ಗೊತ್ತಿದ್ದವರಿದ್ದರೂ, ಆ ದೇಶದ ಆರ್ಥಿಕತೆ ಜಪಾನ್ ಗಿಂತ ಎಷ್ಟೋ ಚಿಕ್ಕದಾಗಿದೆ.

 2. ಹೌದು ಮಹೇಶ್ ಅವರೇ . ಇಲ್ಲಿ ಗಮನಿಸಬೇಕಾದದ್ದು ನಮ್ಮ ಸರ್ಕಾರಗಳು ಇಂಗ್ಲಿಶ್ ಮತ್ತು ಕನ್ನಡ ಎರಡು ಬಾಶೆಯ ಕಲಿಕೆ ಏರ್ಪಾಡಿನಲ್ಲಿ ಸೋತಿರುವುದು. ಇಂಗ್ಲಿಶ್ ಎಂದರೆ ಮೇಲು ಕನ್ನಡವೆಂದರೆ ಕೀಳು, ಅದು ಮನೆಯೊಳಗೆ ಮಾತ್ರ ಸೀಮಿತ ಎಂಬ ಬಾವನೆಯಿಂದ ನಮ್ಮ ಬಾಶೆ ನಿಜವಾದ “Utility value” ಕೆಳೆದು ಕೊಂಡಿರುವುದು.

 3. Prasad prasad Prasadprasad says:

  ತಾಯಿ ಇಲ್ಲದೆ ಮಗು ಇಲ್ಲ ,ಶಿಕ್ಷಕರಿಲ್ಲದೆ ಶಿಕ್ಷಣ ಇಲ್ಲ .

ಅನಿಸಿಕೆ ಬರೆಯಿರಿ: