ಕಲಿಕೆಯೇರ‍್ಪಾಡಿನ ಪ್ರಶ್ನೆ ಹಗುರವಲ್ಲ

ಪ್ರಿಯಾಂಕ್ ಕತ್ತಲಗಿರಿ.

OB-SO765_ieduca_G_20120413010209

ಕರ್‍ನಾಟಕ ರಾಜ್ಯದ ಶಿಕ್ಶಣ ನೀತಿಯಂತೆ ಒಂದರಿಂದ ಅಯ್ದನೇ ತರಗತಿಯವರೆಗಿನ ಕಲಿಕೆಯು ತಾಯ್ನುಡಿಯಲ್ಲಿಯೇ ನಡೆಯತಕ್ಕದ್ದು. ಜಗತ್ತಿನಲ್ಲಿ ಇದುವರೆಗೆ ನಡೆದ ಎಲ್ಲಾ ಸಂಶೋದನೆಗಳೂ, ಮಕ್ಕಳ ಬೆಳವಣಿಗೆಯ ನಿಟ್ಟಿನಲ್ಲಿ ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ ಒಳಿತು ಎಂದು ಸಾರಿರುವುದರಿಂದ, ಕರ್‍ನಾಟಕ ಸರ್‍ಕಾರದ ಶಿಕ್ಶಣ ನೀತಿಯು ವಯ್ಗ್ನಾನಿಕವಾಗಿದೆ. ಮಕ್ಕಳಲ್ಲಿ ವಯ್ಗ್ನಾನಿಕ ಮನಸ್ತಿತಿಯನ್ನು ಹುಟ್ಟುಹಾಕಬೇಕಾದ ಶಾಲೆಗಳೇ, ಈ ಶಿಕ್ಶಣ ನೀತಿಯನ್ನು ಪ್ರಶ್ನಿಸಿ ಸುಪ್ರೀಮ್ ಕೋರ್‍ಟಿಗೆ ಕರ್‍ನಾಟಕ ಸರಕಾರವನ್ನು ಎಳೆದೊಯ್ದಿದ್ದವು. ಈ ದಾವೆಯನ್ನು ಆಲಿಸಿದ ಕೋರ್‍ಟು, ಇದು ನಾಡಕಟ್ಟಲೆಯಾದ ಸಂವಿದಾನದಲ್ಲಿನ ಕೆಲ ಅಂಶಗಳಿಂದುಂಟಾದ ಗೊಂದಲವೆಂದು ಕರೆದು, ಆ ಕೆಲವು ಅಂಶಗಳನ್ನು ತಿಳಿಯಾಗಿಸುವಂತೆ ಕೇಳುತ್ತಾ, ದಾವೆಯನ್ನು ಹೆಚ್ಚು ಮಂದಿ ಜಡ್ಜುಗಳಿರುವ ಪೀಟವೊಂದಕ್ಕೆ ಕಳಿಸಿದೆ. ಈ ದಾವೆಯ ಹಿನ್ನೆಲೆಯೇನು, ಕೋರ್‍ಟು ಎತ್ತಿರುವ ಪ್ರಶ್ನೆಗಳೇನು, ಈ ಬಗ್ಗೆ ಶಿಕ್ಶಣದ ಉದ್ದಿಮೆ ನಡೆಸುತ್ತಿರುವವರ ನಿಲುವುಗಳೇನು ಎಂಬುದನ್ನು ಈ ಬರಹದಲ್ಲಿ ಚರ್‍ಚಿಸಲಾಗಿದೆ.

ದಾವೆಯ ಹಿನ್ನೆಲೆಯೇನು?

ಕರ್‍ನಾಟಕ ಸರಕಾರವು ಒಂದರಿಂದ ಅಯ್ದರವರೆಗೆ ತಾಯ್ನುಡಿಯಲ್ಲಿಯೇ ಕಲಿಕೆ ನಡೆಯತಕ್ಕದ್ದು ಎಂಬ ಶಿಕ್ಶಣ ನೀತಿಯನ್ನು ಮಾಡಿದ್ದನ್ನು ಪ್ರಶ್ನಿಸಿ 1993ರಲ್ಲಿ ಇಂಗ್ಲೀಶ್ ಮಾದ್ಯಮದಲ್ಲಿ ಓದುತ್ತಿರುವ ಮಕ್ಕಳ ತಂದೆ-ತಾಯಂದಿರ ಕೂಟವು ಸುಪ್ರೀಂ ಕೋರ್‍ಟಿಗೆ ಹೋಗಿತ್ತು. ಪ್ರತಿಯೊಬ್ಬ ಕಲಿಕೆಯರಿಗನೂ ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ ಒಳಿತು ಎಂದು ಹೇಳುವುದನ್ನೇ ಎತ್ತಿ ತೋರಿಸುತ್ತಾ, ಕರ್‍ನಾಟಕ ಸರಕಾರದ ಶಿಕ್ಶಣ ನೀತಿ ಸರಿಯಾಗಿದೆ ಎಂಬ ತೀರ್‍ಪನ್ನು ಸುಪ್ರೀಮ್ ಕೋರ್‍ಟು ನೀಡಿತ್ತು. ಇದಾದ ಮೇಲೆಯೇ, ಕನ್ನಡ ಮಾದ್ಯಮ ಶಾಲೆಗಳನ್ನು ನಡೆಸುವುದಾಗಿ ಹೇಳಿ ಸರಕಾರದಿಂದ ಒಪ್ಪಿಗೆ ಪಡೆದು ಕಳ್ಳತನದಿಂದ ಇಂಗ್ಲೀಶ್ ಮಾದ್ಯಮ ಶಾಲೆ ನಡೆಸುವವರು ಹೆಚ್ಚಾಗಿದ್ದುದು.

ಶಿಕ್ಶಣವೂ ಒಂದು ಉದ್ದಿಮೆ ಎಂಬ ನೋಟದಿಂದ ಈ ತೀರ್‍ಪನ್ನು ಮರು-ನೋಡುವಂತೆ ಕೇಳಿಕೊಳ್ಳುತ್ತಾ, ಇಂಗ್ಲೀಶ್ ಮಾದ್ಯಮ ಶಾಲೆಗಳ ಮೇಲ್ವಿಚಾರಕರ ಒಕ್ಕೂಟವು, ಈ ಕೆಳಗಿನ ಪ್ರಶ್ನೆಯನ್ನು ಸುಪ್ರೀಮ್ ಕೋರ್‍ಟಿನ ಮುಂದಿಟ್ಟಿತು.

ಸಂವಿದಾನದಲ್ಲಿ ಕೊಡಮಾಡಲಾದ “ವಹಿವಾಟಿನಲ್ಲಿ ತೊಡಗುವ ಮೂಲಬೂತ ಹಕ್ಕ”ನ್ನು ಈ ಶಿಕ್ಶಣ ನೀತಿಯು ಮೀರುತ್ತಿದೆಯಲ್ಲವೇ? ಇಂಗ್ಲೀಶ್ ಮಾದ್ಯಮದಲ್ಲಿ ಶಿಕ್ಶಣ ಒದಗಿಸಲು ಶಾಲೆಗಳು ತಯಾರಿರುವಾಗ, ಶಾಲೆಗಳಿಗೆ ದುಡ್ಡು ಕೊಟ್ಟು ಶಿಕ್ಶಣ ಪಡೆದುಕೊಳ್ಳಲು ಮಕ್ಕಳ ತಂದೆ-ತಾಯಂದಿರು ತಯಾರಿರುವಾಗ, ಇವರಿಬ್ಬರ ನಡುವೆ ವ್ಯಾಪಾರ ನಡೆಯದಂತೆ ತಡೆಯಲು ಸರಕಾರಕ್ಕೆ ಯಾವುದೇ ಅದಿಕಾರವಿಲ್ಲವಲ್ಲ?

ಕೋರ್‍ಟು ಎತ್ತಿರುವ ಪ್ರಶ್ನೆಗಳು

ಈ ದಾವೆಯನ್ನು ಆಲಿಸಿದ ಸುಪ್ರೀಮ್ ಕೋರ್‍ಟು, ಇದು ಸಂವಿದಾನದಲ್ಲಿ ತಿಳಿಯಾಗಿ ತೀರ್‍ಮಾನವಾಗಿರದ ವಿಶಯವಾಗಿದ್ದು, ಸಂವಿದಾನದ ಮೂಲ ಆಶಯಗಳನ್ನು ಎಡುವದೆಯೇ ಗೊಂದಲ ಹೋಗಲಾಡಿಸುವ ಕೆಲಸ ಆಗಬೇಕಿದೆ ಎಂಬುದನ್ನು ಕಂಡುಕೊಂಡಿತು. ಈ ನಿಟ್ಟಿನಲ್ಲಿರುವ ಗೊಂದಲವನ್ನು ಹೋಗಲಾಡಿಸಲು ಹೆಚ್ಚು ಮಂದಿ ಜಡ್ಜುಗಳನ್ನುಳ್ಳ ಪೀಟವೊಂದಕ್ಕೆ ಈ ದಾವೆಯನ್ನು ದಾಟಿಸಿ, ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂತೆ ಕೇಳಲಾಗಿದೆ. ಆ ಪ್ರಶ್ನೆಗಳು ಇಂತಿವೆ.

  • ತಾಯ್ನುಡಿ ಎಂದರೇನು? ಮಗುವು ಸುಳುವಾಗಿ ಮಾತನಾಡಬಲ್ಲ ನುಡಿಯೇ ತಾಯ್ನುಡಿ ಎಂದಾದರೆ, ಅದನ್ನು ತೀರ್‍ಮಾನಿಸುವವರು ಯಾರು?
  • ಮೊದಲ ಹಂತದ ಕಲಿಕೆಯು ಯಾವ ನುಡಿಯಲ್ಲಿ ನಡೆಯಬೇಕು ಎಂಬುದನ್ನು ತೀರ್‍ಮಾನಿಸುವವರು ಯಾರು? ಮಗುವೇ, ಮಗುವಿನ ತಂದೆ-ತಾಯಂದಿರೇ ಅತವಾ ಬೇರೆ ಯಾರು?
  • ತಾಯ್ನುಡಿಯಲ್ಲಿಯೇ ಕಲಿಕೆ ನಡೆಯಬೇಕು ಎಂದು ರಾಜ್ಯ ಸರಕಾರವು ಹೇಳುವುದು, ಆರ್‍ಟಿಕಲ್ 14, 19, 29 ಮತ್ತು 30ರಡಿಯಲ್ಲಿ ಸಂವಿದಾನದಲ್ಲಿ ಕೊಡಮಾಡಲಾದ ಮೂಲಬೂತ ಹಕ್ಕುಗಳನ್ನು ಮೀರಿದಂತಾಗುತ್ತದೆಯೇ?
  • ರಾಜ್ಯ ಸರಕಾರಕ್ಕೆ ಆರ್‍ಟಿಕಲ್ 350A ಅಡಿಯಲ್ಲಿ ಕೊಡಲಾದ ಅದಿಕಾರದಂತೆ, ಕಮ್ಮಿ ಮಂದಿಯೆಣಿಕೆಯುಳ್ಳ ನುಡಿಸಮುದಾಯದವರಿಗೆ (Linguistic minorities) ಅವರ ತಾಯ್ನುಡಿಯಲ್ಲಿಯೇ ಕಲಿಕೆ ನಡೆಸುವಂತೆ ಹೇಳಬಹುದೇ?

ಸಂವಿದಾನಕ್ಕೆ ತಕ್ಕಂತೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು, ನಾಡಿನ ಕಲಿಕೆಯೇರ್‍ಪಾಡಿನ ಮುಂದಿನ ದಿನಗಳ ಮೇಲೆ ಅಚ್ಚೊತ್ತಬಲ್ಲ ಕೆಲಸವಾಗಿದೆ. ಈ ಉತ್ತರಗಳೇ ಕಲಿಕೆಯೇರ್‍ಪಾಡು ಹೊರಳುವ ದಿಕ್ಕನ್ನು ನಿರ್‍ದರಿಸಬಲ್ಲುದಾಗಿದೆ.

ಉದ್ದಿಮೆದಾರರ ಮಾತುಗಳು

MDPai-messages

ಈ ತೀರ್‍ಪು ಹೊರಬಂದ ಕೂಡಲೇ, ಶಿಕ್ಶಣವನ್ನೇ ಉದ್ದಿಮೆ ಮಾಡಿಕೊಂಡಿರುವ ಕೆಲ ಉದ್ದಿಮೆದಾರರು, ಬಹುಶಹ ತಮ್ಮ ಲಾಬವನ್ನು ಮನಸಿನಲ್ಲಿಟ್ಟುಕೊಂಡು, ಆಯ್ಕೆಯನ್ನು ಜನರಿಗೆ ಬಿಟ್ಟುಬಿಡಬೇಕು ಎಂಬರ್‍ತದಲ್ಲಿ ಮಾತನಾಡತೊಡಗಿದರು. ಮತ್ತು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಲೆಗಳನ್ನು ಬೆಳೆಯಲು ಬಿಡಿ ಎಂದೂ ಹೇಳಿದರು. ಮಣಿಪಾಲ್ ಗ್ಲೋಬಲ್ ಎಜುಕೇಶನ್ ಹೆಸರಿನ ಕಂಪನಿಯ ಮುಂದಾಳು ಆಗಿರುವವರ ಈ ಮಾತುಗಳು, ನಮ್ಮ ಉದ್ದಿಮೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕೊಡಿ ಎಂಬ ಒಳ ಅರ್‍ತ ಹೊಂದಿದೆ ಎಂದನಿಸದೇ ಇರದು.

ಶಾಲೆಗಳೂ ಒಂದು ಉದ್ದಿಮೆಯೆಂದಾದರೆ, ಅವಕ್ಕೆ ತೆರಿಗೆ ಹಾಕಬೇಕಾಗುತ್ತದೆ. ಶಾಲೆ ಕಟ್ಟಲು ಬೇಕಾದ ಜಾಗವನ್ನು ಮಾರುಕಟ್ಟೆಯ ಬೆಲೆಯಲ್ಲಿಯೇ ಕೊಂಡುಕೊಳ್ಳಬೇಕಾಗುತ್ತದೆ. ಇವತ್ತಿನ ದಿನ ಶಾಲೆಗಳು ತೆರಿಗೆಯಿಲ್ಲದ, ಕಡಿಮೆ ಬೆಲೆಯಲ್ಲಿ ಜಾಗ ಪಡೆದುಕೊಳ್ಳುವ ಉದ್ದಿಮೆಗಳಾಗಿ ಬೆಳೆದಿವೆ. ಇದ್ಯಾವುದನ್ನೂ ಬಿಟ್ಟುಕೊಡುವ ಉದಾರ ಮಾತುಗಳನ್ನು ಉದ್ದಿಮೆದಾರರು ಆಡಲಿಲ್ಲ. ಆರ್‍.ಟಿ.ಇ. ಪ್ರಕಾರ ಬಡಮಕ್ಕಳಿಗೆ ನಿಮ್ಮ ಶಾಲೆಗಳಲ್ಲಿ ಸೀಟು ಕೊಡಿ ಎಂದಾಗ ಕೆಲ ಶಾಲೆಯವರು ನಡೆದುಕೊಂಡ ರೀತಿ ನೋಡಿದವರಿಗೆ, ಈಗ ಮಾತ್ರ ಸಮಾಜದ ಒಳಿತಿನ ಪರವಾಗಿ ಇರುವಂತಹ ಮಾತುಗಳ ಹಿಂದಿನ ಪೊಳ್ಳುತನ ಕಾಣಿಸದೇ ಇರದು.

ಉದ್ದಿಮೆದಾರರು ಹೇಳುವಂತೆ, ಕಲಿಕೆಯ ಮಾದ್ಯಮವನ್ನು ತಂದೆ-ತಾಯಂದಿರ ಆಯ್ಕೆಗೆ ಬಿಟ್ಟುಬಿಡಿ, ಎನ್ನುವಶ್ಟು ಸುಲಬವಿಲ್ಲ ಈ ಕಲಿಕೆಯ ಮಾದ್ಯಮದ ಪ್ರಶ್ನೆಗೆ ಉತ್ತರ. ಯಾಕೆಂದರೆ, ಜಗತ್ತಿನಲ್ಲಿ ಇದುವರೆವಿಗೂ ನಡೆದಿರುವ ಸಂಶೋದನೆಗಳೆಲ್ಲಾ ತಾಯ್ನುಡಿಯಲ್ಲಿ ಕಲಿಕೆಯೇ ಮೇಲು ಎಂದು ಸಾರುತ್ತವೆ. ಇನ್ನೂ ಕೆಲವು ಅರಕೆಗಾರರು (researchers) ಬೇರೊಂದು ನುಡಿಯಲ್ಲಿ ಕಲಿಯುವುದು ಹಲಮಕ್ಕಳ ಕಲಿಕೆಗೆ ಮಾರಕವಾಗುತ್ತದೆ ಎಂದೂ ನುಡಿದಿದ್ದಾರೆ. ತಂದೆ-ತಾಯಂದಿರಿಗೆ ಈ ವಿಶಯವನ್ನು ಮನದಟ್ಟು ಮಾಡುವ ಹೊಣೆಯನ್ನು ಹೊರುವರಾರು? ಶಿಕ್ಶಣವನ್ನೇ ಉದ್ದಿಮೆ ಮಾಡಿಕೊಳ್ಳಹೊರಟವರು ತಾಯ್ನುಡಿಯಲ್ಲಿ ಕಲಿಕೆಯೇ ಮೇಲು ಎಂಬ ವಿಶಯವನ್ನು ತಂದೆ-ತಾಯಂದಿರಿಗೆ ತಿಳಿಸುವ ಹೊಣೆ ಹೊರುವಂತೆ ಕಾಣುವುದಿಲ್ಲ. ಇನ್ನು, ಇಂಗ್ಲೀಶ್ ಮಾದ್ಯಮದಲ್ಲಿನ ಕಲಿಕೆಯೇ ಮೇಲು ಎಂಬ ಹುಸಿನಂಬಿಕೆಗೆ ಒಳಗಾಗಿ ತಂದೆ-ತಾಯಂದಿರೆಲ್ಲರೂ ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾದ್ಯಮ ಶಾಲೆಗಳಿಗೇ ಸೇರಿಸಿದರೆ, ಮುಂದಿನದೊಂದು ಪೀಳಿಗೆಯ ಏಳಿಗೆಯೇ ಬಿದ್ದು ಹೋಗುತ್ತದೆ. ಏಳಿಗೆ ಕಾಣದ ಪೀಳಿಗೆಯ ಕಶ್ಟಗಳ ಹೊಣೆ ಹೊರುವರಾರು?

(ಚಿತ್ರ: www.online.wsj.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Mahesh Bhat says:

    ಆಯ್ತು , ಅವರು ಹೇಳಿದಂತೆ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕೆಂಬುದು ತಂದೆ ತಾಯಿಗಳ ಆಯ್ಕೆಯೇ ಆಗಲಿ. ನನಗೆ ಉನ್ನತ ಶಿಕ್ಷಣ ಕನ್ನಡದಲ್ಲಿ ಕಲಿಯಬೇಕೆಂದಿದೆ . ಆದರೆ ಎಲ್ಲಿದೆ ಆಯ್ಕೆ? ನನ್ನ ಆಯ್ಕೆಯನ್ನು ಕೇಳುತ್ತಿರುವುದು ಕರ್ನಾಟಕದಲ್ಲೇ ಹೊರತು ಇಂಗ್ಲೆಂಡ್ ನಲ್ಲಲ್ಲ.

  2. Sandeep Kn says:

    ಮಹೇಶ್, ಹವ್ದು, ಸದ್ಯಕ್ಕೆ ಮೆಲ್ಮಟ್ಟದ ಕಲಿಕೆಗೆ ಕನ್ನಡದಲ್ಲಿ ಆಯ್ಕೆಗಳು ಕಡಿಮೆ ಎಂದು ಹೇಳಬಹುದು. ಅದನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ.

    ಇನ್ನು ಸದ್ಯದ ಸ್ತಿತಿಯ ಬಗ್ಗೆ ಹೇಳುವುದಾದರೆ ಮೆಲ್ಮಟ್ಟದ ಕಲಿಕೆ ಇಂಗ್ಲೀಶ್ ಇಲ್ಲವೇ ಯಾವುದೇ ನುಡಿಯಲ್ಲಾಗಿದ್ದರೂ ಮೊದಲ ಕಲಿಕೆ ತಾಯ್ನುಡಿಯಲ್ಲಿ ಆಗುವುದೇ ಸರಿಯಾದುದು. ಅರಿಮೆ (ವಿಜ್ಞಾನ) ಕೂಡ ಇದನ್ನೇ ಹೇಳುತ್ತದೆ.

ಅನಿಸಿಕೆ ಬರೆಯಿರಿ:

%d bloggers like this: