ಪಲ್ಲಟ – ಸಣ್ಣ ಕತೆ

ಚಿದಂಬರ ಬಯ್ಕಂಪಾಡಿ

paddy_field_concrete

 1

ತೆಂಗಿನಕಾಯಿ ಕೀಳುವ ಕರಿಯನಿಗೂ ಈಗ ಗಾಂಚಲಿ. ಯಾವಾಗ ಪೋನ್ ಮಾಡಿದರೂ ಮೊಬಯ್ಲ್ ನಾಟ್ ರೀಚೆಬಲ್. ಅಂಗಡಿ ಬೀದಿಯಲ್ಲಿ ಉಂಡಾಯಿಯಂತೆ ಅಲೆದುಕೊಂಡಿರುತ್ತಾನೆ. ಒಂದು ಮರಕ್ಕೆ ಹತ್ತಿ ಒಂದು ಕಾಯಿ ಕಿತ್ತರೂ ಇಪ್ಪತ್ತಯ್ದು ರೂಪಾಯಿ ಮುಲಾಜಿಲ್ಲದೆ ಕೊಡಬೇಕು. ಗವರ್‍ಮೆಂಟ್ ತೊಟ್ಟೆ ಸಾರಾಯಿ ಬಂದ್ ಮಾಡಿದ ಮೇಲೆ ವಯ್ನ್‌ಶಾಪ್ ಗಿರಾಕಿ. ಗಂಟೆಗೊಂದು ನಯ್ನ್ಟಿ ಗುಂಡು ಬೀಳುತ್ತಿರಬೇಕು. ಮೊಬಯ್ಲ್‌ಗೆ ದಿನಕ್ಕೊಂದು ಗಂಟೆಯಾದರೂ ಚಾರ್‍ಜ್ ಮಾಡಬೇಕು ಅನ್ನೋದೂ ಗೊತ್ತಿಲ್ಲ ಕಮಂಗಿಗೆ. ತಾನು ಮಾತ್ರ ದಿನಪೂರ್‍ತಿ ಚಾರ್‍ಜ್ ಮಾಡಿಕೊಂಡಿರ್‍ತಾನೆ. ಈ ಕರಿಯನಿಂದಾಗಿ ತಾನು ನಿತ್ಯವೂ ಅಮ್ಮನ ಬಾಯಿಂದ ಬಯ್ಗುಳ ಕೇಳಬೇಕು. ಒಂದೊಂದು ಸಲ ಅದೆಶ್ಟು ಸಿಟ್ಟು ಬರುತ್ತೆ ನಾಣಿಗೆ ಅಂದ್ರೆ ತೆಂಗಿನ ತೋಟ, ಹತ್ತು ಮುಡಿ ಬತ್ತದ ಗದ್ದೆಯನ್ನು ಮಾರಿಬಿಡಬೇಕು. ಈ ಹಳ್ಳಿಯಲ್ಲಿ ತೋಟ, ಗದ್ದೆ ಅಂತೆಲ್ಲಾ ಸುತ್ತಾಡಿ, ಆಳುಗಳ ಬೆನ್ನು ಹಿಡಿದು ಕೆಲಸ ಮಾಡಿಸೋದು ಅಂದ್ರೆ ಸಾಕಾಗಿ ಹೋಗುತ್ತೆ. ಕಾಟನ್‌ಪೇಟೆ ಕಾಲೇಜಿಗೆ ಹೋಗುವ ನವೀನ್ ಅದೆಶ್ಟು ಸಕತ್ತಾಗಿ ಡ್ರೆಸ್ ಮಾಡಿಕೊಂಡು ಕೂಲಿಂಗ್ಲಾಸ್ ಹಾಕೊಂಡು ಕಾರಲ್ಲಿ ತಿರುಗಾಡುತ್ತಾನೆ? ಅವನಂತೆ ತಾನೂ ದಿನಬೆಳಗಾಗುವಶ್ಟರಲ್ಲಿ ಕಾರು, ಬಯ್ಕ್ ಯಾವುದರಲ್ಲಿ ಬೇಕಾದರೂ ತಿರುಗಾಡಬಹುದು ತುಂಡು ಗದ್ದೆ ಮಾರಿದ್ರೆ. ಅದಕ್ಕೆ ಅಮ್ಮ ಒಪ್ಪುತ್ತಿಲ್ಲ. ನೀನು ಊರ ಯಜಮಾನ ಅಂತ ಬುದ್ದಿ ಹೇಳುವುದರಲ್ಲೇ ಅಮ್ಮ ಮುದುಕಿಯಾಗುತ್ತಿದ್ದಾಳೆ.

ಹತ್ತನೇ ತರಗತಿ ರಿಸಲ್ಟ್ ಬರುವ ಮೊದಲೇ ಯಜಮಾನಿಕೆ ಹೊರೆ ಹೆಗಲೇರಿತು, ಓದಿಗೆ ಪುಲ್ ಸ್ಟಾಪ್ ಬಿತ್ತು. ಮಗನಿಗೆ ಮೂವತ್ತು ವರ್‍ಶ ಆಯ್ತು, ಒಳ್ಳೇ ಸಂಬಂದ ಸಿಕ್ಕಿದ್ರೆ ಮದುವೆ ಮಾಡಬೇಕು ಅಂತೆಲ್ಲಾ ತನ್ನವರೊಂದಿಗೆ ಹೇಳಿಕೊಂಡೇ ಅಮ್ಮ ಕಾಲ ಕಳೆಯುತ್ತಾಳೆ. ಹೊಟ್ಟೆಗೆ ಸರಿಯಾಗಿ ಊಟವಿಲ್ಲದಿದ್ರೂ ಅಯ್‍ಶ್ವರ‍್ಯಳಂತ ಸೊಸೆ ತಂದುಕೊಂಡ್ರೆ ಸಾಕು ಎನ್ನುವ ಈ ಕಾಲದಲ್ಲಿ ಅಮ್ಮ ಇನ್ನೂ ಹಳ್ಳೀ ಗುಗ್ಗುವಿನಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿರುವ ಹುಡುಗಿಯರನ್ನೇ ಹುಡುಕುತ್ತಿದ್ದಾಳೆ. ಅಮ್ಮನಿಗೆ ಒಪ್ಪಿಗೆ ಆದರೆ ಸಾಕೇ ತಾನು ಒಪ್ಪಬೇಡವೇ?. ಜೊತೆಯಲ್ಲಿ ಹೋಗುವಾಗ ಹತ್ತಾರು ಮಂದಿ ತನ್ನ ಸೊಸೆಯನ್ನು ನೋಡಿ ಹೊಟ್ಟೆ ಉರಿಸಿಕೊಳ್ಳಬೇಕು ಅನ್ನುವ ಸಾಮಾನ್ಯ ತಿಳುವಳಿಕೆಯೂ ಬೇಡವೇ?. ಅಪ್ಪ ಕಣ್ಮುಚ್ಚಿದಾಗಿನಿಂದ ತಾನೊಬ್ಬನೇ ಗುದ್ದಾಡಬೇಕಾಗಿದೆ ಎನ್ನುವ ಸಂಕಟ ನಾಣಿಗೆ. ಹಿರಿ ಮಗನಾಗಿರುವ ತಪ್ಪಿಗೆ ಅಪ್ಪನಂತೆ ಊರ ಯಜಮಾನಿಕೆ ಬೇರೆ ಮಾಡಬೇಕು. ಈಗೆಲ್ಲಾ ಪೇಟೆಯಲ್ಲಿ ಓದುವುದರಿಂದ, ಸಿನಿಮಾ ಪಾರ್‍ಕ್ ಸುತ್ತಾಡಿ ಸೋಶಿಯಲ್ಲಾಗಿ ಹುಡುಗ-ಹುಡುಗಿ ತಿರುಗಾಡಿದ್ರೆ ಅದನ್ನೇ ಪಂಚಾಯಿತಿ ಕಟ್ಟೆಗೆ ತಂದು ರಾದ್ದಾಂತ ಮಾಡುತ್ತಾರೆ. ವಾರಕ್ಕೊಂದು ಇಂತ ದೂರು ಕೇಳಿ ಕೇಳಿ ಈ ಯಜಮಾನಿಕೆಯೇ ಬೇಡ ಅನ್ನಿಸಿದ್ದೂ ಇದೆ. ಅಪ್ಪನ ಕಾಲದಲ್ಲಿ ಈ ಊರಲ್ಲಿ ಹತ್ತಿಪ್ಪತ್ತು ಮನೆಗಳಿಗೆ ಮಾತ್ರ ಲಯ್ಟಿದ್ದವು. ಈಗ ಬೀದಿ ತುಂಬೆಲ್ಲಾ ಸ್ರ್ಟೀಟ್ ಲಯ್ಟ್ ಹಗಲೂ ರಾತ್ರಿ ಉರಿಯುತ್ತವೆ. ಬಾವಿ ಕಟ್ಟೆಯಲ್ಲಿ ಬಟ್ಟೆ ಒಗೆಯುತ್ತಿದ್ದವರು ಮನೆಗಳಲ್ಲಿ ವಾಶಿಂಗ್ ಮೆಶಿನ್ ಇಟ್ಟುಕೊಂಡಿದ್ದಾರೆ. ಕೊಡಪಾನಗಳಲ್ಲಿ ನೀರು ತರುವ ಕಾಲ ಕಳೆದುಹೋಗಿದೆ. ಮನೆಯೊಳಗೇ ನಲ್ಲಿಗಳಿವೆ. ಊರಿಗೆ ಬಂದವಳು ಹಿಂದಿನಂತೆ ನೀರಿಗೆ ಬರುವುದಿಲ್ಲ. ಇದೆಲ್ಲಾ ಅಮ್ಮನಿಗೆ ಯಾಕೆ ಗೊತ್ತಾಗುತ್ತಿಲ್ಲವೋ ಎನ್ನುವ ಸಂಕಟ ನಾಣಿಗೆ.

2

ಇದು ಗೋಳೂರು. ಸರಿ ಸುಮಾರು ಎರಡು ಸಾವಿರ ಮನೆಗಳಿಗೆ, ಹತ್ತು ಸಾವಿರ ಜನಸಂಕ್ಯೆ ಇದೆ. ಒಂದೂವರೆ ಸಾವಿರ ಮನೆಗಳಿಗೆ ಜಮೀನಿದೆ. ಬತ್ತ, ಅಡಿಕೆ, ತೆಂಗು, ಬೆಳೆ ಬೆಳೆ ಬೆಳೆಯುತ್ತಾರೆ. ಮನೆಯವರೇ ಗದ್ದೆ, ತೋಟದ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕೂಲಿ ಕಾರ್‍ಮಿಕರ ಸಂಕ್ಯೆಯೂ ಹೆಚ್ಚುತ್ತಿದೆ. ಆದರೂ ಗದ್ದೆ ಕೆಲಸಗಳಿಗೆ ಕೆಲಸಗಾರರ ಬರ. ಊಟ, ತಿಂಡಿ, ಚಹಾ ಸಹಿತ ದಿನಕ್ಕೆ ಇನ್ನೂರು ರೂಪಾಯಿ ಸಂಬಳ ಕೊಡಬೇಕು. ಮೊಬಯ್ಲ್ ಬಂದಮೇಲೆ ತಿಂಗಳು ಮೊದಲೇ ಪೋನ್ ಮಾಡಿ ಬುಕ್ ಮಾಡಬೇಕು ಕೆಲಸಕ್ಕೆ. ಊರ ಪಕ್ಕದಲ್ಲೇ ನದಿ ಹರಿದು ಹೋಗುವುದರಿಂದ ನೀರಿಗೇನು ಬರವಿಲ್ಲ. ಒಂದು ಕಾಲದಲ್ಲಿ ಊರ ಯಜಮಾನ ದೊಡ್ಡಣ್ಣನವರ ಟೆರೇಸ್ ಮನೆ ಒಂದನ್ನು ಬಿಟ್ಟರೆ ಉಳಿದವೆಲ್ಲಾ ಹಂಚಿನ ಮನೆಗಳು, ಅಲ್ಲಲ್ಲಿ ಗುಡಿಸಲುಗಳೂ ಇದ್ದವು. ಈಗ ಯಜಮಾನಿಕೆ ನಾಮಕಾವಾಸ್ತೆ ಇದೆ. ದೊಡ್ಡಣ್ಣರ ಮಗ ನಾಗೇಶ ವಂಶಪಾರಂಪರ್‍ಯವಾಗಿ ಊರ ಯಜಮಾನ. ಆದರೆ ಎಂಎಲ್‌ಎ ಸಂಪತ್ ಕುಮಾರ್ ಮಾತೇ ಪಯ್ನಲ್. ಪಂಚಾಯಿತಿ ಕಟ್ಟೆಗೆ ತಕರಾರು ಬಂದರೂ ಎಂಎಲ್‌ಎ ಸ್ಪೀಕರ್ ಪೋನ್‌ನಲ್ಲಿ ಹೇಳಿದ್ದೇ ನ್ಯಾಯ. ಪೊಲೀಸ್ ಸ್ಟೇಶನ್ ಮಂಜೂರಾಗಿದೆಯಂತೆ, ಅದೂ ಬರಬಹುದು. ಆಗ ಪಂಚಾಯಿತಿ ಸ್ಟೇಶನ್ ಗೆ ಟ್ರಾನ್ಸಪರ್ ಆಗುತ್ತವೆ ಬಿಡಿ.

ಅಂದಹಾಗೆ ಗೋಳೂರು ಪಂಚಾಯತ್ ಇದೆ. ಕಯ್ಪಕ್ಶ, ಕಮಲ ಪಕ್ಶ, ರಯ್ತರ ಪಕ್ಶ, ಇತ್ತೀಚೆಗೆ ಬಡವರ ಪಕ್ಶವೂ ಚಿಗುರುತ್ತಿದೆ. ಆದರೆ ಸಂಪತ್ ಕುಮಾರ್ ಹೇಳಿದವರಿಗೇ ಓಟ್ ಹಾಕಬೇಕು. ಇದರ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ನಾಣಿ ಅರ್‍ತಾತ್ ಊರ ಯಜಮಾನ. ಸಂಪತ್ ಕುಮಾರ್ ತುಂಬಾ ಬಿಜಿಯಾಗಿರುತ್ತಾರೆ. ವರ್‍ಶಕ್ಕೆ ಒಂದೆರಡು ಸಲ ಈ ಊರಿಗೆ ಬರುತ್ತಾರೆ. ನೇರವಾಗಿ ಅವರ ಕಾರು ಹೋಗುವುದೇ ನಾಣಿ ಮನೆಗೆ. ಅಲ್ಲಿ ನಾಣಿ, ಅವರ ಅಮ್ಮ ಸಬೆ ಮಾಡುತ್ತಾರೆ. ಪಂಚಾಯಿತಿ ಮೆಂಬರ್‍‌ಗಳು ಕಚೇರಿಯಲ್ಲಿರಬೇಕು. ಕಾರಿನಲ್ಲಿ ಕುಳಿತೇ ಸಂಪತ್ ಕುಮಾರ್ ಅವರಿಗೆ ಕೆಲವು ಅಮೂಲ್ಯ ಸಲಹೆ ಕೊಡುತ್ತಾರೆ. ಅವುಗಳು ಪಾಲನೆ ಆಗಬೇಕು. ಅವರ ಸಲಹೆಗಳೇ ಒಂತರಾ ಪಂಚಾಯಿತಿ ನಿರ್‍ಣಯಗಳು. ಸಬೆಯಲ್ಲಿ ಹಾರಾಟ, ಚೀರಾಟ, ಸಬಾತ್ಯಾಗಕ್ಕೆ ಆಸ್ಪದವೇ ಇಲ್ಲ. ತಿದ್ದುಪಡಿಗಂತೂ ಅವಕಾಶ ಇಲ್ಲವೇ ಇಲ್ಲ. ಸಂಪತ್ ಕುಮಾರ್ ಮೊಬಯ್ಲ್‌ನಲ್ಲಿ ಹೇಳಿದ್ದೇ ರೆಸುಲ್ಯೂಶನ್. ಬಹುಮುಕ್ಯವಾಗಿ ಹೇಳಲೇ ಬೇಕೆಂದರೆ ಗೋಳೂರಲ್ಲಿ ಒಂದು ವಯ್ನ್ ಶಾಪ್ ಇದೆ. ಅದು ಸಂಪತ್ ಕುಮಾರ್ ಅವರ ಪತ್ನಿ ಸಂಬಂದಿಕರಿಗೆ ಸೇರಿದ್ದು. ನ್ಯಾಯಬೆಲೆ ಅಂಗಡಿ ಎಂಎಲ್‌ಎ ತಮ್ಮನ ಮಗನ ಹೆಸರಲ್ಲಿದೆ. ಸರ್‍ಕಾರಿ ಆಸ್ಪತ್ರೆಯಲ್ಲಿ ವಯ್ದ್ಯರು ಸಂಪತ್ ಕುಮಾರ್ ಅವರ ಜಾತಿಯವರು. ಮುಕ್ಯ ನರ್‍ಸ್ ಪಂಚಾಯಿತಿ ಅದ್ಯಕ್ಶರ ಪತ್ನಿ. ಮೆಡಿಕಲ್ ಶಾಪ್ ಮಾಲೀಕರು ಎಂಎಲ್‌ಎ ಕಾಸಾ ದೋಸ್ತ್. ಪಂಚಾಯತ್ ಕಾರ್‍ಯದರ್‍ಶಿ ಮಾತ್ರ ಬೇರೆ ಊರಿಂದ ಹೊಸದಾಗಿ ವರ್‍ಗವಾಗಿ ಬಂದವರು. ಆದರೆ ಎಂಎಲ್‌ಎ ಸಾಹೇಬರಿಗೆ ತುಂಬಾ ಬೇಕಾದವರ ಸಂಬಂದಿ.

3

ಗೋಳೂರು ವೇಗವಾಗಿ ಬೆಳೆಯುತ್ತಿದೆ. ಎಂಎಲ್‌ಎ ಸಂಪತ್ ಕುಮಾರ್ ಶಾಸಕರ ತಂಡದಲ್ಲಿ ಜಪಾನ್, ಚೀನಾ, ತಯ್ಲ್ಯಾಂಡ್ ಪ್ರವಾಸ ಮಾಡಿ ಬಂದಿದ್ದಾರೆ. ಅವರು ಆ ದೇಶಗಳಿಗೆ ಹೋಗಿದ್ದು, ಅಲ್ಲಿ ಏನೆಲ್ಲ ಪ್ರಗತಿಯಾಗಿದೆ ಎನ್ನುವ ವೀಡಿಯೋ ಮಾಡಿಸಿ ತಂದಿದ್ದಾರೆ. ಊರವರನ್ನೆಲ್ಲಾ ಸೇರಿಸಿ ರಾತ್ರಿ ಹತ್ತುಗಂಟೆ ತನಕ ಎರಡೆರಡು ಸಲ ವೀಡಿಯೋ ನೋಡಿಸಿದ್ದಾರೆ. ಪೇಟೆಯಲ್ಲಿ ಓದುತ್ತಿರುವ ನವೀನ್, ಶ್ರೇಯ, ಅಮರ್, ಸಪ್ನಾ ಅವರುಗಳಂತು ತ್ರಿಲ್ ಆಗಿದ್ದಾರೆ. ಗೋಳೂರಿಗೆ ನ್ಯೂಲುಕ್ ಬರಬೇಕು ಅಂತ ಓಪನ್ ಆಗಿ ತುಂಬಿದ ಸಬೆಯಲ್ಲಿ ವೀಡಿಯೋ ನೋಡಿ ಚಿಯರ್ ಮಾಡಿದ್ದಾರೆ. ಈ ವಿಶಯ ಎಂಎಲ್‌ಎ ಅವರ ಕಿವಿಗೆ ಆ ಕ್ಶಣದಲ್ಲೇ ತಲುಪಿದೆ. ನಾಣಿಗೂ ವೀಡಿಯೋ ಕುಶಿಕೊಟ್ಟಿದೆ. ಆದರೆ ನಾಣಿ ಅಮ್ಮನಿಗೆ ಮಾತ್ರ ಅಶ್ಟೊಂದು ಇಶ್ಟವಾಗಿಲ್ಲವಂತೆ. ಹಳೆತಲೆಮಾರಿನವರಿಗೆ ವಿದೇಶಿ ಮೋಜು, ಮಸ್ತಿ ಗೊತ್ತಿಲದ ಕಾರಣ ನಾಕುಶಿ ಸಹಜ. ವೀಡಿಯೋದಲ್ಲಿ ನೋಡಿದ ರಸ್ತೆಗಳು, ಮಹಲುಗಳು, ನಯ್ಟ್ ಬಾರ್, ಬ್ಯೂಟಿ ಪಾರ್‍ಲರ್ ನಾಣಿಗೂ ತ್ರಿಲ್ ಕೊಟ್ಟಿದೆ. ಮದುವೆ ಆದಮೇಲೆ ಹನಿಮೂನ್‌ಗೆ ಸಿಂಗಾಪುರ್, ತಯ್ಲ್ಯಾಂಡ್‌ಗೆ ಪ್ರೀಟ್ರಿಪ್ ಸ್ಪಾನ್ಸರ್ ಮಾಡುವುದಾಗಿ ಎಂಎಲ್‌ಎ ಸಾಹೇಬರು ಹೇಳಿದ ಮೇಲಂತೂ ನಾಣಿ ವಿದೇಶಿ ಕಂಪೆನಿಗಳು ಗೋಳೂರಿಗೆ ಬರಲಿ ಎನ್ನುತ್ತಿದ್ದಾರೆ.

ನಿಜ ಹೇಳಬೇಕೆಂದರೆ ಗೋಳೂರಿನ ಯುವಕರು ಹಿಂದೆಂದೂ ಇರದಶ್ಟು ಚುರುಕಾಗಿದ್ದಾರೆ. ಯುವಕರೆಲ್ಲಾ ಸೇರಿಕೊಂಡು ನ್ಯೂಏಜ್ ಅಸೋಸಿಯೇಶನ್ ಹೆಸರಲ್ಲಿ ಎಂಎಲ್‌ಎಯವರಿಗೆ ಮೆಮೊರಾಂಡಮ್ ಕೊಟ್ಟಿದ್ದಾರಂತೆ. ಗೋಳೂರು ಉದ್ದಾರಕ್ಕೆ ನಾವು ನಿಮ್ಮಂದಿಗಿದ್ದೇವೆ, ‘ಹಳ್ಳಿ ವನವಾಸ ಸಾಕು, ಪಟ್ಟಣ ವಾಸ ಬೇಕು’ ಎನ್ನುವ ಸ್ಲೋಗನ್ ಬರೆದು ಸಹಿಮಾಡಿದ್ದಾರಂತೆ. ಈ ಸಂಗಕ್ಕೆ ನಾಣಿಯೇ ಪ್ರೆಸಿಡೆಂಟ್. ಆದರೆ ನಾಣಿ ಅಮ್ಮ ಮಾತ್ರ ಅಪಸ್ವರ ತೆಗೆದಿದ್ದಾರೆ. ಅವರ ವಯಸ್ಸಿನವರು ಕೂಡಾ ಅದೇ ರಾಗ ಎಳೆದಿರುವುದು ಎಂಎಲ್‌ಎ ಸಂಪತ್ ಕುಮಾರ್ ಗರಂ ಆಗಲು ಕಾರಣವಾಗಿದೆಯೆಂದು ನಾಣಿಯೇ ನ್ಯೂಏಜ್ ಅಸೋಸಿಯೇಶನ್ ವರ್‍ಕಿಂಗ್ ಕಮಿಟಿ ಸಬೆಗೆ ತಿಳಿಸಿರುವುದು ಕಾತ್ರಿ. ಗೋಳೂರಲ್ಲಿ ವಿದೇಶಿ ವೀಡಿಯೋ ನೋಡಿದ ಮೇಲೆ ಯುವಕರು, ಹಿರಿಯರು ಬಣಗಳಾಗುತ್ತಿದ್ದಾರೆ. ಮನೆಯೊಳಗೆ ಅಪ್ಪಮಕ್ಕಳ ಮದ್ಯೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯುತ್ತಿರುವುದು ಗುಟ್ಟೇನಲ್ಲ. ಯುವಕರು ಹಾದಿ ತಪ್ಪುತ್ತಿದ್ದಾರೆ ಎನ್ನುವ ಆತಂಕ ಹಿರಿಯರನ್ನು ಕಾಡುತ್ತಿದ್ದರೆ, ಹೊಸಯುಗಕ್ಕೆ ಕಾಲಿಡುತ್ತಿದ್ದೇವೆ ಎನ್ನುವ ಸಂಬ್ರಮ ಯುವಕರಿಗೆ. ಈಗಂತೂ ಗೋಳೂರಲ್ಲಿ ಯುವಕರು ಪುಲ್ ಕುಶಿಯಲ್ಲಿದ್ದಾರೆ. ತೆಗಿನಕಾಯಿ ಕೀಳುವ ಕರಿಯ ವ್ರುತ್ತಿಯನ್ನೇ ಬಿಡುವುದಾಗಿ ಹೇಳಿಕೊಂಡಿದ್ದಾನೆ. ಅವನೂ ಕಯ್ಗಾರಿಕೆಯ ಹೂವಿನ ತೋಟದ ಕಾಯಂ ನವ್ಕರನಾಗುತ್ತಾನಂತೆ.

 4

ಗೋಳೂರು ಈಗ ಜಾಗತಿಕ ಬೂಪಟದಲ್ಲಿ ಸ್ತಾನ ಪಡೆಯಲಿದೆ. ಅಯ್ದು ಸಾವಿರ ಎಕರೆ ಪ್ರದೇಶದಲ್ಲಿ ಕಯ್ಗಾರಿಕೆ ತಲೆ ಎತ್ತಲಿದೆ. ಹತ್ತು ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಇದಕ್ಕಾಗಿ ಗೋಳೂರಿನ ಗದ್ದೆ, ತೋಟಗಳ ಬೂಮಿ ಸ್ವಾದೀನ ಕೆಲಸ ಮುಗಿದಿದೆ. ಒಂದು ಎಕರೆಗೆ ಬೂನೋಂದಣಿ ಕಚೇರಿಯಲ್ಲಿನ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ದರ ನಿಗದಿ ಮಾಡಿರುವುದರಿಂದ ಎಲ್ಲರಿಗೂ ಕುಶಿಯಿದೆ. ನಾಣಿ ಅಮ್ಮ, ಅವರೊಂದಿಗೆ ಇನ್ನಶ್ಟು ಮಂದಿ ತಕರಾರು ತೆಗೆದಿದ್ದಾರೆ. ಬೂಮಿ ಕಳಕೊಳ್ಳುವವರಿಗೆ ಮನೆಗಿಬ್ಬರಿಗೆ ಅದೇ ಕಯ್ಗಾರಿಕೆಯಲ್ಲಿ ಉದ್ಯೋಗ ಕೊಡುತ್ತಾರೆ. ವಿದೇಶಿ ಕಂಪೆನಿಯಾಗಿರುವುದರಿಂದ ಕಯ್ತುಂಬಾ ಸಂಬಳ ಗ್ಯಾರಂಟಿ ಎನ್ನುವ ಸಂತ್ರುಪ್ತಿ ಯುವಕರಿಗೆ. ನಿರ್‍ವಸಿತರಾದವರಿಗೆ ಕಯ್ಗಾರಿಕೆಯವರೇ ಸ್ವಂತ ಕರ್‍ಚಿನಿಂದ ಕಾಲನಿ ನಿರ್‍ಮಿಸಲಿದ್ದಾರೆ. ಕಾಲನಿಯೊಳಗೆ ವೀಡಿಯೋದಲ್ಲಿ ನೋಡಿದಂತೆ ನೂರು ಅಡಿ ರಸ್ತೆಗಳನ್ನು ನಿರ್‍ಮಿಸಲಾಗುತ್ತದೆ. ಅಲ್ಲೇ ಸ್ಟೇಟ್, ಸೆಂಟ್ರಲ್ ಸಿಲೆಬಸ್ ಶಾಲೆ ತೆರೆಯುತ್ತಾರೆ. ಆಟದ ಮಯ್ದಾನ, ಉದ್ಯಾನವನ, ಮಕ್ಕಳಿಗೆ ರಿಕ್ರಿಯೇಶನ್ ಕ್ಲಬ್ ತೆರೆಯುತ್ತಾರೆ. ಈ ಬಗ್ಗೆ ಸ್ವತ: ಎಂಎಲ್‌ಎ ಸಂಪತ್ ಕುಮಾರ್ ಆಸಕ್ತಿ ವಹಿಸಿರುವುದರಿಂದ ಯೋಜನೆ ಕಾಲಮಿತಿಯೊಳಗೆ ಕಯ್ಗೂಡಲಿದೆ ಎನ್ನುವ ವಿಶ್ವಾಸ. ಆದ್ದರಿಂದಲೇ ಹೆಚ್ಚಿನವರು ಬೂಮಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಹಳೆತಲೆಮಾರಿನವರು ಮಾತ್ರ ಎಗರಾಡುತ್ತಿದ್ದರೂ ಅವರೇನು ಹೆಚ್ಚು ವರ್‍ಶ ಬಾಳಿ ಬದುಕುವವರಲ್ಲ, ನಾಳೆಬೀಳುವ ಮರಗಳು ಎನ್ನುವ ಸಮಾದಾನದ ಮಾತನ್ನು ಎಂಎಲ್‌ಎ ಯುವಕರಿಗೆ ಹೇಳಿದ್ದಾರೆ. ಈಗಾಗಲೇ ಹಲವು ಬ್ಯಾಂಕ್‌ನವರು ಶಾಕೆ ತೆರೆಯಲು ಮುಂದೆ ಬಂದಿದ್ದಾರೆ. ಬೂಮಿ ಮಾರಿದ ಹಣವನ್ನು ಸುರಕ್ಶಿತವಾಗಿ ಟೇವಣಿ ಇಟ್ಟರೆ ಬರುವ ಬಡ್ಡಿಯಿಂದ ಜೀವನ ಸಾಗಿಸಲು ಅನುಕೂಲವೆಂದು ಬ್ಯಾಂಕಿನವರು ಅಂಕಿ ಅಂಶ ಸಹಿತ ಮಾಹಿತಿಕೊಟ್ಟುಹೋಗಿದ್ದಾರೆ. ಜನರಿಗೆ ವಿಶ್ವಾಸ ಬರುವ ಉದ್ದೇಶದಿಂದ ಎಂಎಲ್‌ಎ ತಮ್ಮ ಪತ್ನಿಯ ಹಿರಿತನದಲ್ಲಿ ಸಹಕಾರಿ ಸಂಗ ಸ್ತಾಪನೆಗೂ ಮುಂದಾಗಿದ್ದಾರೆ. ಅಲ್ಲೂ ಹಣ ಟೇವಣಿ ಇಡಬಹುದು ಮತ್ತು ಬಡ್ಡಿ ಹೆಚ್ಚು ಕೊಡುತ್ತಾರೆ.

5

ಗೋಳೂರು ಈಗ ಬಾರೀ ಕಯ್ಗಾರಿಕೆಗಳ ರಾಜದಾನಿಯಾಗಿದೆ. ಗದ್ದೆ, ತೋಟಗಳು ಒಂದು ಕಾಲದಲ್ಲಿ ಇದ್ದವು ಎನ್ನುವುದೇ ಗೊತ್ತಾಗದಶ್ಟರಮಟ್ಟಿಗೆ ಕಟ್ಟಡಗಳು ತಲೆಯೆತ್ತಿವೆ. ಬೂಮಿ ಮಾರಿಕೊಂಡವರು ಲಕ್ಶಾಂತರ ರೂಪಾಯಿಗಳನ್ನು ಬ್ಯಾಂಕ್, ಸಹಕಾರಿ ಸಂಗದಲ್ಲಿ ಟೇವಣಿ ಇಟ್ಟಿದ್ದಾರೆ. ಅವರಿಗಾಗಿಯೇ ನಿರ್‍ಮಿಸಿಕೊಟ್ಟಿರುವ ಕಾಲನಿಯ ಸುಂದರ ಮನೆಗಳಲ್ಲಿ ವಾಸವಿದ್ದಾರೆ. ಮನೆ ಕಾಂಪವ್ಂಡ್‌ನೊಳಗೆ ಕಾರು, ಬಯ್ಕ್‌ಗಳು ನಿಂತಿರುವುದು ಸರ್‍ವೇ ಸಾಮಾನ್ಯ. ಬಹುತೇಕ ಮಂದಿ ಕಾಲನಿಯ ಮನೆಯನ್ನೂ ಮಾರಿಕೊಂಡು ಪೇಟೆಗಳಿಗೆ ವಲಸೆ ಹೋಗಿದ್ದಾರೆ. ಈಗ ಗೋಳೂರಲ್ಲಿ ನಾಣಿಯ ಯಜಮಾನಿಕೆ ಇಲ್ಲ. ಸರ್‍ಕಲ್ ಇನ್ಸ್‌ಪೆಕ್ಟರ್ ದರ್‍ಜೆಯ ಪೊಲೀಸ್ ಟಾಣೆ ಇದೆ, ಅಲ್ಲೇ ಎಲ್ಲವೂ ಬಗೆಹರಿಯುತ್ತವೆ. ಮೂರು ಆದುನಿಕ ಶಯ್ಲಿಯ ಬಾರ್‍‌ಗಳಿವೆ. ಲೇಡಿಸ್ ಬಾರ್ ಕೂಡಾ ಇದೆ. ಡಿಸ್ಕೋ ನ್ರುತ್ಯವಿರುವ ಬಾರ್ ಇಪ್ಪತ್ನಾಲ್ಕು ಗಂಟೆ ಸೇವೆಯಲ್ಲಿದೆ. ಇಲ್ಲಿ ಅಯ್ಶ್ವರ್‍ಯ, ಬಿಂದು, ಶೀಲಾ, ಚಮೇಲಿ ಮುಂತಾದ ಸುರಸುಂದರಾಂಗನೆಯರು ಬಣ್ಣದ ಬೆಳಕಲ್ಲಿ ನ್ರುತ್ಯಮಾಡುತ್ತಾರೆ. ಅದನ್ನು ನೋಡುತ್ತಾ ಕುಡಿದು ಮಜಾ ಮಾಡುವ ಯುವಕರು ನೋಟುಗಳನ್ನು ನ್ರುತ್ಯಗಾರ್‍ತಿಯರತ್ತ ಎಸೆದು ಕುಶಿಪಡುತ್ತಾರೆ. ದೆಹಲಿ, ಮುಂಬಯ್ನಂತ ಮಹಾನಗರಗಳಲ್ಲಿ ಇರದಂತ ಸುಂದರಿಯರನ್ನು ಗೋಳೂರಿನ ಯುವಕರು ಕಂಡು ಪುಳಕಗೊಳ್ಳುತ್ತಿದ್ದಾರೆ.ಸಿನಿಮಾ ತಿಯೇಟರ್, ಬ್ಯೂಟಿ ಪಾರ್‍ಲರ್‍‌ಗಳು ಕೂಡಾ ಬಿಜಿಯಾಗಿವೆ. ಅಂತೂ ಸ್ವರ್‍ಗವೇ ಗೋಳೂರಿನ ದರೆಗಿಳಿದಂತಾಗುತ್ತಿದೆ ಯುವಕರಿಗೆ. ಈಗ ಎಂಎಲ್‌ಎ ಸಂಪತ್ ಕುಮಾರ್ ಕಯ್ಗಾರಿಕಾ ಮಂತ್ರಿಯಾಗಿದ್ದಾರೆ. ಗೋಳೂರಿನ ಅಬಿವ್ರುದ್ದಿಯ ಹರಿಕಾರ ಎನ್ನುವ ಬಿರುದಿನೊಂದಿಗೆ ನ್ಯೂಏಜ್ ಅಸೋಸಿಯೇಶನ್ ಬಾನುವಾರ ಅವರಿಗಾಗಿ ಬಾರೀ ಸನ್ಮಾನ ಸಬೆ ಆಯೋಜಿಸಿದೆ.

6

ಗೋಳೂರು ಚಿತ್ರಣವೇ ಬದಲಾಗಿದೆ. ಮನೆಗಿಬ್ಬರಿಗೆ ಉದ್ಯೋಗ ಕೊಡಲು ಕಂಪೆನಿ ಸಿದ್ದವಿದೆ, ಆದರೆ ಈ ಊರಿನಲ್ಲಿ ಅವರ ಶಯ್‍ಕ್ಶಣಿಕ ಅರ್‍ಹತೆಗೆ ಸೂಟ್ ಆಗುವ ಕೆಲಸಗಳಿಲ್ಲ. ಮಾನವೀಯತೆ ನೆಲೆಯಲ್ಲಿ ಕೆಲವರಿಗೆ ದಿನಗೂಲಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಅಂತವರಲ್ಲಿ ತೆಂಗಿನಕಾಯಿ ಕೀಳುವ ಕರಿಯನೂ ಒಬ್ಬ. ಕಾಲೇಜು ಪೂರ್‍ಣಗೊಳಿಸದ ನವೀನ್‌ಗೂ ಕೆಲಸ ಸಿಕ್ಕಿಲ್ಲ. ಅವನಿಗೂ ಈ ಬಗ್ಗೆ ಬೇಸರವಿಲ್ಲ. ಯಜಮಾನನಾಗಿದ್ದ ನಾಣಿ ಲೇಡಿಸ್ ಬಾರ್‍‌ನಲ್ಲಿ ಬಿಜಿ. ಡ್ಯಾನ್ಸರ್ ಚಮೇಲಿ ಜೊತೆ ಡೀಪ್ ಲವ್, ಅವನ ಮೊಬಯ್ಲ್ ನಾಟ್ ರೀಚೆಬಲ್.

(ಚಿತ್ರ: http://si.wsj.net/)

(ಚಿತ್ರ: http://www.newfarm.org/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: