ಅರಿಮೆಯ ಪಟ್ಯದಲ್ಲಿ ದ್ರೋಣಾಚಾರ‍್ಯ!

ಮಹಾಬಲೇಶ್ವರ ರಾವ್

science learning


ಇತ್ತೀಚಿನ ದಿನಗಳಲ್ಲಿ ಜನ ಯಾಕೆ ಶಾಲಾ ಹಂತದಿಂದಲೇ ಆಂಗ್ಲ ಮಾದ್ಯಮದತ್ತ ವಲಸೆ ಹೋಗುತ್ತಿದ್ದಾರೆ ಮತ್ತು ಯಾಕೆ ಡಾ|ಡಿ.ಎನ್‌.ಶಂಕರ ಬಟ್ಟರು ದಲಿತ ಹಾಗೂ ಹಿಂದುಳಿದ ವರ್‍ಗಗಳ ಹಿತಾಸಕ್ತಿಯ ದ್ರುಶ್ಟಿಯಿಂದ ಕನ್ನಡವನ್ನು ಸರಳಗೊಳಿಸಿ, ಕನ್ನಡವನ್ನು ಸಂಸ್ಕ್ರುತದ ತೆಕ್ಕೆಯಿಂದ ಬಿಡಿಸಿ ಎಂದು ಪದೇ ಪದೇ ಪ್ರತಿಪಾದನೆ ಮಾಡುತ್ತಿದ್ದಾರೆ ಎಂಬುದು 2013-14ನೇ ಸಾಲಿನಿಂದ ಜಾರಿಗೆ ಬಂದಿರುವ ಒಂಬತ್ತನೆಯ ತರಗತಿಯ ವಿಗ್ನಾನ ಪಟ್ಯಪುಸ್ತಕವನ್ನು ಕಂಡಾಗ ಮನವರಿಕೆಯಾಯಿತು.

ಹಿಂದೆಲ್ಲ ವಿಗ್ನಾನದ ಕಲಿಕೆ ಈಗಿನಶ್ಟು ಕಟಿಣವಾಗಿರಲಿಲ್ಲ. ಈಗ ಪಟ್ಯಕ್ರಮದ ಸುದಾರಣೆಯ ಹೆಸರಿನಲ್ಲಿ ಮುಂದೆ ವಯ್‍ದ್ಯಕೀಯ, ತಂತ್ರಗ್ನಾನ, ಪ್ರಗತಿ ಹಂತದಲ್ಲಿ ವಿಗ್ನಾನ ಅದ್ಯಯನ ಮಾಡುವವರ ಸಲುವಾಗಿ ಶಾಲಾ ವಿಗ್ನಾನ ಪಟ್ಯಕ್ರಮವನ್ನು ಹೆಚ್ಚು ಬಿಗಿಗೊಳಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ, ಪದವಿಪೂರ್‍ವ ಹಂತದ ಬಳಿಕ ಅನೇಕ ವಿದ್ಯಾರ್‍ತಿಗಳು ವಿವಿದ ವ್ರುತ್ತಿಗಳನ್ನೋ ಉದ್ಯೋಗಗಳನ್ನೋ ಆಶ್ರಯಿಸುವವರು ಅತವಾ ಕಲಾ – ವಾಣಿಜ್ಯ ವಿಶಯಗಳನ್ನು ವ್ಯಾಸಂಗ ಮಾಡುವವರು ಎಂಬುದನ್ನು ನಾವು ಮರೆಯುತ್ತಿದ್ದೇವೆ. ಎಸ್ಸೆಸ್ಸೆಲ್ಸಿ ಪರೀಕ್ಶೆಯಲ್ಲಿ ಗಣಿತ, ವಿಗ್ನಾನ ಮತ್ತು ಇಂಗ್ಲಿಶ್‌ ವಿಶಯ ಗಳಲ್ಲಿ ಅನುತ್ತೀರ್‍ಣತೆಯ ಪ್ರಮಾಣವೂ ಹೆಚ್ಚು ಎಂಬುದನ್ನು ನಾವು ಗಮನಿಸುತ್ತಿಲ್ಲ. ಕೆಲವೇ ಕೆಲವರ ಹಿತಾಸಕ್ತಿಗಾಗಿ ಹಲವ ರನ್ನು ಬಲಿಗೊಟ್ಟು ವಿಗ್ನಾನ ಪಟ್ಯಕ್ರಮವನ್ನು ಪರಿಕಲ್ಪನೆಗಳು, ಪರಿಬಾ ಶೆಗಳು, ನಿಯಮಗಳು, ಸೂತ್ರಗಳು ಮೊದಲಾದ ಅಮೂರ್‍ತ ಸಂಗತಿಗಳನ್ನು ತುರುಕಿ ಬಿಗಿಗೊಳಿಸುವುದು ಸರಿಯಲ್ಲ.

ಜನಪರ, ಜೀವಪರ ಪಾಟಗಳು ಬೇಕು
ನಾವು ಕಲಿಸುವ ವಿಗ್ನಾನ ವಿದ್ಯಾರ್‍ತಿಗಳಲ್ಲಿ ತಾರ್‍ಕಿಕ ಚಿಂತನ ಕ್ರಮವನ್ನು, ವಯ್‍ಗ್ನಾನಿಕ ಮನೋಬಾವವನ್ನು ಬೆಳೆಸುವಂತಿರಬೇಕು. ಶಾಲೆಗಳಲ್ಲಿ ಕಲಿಸುವ ವಿಗ್ನಾನ ಜನಪರವೂ ಜೀವಪರವೂ ಆಗಿದ್ದು, ಆದುನಿಕ ಜೀವನ ಕ್ರಮಗಳನ್ನು ಎಚ್ಚರದಿಂದ ಸ್ವಾಗತಿಸುವ ಅರಿವನ್ನು ಎಳೆಯರಲ್ಲಿ ಮೂಡಿಸುವಂತಿರಬೇಕು. ಆದರೆ ಒಂಬತ್ತನೆಯ ತರಗತಿಯ ಹೊಸ ವಿಗ್ನಾನ ಪಟ್ಯಪುಸ್ತಕದ ಗಾತ್ರ ಹಾಗೂ ಹೂರಣ ನಿಜಕ್ಕೂ ಗಾಬರಿಗೊಳಿಸುವಂತಿದೆ. ಕನ್ನಡ ಮಾದ್ಯಮದಲ್ಲಿ ಓದುವ ವಿದ್ಯಾರ್‍ತಿಗಳು ವಿಗ್ನಾನದ ಅದ್ಯಯನದಿಂದ ವಿಮುಕರಾಗಲು ಅದು ಪ್ರೇರಣೆ ನೀಡುವಂತಿದೆ.

ಒಂಬತ್ತನೆಯ ತರಗತಿಯ ವಿಗ್ನಾನದ ಹೊಸ ಪಟ್ಯಪುಸ್ತಕದ ವಿಶಯ ವಿನ್ಯಾಸ, ಸಂಯೋಜನೆ, ದ್ರುಶ್ಟಿಕೋನ, ನೀಡಿರುವ ಚಟುವಟಿಕೆಗಳು, ಆಲೋಚಿಸಲು ಕಲ್ಪಿಸಿರುವ ಅವಕಾಶಗಳು, ಪೂರಕ ಮಾಹಿತಿಗಳು, ವಿಗ್ನಾನಿಗಳ ಬಗೆಗಿನ ಸ್ತೂಲ ಪರಿಚಯ, ಚಿತ್ರಗಳು – ಇತ್ಯಾದಿಗಳ ದ್ರುಶ್ಟಿಯಿಂದ ಇದುವರೆಗೆ ಬಂದಿರುವ ಪಟ್ಯ ಪುಸ್ತಕಗಳಿಗಿಂತ ಬಿನ್ನವಾಗಿದೆ. ಆದರೆ ಮಾಹಿತಿಯ ಹೊರೆ, ಪರಿಕಲ್ಪನೆಗಳ ಬಾರ, ಅರ್‍ತ ಮಾಡಿಕೊಳ್ಳಲು ಕಶ್ಟ ಪಡಬೇಕಾದ ಸಂಸ್ಕ್ರುತಬೂಯಿಶ್ಟ ಪಾರಿಬಾಶಿಕಗಳ ಬಳಕೆ, ಗತದ ವಯ್ಬವೀಕರಣದ ಪ್ರಯತ್ನ ಜಾಣ ಕುರುಡುತನದ ದೆಸೆಯಿಂದಾಗಿ ಸಾಕಶ್ಟು ಕಿರಿಕಿರಿ ಉಂಟು ಮಾಡುತ್ತದೆ.

ಈ ಪಟ್ಯಪುಸ್ತಕದಲ್ಲಿ ಬಳಸಲಾಗಿರುವ ಕೆಲವು ಪಾರಿಬಾಶಿಕ ಪದಗಳನ್ನು ಗಮನಿಸಿ. ಇವು ವಿದ್ಯಾರ್‍ತಿಗಳಿಗೆ ಹಾಗೂ ಪಾಟ ಹೇಳುವ ಶಿಕ್ಶಕರಿಗೆ ಅರ್‍ತವಾಗಬಹುದೇ? ಈ ಬಗೆಯ ಪಾರಿಬಾಶಿಕ ಪದಗಳನ್ನು ಬಳಸದೆ ಪರಿಕಲ್ಪನೆಗಳನ್ನು ವಿವರಿಸಿದರೆ ಆಗದೆ? ಕನ್ನಡದ ಪದಗಳನ್ನು ಬಳಸಬಹುದೇ? ಇನ್ನಶ್ಟು ಸರಳಗೊಳಿಸಬಹುದೆ? ವಿಗ್ನಾನದ ಶಿಕ್ಶಕರು, ಪ್ರಾದ್ಯಾಪಕರು ಇಂಗ್ಲಿಶಿನಿಂದ ಕನ್ನಡಕ್ಕೆ ಬಾಶಾಂತರ ಮಾಡುವ ಬದಲಿಗೆ ಕನ್ನಡದ ಕೆಲವು ಮುಕ್ಯ ವಿಗ್ನಾನ ಲೇಕಕರ ಮೂಲಕ ಪಾಟಗಳನ್ನು ಬರೆಯಿಸಬಹುದಿತ್ತೇ? ಈ ಲೇಕಕರ ಆಯ್ಕೆ, ಪರಿಶೀಲನೆಗೆ ಒಳಪಡಿಸಬಹುದಿತ್ತೆ? ಮೊದಲಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಪುಸ್ತಕದಲ್ಲಿ ಬಳಸಿದ ಪಾರಿಬಾಶಿಕ ಶಬ್ದಗಳಲ್ಲಿ ಹುದುಗಿರುವ ಪರಿಕಲ್ಪನೆಯನ್ನು ಮಕ್ಕಳು ಗ್ರಹಿಸಬೇಕೇ? ಅತವಾ ಶಬ್ದಗಳನ್ನು ಉರುಹೊಡೆಯಬೇಕೇ? ದಿ|ಡಿವಿಜಿಯವರು ಇಂಗ್ಲಿಶಿನ ಕಲಿಕೆಯ ಸಂದರ್‍ಬದಲ್ಲಿ ಕೊಬ್ಬರಿಯನ್ನು ತಿನ್ನುವ ಬದಲಿಗೆ ಅದರ ಮೇಲಿನ ಕರಟ ಒಡೆಯುವುದರಲ್ಲಿ ನಮ್ಮ ಮಕ್ಕಳ ಶ್ರಮ ವ್ಯರ್‍ತವಾಗುತ್ತಿದೆ ಎಂದು ಟೀಕಿಸಿದ್ದುಂಟು. ದುರಂತದ ಸಂಗತಿ ಎಂದರೆ ಈಗ ಆ ಮಾತು ಕನ್ನಡದ ಸಂದರ್‍ಬಕ್ಕೇ ಹೆಚ್ಚು ಹೊಂದಿಕೆಯಾಗುವಂತಿದೆ.

ಪಾಟ ರಾಜಕೀಯ
ರಾಶ್ಟ್ರೀಯ ಪಟ್ಯಕ್ರಮ ಚವ್ಕಟ್ಟು 2005ರ ಹಿನ್ನೆಲೆಯಲ್ಲಿ ಕರ್‍ನಾಟ ಕದಲ್ಲಿ ಪಟ್ಯಪುಸ್ತಕಗಳ ರಚನೆಯ ಸಂದರ್‍ಬದಲ್ಲಿ ‘ಕೇಸರೀಕರಣ’ ನಡೆದಿದೆ ಎಂಬ ವಾದ ಆದಾರ ರಹಿತವಲ್ಲ ಎಂಬುದು ಈ ವಿಗ್ನಾನ ಪಟ್ಯಪುಸ್ತಕದ ಪರಿಶೀಲನೆಯಿಂದ ಸಾಬೀತಾಗುತ್ತದೆ. ಗತವನ್ನು ವಯ್ಬವೀಕರಿಸುವುದು ಕೇಸರೀಕರಣದ ಒಂದು ಬಾಗವೇ ಆಗಿದೆ. ವಿವಿದ ಅದ್ಯಾಯಗಳಲ್ಲಿ ಕಿರು ಅಂಕಣಗಳ ರೂಪದಲ್ಲಿ ಯಾವುದೇ ಹಿನ್ನೆಲೆ ಒದಗಿಸದೇನೇ ತಮಗೆ ಅನುಕೂಲ ಕಂಡ ಪ್ರಾಚೀನ ಗ್ರಂತಗಳಿಂದ ಕೆಲವೊಂದು ಸಾಲುಗಳನ್ನು, ಶ್ಲೋಕಗಳನ್ನು ಅನಾಮತ್ತಾಗಿ ಎತ್ತಿಕೊಂಡು ‘ನಮ್ಮ ಪ್ರಾಚೀನರು, ನಮ್ಮ ಹಿರಿಯರು ಹೀಗೆ ಹೇಳಿದ್ದಾರೆ’ ಎಂದು ನಿರೂಪಿಸುವ ಪ್ರಯತ್ನಗಳನ್ನು ಮಾಡ ಲಾಗಿದೆ. ಬಾರತದಲ್ಲಿ ವಿಗ್ನಾನದ ಒಂದು ಪರಂಪರೆ ಇತ್ತು ಎಂಬುದು ಬೇರೆ, ಇಂದಿನ ವಿಗ್ನಾನದ ಸಕಲವೂ ಬಾರತೀಯರಿಗೆ ಬಹಳ ಹಿಂದೆಯೇ ಗೊತ್ತಿತ್ತು ಎಂಬ ದಾಟಿಯಲ್ಲಿ ಬರೆಯುವುದು ಬೇರೆ.

ಪುಸ್ತಕದಲ್ಲಿ ಕೊಟ್ಟಿರುವ ಅನೇಕ ಅಂಕಣಗಳು ಎರಡನೆಯ ನಿಲುವನ್ನು ಎತ್ತಿ ಹಿಡಿಯುತ್ತವೆ! ನಮ್ಮ ರಾಜ್ಯದ ಹಿಂದಿನ ಪ್ರಬುಗಳಿಗೆ ವಿವೇಕಾನಂದರು ಪರಮಪೂಜ್ಯ ವ್ಯಕ್ತಿ. ಹೀಗಾಗಿ ವಿಗ್ನಾನದ ಪುಸ್ತಕದಲ್ಲಿ ಅದ್ಯಾಯದ ಕೊನೆಯಲ್ಲಿ ಸ್ತಳಾವಕಾಶ ಇರುವಲ್ಲಿ ವಿವೇಕಾನಂದರ ಸೂಕ್ತಿಗಳನ್ನು ದಾರಾಳ ಉಲ್ಲೇಕೀಸಲಾಗಿದೆ. ಇದಕ್ಕೆ ಬದಲಾಗಿ ಜಗತಸಿದ್ದ ವಿಗ್ನಾನಿಗಳು ನಿರ್‍ದಿಶ್ಟ ವಿಶಯಕ್ಕೆ ಸಂಬಂದಪಟ್ಟಂತೆ ಹೇಳಿರುವ ಮಾತುಗಳನ್ನು ಉಲ್ಲೇಕೀಸಿದ್ದರೆ ಹೆಚ್ಚು ಅವ್ಚಿತ್ಯಪೂರ್‍ಣವೆನಿಸುತ್ತಿತ್ತು.

‘ಸೂಕ್ಶ್ಮಾಣು ಜೀವಿಗಳ ಪಾತ್ರ’ ಎಂಬ ಅದ್ಯಾಯದಲ್ಲಿ ಕೊಟ್ಟಿರುವ ಒಂದು ಅಂಕಣದಲ್ಲಿ ಗೋಮೂತ್ರ, ಗೋಮಯದಿಂದ ಗೊಬ್ಬರದ ಪವ್ಶ್ಟಿಕ ಮವ್ಲ್ಯ ಹೆಚ್ಚಾಗುತ್ತದೆ ಎನ್ನಲಾಗಿದೆ. ಆದರೆ ಆ ಅಂಕಣ ಪ್ರಾರಂಬವಾಗುವುದೇ ‘ಬಾರತದಲ್ಲಿ ಗೋವನ್ನು ಪವಿತ್ರ ಎಂದು ಪರಿಗಣಿಸಲಾಗಿದೆ’ ಎಂಬ ವಾಕ್ಯದಿಂದ. ಗೋವನ್ನು ಪವಿತ್ರವೆಂದು ಕೆಲವರು ಬಾವಿಸಿರುವಂತೆಯೇ ಗೋಮಾಂಸ ಬಕ್ಶಣೆ ಇಂದಿಗೂ ಪ್ರಚಲಿತವಿದೆಯಲ್ಲವೆ? ವಾಕ್ಯದ ಅಗತ್ಯವಾದರೂ ಏನು? ಅನಗತ್ಯ ಬಾವಪ್ರಚೋದನೆ ಏಕೆ? ‘ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ’ ಎಂಬ ಅದ್ಯಾಯನದಲ್ಲಿ ‘ಪ್ರನಾಳ ಶಿಶು’ವಿನ ವಿವರಣೆ ನೀಡುತ್ತಾ ‘ಪ್ರಾಚೀನ ಬಾರತದಲ್ಲಿ ಪ್ರನಾಳ ಶಿಶುಗಳು’ ಎಂಬ ಅಂಕಣದಲ್ಲಿ ಬಾರತದಲ್ಲಿ 7,500 ವರ್‍ಶಗಳ ಹಿಂದೆಯೇ ಪ್ರನಾಳ ಶಿಶುಗಳನ್ನು ಸ್ರುಶ್ಟಿಸಲಾಗಿತ್ತು ಎಂಬ ಮಾಹಿತಿ ನೀಡಲಾಗಿದೆಯಲ್ಲದೆ ದ್ರೋಣನ ಜನ್ಮವ್ರುತ್ತಾಂತವನ್ನು ಉಲ್ಲೇಕೀಸಿ ಬಾರದ್ವಾಜರು ಸ್ಕಲನಗೊಂಡ ತಮ್ಮ ವೀರ್‍ಯವನ್ನು ಮಣ್ಣಿನ ಮಡಕೆಯಲ್ಲಿ ಹಿಡಿದಿಟ್ಟರು, ಇದರಿಂದ ದ್ರೋಣನು ಜನಿಸಿದ ಎಂದು ನಿರೂಪಿಸಲಾಗಿದೆ!

ಪ್ರಯೋಗಶಾಲೆಯಲ್ಲಿ ಇನ್‌ವಿಟ್ರೋ ಪ‌ರ್‍ಟಿಲಯ್ಸೇಶನ್‌ ಮುಕಾಂತರ ಅಂಡಾಣು- ವೀರ್‍ಯಾಣು ನಿಶೇಚನದ ಬಳಿಕ ಯುಗವನ್ನು ಸ್ತ್ರೀಯ ಗರ್‍ಬಕೋಶಕ್ಕೆ ಸೇರಿಸಲಾಗುತ್ತದೆ ಎಂದು ಕಚಿತವಾಗಿ ಪಾಟದಲ್ಲಿ ತಿಳಿಸಿದ ಮೇಲೆ ಅದೇ ಉಸಿರಿನಲ್ಲಿ ದ್ರೋಣಾಚಾರ್‍ಯರು ಪ್ರನಾಳ ಶಿಶು ಎಂದು ಹೇಳಹೊರಟಿರುವುದು ಎಂತ ಮವ್ಡ್ಯ?

ಒಂಬತ್ತನೆಯ ತರಗತಿಯ ಈ ವಿಗ್ನಾನ ಪಟ್ಯಪುಸ್ತಕವು ‘ಪಕ್ಶ ರಾಜಕಾರಣ’ದಿಂದ ಮುಕ್ತವಾಗಿಲ್ಲ ಎಂದು ವ್ಯತೆಯಿಂದಲೇ ಹೇಳಬೇಕಾಗಿದೆ. ‘ಬಾರತದಲ್ಲಿ 1978ರಲ್ಲಿ ಮೊತ್ತಮೊದಲ ಪ್ರನಾಳ ಶಿಶುವನ್ನು ಸ್ರುಶ್ಟಿಸಿದವರು ಕೋಲ್ಕತ್ತಾದ ಡಾ|ಸುಬಾಶ್‌ ಮುಕ್ಯೋಪಾದ್ಯಾಯರು. ಆದರೆ ಪಶ್ಚಿಮ ಬಂಗಾಳ ಸರ್‍ಕಾರವು ಅವರ ಸಾದನೆಯನ್ನು ಸುಳ್ಳೆಂದು ತಿರಸ್ಕರಿಸಿತು. ಅವರ ಕೆಲಸವನ್ನು ಗುರುತಿಸಲಿಲ್ಲ ಮತ್ತು ಅವರನ್ನು ಅವಮಾನಿಸಲಾಯಿತು. ಜಪಾನಿನಲ್ಲಿ ನಡೆದ ಸಮ್ಮೇಳನದಲ್ಲಿ ತಮ್ಮ ಸಂಶೋದನೆಗಳನ್ನು ಮಂಡಿಸಲು ಬಾರತ ಸರ್‍ಕಾರವು ಅವರಿಗೆ ಪಾಸ್‌ಪೋರ್‍ಟ್‌ ನೀಡದೆ ಸಮ್ಮೇಳನದಲ್ಲಿ ಬಾಗವಹಿಸದಂತೆ ತಡೆಯಿತು. ತೀವ್ರ ನಿರಾಶೆ ಮತ್ತು ಅವಮಾನದಿಂದ ಅವರು ಆತ್ಮಹತ್ಯೆ ಮಾಡಿಕೊಂಡರು’ ಎಂದು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಪಟ್ಯ ಪುಸ್ತಕದ ಮೂಲಕ ಬಂಗಾಳದ ಎಡಪಂತೀಯ ಪಕ್ಶವನ್ನು ಮತ್ತು ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಪಕ್ಶದ ಸರ್‍ಕಾರವನ್ನು ಕರ್‍ನಾಟಕದ ಬಿಜೆಪಿ ಸರ್‍ಕಾರ ಟೀಕಿಸುವುದು ಯೋಗ್ಯವೇ?

ಕನ್ನಡದಲ್ಲೇ ಬರೆಸಬಾರದೇಕೆ?
ಈ ನಾಡಿನ ಪ್ರವ್ಡಶಾಲಾ ವಿಗ್ನಾನ ಶಿಕ್ಶಕರು ವಿಗ್ನಾನ ಪಟ್ಯಕ್ರಮ ಹಾಗೂ ಕನ್ನಡದಲ್ಲಿ ಪ್ರಕಟವಾಗಿರುವ ವಿಗ್ನಾನ ಪಟ್ಯಪುಸ್ತಕಗಳ ವಸ್ತು, ಬಾಶೆ, ನಿರೂಪಣೆ ಇತ್ಯಾದಿಗಳ ಬಗ್ಗೆ ವಿಚಾರ ವಿಮರ್‍ಶೆ ನಡೆಸಿ ತಮ್ಮ ಅಬಿಪ್ರಾಯಗಳನ್ನು ಸರ್‍ಕಾರಕ್ಕೆ ಶೀಗ್ರವೇ ರವಾನಿಸಲು ಮನಸ್ಸು ಮಾಡಬೇಕು. ಕರ್‍ನಾಟಕ ಪಟ್ಯ ಪುಸ್ತಕ ಸಂಗ ವಿಗ್ನಾನ, ಗಣಿತ, ಸಮಾಜ ವಿಗ್ನಾನ ಮೊದಲಾದ ಪಟ್ಯಪುಸ್ತಕಗಳನ್ನು ಇಂಗ್ಲಿಶ್‌ನಿಂದ ಕನ್ನಡಕ್ಕೆ ಬಾಶಾಂತರಿಸದೆ ಕನ್ನಡವನ್ನೇ ಬರೆಯಿಸುವ ವ್ಯವಸ್ತೆಯನ್ನು ಕೂಡಲೇ ಜಾರಿಗೆ ತರಬೇಕು. ಈಗ ಪ್ರಕಟವಾಗಿರುವ ಕನ್ನಡದಲ್ಲಿರುವ ವಿಗ್ನಾನ ಪಟ್ಯಪುಸ್ತಕಗಳನ್ನು ಕರ್‍ನಾಟಕ ಸರ್‍ಕಾರ ನಾಡಿನ ಗಣ್ಯ ವಿಗ್ನಾನ ಲೇಕಕರಾದ ನಾಗೇಶ್‌ ಹೆಗಡೆ, ಟಿ.ಆರ್‍‌.ಅನಂತರಾಮು, ಡಾ| ಎಚ್‌.ಆರ್‍‌.ಕ್ರುಶ್ಣಮೂರ್‍ತಿ ಮೊದಲಾದವರ ಪರಿಶೀಲನೆಗೆ ಒಪ್ಪಿಸಿ ಅವರ ಪರಿಣತ ಮಾರ್‍ಗದರ್‍ಶನದಂತೆ ಮರುಪ್ರಕಟಿಸಬೇಕು.

(ಚಿತ್ರ: ಓಹಿಯೋ ಸಯ್)

(ಈ ಬರಹವು ಮೊದಲಿಗೆ ಉದಯವಾಣಿಯಲ್ಲಿ ಮೂಡಿತ್ತು; ಬರಹಗಾರರ ಒಪ್ಪಿಗೆಯ ಮೇರೆಗೆ ಅದರ ಎಲ್ಲರಕನ್ನಡದ ಒಬ್ಬೆಯನ್ನು ಇಲ್ಲಿ ’ಹೊನಲು’ ಓದುಗರಿಗಾಗಿ ಹಾಕಲಾಗಿದೆ.)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Tumba Chennagide. Entaha sookshma avalokana :O

  2. Many of us are ranting on media, social media & blogs for less Kannadigas in jobs within state. Why have we ended up in this situation? Hardly any sizable Karnataka students are able to compete & qualify in national exams like NIT, IIT, AIPMT, etc though many of them are competent. Hence it was absolutely necessary in the interest of Karnataka students to align with rest of the country. Though late, at last very good, high quality & well designed text books have been brought out by Karnataka govt. New state text books are miles ahead of CBSE(NCERT) books not just in quality but also in content which does not exist in CBSE(like Finance & Banking, accounting, etc). Science & Maths can’t be made too simple just for sake of those students opting for commerce & arts after SSLC, as opportunity cannot be denied for those who wish to opt for Science, Medical & Engineering as career in future. New text books have been trusted over 170 teachers(refer website) with translating responsibility has been given to Hampi Kannada university. Science & Maths cannot be written by Kannada authors but by teachers with experience in the subjects.

    It is not high syllabus but language policy of state is responsible high failure or low scoring in Science & Maths. Many states boards, CBSE & ICSE either do not have third language or exist only from 5th to 8th standard. Hence students have adequate time to study science & maths. Even first language content of Karnataka is high(125 marks unlike 100 in all states). Just students in Karnataka state are wasting time in learning languages. Karnatka must first remove this anomaly.

    Finally, if our ancestors have used Sanskrit language to document inventions & discoveries in science & maths does not mean they are religious texts. Anything from Sanskrit is looked by many as imposing religion(Kesarikarana) in studies though it is Science & Maths!! If Bible is written in English, does not mean it is religious propaganda of Christens if anyone uses English language to document science & maths. Such ancient Indian inventions will also set mindsets of our children that they can innovate that can make global impact & sets a challenging future. Additionally, many of us wished to informed about inventions & discoveries of our ancestors & should not be denied to those who wished too.

ಅನಿಸಿಕೆ ಬರೆಯಿರಿ: