ಕರೆಂಟ್ ಹುಟ್ಟುವ ಬಗೆ

– ಪ್ರಶಾಂತ ಸೊರಟೂರ.

ಕಳೆದ ಬರಹದಲ್ಲಿ ಕರೆಂಟ್ ಎಂದರೆ ಮುಕ್ಯವಾಗಿ ವಸ್ತುಗಳಲ್ಲಿರುವ ಕಳೆವಣಿಗಳ (electrons) ಹರಿವು ಮತ್ತು ಮಿನ್ಸೆಳೆತನ (electromagnetism) ಎಂದು ಕರೆಯಲಾಗುವ ಮಿಂಚು-ಸೆಳೆಗಲ್ಲುಗಳ (magnets) ನಂಟಿನ ಕುರಿತು ತಿಳಿದುಕೊಂಡೆವು. ಮಿನ್ಸೆಳೆತನವನ್ನು ಬಳಸಿಕೊಂಡು ಕರೆಂಟ್ ಉಂಟುಮಾಡುವ ಬಗೆಯನ್ನು ಈಗ ನೋಡೋಣ.

ಕರೆಂಟ್ ಉಂಟುಮಾಡಲು ಅಂದರೆ ವಸ್ತುಗಳಲ್ಲಿರುವ ಕಳೆವಣಿಗಳನ್ನು (electrons) ಹರಿಸಲು ಬೇಕಾದ ಕಸುವು ಪಡೆಯಲು ಮುಕ್ಯವಾಗಿ ಈ ಕೆಳಗಿನವುಗಳು ಬೇಕಾಗುತ್ತವೆ,

1)      ಸೆಳೆಗಲ್ಲ ಬಯಲು (magnetic field)

2)      ತಾಮ್ರದಂತಹ ಬಿಡುವೆ (conductor)

3)      ಬಿಡುವೆಯನ್ನು ತಿರುಗಿಸುವ ಕಸುವು

4)      ಉಂಟಾದ ಕರೆಂಟನ್ನು ಸಾಗಿಸುವ ಮಿನ್ಸುತ್ತು (electric circuit)

minchuttuka_electric generator

(ಮಿಂಚುಟ್ಟುಕದ ಬಾಗಗಳನ್ನು ತೋರಿಸುತ್ತಿರುವ ಚಿತ್ರ)

ಎರಡು ಸೆಳೆಗಲ್ಲುಗಳ (magnets) ಎದುರು ತುದಿಗಳನ್ನು ಅಂದರೆ ಬಡಗಣ (north) ಮತ್ತು ತೆಂಕಣ (south) ತುದಿಗಳನ್ನು ಒಂದರ ಮುಂದೊಂದು ತಂದಾಗ ಅವೆರಡಗಳ ನಡುವೆ ಸೆಳೆತ ಉಂಟಾಗುತ್ತದೆ. ಹೀಗೆ ಉಂಟಾದ ’ಸೆಳೆತದ’ ಬಯಲಿನಲ್ಲಿ ತಾಮ್ರದ ತಂತಿಯ ಕಟ್ಟನ್ನು ಹೊತ್ತ ತಿರುಗುಣಿಯನ್ನು (rotor/turbine) ತಿರುಗಿಸಿದರೆ, ತಾಮ್ರದ ತಂತಿಯಲ್ಲಿ ಕಳೆವಣಿಗಳು (electrons) ಅಂದರೆ ಕರೆಂಟ್ ಹರಿಯತೊಡಗುತ್ತದೆ.

ಈ ಬಗೆಯಲ್ಲಿ ತಿರುಗುವ ಕಸುವಿನಿಂದ ಮಿಂಚಿನ (ಕರೆಂಟ್) ಕಸುವು ಉಂಟುಮಾಡುವ ಸಲಕರಣೆಯನ್ನು ’ಮಿಂಚುಟ್ಟುಕ’ (electric generator) ಅಂತಾ ಕರೆಯುತ್ತಾರೆ.ಇಲ್ಲಿ ಗಮನಿಸಬೇಕಾದ ಮುಕ್ಯ ಸಂಗತಿ ಎಂದರೆ,

ತಾಮ್ರದಂತಹ ಬಿಡುವೆ (conductor) ಅಳವಡಿಸಿದ ತಿರುಗುಣಿಯನ್ನು ತಿರುಗಿಸಲು ‘ಕಸುವು’ ದೊರೆತರೆ ಕರೆಂಟನ್ನು ಸುಲಬವಾಗಿ ಉಂಟುಮಾಡಬಹುದು.

ಈ ತಿರುಗಿಸುವ ಕಸುವನ್ನು ಹಲವಾರು ಬಗೆಗಳಲ್ಲಿ ಪಡೆಯಬಹುದು. ಅವುಗಳಲ್ಲಿ ಮುಕ್ಯ ಬಗೆಗಳು ಹೀಗಿವೆ,

  • ನೀರಿನ ಬಳಕೆ: ಮೇಲಿನಿಂದ ದುಮ್ಮಿಕ್ಕುವ ನೀರನ್ನು ಕೆಳಗಿರುವ ತಿರುಗಣಿಯ ಮೇಲೆ ಹಾಯಿಸಿ ಅದು ತಿರುಗುವಂತೆ ಮಾಡಲಾಗುತ್ತದೆ. ಹೀಗೆ ನೀರಿನ ಬೀಳುವಿಕೆಯಿಂದ ಮಿಂಚು (ಕರೆಂಟ್) ಪಡೆಯುವ ತಾಣಕ್ಕೆ ’ನೀರ‍್ಮಿಂಚು ನೆಲೆಗಳು’ (hydro-electric power station) ಅನ್ನುತ್ತಾರೆ. ಜೋಗ, ಶಿವನಸಮುದ್ರ ಮುಂತಾದ ಕಡೆ ಈ ಬಗೆಯಲ್ಲಿ ಕರೆಂಟ್ ಉಂಟುಮಾಡಲಾಗುತ್ತದೆ.
  • ಕಾವು ಬಳಸಿ ಕರೆಂಟ್: ಈ ಬಗೆಯಲ್ಲಿ ಕಲ್ಲಿದ್ದಲಿನಂತಹ ಉರುವಲನ್ನು ಬಳಸಿ ನೀರನ್ನು ಕಾಯಿಸಲಾಗುತ್ತದೆ. ಕಾದ ನೀರು ಆವಿಯ ರೂಪ ಪಡೆದಾಗ ಅದನ್ನು ತಿರುಗುಣಿಯನ್ನು ತಿರುಗಿಸಲು ಬಳಸಲಾಗುತ್ತದೆ. ಹೀಗೆ ಕರೆಂಟ್ ಉಂಟುಮಾಡುವ ತಾಣಗಳಿಗೆ ’ಕಾವ್ಮಿಂಚು ನೆಲೆಗಳು’ (thermal power station) ಅನ್ನುತ್ತಾರೆ. ರಾಯಚೂರಿನಲ್ಲಿರುವ ಮಿಂಚಿನ-ನೆಲೆಯಲ್ಲಿ ಹೀಗೆಯೇ ಕರೆಂಟ್ ಉಂಟುಮಾಡಲಾಗುತ್ತದೆ.
  • ಅಣುಗಳ ಒಡೆತ:  ಇದೂ ಕಾವಿನಿಂದ ಕರೆಂಟ್ ಪಡೆಯುವ ಬಗೆಗಳಲ್ಲಿ ಒಂದು ಆದರೆ ಇಲ್ಲಿ ಕಲ್ಲಿದ್ದಲಿನ ಬದಲಾಗಿ ಅಣುಗಳ ಒಡೆತದಿಂದ ಉಂಟಾಗುವ ಕಾವನ್ನು ನೀರು ಕಾಯಿಸಲು ಬಳಸಲಾಗುತ್ತದೆ. ಯುರೇನಿಯಮನಂತಹ ಅಣುಗಳ ನಡುವಣಕ್ಕೆ (nucleus) ನೆಲೆವಣಿಗಳನ್ನು (neutrons) ಗುದ್ದಿಸಿ, ನಡುವಣ ಒಡೆಯುವಂತಾದರೆ ಅದರಿಂದ ತುಂಬಾ ಕಸುವು ಬಿಡುಗಡೆಯಾಗುತ್ತದೆ. ಈ ಕಸುವು ಬಳಸಿ ನೀರಾವಿಯನ್ನು ಉಂಟಮಾಡಿ, ಎಂದಿನ ಬಗೆಯಂತೆ ತಿರುಗುಣಿಯನ್ನು ತಿರುಗಿಸಿ ಕರೆಂಟ್ ಪಡೆಯಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ’ಕಯ್ಗಾ’ದಲ್ಲಿ ಇಂತ ’ನಡುವಣ-ಮಿಂಚಿನ’ (nuclear power) ನೆಲೆಯಿದೆ.
  • ಗಾಳಿಯ ಬಳಕೆ: ಬೆಟ್ಟ-ಗುಡ್ಡಗಳ ಮೇಲೆ ಬೀಸುವ ಗಾಳಿಯನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಗದುಗಿನ ಕಪ್ಪತ್ತಗುಡ್ಡ, ಚಿತ್ರದುರ‍್ಗದ ಬೆಟ್ಟಗಳಲ್ಲಿ ಇಂತಹ ಗಾಳಿ ಮಿಂಚಿನ ನೆಲೆಗಳನ್ನು ಕಾಣಬಹುದು.
  • ಕಡಲ ಅಲೆಗಳ ಬಳಕೆ: ಕಡಲ ದಂಡೆಯಲ್ಲಿ ಹೊಯ್ದಾಡುವ ತೆರೆಗಳನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಈ ಬಗೆ ಇತ್ತೀಚಿಗೆ ಕಂಡುಹಿಡಿಯಲಾಗಿದ್ದು ಇನ್ನೂ ಹೆಚ್ಚಾಗಿ ಬಳಕೆಗೆ ಬರಬೇಕಾಗಿದೆ.

minchumane

(ನಡುವಣ ಒಡೆತದಿಂದ ಉಂಟಾದ ಕಸುವು ಬಳಸಿ ಕರೆಂಟ್ ಉಂಟುಮಾಡುತ್ತಿರುವ ಬಗೆಯನ್ನು ತೋರಿಸುವ ಚಿತ್ರ)

ಹೀಗೆ ಯಾವುದಾದರೊಂದು ಕಸುವಿನ ಸೆಲೆಯಿಂದ ತಿರುಗುಣಿ ತಿರುಗಿಸಿ ಮಿಂಚುಟ್ಟುಕದ (generator) ನೆರವಿನಿಂದ  ಕರೆಂಟ್ ಉಂಟುಮಾಡಲಾಗುತ್ತದೆ.

ಚಿತ್ರ ನೆರವು: ವಿಕಿಪೀಡಿಯಾ

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. ಪ್ರಶಾಂತ, ಬರಿ ಬಿಡುವೆ ಅಂದರೆ ಅರೆಹುರುಳು (incomplete meaning) ಆಗುತ್ತೆ. ಅದಕ್ಕೆ ಮಿನ್ + ಹರಿಬಿಡುಕ = ಮಿಂದರಿಬಿಡುಕ ಇಲ್ಲವೆ ಚಿಕ್ಕದಾಗಿ ಮಿಂಬಿಡುಕ ಅಂತ ಅಂದರೆ ಇಡಿಹುರುಳು/ತುಂಬುಹುರುಳು ಸಿಗುತ್ತೆ.

  2. ವಿನಾಯಕ, ಅನಿಸಿಕೆಗೆ ನನ್ನಿ. ೧) ಇಂಗ್ಲಿಶನಲ್ಲೂ electric conductor ಅನ್ನುವುದನ್ನು ಮೊಟಕುಗೊಳಿಸಿಯೇ conductor ಅಂತಾ ಬಳಸುವುದು ಅಲ್ಲವೇ ? ೨) ಹೆಸರು ಪದಗಳನ್ನು ಪಡೆಯಲು ’ಕ’ ಒಟ್ಟಿನ ಜತೆಗೆ ಹಲವು ಬೇರೆಯ ಬಳಕೆಯಲ್ಲಿರುವ ಇಲ್ಲವೇ ಹೊಸದಾದ ಒಟ್ಟುಗಳನ್ನು ಬಳಸಲು ನಾವು ಮುಂದಾಗಬೇಕು ಅನಿಸುತ್ತೆ. ಇಲ್ಲಿ ನಾನು ’ವೆ’ ಅನ್ನುವುದನ್ನು ಬಳಸಿರುವೆ. ಇದರಿಂದಾಗಿ ಕನ್ನಡದ ಹರವು ಹೆಚ್ಚುತ್ತದೆ.

  1. 22/08/2013

    […] ಮಿಂಚು ಉಂಟಮಾಡಬಲ್ಲ ಗಟ್ಟಿಯಾದ ಮಿಂಚುಟ್ಟುಕಗಳನ್ನು (electric generators) ತಯಾರಿಸುವುದು ಇಂದು ದೊಡ್ಡ […]

  2. 26/08/2013

    […] ಕೆಲವು ಬರಹಗಳಲ್ಲಿ (1,2,3) ಮೊದಲ ಹಂತದಿಂದ ಕರೆಂಟ್ ಕುರಿತು […]

  3. 20/11/2014

    […] 1825 ರಲ್ಲೇ ಕಿಸುವೊನ್ನಿನ ಸರಿಗೆಯಲ್ಲಿ (Copper Wire) ಮಿಂಚು ಹರಿದಾಗ ಅದರ ಸುತ್ತಲೂ ಸೆಳೆಬಯಲು (Magnetic Field) […]

ಅನಿಸಿಕೆ ಬರೆಯಿರಿ:

%d bloggers like this: