ಮಲ್ಲಿಗೆ-ಹಂಬಿನ ಹಂದರ – 2

ಅಸ್ಸಾಮಿ ಮೂಲ: ಸವ್ರಬ್ ಕುಮಾರ್ ಚಾಲಿಹ
ಎಲ್ಲರಕನ್ನಡಕ್ಕೆ: ಪಿ.ಪಿ.ಗಿರಿದರ

{ಇಲ್ಲಿಯವರೆಗೆ: ಸಯ್ಕಲ್ಲಿನಲ್ಲಿ ಹೋದರೆ, ಈ ಮನೆ ನನ್ನ ಆಪಿಸಿಗೆ ಬಹಳ ದೂರವಾಗಲಾರದು. ಇದು ಹೆಚ್ಚುವರಿ ಲಾಬ. ಯಾಂತ್ರಿಕವಾಗಿರುವ, ಮನೆಯೆಂದು ಎನಿಸದ, ಮತ್ತು ಏನೂ ತನ್ನತನವಿಲ್ಲದ ಆರ‍್ಸಿಸಿ ಮನೆಗಳಿಗೆ ಹೋಲಿಸಿದರೆ, ಈ ಮಲ್ಲಿಗೆ ಹಂಬಿನ- ಹಂದರ ಹೆಚ್ಚು ಹಿತ ಎನಿಸುತ್ತದೆ. ಅದರ ಬಾಡಿಗೆ ಅಯ್ವತ್ತು ಅತವ ನೂರು ರುಪಾಯಿಗಳಶ್ಟು ಜಾಸ್ತಿಯದರೂ, ಆ  ಮನೆ ಅಶ್ಟು ಬೆಲೆ-ಬಾಳುತ್ತದೆ…}

fragrant_Confederate-jasmine

ಸುಗ್ಗಿಯ ಬೆಚ್ಚುಹವು ಚಳಿಗಾಲದ ಚಳಿಯನ್ನು ಓಡಿಸಿದೆ. ನನಗೆ ಬಾಯಾರಿತು. ಕೆಲವು ಹೆಜ್ಜೆ ಮುಂದೆ ಇಟ್ಟೆ. ಮಲ್ಲಿಗೆ-ಹಂಬಿನ ಹಂದರದ ಬಲಗಡೆ ಇರುವ ಅಂಗಡಿಗಳ ಹೆಸರು-ಹಲಗೆಗಳ ಮೇಲೆ ಕಣ್ಣು ಹಾಯಿಸಿದೆ. ಪಿ.ಕೆ. ರೇ: ಡಯ್ಸ್ ಮೆಕರ‍್ಸ್, ಎಮ್/ಎಸ್ ಅನ್ನಪೂರ್‍ಣ ಬ್ರೆಡ್, ಕುಬಚಂದಾನಿ ರೇಡಿಯೋ ಡಿಸ್ಟ್ರಿಬ್ಯುಟರ‍್ಸ್ ಕಂಡುಬಂದವು. ಎರಡನೇ ಮಾಳಿಗೆಯ ಒಂದು ಬಾಗದಲ್ಲಿರುವ ರೂಮುಗಳೆಲ್ಲಾ ಅರೆ-ಪರದೆಗಳಿಂದ ಮುಚ್ಚಲಾಗಿವೆ. ಜಗಲಿಯ ಗೋಡೆಗಳ ಮೇಲೆ ಸೀರೆಗಳನ್ನು ಒಣಗ-ಹಾಕಿದ್ದಾರೆ.ಇನ್ನೂ ಮೇಲಿನ ಮಾಳಿಗೆಯ ಜಗಲಿಯಲ್ಲಿ ಹಗ್ಗಗಳ ಮೇಲೆ ಗಮೋಚ(ಅಸಾಮಿ-ಟವೆಲು)ಗಳು ನೇತಾಡುತ್ತಿವೆ. ಇದು ಪ್ರಾಯಶ ಇದರ ಒಡೆಯ ಇದೇ ಊರಿನವನು ಎಂಬುದನ್ನು ತೋರಿಸುತ್ತದೆ.
ನಾನು ಇನ್ನೂ ಕೆಳಗೆ ಕಣ್ಣು ಹಾಯಿಸಿದೆ. ನೇಸರು ಪಡುವಣದಲ್ಲಿ ಮುಳುಗಿ, ಸಾಯಂಕಾಲವಾಗಿದೆ. ಮಿಂಚು-ಸೊಡರುಗಳು ಉರಿಯುತ್ತಿವೆ. ರೋಡಿನ ಒಂದು ಅಂಚಿಗೆ ಕಟ್ಟಡದ ಗೇರೆಜಿರಬೇಕಾದ ಜಾಗದಲ್ಲಿ ಹಂಚುಗಳ ಸೂರಿರುವ ಪುಟ್ಟ ಕಟ್ಟಡವಿದೆ. ಅದರ ಹಣೆಯ ಮೇಲೆ ಕೋಕ-ಕೋಲದ ಬಯಲರಿಕೆಯ ಕೆಂಪು ಸನ್ನೆ-ಹಲಗೆ ಇದೆ. ಇದು ಸಿಹಿ-ತಿಂಡಿಯ ಅತವ ಬರಹದ-ಸಾಮಾನು ಮಾರುವ ಅಂಗಡಿ ಎಂದು ಕಂಡಿತವಾಗಲೂ ಹೇಳಬಹುದು.

ಸಯ್ಕಲ್ಲನ್ನು ಒಂದೆಡೆ ನಿಲ್ಲಿಸಿ, ನಾನು ಒಳ-ಹೋದೆ. ಮುಂಗಟ್ಟೆಯ ಹಿಂಬಾಗದಲ್ಲಿ ಚೊಕ್ಕಟವಾಗಿ ಜೋಡಿಸಿದ ಓರಣಗೊಳಿಸಿದ ಸೊಗಯಿಸಿದ ನಾಳುನಾಳಿ(ದಿನನಿತ್ಯ)ನ ಬಳಕೆಯ ತರಾವರಿ ಸಾಮಾನುಗಳಿದ್ದವು. ಅರೆ-ತೋಳಿನ ಪಟ್ಟೆ-ಪಟ್ಟೆ ಅಂಗಿ ತೊಟ್ಟ ಸುಮಾರು ಇಪ್ಪತ್ತೆಂಟರ ಹರೆಯದ ತರುಣ ಅಲ್ಲಿ ನಿಂತಿದ್ದ. ಅವನು ನುಣ್ಣಗೇನೂ ಶೇವ್ ಮಾಡಿರಲಿಲ್ಲ. ಆತನ ಕೆನ್ನೆಗಳ ಮೇಲೆ ಗಡ್ಡದ ಕುರುಹುಗಳು ನೋಡ-ಸಿಗುತ್ತಿದ್ದವು. ನಿಯೋನ್-ಸೊಡರಿನ ಕೆಳಗೆ ನಿಂತು ಆತ ಏನನ್ನೋ ಓದುತ್ತಿದ್ದ. (ಆಗ ಗಿರಾಕಿಗಳಿರಲಿಲ್ಲ.) ಆತ ನನ್ನಡೆ ನೋಡುತ್ತಾ ಓದುವುದನ್ನು ನಿಲ್ಲಿಸಿದ. (ಆತ ಓದುತ್ತಿದ್ದ ಹೊತ್ತಿಗೆ ಹಣಕಾಸು-ಅರಿಮೆಗೆ ಕೀಲಿಕಯ್ ಎಂದು ಗಮನಿಸಿದೆ.) ಆತ ಕೆಂಪು ನೀರ್‍ಗಲ್ಲ-ಪೆಟ್ಟಿಗೆಯಿಂದ ಒಂದು ಕೋಕ-ಕೋಲದ ಕುಪ್ಪಿಯನ್ನು ಹೊರತೆಗೆದು, ಚಳಕದಿಂದ ಅದರ ಮುಚ್ಚಳವನ್ನು ಬಿಚ್ಚಿ, ಕುಪ್ಪಿಗೆ ಒಂದು ಸ್ಟ್ರಾ-ಕೊಳವೆ ಸಿಕ್ಕಿಸಿ ನನಗೆ ಕೊಟ್ಟ. ನಾನು ಒಂದೇ ಗುಟುಕು ಹೀರಿದೆ.
ಮಾತುಕತೆ ಶುರು ಮಾಡಲೆಂದೇ, ನಾನು “ನೀವು ಪ್ರಿಜ್ ಕೊಳ್ಳಬೇಕು” ಎಂದೆ. (ನನಗೆ ಆತನ ನಡೆ ಇಶ್ಟ ಆಯಿತು)

“ಪ್ರಿಜ್ ಅಂದರಾ” ಆತ ಮಾರ್‍ನುಡಿದ.

“ಹವ್ದು! ನೀವಿರುವ ಜಾಗ ಚೆನ್ನಾಗಿದೆ! ಬೇಸಿಗೆ ಬಂದಿದೆ. ನಿಮ್ಮ ಅಂಗಡಿಗೆ ಒಳ್ಳೆ ಬೇಡಿಕೆ ಇರುತ್ತದೆ – ದೊಡ್ಡ ಪ್ರಿಜ್ ಮತ್ತು ಅಂತಹ ವಸ್ತುಗಳಿದ್ದರೆ”

“ಹವ್ದಾ!” ಆತ ಹೇಳಿದ. ಆದರೆ ಈ ಅಂಗಡಿ ನನ್ನದಲ್ಲ. ನಾನು ಮಾರಾಟಗಾರ ಅಶ್ಟೇ. ಈ ಜಾಗ ಕಂಡಿತವಾಗಿ ಬಹಳ ಬಿಜಿ ಜಾಗ. ಕೆಲವು ವಾರಗಳೊಳಗೆ ಕೋಕ-ಕೋಲಕ್ಕೆ ಬೇಡಿಕೆ ಒಮ್ಮೆಲೆ ಹೆಚ್ಚುತ್ತದೆ. ಅದನ್ನು ಪೂರಯ್ಸಲು ನಮಗೆ ಕಶ್ಟವಾಗುತ್ತದೆ. ಆದರೆ ಈ ಅಂಗಡಿಯ ಒಡೆಯ ಪ್ರಿಜ್ ಕೊಳ್ಳಲು ಇನ್ನೂ ತೀರ್‍ಮಾನಿಸಿಲ್ಲ. ಈ ರೂಮು ಸಣ್ಣದು. ಆದರೆ ಇದರ ಬಾಡಿಗೆ ತಿಂಗಳಿಗೆ ಇನ್ನೂರು ರುಪಾಯಿಗಳು. ಇಂತ ಚಿಕ್ಕ ಅಂಗಡಿಯನ್ನು ತೂಗಿಸಿಕೊಂಡು ಹೋಗುವುದೇ ಕಶ್ಟವಾಗಿದೆ. ಇನ್ನು ಪ್ರಿಜ್ ಕೊಳ್ಳುವ ಕೇಳ್ವಿ ಸಹಜವಾಗಿ…”

“ಉಹುನ್!” ನಾನು ಇನ್ನೂ ಸ್ವಲ್ಪ ಕೋಕ-ಕೋಲವನ್ನು ಹೀರುತ್ತಾ ಉದ್ಗರಿಸಿದೆ. ಆ ಮೇಲೆ ನಾನು ಈ ಊರಿಗೆ ಹೊಸಬ ಎಂದೂ, ಸದ್ಯಕ್ಕೆ ಒಬ್ಬ ಗೆಳೆಯನ ಮನೆಯಲ್ಲಿ ತಂಗಿದ್ದೇನೆ ಎಂದೂ, ಒಂದು ಬಾಡಿಗೆ ಮನೆ ಹುಡುಕುತ್ತಿದ್ದೇನೆ ಎಂದೂ ಆತನಿಗೆ ಹೇಳಿದೆ. ನಿಮಗೇನಾದರೂ ಈ ನೆರೆಕೆರೆಯಲ್ಲಿ, ಅಕ್ಕಪಕ್ಕದಲ್ಲಿ ಬಾಡಿಗೆಗೆ ಮನೆ ಇರುವುದು ಗೊತ್ತಾ? ಎಂದು ಕೇಳಿದೆ. ಈ ನೆರೆಹೊರೆಯಲ್ಲಿ ಬಾಡಿಗೆ ಮನೆ ಸಿಗುವುದು ಕಶ್ಟವೆಂದೂ, ಆತನ ಪರಿಚಯಸ್ತ ಒಬ್ಬ ಮನೆ ಕಟ್ಟಿಸುತ್ತಾ ಇದ್ದಾನೆ ಎಂದೂ, ಆದರೆ ಅದು ಇಲ್ಲಿ ಅಲ್ಲವೆಂದೂ ಸ್ವಲ್ಪ ದೂರದಲ್ಲಿ, ಪತಸಿಲ್ ಅಲ್ಲಿ, ಇದೆ ಎಂದೂ ಆತ ಹೇಳಿದ.

“ಓ! ಪತಸಿಲ್ ಅಲ್ಲಿ! ಅಶ್ಟು ದೂರದಲ್ಲಿರುವ ಮನೆ ನನಗೆ ಆಗುವುದಿಲ್ಲ” ಎಂದು ನಾನು ಮಾರ್‍ನುಡಿದೆ. “ಇಲ್ಲೇ ಬೇಕೆಂದರೆ, ಮಲ್ಲಿಗೆ-ಹಂಬಿನ ಹಂದರ” ಎಂಬ ಹೆಸರಿನ ಮನೆ ಇದೆ. ಅದು ನಿನಗೆ ಗೊತ್ತಿದೆ ಎಂದು ನನಗೆ ಕಂಡಿತಾ ಗೊತ್ತು!?

“ಮಲ್ಲ್ಲಿಗೆ-ಹಂಬಿನ ಹಂದರ! ಮಲ್ಲಿಗೆ-ಹಂಬಿನ ಹಂದರ!” ಎಂದುದ್ಗರಿಸಿ ಆತ ನೆನಪಿಸಿಕೊಳ್ಳಲೆಳಸಿದ.

ನಾನು ನಕ್ಕೆ. ನಕ್ಕು ಮುಂದುಗಡೆ ಮಲ್ಲಿಗೆ ಗಿಡ ಇರುವ ಅಸಾಮ್ ಟಯ್ಪಿನ ಮನೆ ಎಂದೆ.

“ಓ! ಅಲ್ಲಿ ಇರುವ ಆ ಮನೆ ನೀವು ಹೇಳುತ್ತಿರುವುದು!”

ನಾನು ಆತನತ್ತ ಕೇಳ್ವಿಯ ನೋಟ ಬೀರಿದೆ. “ನನಗೆ ಆ ಹಳೆ ಮನೆ ಗೊತ್ತು. ಆದರೆ ಅವರು ಅದನ್ನು ಬಾಡಿಗೆಗೆ ಕೊಡ್ತಾರೆ ಅಂತ ಅನಿಸುವುದಿಲ್ಲ. ಅದು ನಿಡುಗಾಲದಿಂದ ಕಾಲಿ ಬಿದ್ದಿದೆ. ಈ ಅಂಗಡಿ ತೆರೆದು ಒಂಬತ್ತು ತಿಂಗಳಾದವು. ಈ ಒಂಬತ್ತು ತಿಂಗಳಲ್ಲಿ ಯಾರೂ ಇಲ್ಲಿಗೆ ಬಂದಿಲ್ಲ. ಅದು ಅದೇ ಸ್ತಿತಿಯಲ್ಲೇ ಇದೆ ? ಕಾಲಿ ಮತ್ತು ಕಡೆಗಣಿಸಿದ ಸ್ತಿತಿಯಲ್ಲಿ.”

“ಇದು ಯಾರದು? ಅವರು ಯಾಕೆ ಇದನ್ನ ಬಾಡಿಗೆಗೆ ಕೊಡ್ತಾ ಇಲ್ಲ”

“ನನಗೆ ಗೊತ್ತಿಲ!” ಆ ತರುಣ ಹೇಳಿದ. ಆತ ಗಲಿಬಿಲಿಗೊಂಡ ಹಾಗಿತ್ತು. “ನನಗೆ ಇದರ ಬಗ್ಗೆ ಆಸಕ್ತಿ ಇಲ್ಲ. ಯಾರನ್ನೂ ಇದರ ಬಗ್ಗೆ ಕೇಳಿಲ್ಲ. ನನ್ನ ತೊಡಕುಗಳೇ ನನಗೆ ಸಾಕಶ್ಟಿವೆ!”

ಈ ಮಾತುಕತೆಯಲ್ಲಿ ಆ ತರುಣ ಕಾಸಗಿ ಹುರಿಯಾಳಾಗಿ ಡಿಗ್ರೀ-ಒರೆಗೆ ಕೂರಲೆಳಸಿದ್ದ ಎಂಬ ಸಂಗತಿಯು ನಿಚ್ಚಳ ಆಯಿತು. ಹೋದ-ವರ್‍ಶನೇ ಆತ ಡಿಗ್ರೀ-ಪರೀಕ್ಶೆಗೆ ಕೂರಲೆಳಸಿ ಅದಕ್ಕೆ ಅಣಿಯಾಗುತ್ತಿದ್ದ. ಆದರೆ ಆತನಿಗೆ ಒರೆಗೆ ಕೂರಲಾಗಿರಲಿಲ್ಲ. ತನ್ನ ಕುಟುಂಬವನ್ನು ನೋಡಕೊಳ್ಳಬೇಕಾಗಿದ್ದುದರಿಂದ ಆತನ ತೊಡಕಿಗಳಿಗೆ ಎಲ್ಲೆ ಇಲ್ಲವಾಗಿತ್ತು. “ಈ ಬಿಡುವಿನಲ್ಲಿ ಮತ್ತು ಈ ಅಂಗಡಿ ಮುಂಗಟ್ಟಿನಲ್ಲಿ ಕೂತ್ಕೊಂಡು ಸ್ವಲ್ಪ ಈ ತರಹದ ಕೆಲವು ?ಕೀಲಿಕಯ್?ಗಳ ಪುಟಗಳ ಮೇಲೆ ಕಣ್ಣು ಹಾಯಿಸುತ್ತಿರುತ್ತೇನೆ!” ಎಂದ.

“ನಾನೂ ಹಾಗೆಯೇ ಎಣಿಸಿದ್ದೆ.” ನಾನೆಂದೆ. “ಇದು ಯಾರ ಮನೆ?” ನಾನು ಮತ್ತೆ ಕೇಳಿದೆ. ಕೋಕ-ಕೋಲ ಕುಪ್ಪಿ ಕಾಲಿ ಮಾಡಿ ಇನ್ನೊಂದು ಕುಪ್ಪಿ ಕೋಕ-ಕೋಲ ಕೇಳಿದೆ.
“ನನಗ್ ಸರಿಯಾಗಿ ಗೊತ್ತಿಲ್ಲ. ನನಗೀ ಜಾಗದ ಪರಿಚಯ ಇಲ್ಲ.” ನನಗೆ ಕೋಕ-ಕೋಲದ ಎರಡನೇ ಕುಪ್ಪಿ ಕೊಡುತ್ತಾ, ಆತ ಹೇಳಿದ. “ನಾನು ಇರುವುದು ಕುಮಾರ್‍ಪಾರಾ ಅಲ್ಲಿ. ಬಹಳ ಹಿಂದೆ ನಮ್ಮ ಕಲಿಕೆ-ಮನೆ ಬೇಕು ಎಂದು ಕೇಳ್ಕೊಂಡು ಬಂದು ಸಯ್ನ್ಯ ನಮ್ಮ ಕಲಿಕೆ-ಮನೆಯಲ್ಲಿ ಒಕ್ಕಲಿದ್ದರು. ಆಗ ಕೆಲವು ತಿಂಗಳುಗಳ ಮಟ್ಟಿಗೆ ನಮ್ಮ ಕಲಿಕೆ-ಮನೆ ಬೆಳಗ್ಗಿನ ಹೊತ್ತಿನಲ್ಲಿ ಈ ಪ್ರದೇಶದಲ್ಲೇ ಇರುವ ಬಿಶ್ನುರಾಮ ಪ್ರವ್ಡ ಕಲಿಕೆ-ಮನೆಯಲ್ಲಿ ನಡೆಯಿತು.”

“ಆಗ ನಾನು ಈ ಕಡೆಗೆ ನಡೆದುಕೊಂಡು ಬರ‍್ತಿದ್ದೆ. ಇದೆಲ್ಲಾ ನನ್ನ ಚಿಕ್ಕಂದಿನಲ್ಲಿ ಆಗಿದ್ದು. ನನಗೆ ಈಗ ಸರಿಯಾಗಿ ನೆನಪಿಲ್ಲ. ಆಗ ಈ ಕಟ್ಟಡಗಳಿರಲಿಲ್ಲ. ಈ ಕಟ್ಟಡದ ಜಾಗದಲ್ಲಿ ಇದೇ ತರದ ಒಂದು ಅಸಾಮ್ ಮಾದರಿಯ ಮನೆ ಇತ್ತು. ಅದು ಪೀಡಬ್ಲ್ಯೂಡಿ ಮೇಲ್ವಿಚಾರಕರಿಗೆ ಸೇರಿದ ಮನೆ. ಅವರ ಹೆಸರು ಬ್ರಜೇನ್ ಕಲಿತಾ. ಅವರೇ ಈ ಕಟ್ಟಡ ಕಟ್ಟಿದ್ದು. ಇಶ್ಟು ದೊಡ್ಡ್ ದೊಡ್ಡ್ ಕಟ್ಟಡಗಳನ್ನ ಕಟ್ಟಕ್ಕೆ ಈ ಜನರಿಗೆ ದುಡ್ಡು ಎಲ್ಲಿಂದ ಬರತ್ತೆ ಅಂತ. ಆತ ಮನೆ ಮುಂದಿರುವ ಹುಲ್ಲುಹಾಸನ್ನೂ ಬಿಟ್ಟಿಲ್ಲ. ಯಾಕೆ ಬಿಟ್ಟಿಲ್ಲ ಅನ್ನುವುದು ನಿಚ್ಚಳವಾಗಿದೆ. ಈ ಎಡೆ ಇಡಿಯಾಗಿ ವ್ಯಾಪಾರಯಿಸಲಾದ ಎಡೆ. ಪೂರ್‍ಣ ಲಾಬ ಪಡೆಯಲು ಪ್ರತಿ ಚದರ ಅಡಿಯ ಉರೆ-ಹೆಚ್ಚಿನ(ಗರಿಶ್ಟ) ಉಪಯೋಗ ಪಡೆದುಕೊಳ್ಳಬೇಕು. ಹುಲ್ಲುಹಾಸಿನ ಲಗ್ಜುರಿಯ ಬಗ್ಗೆ ತಲೆ-ಕೆಡಿಸಿಕೊಳ್ಳುವಶ್ಟು ಪೆದ್ದರಲ್ಲ ಜನ.”

(ಚಿತ್ರ: http://www.pbcgov.com)

…ಮುಂದುವರೆಯುವುದು

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: