ರಯ್ಲು ಬಿಡೋದು ಅಂದ್ರೆ ಇದೇನಾ?

ಜಯತೀರ‍್ತ ನಾಡಗವ್ಡ

ypr mlr
ಗುಡ್ಡ ಸುತ್ತಿ ಮಯ್ಲಾರಕ್ಕೆ ಹೋದ್ರು ಅನ್ನುವ ಗಾದೆಗೆ ಕರ‍್ನಾಟಕದಲ್ಲಿರುವ ಬಾರತೀಯ ರಯ್ಲು ಬಂಡಿ ಊಳಿಗತನ ಒಂದು ಒಳ್ಳೆಯ ಎತ್ತುಗೆ. ಯಾಕೋ ಎನೋ ನಮ್ಮ ನಾಡಿನ ಹಲವು ರಯ್ಲು ಬಂಡಿಗಳ ಪಾಲಿಗೆ ಕರ‍್ನಾಟಕದ ಊರುಗಳು ಆರಂಬ ಇಲ್ಲವೇ ಕೊನೆಯ ತಲುಪುವೆಡೆ ಅಶ್ಟೇ. ನೀವು ವಿಜಾಪುರದಿಂದ ನೆರೆಯ ಕಲ್ಬುರ‍್ಗಿಗೆ ತೆರಳಬೇಕೆಂದರೆ, ಮಹಾರಾಶ್ಟ್ರದ ಸೋಲ್ಲಾಪುರದ ಮೂಲಕ ಹೋಗಬೇಕು. ರಾಜದಾನಿ ಬೆಂಗಳೂರಿನಿಂದ ಬೀದರ್‍ ಇಲ್ಲವೇ ರಾಯಚೂರುಗಳಿಗೆ ತಲುಪುವ ಮುನ್ನ ನಿಮ್ಮ ಉಗಿ ಬಂಡಿ ಶೇಕಡಾ 85% ಪಕ್ಕದ ಆಂದ್ರದ ನಿಲ್ದಾಣಗಳನ್ನ ಕಂಡಿರುತ್ತದೆ. ಹೀಗೆ ಹತ್ತು ಹಲವು ಎತ್ತುಗೆಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಕೆಲವೇ ದೂರದ ನಮ್ಮ ನಾಡಿನಲ್ಲಿರುವ ಎರಡು ಊರುಗಳನ್ನ ತಲುಪಲು ಎಲ್ಲೆಲ್ಲೊ ಸುತ್ತಿ ಬರಬೇಕೆಂದರೆ ಅದೆಂತ ಗೋಳು.ಬಂದ ದಾರಿಗೆ ಸುಂಕವಿಲ್ಲವೆಂಬಂತೆ ರಯ್ಲಿನ ಸಹವಾಸ ಸಾಕೆಂದು ಇತರೆ ಸಾರಿಗೆ ಅವಲಂಬಿಸಿರುವ ಕನ್ನಡಿಗರ ಅಳಲು ಯಾರಿಗೆ ತಾನೇ ಅರ‍್ತವಾದೀತು?

ಕುಡ್ಲದ ಕನ್ನಡಿಗರ ಮಂಡೆ ಬಿಸಿ ಮಾರಾಯ್ರೆ:
ಇಂತ ಗುಡ್ಡ ಸುತ್ತಿ ಮಯ್ಲಾರ ತಲುಪುವ ಬಂಡಿಗಳ ಪಟ್ಟಿಗೆ ಸೇರಿಸಲು ನಯ್ರುತ್ಯ ರಯ್ಲು ಸಂಸ್ತೆ ಬೆಂಗಳೂರು-ಮಂಗಳೂರು ನಡುವಿನ ಹೊಸ ಬಂಡಿಯನ್ನ ಆಯ್ದುಕೊಂಡಿದೆ. ನೇರವಾಗಿ ಬಾಯಿಗೆ ಸೇರಿಸುವ ಕಯ್-ತುತ್ತು, ಸುತ್ತಿ ಬಳಸಿ ಬಾಯಿಗೆ ಹಾಕಿಕೊಳ್ಳೋದು ಅಂದ್ರೆ ಇದೇ ಇರಬೇಕು. ಹಾಸನದ ಮೂಲಕ ನೇರವಾಗಿ ಬೆಂಗಳೂರಿಂದ ಮಂಗಳೂರು ನಡುವೆ ಇರುವ 450 ಕಿ.ಮಿ. ದೂರ ಸಾಗಲು ಎಂಟರಿಂದ ಒಂಬತ್ತು ಗಂಟೆಗಳು ಸಾಕು. ನೆನಪಿರಲಿ, ರಾಜದಾನಿ ಬೆಂಗಳೂರಿನ ಸಾವಿರಾರು ಕೋಟಿ ಸರಕನ್ನು ಕಡಲ ಬಂದರಿಗೆ ಸಾಗಿಸಲು ಇರುವ ಪ್ರಮುಕ ಹಾಗೂ ಕಡಿಮೆ ದೂರಿನ ದಾರಿ ಇದೊಂದೆ! ಆದರೆ ನಮ್ಮ (ಬರಿ ಹೆಸರಿಗೆ ನಮ್ಮ) ನಯ್ರುತ್ಯ ರಯ್ಲು ಮುಂದಿಟ್ಟಿರುವ ಹಮ್ಮುಗೆ ಆಂದ್ರ, ಕೇರಳ, ತಮಿಳ್ನಾಡು ರಾಜ್ಯದ ಜನರ ಗಮನದಲ್ಲಿರಿಸಿ ಮಾಡಿದಂತಿದೆ. ಹೊಸ ಬೆಂಗಳೂರು – ಮಂಗಳೂರು ಉಗಿ ಬಂಡಿ ಸದ್ಯದ ದೂರವನ್ನು ಇಮ್ಮಡಿಗೊಳಿಸಿ 18 ಗಂಟೆ ಓಡುತ್ತ ಕನ್ನಡಿಗರಿಗೆ ಮತ್ತೊಂದು ಗೋಳಿನ ಕತೆಯಾಗೋದು ಕಚಿತ. ಯಶ್ವಂತಪುರದಿಂದ ಹೊರಡುವ ಈ ದಾರಿ ಕರ‍್ನಾಟಕದಲ್ಲಿ ಬಂಗಾರಪೇಟೆಗೆ ಕೊನೆಗೊಂಡು ಆಂದ್ರದ ಕುಪ್ಪಮ್, ತಮಿಳ್ನಾಡಿನ ಸೇಲಮ್, ಈರೋಡ್, ಕೊಯ್ಮತ್ತೂರು, ಕೇರಳದ ಪಾಲಕ್ಕಡ್, ತಿರೂರು, ಕೊಜಿಕ್ಕೊಡ್, ಕಣ್ಣೂರಿನ ನಂತರ ಕಟ್ಟಕಡೆಯದಾಗಿ ಮಂಗಳೂರು ನಿಲ್ದಾಣಕ್ಕೆ ಮುಟ್ಟಲಿದೆ. ಬೆಂಗಳೂರು,ಮಂಗಳೂರು ಇವೆರಡು ಊರುಗಳನ್ನ ಬಿಟ್ಟು ದಾರಿ ನಡುವೆ ಎಲ್ಲವೂ ಇತರೆ ರಾಜ್ಯದ ಪಯಣಿಗರಿಗೆ ಹೆಚ್ಚು ತಕ್ಕುದುದಾಗಿದೆ.

ನಮ್ಮ ರಾಜ್ಯಕ್ಕೆ ಮತ್ತೊಂದು ಹೊಸ ರಯ್ಲು ಎಂದು ಕೇಕೆ ಹಾಕಿ ಕುಣಿದಾಡಲು ಮುಂದಾಗಿರುವ ಕೆಲವರಿಗೆ ಇದರ ಹಿಂದಿರುವ ಕೇಂದ್ರದ ಸಂಚು ತಿಳಿದಂತಿಲ್ಲ. ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತ ಸ್ತಿತಿಯೇ ಸರಿ. ತಮ್ಮ ಹಯ್ಕಮಾಂಡ್ ದೊರೆಗಳ ಅಂಕೆ ದಾಟದ ಯುಪಿ‌ಏ ಮತ್ತು ಎನ್.ಡಿ.ಎ ಬಣದ ರಾಜ್ಯ ಸಂಸದರು ಕರುನಾಡಿನ ರಯ್ಲು ಹಮ್ಮುಗೆಗಳ ವಿಚಾರದಲ್ಲಿ ಸುಮ್ಮನಿರುವ ವಾಡಿಕೆ ಹಾಕಿಕೊಂಡಿದ್ದಾರೆ. ಬೆಂಗಳೂರು-ಮಂಗಳೂರು ಬಂಡಿ ಕರ‍್ನಾಟಕದಲ್ಲಿ ಹಳಿ ತಪ್ಪುವ ಹಿಂದೆ ಕೇರಳದ ಸಂಸದರ ಪ್ರಮುಕ ಕಯ್ವಾಡ ಎನ್ನುವದರಲ್ಲಿ ಎರಡು ಮಾತಿಲ್ಲ. ಇನ್ನೂ ಮಂಗಳೂರು-ಚೆನ್ನಯ್ ನಡುವೆ ಓಡಾಡುವ ಎಲ್ಲ 4-5 ಬಂಡಿಗಳಿಗೆ ಮಂಗಳೂರು ಬರಿ ಮೊದಲ ಇಲ್ಲವೇ ಕೊನೆಯ ಸ್ಟೇಶನ್ ಆಗೇ ಉಳಿದಿದೆ. ಕಡಿಮೆವೆಚ್ಚದಲ್ಲಿ ಹೆಚ್ಚಿನ ಹಿತದ ಸವ್ಕರ‍್ಯದ ಪಯಣಮಾಡಲು ಕನ್ನಡಿಗರಿಗೆ ಇಂತ ಅಡ್ಡ-ದಾರಿಗಳು ಅಡ್ಡವಾಗಿ ನಿಂತಿವೆ. ಕಳೆದ ವರುಶ ಮುಂಗಡಲೆಕ್ಕದಲ್ಲೂ ಇದೇ ತೆರನಾದ ಬೆಂಗಳೂರು-ಚೆನ್ನಯ್ ಡಬಲ್ ಡೆಕ್ಕರ್‍ ಬಂಡಿಯೊಂದನ್ನ ಬಿಡಲಾಗಿದೆ,ಇದರ ಹೆಚ್ಚು ಲಾಬ ಪಡೆಯುವವರು ಯಾರೆಂದು ಬಿಡಿಸಿ ಬೇರೆ ಹೇಳಬೇಕೆ?

ರಯ್ಲು ಮುಂಗಡಲೆಕ್ಕದ ಸಮಯದಲ್ಲಿ ಮಹಾರಾಶ್ಟ್ರ, ಆಂದ್ರಾ, ತಮಿಳ್ನಾಡು, ಕೇರಳ, ಬಂಗಾಳದ ಆಳ್ವಿಗರು ಪದೇ ಪದೇ ಒತ್ತಡ ಹಾಕಿ, ಲಾಬಿ ನಡೆಸಿ ಹೆಚ್ಚಿನ ನೆರವು ಪಡೆಯುವಲ್ಲಿ ಗೆದ್ದಿದ್ದಾರೆ, ನ್ಯಾಯವಾಗಿ ಕರ‍್ನಾಟಕದ ಒಳನಾಡಿಗೆ ಬರಬೇಕಿದ್ದ ಹಲವು ಬಂಡಿಗಳಿಗೆ ಕೆಂಪು ದೀಪ ತೋರಿಸಿ ದಾರಿ ತಪ್ಪಿಸಿದ್ದಾರೆ. ಜಾಪರ್‍ ಶರೀಪ್, ಬಸನಗವ್ಡ ಯತ್ನಾಳ, ಮುನಿಯಪ್ಪ ಕೇಂದ್ರದಲ್ಲಿ ರಯ್ಲು ಕಾತೆಯಲ್ಲಿ ಮಂತ್ರಿಗಳಾಗಿ ನಮ್ಮನ್ನು ಪ್ರತಿನಿದಿಸಿದ್ದರೂ, ಒಳನಾಡಿಗೆ ಸಂಪರ‍್ಕ ಕೊಂಡಿಯಾಗಬಲ್ಲ ಪ್ರಮುಕ ರಯ್ಲಿನ ಉಡುಗೊರೆ ನೀಡಿಲ್ಲ. ನಾಡಿನ ಪ್ರಮುಕ ಊರುಗಳಾದ ಬೆಳಗಾವಿ, ಮಯ್ಸೂರು, ಮಂಗಳೂರು, ಕಲ್ಬುರ‍್ಗಿ, ಹುಬ್ಬಳ್ಳಿ, ಬಳ್ಳಾರಿಗಳ ನಡುವೆ ರಯ್ಲು ಸಂಪರ‍್ಕವೇ ಇಲ್ಲದಿರುವುದು ಅಚ್ಚರಿಯ ಸಂಗತಿ.

ಪ್ರತಿಬಾರಿಯೂ ರಯ್ಲುಬಂಡಿ ಮುಂಗಡಲೆಕ್ಕ (ಬಜೆಟ್) ದಲ್ಲಿ ಕರ‍್ನಾಟಕಕ್ಕೆ ಇಂತ ಮೋಸಗಳು ಕಟ್ಟಿಟ್ಟ ಬುತ್ತಿಯಂತಿರುತ್ತವೆ. ಬೆಂಗಳೂರು-ಲಕ್ನೋ, ಬೆಂಗಳೂರು-ಹವ್ರಾ, ಮಯ್ಸೂರು-ಜಯ್ಪುರ್‍, ಮಂಗಳೂರು-ಚೆನ್ನಯ್ ಎಂಬ ಹೊಸ ಹೊಸ ಬಂಡಿಗಳು ಮುಂಗಡಲೆಕ್ಕದಲ್ಲಿ ಗೋಶಣೆಯಾದಾಗ ನಾಡಿನ ಸುದ್ದಿಹಾಳೆಗಳು ದೊಡ್ಡ ಸುದ್ದಿಯಾಗಿಸಿರುತ್ತವೆ. ಆದರೆ ಈ ಬಂಡಿಗಳು ಹೊರಡುವ/ತಲುಪುವ ನಿಲ್ದಾಣಗಳು ಕರ‍್ನಾಟಕದ್ದು ಬಿಟ್ಟರೆ ಆಂದ್ರ, ಮಹಾರಾಶ್ಟ್ರ, ಕೇರಳದ ಒಳನಾಡಿನ ಮೂಲಕ ದೂರದ ವಲಸಿಗರನ್ನು ರಾಜ್ಯಕ್ಕೆ ಹೊತ್ತುತರಲು ಸಜ್ಜಾಗಿರುತ್ತವೆ. ಬಡಗಣದ ಹಲವು ಊರುಗಳು ಆಗಲೇ ಜೋಡು-ದಾರಿ, ಮೂರು-ದಾರಿಯ ಬಂಡಿಗಳ ಕಂಡಿವೆ. ಡುರಾಂಟೊ ಬಂಡಿಗಳಂತೂ ನಾಡಿನ ಪಾಲಿಗೆ ದುರಂತಗಳಾಗಿವೆ. ಬಿಹಾರದವರು, ಬಂಗಾಳದವರು ರಯ್ಲು ಮಂತ್ರಿಗಳಾದರೆ ತಮ್ಮ ತಮ್ಮ ನಾಡಿಗೆ ಸಾಲು ಸಾಲು ಹೊಸ ರಯ್ಲಿನ ಹೊಳೆಯೇ ಹರಿಸಿದ್ದಾರೆ. ಚಿಕ್ಕಪುಟ್ಟ ನಾಡುಗಳಾದ ಗೋವೆ, ಕೇರಳದಲ್ಲೂ ಒಳ್ಳೆಯ ರಯ್ಲಿನ ಊಳಿಗತನವಿದೆ. ಈ ನಾಡುಗಳಿಗಿಂತ ಹತ್ತಾರು ಪಟ್ಟು ಹೆಚ್ಚೇ ದೊಡ್ಡ ಹರಹು ಹೊಂದಿರುವ ಕರ‍್ನಾಟಕ್ಕೆ ಕೇಂದ್ರದ ಈ ಮಲತಾಯಿ ದೋರಣೆಯೇ ಬಲುದೊಡ್ಡ ಕೊಡುಗೆ.

ನಯ್ರುತ್ಯ ರಯ್ಲು ವಿಬಾಗವೊಂದು ಕರ‍್ನಾಟಕದ ಹುಬ್ಬಳ್ಳಿಯಲ್ಲಿ ನೆಲೆಗೊಂಡಿದ್ದು ಬಿಟ್ಟರೆ, ಇಲ್ಲಿರುವ ಚಿಕ್ಕ-ಪುಟ್ಟ ಕೆಲಸಗಳಿಂದ ಹಿಡಿದು ಎಲ್ಲ ದೊಡ್ಡ ಹುದ್ದೆಗಳು ಪರನಾಡಿಗರ ಪಾಲಾಗಿರುವುದು ಹಳೆಯ ಸುದ್ದಿ.

ಕೊನೆಯ ಹನಿ:
ಈಗಿರುವ ರಯ್ಲು ಕಾತೆಯ ಕೇಂದ್ರ ಮಂತ್ರಿಗಳು,ನಾಡಿನ ಪ್ರಮುಕ ಆಳ್ವಿಗ, ಸೋನಿಯಾರವರಿಗೆ ಹತ್ತಿರದವರಾಗಿರುವ ಮಲ್ಲಿಕಾರ‍್ಜುನ ಕರ‍್ಗೆ ಅವರಿಂದ ಹೆಚ್ಚಿನ ಬೇಡಿಕೆಗಳಿವೆ. ಸಿಕ್ಕಿರುವ ಕಡಿಮೆ ಸಮಯದಲ್ಲಿ ಹೆಚ್ಚು ರಯ್ಲುಗಳ ಒದಗಿಸಿ ಕನ್ನಡ ನೆಲದ ರುಣ ತೀರಿಸುವರೆ ಕರ‍್ಗೆ ಸಾಹೇಬರು?

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: