ಗೀಜಗನ ಗೂಡಿನಲಿ… ಅಂದು… ಇಂದು…

– ಆನಂದ್.ಜಿ.

geejaga

ಗೀಜಗನ ಗೂಡಿನಲಿ
ಈ ಜಗದ ಕತೆಯಿಹುದು
ಸೋಜಿಗದ ವ್ಯತೆಯಿಹುದು… ಬಂದು ನೋಡಾ ||

ಅಂದು

ದಟ್ಟ ಹಸುರಿನ ನಡುವೆ
ಪುಟ್ಟಗೂಡುಗಳೆಡೆಗೆ
ಕೆಟ್ಟಮನುಜನ ದಿಟ್ಟಿ ಸೋಕದಂತೆ ||

ಎತ್ತ ನೋಡಲು ಕಾಡು
ಸುತ್ತ ಚೆಲ್ಲಿದ ಕಾಳು
ಹೆಕ್ಕಿ ತಿನ್ನಲು ಉಂಟು ಹುಳ ಹುಪ್ಪಟೆ ||

ಹೊರಗೆಲ್ಲ ಹಿಮಗಾಳಿ
ಮಯ್ ನಡುಗಿಸಿರಲು ಚಳಿ
ಬೆಚ್ಚನೆಯ ಗೂಡಲ್ಲಿ ಅಮ್ಮ ತಬ್ಬಿ ||

ಇಂದು

ಸುರಿಯಲಿಲ್ಲವೋ ಮಳೆಯು
ಒಣಗಿ ನಿಂತಿದೆ ಇಳೆಯು
ಉರಿಬಿಸಿಲು ಹೊರಗೆಲ್ಲಾ, ಗೂಡು ಬೆಂಕಿ ||

ಇಟ್ಟ ಮೊಟ್ಟೆಗಳೆಲ್ಲಾ
ಹುಟ್ಟಿರಲು ಅರೆ ಕಾವಿಗೆ
ಪುಟ್ಟ ಹಕ್ಕಿಗಳೆಲ್ಲಾ ಬಡಕಲಾಗಿ ||

ರೆಕ್ಕೆಯಲಿ ಬಲವಿಲ್ಲ
ಕೊಕ್ಕಿನಲಿ ಹುಳವಿಲ್ಲ
ಹೆಕ್ಕಿ ತಿನ್ನಲು ಸುತ್ತ ಕಾಳು ಒಂದಿಲ್ಲ ||

ಹಸಿರ ಸುಟ್ಟರು ಅವರು
ಉಸಿರ ಬಿಟ್ಟೆವು ನಾವು
ಹೆಸರಾದರೂ ಉಳಿದೀತೆ ಕಟ್ಟಕಡೆಗೆ ||

(ಚಿತ್ರ:  www.madibirder.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. sridharsaligram says:

    ನಿಮ್ಮ ಪಂಚಮಾತ್ರಾ ತ್ರಿಪದಿ ಬಹಳ ಸುಂದರವಾಗಿದೆ… ಆದರೆ ಛಂದಸ್ಸಿನ ದೃಷ್ಟಿಯಿಂದ ಕೆಲವೆಡೆ ಸವರೆಣಗಳು ಬೇಕಿವೆ…

    ಗೀಜಗನ ಗೂಡಿನೊಳ
    ಗೀಜಗದ ಕತೆಯಿರಲು
    ಸೋಜಿಗದ ವ್ಯತೆಯಿಹುದು… ಬಂದು ನೋಡಾ ||

    ಅಂದು

    ದಟ್ಟ ಪಸಿರೊಳಗಿರುವ
    ಪುಟ್ಟಗೂಡುಗಳೆಡೆಗೆ
    ಕೆಟ್ಟಮನುಜನ ದಿಟ್ಟಿ ಸೋಕದಂತೆ ||

    ಎತ್ತ ನೋಡಲು ಕಾಡು
    ಸುತ್ತ ಚೆಲ್ಲಿದ ಕಾಳು
    ಪಕ್ಕಿ ತಿನ್ನುವುದುಂಟು ಹುಳ ಹುಪ್ಪಟೆ ||

    ಹೊರಗೆಲ್ಲ ಹಿಮಗಾಳಿ
    ಮಯ್ ನಡುಗಿಸಿರಲು ಚಳಿ
    ಬೆಚ್ಚನೆಯ ಗೂಡಿನೊಳಗಮ್ಮ ತಬ್ಬಿ ||

    ಇಂದು

    ಸುರಿಯಲಿಲ್ಲವೊ ಮಳೆಯು
    ಒಣಗಿ ನಿಂತಿರಲಿಳೆಯೊ
    ಳುರಿಬಿಸಿಲು ಹೊರಗೆಲ್ಲ, ಗೂಡು ಬೆಂಕಿ ||

    ಇಟ್ಟ ಮೊಟ್ಟೆಗಳೆಲ್ಲ
    ಪುಟ್ಟಿರುವುದರೆ ಕಾವ್ಗೆ
    ಪುಟ್ಟ ಪಕ್ಕಿಗಳೆಲ್ಲ ಬಡಕಲಾಗಿ ||

    ರೆಕ್ಕೆಯಲಿ ಬಲವಿಲ್ಲ
    ಕೊಕ್ಕಿನಲಿ ಹುಳವಿಲ್ಲ
    ಹೆಕ್ಕಿ ತಿನ್ನಲು ಕಾಳದೆಲ್ಲುಮಿಲ್ಲ ||

    ಹಸಿರ ಸುಟ್ಟಿದ ರವರು
    ಉಸಿರ ಬಿಟ್ಟೆವು ನಾವು
    ಹೆಸರಾದರುಳಿದೀತೆ ಕಟ್ಟಕಡೆಗೆ ||

ಅನಿಸಿಕೆ ಬರೆಯಿರಿ:

%d bloggers like this: