ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ

Romantic Couple at Sunset

ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು,
ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು,
ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು,
ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ?

ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ
ಕಯ್ ಗಳು ಬರಸೆಳೆದು ನಡುವನ್ನು ಬಳಸಿ,
ಮರಿಗಡ್ಡದ ಗಲ್ಲ ನಿನ್ ಹೆಗಲ ಸವೆಸಿ
ಕೆಂಪಾದ ಕಿವಿ ತುದಿಯ ನಾ ಕಚ್ಚಿ ಬಿಡಲೆ ?

ಎಡಗಡೆಯ ಎದೆಬಡಿತ ನಿನ ಬಲಕೆ ತಾಗಿ
ಕಯ್ ಎರೆಡು ಸೊಂಟಕೆ ಒಂದು ಸುತ್ತಾಗಿ
ನಿನ ಕಾಲು ನೆಲಬಿಡಲು ನಾ ಕೊಂಚ ಬಾಗಿ
ಹೀಗೊಮ್ಮೆ ತೂಗಲು ನಿನ್ನಪ್ಪಿ ಕೊಳ್ಳಲೆ ?

ಮಯ್ಯೊಳಗೆ ಹೊಕ್ಕಾಗ ಒಂದೊಳ್ಳೆ ಇರುವೆ
ನಿಂತಲ್ಲೇ ಕುಣಿವೆ, ಕಣ್ಮುಚ್ಚಿ ತುಟಿಕಚ್ಚಿ ನಗುವೆ
ನಾನೂನು ನಿನ್ನನ್ನು ಹಾಗೊಮ್ಮೆ ನಗಿಸುವೆ
ಅದಕೆಂದು ಬೆರಳಿಂದ ಕಚಗುಳಿಯನಿಡಲೆ ?

ನಿನ್ನ ಮುಟ್ಟಿಯೂ ಕಾಡುವೆ ಮುಟ್ಟದೆಯೂ ಕಾಡುವೆ
ಬಯಕೆಗಳ ಬಾಗಿಲ ತಟ್ಟಿ ನಾ ಓಡುವೆ
ನೀ ತಣಿಯುವವರೆಗೂ ದಣಿವಾಗದಿರುವೆ
ಮನ್ನಿಸೆ ಬೆಡಗಿ ನಾ ತುಸು ತುಂಟ ತರಲೆ!

(ಚಿತ್ರ: http://trueloveacademy.files.wordpress.com/)

ಇವುಗಳನ್ನೂ ನೋಡಿ

1 ಅನಿಸಿಕೆ

  1. Puttu Raj says:

    very nice…:)

ಅನಿಸಿಕೆ ಬರೆಯಿರಿ: