ಸಾಕಶ್ಟಿವೆ ಸಾಲುಗಳು ಆದರಿದು ಹನಿಗವನ!

ರತೀಶ ರತ್ನಾಕರ

lonely-sea-sand-far-city-sad

ಕೋರಿಕೆಯ ಕೊಂದಿರುವೆ ಕಾರಣವ ಕೊಡದೆ
ಕೇಳಿದ್ದೆ ನಿನ್ನೊಲವ ನೀ ಸಿಗದೆ ಹೋದೆ
ಆಗಬಯಸಿದ್ದೆ ನಿನ್ನ ನನ್ನ ಬಾಳ ಒಡತಿ
ಒಲವೊಪ್ಪದೆ ಆದೆ ಒಂದು ಕಾಲದ ಗೆಳತಿ|

ಕಳೆದಿರುವ ಹೊತ್ತುಗಳು ನೆನಪಾಗಿ ಕಾಡುತಿವೆ
ನೀನಿರದ ಹಗಲುಗಳು ಎಚ್ಚೆದ್ದು ಚುಚ್ಚುತಿವೆ
ಬೇಡುತಿಹೆ ಬರದಿರಲು ಇರುಳುರುಳಿ ನಾಳೆ
ಒಳಗೊಳಗೆ ತೊಳಲಾಟ ಹೀಗೇಕೆ ನಾ ಹೇಳೆ?

ಹೊರಟಿಹೆನೆ ಹುಡುಗಿ ಹಳೆ ಒಲವ ತೊರೆದು
ಹಿಂತಿರುಗಿ ಬರಲಾರೆ ನಿನ ಪಾಡೆ ನನದು
ಬಿಸಿಲ ದಾರಿಯ ಮೇಲೆ ಹನಿ ತೊಟ್ಟಿಕ್ಕುತಿವೆ
ನನ್ನೆದೆಯ ನೋವುಗಳವು ಕಣ್ಣಿನಿಂದಿಳಿದಿವೆ|

ಮಡಿದಿರುವ ಒಲವಿರುವ ಎದೆಗೊಂದು ಮಡದಿ
ನನಗಲ್ಲ, ನನ್ನವರಿಗೆಂಬ ಹೊಸ ಬಾಳ ಸರದಿ
ಒಲವಾರಿ ಒಣಗಿರುವ ಒಳಗಿದೋ ಒಡಕು
ಹೊಸನೀರು ಹರಿದಿನ್ನು ಹಸಿರಾಗ ಬೇಕು

ಬಯಸಿದ್ದು ಸಿಕ್ಕರೆ ಅದು ಬದುಕಲ್ಲವೇನೋ?
ಬೇಡಿಕೆಯ ಕೊನೆಯು ಕೊನೆಯ ಉಸಿರೇನೋ?
ಸಾಕಶ್ಟಿವೆ ಸಾಲುಗಳು ಆದರಿದು ಹನಿಗವನ!
ಕಣ್ಣಾಲಿಯಲಿ ಜಿನುಗೋ ನೀರಿದಕೆ ಕಾರಣ|

(ಚಿತ್ರ: www.shayarism.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications