ಸ್ಯಾಮಸಂಗನಲ್ಲಿ ಕನ್ನಡದ ಕಂಪು

 ವಿವೇಕ್ ಶಂಕರ್.
samsung_kannada

ನಿನ್ನೆಯಿಂದ ಸ್ಯಾಮ್ ಸಂಗ್ ಕೂಟ ತನ್ನ ಚೂಟಿಯುಲಿಗಳಲ್ಲಿ(smart phones) ಕನ್ನಡ ಸೇರಿದಂತೆ ಬಾರತದ ಒಂಬತ್ತು ನುಡಿಗಳಲ್ಲಿ ಬಳಕಗಳು(applications) ಹಾಗೂ ಬಳಕೆದಾರರ ಒಡನುಡಿ(user interface) ದೊರೆಯಲಿವೆ ಎಂದು ಬಯಲರಿಕೆ ಮಾಡುತ್ತಿದೆ. ಮೊದಲಿಗೆ ಗ್ಯಾಲಕ್ಸಿ ಗ್ರಾಂಡ್, ಗ್ಯಾಲಕ್ಸಿ ಎಸ್4 ಹಾಗೂ ಟ್ಯಾಬ್ 3 ಮುಂತಾದ ಸ್ಯಾಮ್ ಸಂಗ್ ಚೂಟಿಯುಲಿಗಳಲ್ಲಿ ಈ ಹೊಸ ಸೇವೆಗಳು ದೊರೆಯುತ್ತವೆ. ಮುಂದೆ ಹೋಗುತ್ತ ಗ್ಯಾಲಕ್ಸಿ ಸ್ಟಾರ್ ನಲ್ಲೂ ಈ ಹೊಸ ಸೇವೆಗಳು ದೊರೆಯಲಿವೆಯಂತೆ.

ಇದೊಂದು ಒಳ್ಳೆಯ ಬೆಳವಣಿಗೆ. ಬಳಕೆದಾರರು ಇಂತ ಚೂಟಿಗಳನ್ನು(devices) ತಮ್ಮ ನುಡಿಗಳಲ್ಲಿ ಬಳಸಲು ಬಯಸಿದರೂ, ಅವುಗಳಲ್ಲಿ ತಮ್ಮ ನುಡಿಗೆ ಬೆಂಬಲ ದೊರೆಯದ ದೂಸರಿನಿಂದ ಇವುಗಳಿಂದ ದೂರವಾಗುತ್ತಿದ್ದರು. ಬಳಕೆದಾರರ ಮಿಡಿತವನ್ನು ಅರಿತ ಸ್ಯಾಮ್ ಸಂಗ್ ಇದರ ಸಲುವಾಗಿ ಕೆಲಸ ಮಾಡಿ ಮೇಲೆ ಹೇಳಿದ ಚೂಟಿಯುಲಿಗಳಲ್ಲಿ ಕನ್ನಡ ಸೇರಿದಂತೆ ಒಂಬತ್ತು ಬಾರತೀಯ ನುಡಿಗಳಿಗೆ ಬೆಂಬಲ ಈಗ ನೀಡಿದ್ದಾರೆ.

ಈ ಕುರಿತು ಸ್ಯಾಮ್ ಸಂಗ್ ಕೂಟದ ಮುಂದಾಳು ತನೆಜಾ ಅವರ ಹೇಳಿಕೆ ಹೀಗಿದೆ,

We clearly sense a need and a demand among users to communicate in local language using their mobile devices. That is the reason, as an industry leader, we are taking the lead by offering users the ease of accessing regional language content in their preferred language

ತಮ್ಮ ಅಲೆಯುಲಿಗಳನ್ನು (ಮೊಬಾಯ್ಲಗಳನ್ನು) ತಮ್ಮ ತಾಯ್ನುಡಿಯಲ್ಲಿಯೇ ಬಳಸಬೇಕೆಂಬ ಬೇಡಿಕೆ, ಹಂಬಲ ಎಲ್ಲ ಬಳಕೆದಾರರಲ್ಲಿ ಇರುತ್ತದೆ ಅನ್ನುವುದು ನಮಗೀಗ ಮನವರಿಕೆಯಾಗಿದೆ. ಹಾಗಾಗಿಯೇ ಅವರಿಗೆ ನಮ್ಮ ಸೇವೆಗಳು ಅವರ ನುಡಿಯಲ್ಲಿಯೇ ದೊರೆಯುವಂತೆ ಮಾಡಲು ಅಲೆಯುಲಿ ಕಯ್ಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನಾವು  ಮುಂದಾಗಿದ್ದೇವೆ.

ಈ ಬೆಳವಣಿಗೆಗೆ ತಂತಾನೇ ಆಗಿರುವಂತದಲ್ಲ ಇದಕ್ಕೆ ದೂಸರು ಹಲವು ಮಂದಿಗಳೇ. ಹವ್ದು, ಹಲವು ಬಳಕೆದಾರರು ಸ್ಯಾಮ್ ಸಂಗ್ ಗೆ ಹಿನ್ನುಣಿಕೆಯ ಮೂಲಕ ಕನ್ನಡಕ್ಕೆ ಒತ್ತಾಯ ಮಾಡಿದರು. ಒಬ್ಬರಲ್ಲ, ಇಬ್ಬರಲ್ಲ ಹಲವು ಮಂದಿ ಹಲವು ದಿನಗಳಿಂದ, ಸ್ಯಾಮ್ ಸಂಗ್ ಅಲೆಯುಲಿ, ಚೂಟಿಯುಲಿಗಳಲ್ಲಿ ಕನ್ನಡದ ಬೆಂಬಲ ಬೇಕು ಅಂತ ಹಿನ್ನುಣಿಕೆಯ, ಮಿಂಚೆಗಳ ಮೂಲಕ ಒತ್ತಾಯ ಮಾಡಿದ ದೂಸರಕ್ಕೆ ಸ್ಯಾಮ್ ಸಂಗ್ ಅವರು ಅದಕ್ಕೆಲ್ಲ ತಕ್ಕ ಬೆಲೆ ನೀಡಿ ಈಗ ಈ ಒಸಗೆವಾತನ್ನು(good news) ನುಡಿದಿದ್ದಾರೆ.

ಇದರಲ್ಲಿ ಗಮನಿಸಬೇಕಾಗಿರುವ ಒಂದು ಅಂಶವೇನೆಂದರೆ ಬಳಕೆದಾರರ ಬೇಡಿಕೆ. ಬಳಕೆದಾರರ ಬೇಡಿಕೆಯಿಂದ ಏನನ್ನು ಬೇಕಾದರು ಮಾಡಬಹುದು, ಅವರು ಮನಸ್ಸನ್ನು ಮಾಡಿದರೆ ಯಾವುದೇ ಮಾರ‍್ಪಾಟನ್ನು ತರಬಲ್ಲರು ಅಂತ ಹೇಳುವುದಕ್ಕೆ ಇದೊಂದು ಒಳ್ಳೆಯ ಎತ್ತುಗೆ.

ಹೀಗೆ ಮುಂದಕ್ಕೆ ಹೋಗುತ್ತ ಯಾವುದೇ ಚಳಕದರಿಮೆ(technology) ಆಗಿರಬಹುದು, ಅದು ನಮ್ಮ ನುಡಿಯಲ್ಲಿ ದೊರೆಯುವುದು ನಮ್ಮ ಹಕ್ಕು, ಅದರಲ್ಲಿ ಯಾವ ಹಿಂಜರಿಕೆ ಬೇಡ. ನಾವೆಲ್ಲ ಒಟ್ಟಾಗಿ ಗಟ್ಟಿಯಾದ ಬೇಡಿಕೆ ಮುಂದಿಟ್ಟರೆ ಮುಂದೆ ಚಳದರಿಮೆಯಲ್ಲಿ ಎಲ್ಲೆಡೆ ಕನ್ನಡ ಕಾಣುತ್ತದೆಂಬ ನಂಬಿಕೆ ನನಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Shashi Kumar says:

    ಎಂತಾ ಸಿಹಿ ಸುದ್ದಿ, ಗೆಳೆಯರೇ. ಇಂತದೊಂದು ದಿನಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೆವು. ನಾನು ಕನ್ನಡದಲ್ಲಿ ಮಿಂಚೆ ಕಳಿಸಿದಾಗಲೆಲ್ಲ ನನ್ನ ಕನ್ನಡ ಗೆಳೆಯರು ಅದು ಹೇಗೆ ಕನ್ನಡದಲ್ಲಿ ಮಿಂಚಿಸುವುದು ಎಂದು ಕೇಳುತ್ತಿದ್ದರು. ನಿನ್ನೆ ತಾನೇ ನನ್ನ ಕಿರಿಯ ಗೆಳೆಯನೊಬ್ಬ ಇದರ ಬಗ್ಗೆ ಕೇಳಿದ್ದ, ಹಾಗೆಯೇ ಮೊಬೈಲ್ ನಲ್ಲಿ ಹೇಗೆ ಕನ್ನಡದಲ್ಲಿ ಮಿಂಚಿಸೋದು ಎಂದು. ಅದಕ್ಕೆ ಇದೇ ಎತ್ತುಗೆ ನೀಡಿದ್ದೆ. ನೋಕಿಯದ ಕೆಲವೊಂದು ಮೊಬೈಲ್ ಗಳಲ್ಲಿ ಇಂತಹ ಸೇವೆ ಇದೆ ಎಂದೂ ಹೇಳಿದ್ದೆ. ಈಗ ಯಾರೇ ಆದರೂ ಇದರ ಲಾಬ ಪಡೆಯಬಹುದು. ನನಗಂತೂ ಹಿಗ್ಗೋ ಹಿಗ್ಗು. “ಇದರಲ್ಲಿ ಗಮನಿಸಬೇಕಾಗಿರುವ ಒಂದು ಅಂಶವೇನೆಂದರೆ ಬಳಕೆದಾರರ ಬೇಡಿಕೆ. ಬಳಕೆದಾರರ ಬೇಡಿಕೆಯಿಂದ ಏನನ್ನು ಬೇಕಾದರು ಮಾಡಬಹುದು, ಅವರು ಮನಸ್ಸನ್ನು ಮಾಡಿದರೆ ಯಾವುದೇ ಮಾರ‍್ಪಾಟನ್ನು ತರಬಲ್ಲರು ಅಂತ ಹೇಳುವುದಕ್ಕೆ ಇದೊಂದು ಒಳ್ಳೆಯ ಎತ್ತುಗೆ.” ಹೌದು. ನಾವು ಕೇಳಿದ್ದನ್ನು ಕೊಡಲು ತಯಾರಕರು ಸದಾ ತಯಾರಿರುತ್ತಾರೆ. ನಾವು ಕೇಳುವ ಎದೆಗಾರಿಕೆ ತೋರಬೇಕು. ತಯಾರಕರಿಗೆ ಬೇಕಾಗಿರೋದು ಗ್ರಾಹಕರಶ್ಟೆ.ಇಂತಹ ಚೂಟಿಗಳ ಬಳಕೆದಾರರ ಕೈಪಿಡಿಯಲ್ಲಿ ಎಲ್ಲರ ಕನ್ನಡ ನೋಡುವಂತಾಗಲು ಏನಾದರೂ ಮಾಡಬೇಕು. ಯಾಕೆಂದರೆ, ಹೆಚ್ಚಿನ ಕೈಪಿಡಿ ಬರೆಹಗಳನ್ನು ಓದಲು ಹೆಣಗಾಡಬೇಕಾಗುತ್ತದೆ. ಒಟ್ಟಾರೆಯಾಗಿ ಒಳ್ಳೆಯ ಬರೆಹ ವಿವೇಕ್. ನವೆಂಬರ್ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಕನ್ನಡಿಗರಿಗೆಲ್ಲ ಇದೊಂದು ಹಬ್ಬದೂಟವೇ ಸರಿ! 🙂

  2. ನನ್ನಿ ಶಶಿ ಅವರೇ.

ಅನಿಸಿಕೆ ಬರೆಯಿರಿ:

%d bloggers like this: