ಆರ್‍ಯ ವಲಸೆ – ಹೊಸ ತಿಳಿವು

ಸಿದ್ದರಾಜು ಬೋರೇಗವ್ಡ

ಇತ್ತೀಚೆಗೆ ಆರ್‍ಯ-ವಲಸೆಯು ಹೆಚ್ಚು ಹೆಚ್ಚು ಮಾತಿಗೆ ಬರುತ್ತಿರುವ ವಿಶಯ. ಹೆಚ್ಚಿನಮಟ್ಟದ ಹಿನ್ನಡವಳಿಗಾರರು ಒಪ್ಪಿರುವ ಆರ್‍ಯ-ವಲಸೆಯ ವಿವರಣೆಯ ಪ್ರಕಾರ ಬಾರತ ಉಪಕಂಡವು ದ್ರಾವಿಡ(ನುಡಿಯವ)ರ ತವರುನೆಲೆ. ಸುಮಾರು ಅಯ್ದು-ಆರು ಸಾವಿರ ವರ್‍ಶಗಳ ಹಿಂದೆ ನಡುವಣ ಏಶ್ಯಾದಿಂದ ಕುದುರೆ ತೇರುಗಳಲ್ಲಿ ಬಂದ ಆರ್‍ಯ(ನುಡಿಯವ)ರು ಇಂದಿನ ಪಾಕಿಸ್ತಾನ ಮತ್ತು ಬಡಗಣ ಬಾರತದಲ್ಲಿ ನೆಲೆಸತೊಡಗಿದರು.

ದ್ರಾವಿಡ ನುಡಿಯವರು ಕೊಂಚ ಮಟ್ಟಿಗೆ ಮೂಡಣ ಮತ್ತು ಹೆಚ್ಚಿನ ಮಟ್ಟಿಗೆ ತೆಂಕಣದತ್ತ ಸರಿಯತೊಡಗಿದರು. ದ್ರಾವಿಡ ನುಡಿಯವರು ಕೊಂಚ ಮಟ್ಟಿಗೆ ಪಡುವಣದ ಅಂದರೆ ಇಂದಿನ ಪಾಕಿಸ್ತಾನ ಮತ್ತು ಅಪ್ಗಾನಿಸ್ತಾನದ ಗಡಿಯ ನೆಲೆಗಳಲ್ಲೂ ಉಳಿದುಕೊಂಡರು. ಹಿಂದೆ ‘ಆರ್‍ಯ-ಆಕ್ರಮಣ’ ಎಂದೇ ಕರೆಯಲಾಗುತ್ತಿದ್ದ ವಿವರಣೆಯನ್ನು ಹೆಸರಾಂತ ಹಿನ್ನಡೆವಳಿಗಾರ್‍ತಿ ರಾಮಿಲ್ಲ ತಾಪರ್‍ ಮುಂತಾದವರು ‘ಆರ್‍ಯ-ವಲಸೆ’ ಎಂದು ಕರೆದಿದ್ದಾರೆ. ಆಕ್ರಮಣ ಎಂದೇ ಕರೆದರೂ, ವಲಸೆ ಎಂದು ಕರೆದರೂ, ಪಳಯುಳಿಕೆಗಳನ್ನು ತಿಳಿದುಕೊಳ್ಳುವ ಬಗೆಯಲ್ಲಿ ಅಶ್ಟೇನೂ ಬದಲಾವಣೆಗಳಾಗಿಲ್ಲ.

ಆರ್‍ಯ-ವಲಸೆಯ ವಿಶಯವು ಬಾರತದಲ್ಲಿ ಹಲವು ಚಳುವಳಿಗಳೊಂದಿಗೆ ಬೆಸೆದುಕೊಂಡಿತ್ತು. ಕಪ್ಪು ಬಣ್ಣದವರು ಮತ್ತು ಕೆಳಜಾತಿಯವರಲ್ಲಿದ್ದ ಕೀಳರಿಮೆಗೆ ವಯ್ದಿಕ ದರ್‍ಮವೇ ಕಾರಣವೆಂದು ತಮಿಳು ನಾಡಿನ ಪೆರಿಯಾರರು ಬಗೆದಿದ್ದರು. ತೆಂಕಣದ ಬಾರತೀಯರಲ್ಲಿ ಸ್ವಾಬಿಮಾನದ ಕೊರತೆಯಿದ್ದು ಅದನ್ನು ಬಡಿದೆಬ್ಬಿಸುವುದು ಅತ್ಯಂತ ಅಗತ್ಯವಾದದು ಎಂದು ಎಣಿಸಿದ್ದರು. ತಮ್ಮ ಬಣ್ಣದ ಬಗ್ಗೆ, ತಮ್ಮ ನಡೆನುಡಿಯ ಬಗ್ಗೆ ಹೆಮ್ಮೆ ಇರದ ಯಾವುದೇ ಜನಾಂಗದ ಏಳಿಗೆ ಆಗದು ಹಾಗೆಯೇ ಸ್ವಾಬಿಮಾನಿ ಜನಾಂಗದ ಏಳಿಗೆಯನ್ನು ತಡೆಯಲೂ ಆಗದು ಎಂದೇ ಅವರು ಬಗೆದಿದ್ದರು.

ಹಾಗಾಗೇ, ತೆಂಕಣ ಬಾರತದಲ್ಲಿ 20 ನೂರರ ಆರಂಬದಲ್ಲಿ ಪೆರಿಯಾರರ ‘ಸ್ವಾಬಿಮಾನ ಚಳುವಳಿ’ ಮತ್ತು ‘ದ್ರಾವಿಡನಾಡು ಚಳುವಳಿಗಳು’ ಬಡಗಣ ಬಾರತದ ಮತ್ತು ಮೇಲ್ಜಾತಿಯ ಆರ್‍ಯ ಮೇಲರಿಮೆಯಿಂದ ತೆಂಕಣ ಬಾರತದ, ಮತ್ತು ಕೆಳಜಾತಿಯ ದ್ರಾವಿಡರನ್ನು ಪಾರುಮಾಡುವ ಕೆಲಸವನ್ನು ಮಾಡಿತ್ತು. ತಮಿಳರಲ್ಲಿ ಸ್ವಾಬಿಮಾನವು ಬಲವಾಗಿ ನೆಲೆಯೂರಿರುವುದಕ್ಕೆ ದ್ರಾವಿಡ ಚಳುವಳಿಯೇ ಕಾರಣ.

ಇನ್ನೊಂದು ಕಡೆ ಸಾವರ್‍ಕರರು ಆರ್‍ಯರನ್ನು ಬಾರತದ ಮೂಲದ ಸಿಂದಿಗಳೆಂದೂ, ಅಯ್ದು ಸಾವಿರ ವರ್‍ಶಗಳ ಹಿಂದೆ ಬಾರತದಲ್ಲಿ ಹಿಂದು ದರ್‍ಮವನ್ನು ಹುಟ್ಟುಹಾಕಿದರೆಂದೂ, ಆರ್‍ಯರ ತಲೆಮಾರುಗಳವರು ಮಾತ್ರ ಹಿಂದುಗಳೆಂದೂ, ಮುಸ್ಲಿಂ, ಪಾರ್‍ಸಿ ಮತ್ತು ಕ್ರಯಿಸ್ತಾನರು ಬಾರತದ ಹೊರಗಿನವರೆಂದೂ ಪ್ರತಿಪಾದಿಸಿದ್ದರು. ಹಿಂದುವಾದಿಗಳಿಗೆ ಆರ್‍ಯರು ಬಾರತದ ಮೂಲದವರೆಂದು ಹೇಳಿಕೊಳ್ಳುವಲ್ಲಿ ಹಿತಾಸಕ್ತಿ ಇದೆ. ಹಾಗಾಗೇ ಆರೆಸ್ಸೆಸ್ಸಿನ ಗೋಲ್ವಾಲ್ಕರರು ಆರ್‍ಯ-ವಲಸೆಯ ವಿವರಣೆಯನ್ನು ತಿರಸ್ಕರಿಸಿದ್ದರು.

ಇನ್ನು ಹೊಸ ಹಿಂದುವಾದಿಗಳಾದ ಸುಬ್ರಮಣ್ಯಮ್ ಸ್ವಾಮಿ ಮುಂತಾದವರ ಪಟ್ಟು ಬೇರೆಯೇ ಇದೆ.ಬಾರತದಲ್ಲಿ ಆರ್‍ಯ-ದ್ರಾವಿಡ ಎಂಬ ಬೇದ ಇಲ್ಲವೆಂದೂ, ಬಾರತೀಯರೆಲ್ಲರಿಗೂ ಒಂದೇ ಡಿ.ಎನ್.ಎ. ಇದೆಯೆಂದೂ, ಸಂಸ್ಕ್ರುತವು ಎಲ್ಲಾ ಬಾರತೀಯ ಬಾಶೆಯ ಮೂಲವೆಂದೂ ಸಾರುತ್ತಿದ್ದಾರೆ. ಬಿ.ಜೆ.ಪಿ. ಬಾರತದಲ್ಲಿ ಕಾಣಿಸಿಕೊಳ್ಳಲಾರಂಬಿಸಿದ ನಂತರ ‘ಆರ್‍ಯ-ವಲಸೆ’ಯು ಬಾರತದ ಆಳ್ಮೆಯೇರ್‍ಪಾಟಿನೊಂದಿಗೆ ಮತ್ತೆ ಬೆಸೆದುಕೊಳ್ಳಲಾರಂಬಿಸಿತು.

ಹಿಂದುವಾದಿಗಳಿಗೆ ಆರ್‍ಯ-ವಲಸೆಯ ವಿಶಯವನ್ನು ಅರಗಿಸಿಕೊಳ್ಳಲಾಗದು. ಏಕೆಂದರೆ, ಆರ್‍ಯ-ವಲಸೆಯನ್ನು ಒಪ್ಪುವುದಾದರೆ ವಯ್ದಿಕ ದರ್‍ಮವು ಹೊರಗಿನಿಂದ ಬಂದ ದರ್‍ಮ ಇಲ್ಲಾ ಹೊರಗಿನಿಂದ ಬಂದವರ ದರ್‍ಮ ಎಂದಾಗುತ್ತದೆ. ಆಗ ಮಿಕ್ಕೆಲ್ಲಾ ದರ್‍ಮಗಳನ್ನು ಹೊರಗಿನವು ಎನ್ನುವ ವಿರಾಟ ಹಿಂದೂ ರಾಶ್ಟ್ರದ ಕಲ್ಪನೆಗೇ ಕೊಳ್ಳಿ ಇಟ್ಟಂತಾಗುತ್ತದೆ. ಮಿಗಿಲಾಗಿ, ಸಂಸ್ಕ್ರುತದ ಬದಲಿಗೆ ದ್ರಾವಿಡ ನಡೆ-ನುಡಿಯು ಬಾರತದ ಮೂಲದ್ದು (ಮೂಲದ್ದು ಅನ್ನುವ ಬದಲು ಸರಿಯಾಗಿ ಹೇಳಬೇಕೆಂದರ ‘ಮೊದಲಿನದ್ದು’) ಎಂದಾಗುತ್ತದೆ.

ಇವೇ ಕಾರಣಗಳಿಗಾಗಿ ಸುಮಾರು ನಾಲ್ಕು ಸಾವಿರದ ಎಂಟುನೂರು ವರ್‍ಶಗಳ ಹಿಂದೆ ಕುಸಿದು ಹೋದ, ಇಂದಿನ ಪಾಕಿಸ್ತಾನದಲ್ಲಿರುವ ಹರಪ್ಪ ಪೊಳಲಿಕೆಯ (Harappan Civilization) ನುಡಿ ಯಾವುದಿತ್ತು ಎನ್ನುವುದೂ ಬಿರುಸಿನ ಚರ್‍ಚೆಯುಂಟು ಮಾಡುವ ವಿಶಯವಾಗಿದೆ. ಸಂಸ್ಕ್ರುತ ಎಂದು ಕೆಲವರು ವಾದಿಸಿದರೆ, ಅದು ಮುನ್-ದ್ರಾವಿಡ (ಪ್ರೊಟೋದ್ರಾವಿಡ) ಎಂದು ಕೆಲವರು ವಾದಿಸುತ್ತಾರೆ.

ಹರಪ್ಪ ಪೊಳಲಿಕೆಯ ಲಿಪಿಯನ್ನು ಇನ್ನೂ ಬಿಡಿಸಲಾಗಿಲ್ಲ. ಹರಪ್ಪ ಲಿಪಿಯನ್ನು ಬಿಡಿಸುವಲ್ಲಿ ಮುಂಚೂಣಿಯಲ್ಲಿರುವ ವಾಶಿಂಗ್ಟನ್ ಕಲಿಕೆವೀಡಿನ ಅರಕೆಗಾರರಾದ ರಾಜೇಶ್ ರಾವ್ ಅವರ ಗುಂಪು ಅದು ಮುನ್-ದ್ರಾವಿಡ ಇರಬಹುದು ಎಂದು ಮುಂತಿಳಿವು ನೀಡಿದೆ. ಹರಪ್ಪ ಪೊಳಲಿಕೆಯ ಕೆಲವು ಬರಿಗೆಗಳನ್ನು ಮುನ್-ದ್ರಾವಿಡದ ‘ಏಳುಮೀನು’, ಆರುಮೀನು, ಮೇಮೀನು (ಸಪ್ತರ್‍ಶಿ, ಕ್ರುತಿಕ, ಶನಿ) ಎಂಬ ಪದಗಳು ಎಂದು ಗುರುತಿಸಲಾಗಿದೆ.

ತೆಂಕರು-ಬಡಕರ ಬೆರಕೆ.001

ಇಂಡೋ-ಆರ್‍ಯನ್ ನುಡಿಗಳೂ, ದ್ರಾವಿಡ ನುಡಿಗಳೂ ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ ಎಂಬುದು ನುಡಿಯರಿಮೆಯಲ್ಲಿ ಒಪ್ಪಿರುವ ವಿಚಾರ. ಇನ್ನು, ಪೀಳಿಯರಿಮೆಯಲ್ಲಿ(genetics) ಹೊಸದಾಗಿ ಹೊರಬರುತ್ತಿರುವ ಅರಕೆಗಳೂ ಆರ್‍ಯ-ದ್ರಾವಿಡ ಬೇರ್‍ಮೆ ಮತ್ತು ನಂಟಿನ ಬಗ್ಗೆ ಹಾಗೂ ಬಾರತದಲ್ಲಿರುವ ಜಾತಿಯೇರ್‍ಪಾಟಿನ ಬಗ್ಗೆ ಬೆಳಕು ಚೆಲ್ಲುತ್ತಿವೆ. ನಮ್ಮ ಹಿರೀಕರಾರು, ಎಲ್ಲಿಂದ ಬಂದರು ಎಂಬ ಗುಟ್ಟು ನಮ್ಮ ಡಿ.ಎನ್.ಎ ಒಳಗೆ ಬಚ್ಚಿಟ್ಟುಕೊಂಡಿದೆ.

ಡಿ.ಎನ್.ಎ. ಒಳಗಿನ ಗುಟ್ಟುಗಳನ್ನು ಬಿಡಿಸುತ್ತಿರುವುದರಿಂದ ಇವತ್ತಿನ ಬಾರತೀಯರ ಹಿರೀಕರು ಯಾರು, ಅವರು ಯಾವಾಗ, ಎಲ್ಲಿಂದ ಬಂದರು ಎಂಬ ಕೇಳ್ವಿಗಳಿಗೆ ಮರುಮಾತುಗಳು ದೊರಕುತ್ತಿವೆ. ಅಮೇರಿಕಾದ ಹಾರ್‍ವರ್‍ಡ್ ಕಲಿಕೆವೀಡು (Harvard University) ಮತ್ತು ಬಾರತದ ಹಯ್ದರಾಬಾದಿನಲ್ಲಿರುವ ‘ಸೂಲುಗೂಡಿನ ಮತ್ತು ನುಚ್ಚಿನ ಉಸಿರರಿಮೆ ಸಂಸ್ತೆ’ಗಳಲ್ಲಿ (Center for Cellular and Molecular Biology) ಒಟ್ಟಾಗಿ ಕೆಲಸ ಮಾಡುತ್ತಿರುವ ಅರಿಮೆಗಾರರಿಂದ ಅಚ್ಚಾದ ಇತ್ತೀಚಿನ ಎರಡು ಅಂಕಣಗಳು ಹೆಚ್ಚು ಸುದ್ದಿ ಮಾಡುತ್ತಿವೆ. ಇವುಗಳೆರಡನ್ನೂ ಬಿಡಿಸಿ ನೋಡೋಣ.

ಮೊದಲು ನಾವು ನೆನಪಿಡಬೇಕಾದ ಮಾತೆಂದರೆ, ಇಂದು ಇಡೀ ನೆಲದ ತುಂಬಾ ಹರಡಿರುವ ಮಂದಿಯ ಮೂಲ ಹಿರೀಕರು ಆಪ್ರಿಕಾದಲ್ಲಿ ಬಾಳಿದ್ದವರು. ಅಶ್ಟೇ ಏಕೆ ಇವತ್ತಿನ ಇಡೀ ಮಾನವಕುಲದ ಮೂಲ ತಾಯಿ ಹೆಚ್ಚೆಂದರೆ ಇನ್ನೂರು ಸಾವಿರ ವರ್‍ಶಗಳ ಹಿಂದೆ ಮೂಡಲ ಆಪ್ರಿಕಾದಲ್ಲಿ ಬದುಕಿದ್ದಳು. ಹಾಗಾಗಿ, ಆರ್‍ಯ-ದ್ರಾವಿಡರೇ ಏಕೆ ಚೀನೀಯರು, ಆಪ್ರಿಕಾದವರು, ಜಪಾನೀಯರು, ಯುರೋಪಿಯನ್ನರು ಎಲ್ಲರೂ ಹೆಚ್ಚೆಂದರೆ ಇನ್ನೂರು ಸಾವಿರ ವರ್‍ಶಗಳ ಹಿಂದೆ ಆಪ್ರಿಕಾದಲ್ಲಿ ನಡೆದಾಡಿದ ಒಬ್ಬಳು ತಾಯಿಯಿಂದ ಬಂದವರು!

ನುಡಿಯರಿಮೆಯ ಮಟ್ಟದಲ್ಲಿ ಆರ್‍ಯ ನುಡಿಕುಟುಂಬದ ಬಗ್ಗೆ ಮತ್ತು ದ್ರಾವಿಡ ನುಡಿ ಕುಟುಂಬದ ಬಗ್ಗೆ ನಾವು ಬಹಳವಾಗಿ ಬಲ್ಲೆವು. ಇವುಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿದಂತವು. ನುಡಿಯರಿಮೆಯ ಮಟ್ಟದಲ್ಲಿ ದ್ರಾವಿಡ ನುಡಿಯಾಡುವವರನ್ನು ದ್ರಾವಿಡರು ಅನ್ನಬಹುದು. ಹಾಗಾದರೆ, ತಲೆಮಾರಿನ ಲೆಕ್ಕಾಚಾರದಲ್ಲಿ ನುಡಿಯರಿಮೆಯ ಪ್ರಕಾರ ದ್ರಾವಿಡರು ಅಂದರೆ ಯಾರು? ಆರ್‍ಯರು ಅಂದರೆ ಯಾರು? ದ್ರಾವಿಡರು ಬಾರತಕ್ಕೆ ಎಂದು ಬಂದರು? ಆರ್‍ಯರು ಯಾವಾಗ ಬಂದರು? ನಮ್ಮ ಕಾಲದ ಬಾರತೀಯರ ಡಿ.ಎನ್.ಎ. ಬರಹದಲ್ಲಿ (ಹಣೆ-ಬರಹದ ಹಾಗೆ!) ಆರ್‍ಯ-ದ್ರಾವಿಡ ಎಂಬ ಬೇರ್‍ಮೆ ಇದೆಯೇ? ಜಾತಿಯ ಬೇರ್‍ಮೆ ಇದೆಯೇ?

ಹೊರಗೆ ಕಾಣಬಲ್ಲ ಬೇರ್‍ಮೆಗಳ ಬಗ್ಗೆ ಪೀಳಿಯರಿಮೆಗಾರರು ಹೆಚ್ಚು ಮಾತಾಡುವುದಿಲ್ಲ. ಡಿ.ಎನ್.ಎ. ಬರಹವನ್ನು ಮಂದಿಯ ನಂಟನ್ನು ಅಳೆಯುವುದಕ್ಕೆ ಬಳಸುತ್ತಾರೆ. ಹೊರಗೆ ಕಾಣುವ ಬೇರ್‍ಮೆಗಳಲ್ಲಿ ಹೆಚ್ಚೆಂದರೆ ಬೇನೆ ತರುವ ಬೇರ್‍ಮೆಗಳ ಬಗ್ಗೆ ಮಾತಾಡುತ್ತಾರೆ. ಅದೂ ಕೂಡ ಆಳಿನ ಮಟ್ಟದಲ್ಲಿರದೇ ಮಂದಿಯ ಮಟ್ಟದಲ್ಲಿ ಮಾತ್ರ ಇರುತ್ತದೆ. ಒಬ್ಬ ಆಳಿನ ಡಿ.ಎನ್.ಎ. ಬರಹ ಅವರವರ ಆಸ್ತಿ. ಪೀಳಿಯರಿಮೆಗಾರರು ಡಿ.ಎನ್.ಎ. ಬರಹವನ್ನು ಬಳಸಿ ಮಂದಿಯ ನಡುವಿನ ನಂಟನ್ನು ಅಳೆಯಬಲ್ಲರು. ಹೀಗೆ ಅಳೆಯುವುದರಿಂದ ಬಾರತೀಯರೊಳಗಿನ ನಂಟಿನ ಬಗ್ಗೆ ಅಚ್ಚರಿಯ ಸಂಗತಿಗಳು ಬಯಲಾಗುತ್ತಿವೆ.

ತೆಂಕರು-ಬಡಕರ ಬೆರಕೆ.002

ಬೆರಕೆ ಬಾರತೀಯರು!

ಆಪ್ರಿಕಾ ಮೂಲದ ಮಾನವ ತಳಿಯು ಬಾರತಕ್ಕೆ ಹಂತ-ಹಂತವಾಗಿಯಾದರೂ ಎಡೆಬಿಡದೆ ವಲಸೆ ಬಂದಿದೆ. ವಲಸೆಯು ಮುಕ್ಯವಾಗಿ ಎರಡು ಹಾದಿಗಳ ಮೂಲಕ ಆಗಿದೆ. ಒಂದು, ಕಡಲ ತಡಿಯ ಮೂಲಕ ಮತ್ತೊಂದು ಆಪ್ರಿಕಾ-ಯುರೋಪು-ನಡುವಣ ಏಸಿಯಾ-ಬಡಗಣ ಬಾರತದ ಹಾದಿಯ ಮೂಲಕ. ಪೀಳಿಯರಿಮೆಗಾರರು ಬಾರತಕ್ಕೆ ವಲಸೆ ಬಂದವರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ.

1. ಹಿರೀಕ ತೆಂಕಣ ಬಾರತೀಯರು (ತೆಂಕರು) – Ancestral South Indians (ASI): ಇಲ್ಲಿಂದ ಮುಂದೆ ಇವರನ್ನು ಚಿಕ್ಕದಾಗಿ ತೆಂಕರು (ತೆಂಕಣದ ಹಿರೀಕರು) ಎಂದು ಕರೆಯಲಾಗುವುದು. ತೆಂಕರು ದ್ರಾವಿಡರಿರಬಹುದು. ಆದರೆ ಪೀಳಿಯರಿಮೆಯ ವಿಶಯವನ್ನು ಹೇಳುವಾಗ ನುಡಿಯರಿಮೆಯ ಪದವಾದ ‘ದ್ರಾವಿಡ’ ಪದವನ್ನು ಬಳಸಲಾಗದು.

2. ಹಿರೀಕ ಬಡಗು ಬಾರತೀಯರು (ಬಡಕರು) – Ancestral North Indians (ANI): ಇಲ್ಲಿಂದ ಮುಂದೆ ಇವರನ್ನು ಬಡಕರು (ಬಡಗಣದ ಹಿರೀಕರು) ಎಂದು ಕರೆಯಲಾಗುವುದು. ಇವರು ಇಂಡೋ-ಆರ್‍ಯನ್ ನುಡಿಯವರಿರಬಹುದು.

ಮೇಲಿನ ವಿಂಗಡಣೆಯು ಡಿ.ಎನ್.ಎ. ನಂಟಿನ ಆದಾರದ ಮೇಲೆ ಮಾಡಿದಂತದ್ದು. ಇಡೀ ನೆಲದ ಮೇಲಿರುವ ಎಲ್ಲಾ ಮಂದಿಯ ನಂಟು 200 ಸಾವಿರ ವರ್‍ಶ ಹಿಂದಕ್ಕೆ ಹೋಗುತ್ತದೆ. (ಎತ್ತುಗೆಗೆ, ನನ್ನೂರಿನಲ್ಲಿ ಇನ್ನೊಬ್ಬ ಸಿದ್ದರಾಜು ಇದ್ದಾನೆ. ಅವನ ತಾತ ಮತ್ತು ನನ್ನ ತಾತ ಪುಟ್ಟಂಕಿ ಎಂಬ ತಾಯಿಗೆ ಹುಟ್ಟಿದ ಅಣ್ಣ-ತಮ್ಮಂದಿರು. ಹಾಗಾಗಿ, ಆ ಇನ್ನೊಬ್ಬ ಸಿದ್ದರಾಜು ಮತ್ತು ನನ್ನ ನಂಟು 100 ವರ್‍ಶಗಳ ಹಿಂದಿನ ಪುಟ್ಟಂಕಿಯ ಕಾಲಕ್ಕೆ ಹೋಗುತ್ತದೆ. ಅದೇ ಬಗೆಯಲ್ಲಿ ಇಡೀ ನೆಲದಲ್ಲಿರುವ ಎಲ್ಲಾ ಮಂದಿಯ ನಂಟು 200 ಸಾವಿರ ವರ್‍ಶಗಳ ಹಿಂದೆ ಆಪ್ರಿಕಾದಲ್ಲಿ ನೆಲೆಸಿದ್ದ ಒಬ್ಬಳು ತಾಯಿಯ ಕಾಲಕ್ಕೆ ಹೋಗುತ್ತದೆ!) ಹಾಗೆಯೇ, ತೆಂಕರು ಮತ್ತು ಬಡಕರು ಎಂಬ ಎರಡು ಗುಂಪುಗಳ ನಂಟು ಸುಮಾರು 50 ಸಾವಿರ ವರ್‍ಶಗಳ ಹಿಂದಕ್ಕೆ ಹೊಗುತ್ತದೆ.

ಬಾರತಕ್ಕೆ ಮೊದಲು ವಲಸೆ ಬಂದ ತೆಂಕರು ಅಂಡಮಾನಿನಲ್ಲಿ ಕಂಡುಬರುವ ಓಂಗೆ (Onge) ಬುಡಕಟ್ಟಿನ ಮಂದಿಗೆ ಹತ್ತಿರದ ನಂಟನ್ನು ಹೊಂದಿದ್ದಾರೆ ಹಾಗೂ ಬರತಕಂಡದ ಹೊರಗಿನ ಯಾವುದೇ ಬುಡಕಟ್ಟಿನ ಜೊತೆ ನಂಟು ಹೊಂದಿಲ್ಲ. ಆದರೆ, ನಂತರದಲ್ಲಿ ವಲಸೆ ಬಂದ ಬಡಕರು ಇಂದಿನ ಮೂಡಲ ಯುರೋಪು ಮತ್ತು ನಡುವಣ ಏಸಿಯಾದಲ್ಲಿರುವ ಜಾರ್‍ಜಿಯನ್ ಮತ್ತಿತರ ಜನರಿಗೆ ಹತ್ತಿರದ ನಂಟು ಹೊಂದಿದ್ದಾರೆ. ಜಾರ್‍ಜಿಯನ್ನರ ಹಿರೀಕರಿಂದ ಇಂದಿನ ಜಾರ್‍ಜಿಯನ್ನರ ಪೀಳಿಗೆ ಹುಟ್ಟಿ ಬಂದಿದೆ, ಹಾಗೆಯೇ ಓಂಗೆ ಬುಡಕಟ್ಟಿನ ಹಿರೀಕರಿಂದ ಇಂದಿನ ಓಂಗೆ ಪೀಳಿಗೆ ಹುಟ್ಟಿ ಬಂದಿದೆ.

ತೆಂಕರು-ಬಡಕರ ಬೆರಕೆ.003

ಆದರೆ, ಬಾರತಕ್ಕೆ ಮೊದಲು ಬಂದ ತೆಂಕರು ಮತ್ತು ನಂತರ ಬಂದ ಬಡಕರಿಂದ ಇಂದಿನ ಯಾವುದೇ ಬುಡಕಟ್ಟಿನ ಇಲ್ಲಾ ಜಾತಿಯ ಜನ ಹುಟ್ಟಿಬಂದಿಲ್ಲ! ಬಾರತದಲ್ಲಿರುವ ಇಂದಿನ ಎಲ್ಲಾ ಜನರೂ ಹುಟ್ಟಿ ಬಂದಿರುವುದು ಇವೆರಡೂ ವಲಸೆಗಾರ ಗುಂಪುಗಳು ಬೆರಕೆಯಾಗಿ ಹುಟ್ಟಿದ ಮಂದಿಯಿಂದ! ಇದು ದಿಟವಾಗಿಯೂ ಅರಿಮೆಗಾರರನ್ನು ಅಚ್ಚರಿಪಡಿಸಿದ ವಿಶಯ. ಏಕೆಂದರೆ, ಅರಿಮೆಗಾರರು ತಮ್ಮ ಅರಕೆಗಾಗಿ ಹಳ್ಳಿ ಪಟ್ಟಣಗಳಲ್ಲಿರುವ ಮಂದಿಯನ್ನಶ್ಟೇ ಅಲ್ಲದೇ ಕಾಡಿನಲ್ಲಿ ವಾಸಿಸುವ ಬುಡಕಟ್ಟುಗಳನ್ನೂ ಅರಕೆಗೆ ಬಳಸಿಕೊಂಡಿದ್ದರು. ಪಾಕಿಸ್ತಾನದ ಪಟಾಣರು, ಕಾಶ್ಮೀರದ ಪಂಡಿತರಿಂದ ಹಿಡಿದು ಕರ್‍ನಾಟಕದ ಹಾಲಕ್ಕಿಗಳನ್ನೂ, ತಮಿಳು ನಾಡಿನ ಇರುಳರನ್ನೂ ಬಳಸಿಕೊಂಡಿದ್ದರು. ಇವರ್‍ಯಾರಲ್ಲೂ ಬೆರಕೆ ಇಲ್ಲದ ಡಿ.ಎನ್.ಎ. ಇಲ್ಲವೇ ಇಲ್ಲ!

4200 ವರ್‍ಶಗಳ ಹಿಂದೆ ಹರಪ್ಪ ಪೊಳಲಿಕೆಯು ಕುಸಿಯಲಾರಂಬಿಸಿದ ಮೇಲೆ ಮೊದಲು ಇದ್ದ ತೆಂಕರು ಮತ್ತು ಆಮೇಲೆ ಬಂದ ಬಡಕರ ನಡುವೆ ನೆತ್ತರ ನಂಟು ಬೆಳೆಯಲಾರಂಬಿಸಿತು. ಆ ನಂಟು ಸುಮಾರು 1900 ವರ್‍ಶಗಳ ಹಿಂದಿನವರೆಗೆ ನಡೆಯಿತು. ಆಮೇಲೆ ನಿಂತುಹೋಯಿತು. ಸುಮಾರು 1900 ವರ್‍ಶಗಳ ಹಿಂದೆ ನಿಂತುಹೋದ ಬಾರತೀಯರ ಪೀಳಿಯ ಬೆರಕೆಯು ಜಾತಿಗಳಲ್ಲಿ ಮಡುಗಟ್ಟಿದೆ! ವೇಶ್ಯ ಜಾತಿಯಲ್ಲಂತೂ ಬೆರಕೆ ನಿಂತುಹೋಗಿ ಸುಮಾರು 3000 ವರ್‍ಶಗಳೇ ಕಳೆದಿವೆ! ಹಾಗಾದರೆ, ಇತ್ತೀಚೆಗೆ ಬಿ.ಜೆ.ಪಿ. ಸೇರಿದ ಸುಬ್ರಮಣ್ಯಂ ಸ್ವಾಮಿ ಹೇಳುವಂತೆ ಬಾರತೀಯರ ಡಿ.ಎನ್.ಎ.ಯಲ್ಲಿ ಬೇರ್‍ಮೆಯೇ ಇಲ್ಲವೇ?

ಇದೆ. ಬಹಳ ಇದೆ. ಲೆಕ್ಕಕ್ಕೆ ಸಿಗುವಶ್ಟಿದೆ. ಬೇರ್‍ಮೆಯು ಒಬ್ಬಬ್ಬ ಬಾರತೀಯನ ಡಿ.ಎನ್.ಎ.ಯಲ್ಲಿ ತೆಂಕರ ಪಾಲೆಶ್ಟು ಮತ್ತು ಬಡಕರ ಪಾಲೆಶ್ಟು ಅನ್ನುವುದರಲ್ಲಿದೆ. ಪಾಕಿಸ್ತಾನದ ಪಟಾಣರು ಮತ್ತು ಕಾಶ್ಮೀರದ ಪಂಡಿತರಲ್ಲಿ ಬಡಕರ ಪಾಲು ಮೂರರಲ್ಲಿ ಎರಡರಶ್ಟಿದ್ದರೆ ಕರ್‍ನಾಟಕದ ಹಾಲಕ್ಕಿ ಮತ್ತು ತಮಿಳುನಾಡಿನವರಲ್ಲಿ ತೆಂಕರ ಪಾಲು ಮೂರರಲ್ಲಿ ಎರಡರಶ್ಟಿದೆ. ಪಾಕಿಸ್ತಾನದ ಕಡೆಯಲ್ಲಿ ಬಡಕರ ಪಾಲು ಹೆಚ್ಚಿದ್ದರೆ ಪಾಕಿಸ್ತಾನದ ಕೆಡೆಯಿಂದ ಮೂಡಲ-ತೆಂಕಣದ ಕಡೆ ಬರಬರುತ್ತಾ ತೆಂಕರ ಪಾಲು ಹೆಚ್ಚುತ್ತಾ ಹೋಗುತ್ತದೆ. ಇದರಲ್ಲಿ ಅಚ್ಚರಿಯೇ ಇಲ್ಲ. ಏಕೆಂದರೆ, ಬಾರತಕ್ಕೆ ವಲಸೆಯು ಬಡಗು-ಪಡುವಣದಿಂದ ಆಗಿರುವಂತದ್ದೆ. ಅದರೆ, ಅಚ್ಚರಿ ಇರುವುದು ಒಂದೇ ಕಡೆ ವಾಸವಾಗಿರುವ ಜಾತಿಗಳಲ್ಲಿ ಮತ್ತು ನುಡಿಯವರಲ್ಲಿರುವ ಡಿ.ಎನ್.ಎ. ಪಾಲಿನಲ್ಲಿ!

ಬಡಗಣ ಬಾರತದಲ್ಲಾಗಲೀ ತೆಂಕಣ ಬಾರತದಲ್ಲಾಗಲೀ ಒಂದೇ ಕಡೆಗಳಲ್ಲಿ ನೆಲೆಸಿರುವ ಮಂದಿಯ ಡಿ.ಎನ್.ಎ.ಯಲ್ಲೇ ಅಚ್ಚರಿ ಪಡುವಶ್ಟು ಬೇರ್‍ಮೆ ಇದೆ! ಮೇಲುಜಾತಿಯವರಲ್ಲಿ ಮತ್ತು ಇಂಡೋ-ಆರ್‍ಯನ್ ನುಡಿಯವರಲ್ಲಿ ಬಡಕರ ಪಾಲೂ, ಕೆಳಜಾತಿಯವರಲ್ಲಿ ಮತ್ತು ದ್ರಾವಿಡ ನುಡಿಯವರಲ್ಲಿ ತೆಂಕರ ಪಾಲೂ ಹೆಚ್ಚಿದೆ! ಒಂದೇ ಕಡೆ ನೆಲೆಸಿದ್ದರೂ ಇಶ್ಟೊಂದು ಬೇರ್‍ಮೆಯಿರುವುದು ಇನ್ಯಾವ ಹಳೆಯ ದೇಶಗಳಲ್ಲೂ ಕಂಡುಬಂದಿಲ್ಲ. ಬಹಳ ಹಿಂದಿನಿಂದಲೇ ಜಾತಿಯ ಒಳಗೆ ಮಾತ್ರ ಮದುವೆಗಳು ನಡೆದಿವೆಯೆಂದು ಇದರಿಂದ ತಿಳಿಯುತ್ತದೆ.

ಇನ್ನೂ ಒಂದು ಗುಟ್ಟು ಬಯಲಾಗಿದೆ. ತೆಂಕಣ ಬಾರತೀಯರಲ್ಲಿರುವ ಡಿ.ಎನ್.ಎಯ ಬೆರಕೆಯು ಒಂದು ಹಂತದಲ್ಲಾಗಿದ್ದರೆ ಬಡಗಣ ಬಾರತೀಯರ ಅದರಲ್ಲೂ ಪಟಾಣ ಮತ್ತು ಕಾಶ್ಮೀರಿ ಪಂಡಿತರಲ್ಲಿರುವ ಡಿ.ಎನ್.ಎ. ಬೆರಕೆಯು ಎರಡು ಹಂತದಲ್ಲಾಗಿದೆ. ಇವರಲ್ಲಿ ಬಡಗರ ಪೀಳಿಯ ಪಾಲು ಹೆಚ್ಚಿರುವುದಕ್ಕೆ ಇದೇ ಕಾರಣ ಎಂದು ಹುರುಳಿಸಲಾಗಿದೆ.

ಪೀಳಿಯರಿಮೆಯಲ್ಲಿ ದೊರಕಿದ ತಿಳುವಳಿಕೆಯನ್ನು ಒಟ್ಟಾರೆಯಾಗಿ ಹೀಗೆ ಹೇಳಬಹುದು.

1. ತೆಂಕರು ಬಾರತಕ್ಕೆ ಮೊದಲು ಬಂದವರು.

2. ಸರಾಸರಿ 4200 ವರ್‍ಶಗಳ ಹಿಂದೆ ಹರಪ್ಪ ಪೊಳಲಿಕೆಯು ಕುಸಿಯಲಾರಂಬಿಸಿದ ಮೇಲೆ ತೆಂಕರು-ಮತ್ತು ಬಡಕರ ನಡುವೆ ಬೆರಕೆ ಆರಂಬವಾಯಿತು.

3. ಸರಾಸರಿ 1900 ವರ್‍ಶಗಳ ಹಿಂದೆ ಬೆರಕೆಯು ಹೆಚ್ಚುಕಡಿಮೆ ಎಲ್ಲಾ ಕಡೆಯೂ ನಿಂತುಹೋಯಿತು.

4. 1900 ವರ್‍ಶಗಳ ಹಿಂದೆಯೇ ಜಾತಿಗಳ ನಡುವೆ ಮದುವೆ ನಿಂತುಹೋಗಿದೆ. ಜಾತಿಗಳಲ್ಲಿ ಮತ್ತು ಬುಡಕಟ್ಟುಗಳಲ್ಲಿ ಡಿ.ಎನ್.ಎ ಮಡುಗಟ್ಟಿದೆ.

5. ಮೇಲು ಜಾತಿ ಮತ್ತು ಇಂಡೋ-ಆರ್‍ಯನ್ ನುಡಿಯವರಲ್ಲಿ ಬಡಕರ ಡಿ.ಎನ್.ಎ ಪಾಲು ಹೆಚ್ಚಿನ ಆಳತೆಯಲ್ಲಿದೆ.

6. ಕೆಳ ಜಾತಿ ಮತ್ತು ದ್ರಾವಿಡರಲ್ಲಿ ತೆಂಕರ ಪಾಲು ಹೆಚ್ಚಿನ ಅಳತೆಯಲ್ಲಿದೆ.

4200 ರಿಂದ 1900 ವರ್‍ಶಗಳ ಹಿಂದಿನ ಕಾಲವು ಬಾರತದಲ್ಲಿ ಸಂಕ್ರಮಣದ ಕಾಲ. ಸಿಂದೂ ಬಯಲಿನ ಪೊಳಲಿಕೆಯು ಕುಸಿದುಹೋಗಿ ಪಟ್ಟಣಗಳು ಪಾಳು ಬಿದ್ದಿದ್ದವು. ಮಂದಿಯು ಪಟ್ಟಣಗಳನ್ನು ತೊರೆದಿದ್ದರು. ಸಿಂದು ಬಯಲನ್ನು ತೊರೆದು ಗಂಗೆಯ ತೀರದಲ್ಲಿ ವಾಸಿಸಲು ಆರಂಬಿಸಿದ್ದರು. ಸಿಂದೂ ಬಯಲಿನಂತೆ ಹೆಣವನ್ನು ಹೂತುಹಾಕುವ ಬದಲು ಸುಡಲು ಆರಂಬಿಸಿದ್ದರು. ಅದೇ ಕಾಲದಲ್ಲಿ ಮೊದಲ ಬಾರಿಗೆ ಬಾರತದಲ್ಲಿ ವೇದಗಳು ಮತ ಮತ್ತು ಇಂಡೋ-ಯುರೋಪಿಯನ್ ಬಾಶೆಗಳು ಬಳಕೆಗೆ ಬರಲು ಆರಂಬಿಸಿದ್ದವು. ರಿಗ್ವೇದವನ್ನು ಹಲವು ಹಂತಗಳಲ್ಲಿ ರಚಿಸಲಾಗಿದೆ ಎನ್ನಲಾಗಿದೆ.

ಮೊದಮೊದಲ, ಹಳೆಯ ರಿಗ್ವೇದದ ಸಾಲುಗಳಲ್ಲಿ ಕೂಡಣದ ವಿಂಗಡಣೆಯಿಲ್ಲ. ರಿಗ್ವೇದಕ್ಕೆ ನಂತರದ ದಿನಗಳಲ್ಲಿ ಸೇರಿದ ಸಾಲುಗಳಲ್ಲಿ ಮಾತ್ರ ನಾಲ್ಕು ವರ್‍ಣಗಳ ವಿಂಗಡಣೆಯಿದೆ. ಸುಮಾರು ಎರಡು ಸಾವಿರ ವರ್‍ಶಗಳ ಹಿಂದೆ ರಚಿಸಲ್ಪಟ್ಟ ಮನುಸ್ಮ್ರುತಿ, ವರ್‍ಣಗಳ ನಡುವೆ ಮದುವೆಯು ಆಗಕೂಡದೆಂದು ಹೇಳಲಾಯಿತು. ಮನುಸ್ಮ್ರುತಿ ರಚನೆಯ ಕಾಲಕ್ಕೂ, ತೆಂಕರು-ಬಡಗರ ಬೆರಕೆ ನಿಂತುಹೋದ ಕಾಲಕ್ಕೂ ತಾಳೆಯಿದೆ. ಜಾತಿಗಳಲ್ಲಿ ಡಿ.ಎನ್.ಎ. ಮಡುಗಟ್ಟಿರುವುದು ಮನುಸ್ಮ್ರುತಿಯು ಬಾರತದಲ್ಲಿ ಪಾಲಿಸ್ಪಟ್ಟಿದ್ದನ್ನು ತೋರಿಸುತ್ತಿದೆ.

ಪೀಳಿಯರಿಮೆಯ ಅರಕೆಯಲ್ಲಿ ತೀರ್‍ಮಾನಿಸಲಾಗದ ವಿಶಯಗಳೂ ಉಳಿದುಕೊಂಡಿವೆ.

1. 4200-1900 ವರ್‍ಶಗಳ ಹಿಂದೆ ಬೆರಕೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಇದರ ಅದಾರದ ಮೇಲೆ ಯುರೇಸಿಯಾದ ಮಂದಿ (ಬಡಕರು) ಇದೇ ಕಾಲದಲ್ಲಿ ವಲಸೆ ಬಂದರು ಎಂದು ಹೇಳಲಾಗದು. ಬಡಕರು ಬಾರತಕ್ಕೆ ಬಂದಿದ್ದು ತೆಂಕರ ನಂತರವಾದರೂ ಸಿಂದೂ ಪೊಳಲಿಕೆ ಕುಸಿದ ಮೇಲೆ ಬಂದರು ಎಂದು ಹೇಳಲಾಗದು.

2. ಹಾಗಾಗಿ, ಇವತ್ತಿನಲ್ಲಿ ಗೊತ್ತಿರುವ ತಿಳುವಳಿಕೆಯ ಆದಾರದ ಮೇಲೆ ಸಿಂದೂ ಬಯಲಿನ ಪೊಳಲಿಕೆಯು ತೆಂಕರದ್ದೋ ಇಲ್ಲಾ ಬಡಕರದ್ದೋ ಎಂದು ತೀರ್‍ಮಾನಿಸಲಾಗದು.

3. 9000 ವರ್‍ಶಗಳ ಹಿಂದೆ ಆರಂಬವಾಗಿ 4800 ವರ್‍ಶಗಳ ಹಿಂದೆ ಕೊನೆಗೊಳ್ಳಲಾರಂಬಿಸಿದ ಸಿಂದು ಬಯಲಿನ ಪೊಳಲಿಕೆಯ ಕಾಲದಲ್ಲಿ ಎರಡೂ ಗುಂಪುಗಳು ಪರಸ್ಪರ ಬೆರೆಯದೆ ಅಕ್ಕಪಕ್ಕದಲ್ಲೇ ಸಾವಿರಾರು ವರ್‍ಶ ವಾಸವಾಗಿದ್ದಿರಬಹುದು.

ಇವೆಲ್ಲಾ ಸಂದೇಹಗಳು ಎರಡು ಮಾತಿಲ್ಲದಂತೆ ಬಗೆಹರಿಯಲು ಎರಡು ಹಾದಿಗಳಿವೆ.

1. ಸಿಂದು ನಾಗರೀಕತೆಯ ಲಿಪಿಯನ್ನು ಬಯಲುಗೊಳಿಸಿ ಲಿಪಿಯಲ್ಲಿ ಬರೆದಿರುವುದನ್ನು ಓದುವುದು. ಅದು ಇಂಡೋ-ಆರ್‍ಯನ್ ನುಡಿಯ ಲಿಪಿಯೋ ಇಲ್ಲಾ ಮುನ್-ದ್ರಾವಿಡದ ಲಿಪಿಯೋ ಎಂದು ತಿಳಿದುಕೊಳ್ಳುವುದು.

2. ಸಿಂದು ಪೊಳಲಿಕೆಯಲ್ಲಿ ಸಿಗಬಹುದಾದ ಹೆಣಗಳಿಂದ ಡಿ.ಎನ್.ಎ.ಯನ್ನು ಹೊರತೆಗೆದು ಅದರಲ್ಲಿ ಬರೆದಿರುವುದನ್ನು ಓದುವುದು

ಬೆರಕೆಯಾಗುವುದಕ್ಕೆ ಮುಂಚಿದ್ದ ತೆಂಕರು ದ್ರಾವಿಡ ನುಡಿಯವರು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದ್ದರಿಂದ ಪ್ರೊಪೆಸರ್‍ ರಾವ್ ಅವರ ತಂಡದ ಮುಂತಿಳಿವಿನಂತೆ ಸಿಂದು ಪೊಳಲಿಕೆಯ ಲಿಪಿ ಮನ್-ದ್ರಾವಿಡದ್ದಾದರೆ ಸಿಂದಿ ಪೊಳಲಿಕೆಯನ್ನು ಕಟ್ಟಿದವರು ತೆಂಕರು ಎಂದಾಗುತ್ತದೆ. ಆಮೇಲೆ ತೆಂಕರನ್ನು ದ್ರಾವಿಡರೆಂದು ಪೀಳಿಯರಿಮೆಗಾರರೂ ಗುರುತಿಸಲು ಆರಂಬಿಸಬಹುದು. ಸಿಂದು ಬಯಲಿನಲ್ಲಿ ಸಿಗುವ ಹೆಣಗಳಲ್ಲಿ ಡಿ.ಎನ್.ಎ.ಯನ್ನು ಹೊರ ತೆಗೆಯುವುದು ಆಗಬಲ್ಲದಾದದರೆ ಕಡವರ (treasure) ಸಿಕ್ಕಂತೆಯೇ ಸರಿ.

ಸಿಂದು ಬಯಲು  ತಾಪವಲಯವಾಗಿದ್ದು ಹೆಣಗಳಲ್ಲಿ ಡಿ.ಎನ್.ಎ. ಕೆಡದೇ ಉಳಿದುಕೊಳ್ಳುವುದು ಅಪರೂಪ. ಆದರೂ ಸಿಗುವ ಸಾದ್ಯತೆ ಇದ್ದೇ ಇದೆ. ಯುರೋಪಿನ ತಂಪುವಲಯದಲ್ಲಿ 40,000 ವರ್‍ಶಗಳಶ್ಟು ಹಳೆಯ ಕಳೆಬರಹಗಳಿಂದಲೂ ಡಿ.ಎನ್.ಎ.ಯನ್ನು ಅಚ್ಚುಕಟ್ಟಾಗಿ ಹೊರತೆಗೆಯಲಾಗಿದೆ. ತೆಗೆದು ಓದಲಾಗಿದೆ! ಸಿಂದೂ ಬಯಲಿನಲ್ಲೂ ಅಂತಹದೊಂದು ಕಳೆಬರಹ ಸಿಗಲಿ! ಸಿಕ್ಕಲ್ಲಿ ಬಡಕರು (ಆರ್‍ಯರು?) ಬಾರತಕ್ಕೆ ಯಾವಾಗ ಬಂದರು ಎಂಬುದು ನಿಕ್ಕಿಯಾಗಲಿದೆ.

ಒಟ್ಟಿನಲ್ಲಿ ನಿಕ್ಕಿಯಾಗಿರುವುದು ಇದು: ಇಂಡೋ-ಆರ್‍ಯನ್ ನುಡಿಯವರ ವಲಸೆಯಿಂದ ದ್ರಾವಿಡ ನುಡಿಯವರು ತೆಂಕಣದತ್ತ ಸರಿದಿದ್ದಾರೆ. ನಮ್ಮ ಆದುನಿಕ ಕಾಲದಲ್ಲಿ ಇನ್ನೊಂದು ಸರತಿಯ ಇಂಡೋ-ಆರ್‍ಯನ್ ನುಡಿಯವರ ವಲಸೆ ಆರಂಬವಾಗಿದೆ. ದ್ರಾವಿಡ ನುಡಿಯವರಿಗೆ ತೆಂಕಣದತ್ತ ಸರಿಯಲು ಉಳಿದಿರುವುದು ಕಡಲು ಮಾತ್ರ!

(ಆದಾರ: 1. www.ted.com, 2. www.cell.com , 3. harvard.edu, 4. www.nature.com)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

 1. Anand Enguru says:

  ತುಂಬಾ ಚೆನ್ನಾಗಿ ಬರೆದಿದ್ದೀರಾ ಸಿದ್ದರಾಜು… ನಿಮ್ಮ ಈ ಬರಹಗಳಿಗೆ ಆಧಾರವೇನು ಎಂಬುದನ್ನೂ ಬರೆಯಲು ಸಾಧ್ಯವೇ?
  – ಆನಂದ್

 2. ನನ್ನಿ ಆನಂದ್,
  ಅದಾರವನ್ನ ಕೆಲವೆಡೆ ಅಲ್ಲೇ ಬರೆದಿದ್ದೇನೆ (ರಾವ್ ಗುಂಪಿನ ನುಡಿಯರಿಮೆಯ/ಹಳೇಬರಿಗೆಯರಿಮೆಯ ಅರಕೆ). ಕೆಲವೆಡೆ ಬರೆದಿಲ್ಲ (ರೀಚ್ ಗುಂಪಿನ ಪೀಳಿಯರಿಮೆಯ ಅರಕೆ). ಹೆಚ್ಚಾಗಿ ಪಳೆಯುಳಿಕೆಯರಿಮೆ (Archeology) ಮತ್ತು ನುಡಿಯರಿಮೆಯ (Linguistics) ಹಳೇ ತಿಳುವಳಿಕೆಗೆ ಹೊಸದಾಗಿ ಹಳೇಬರಹದರಿಮೆ (Paleography) ಮತ್ತು ಪೀಳಿಯರಿಮೆಯ (Genetics) ತಿಳುವಳಿಕೆಗಳು ಆರ್ಯ-ವಲಸೆಯ ಬಗ್ಗೆ ಹೊಸ ಹೊಸಬೆಳಕು ಚೆಲ್ಲುತ್ತಿವೆ. ಹೊಸ ತಿಳುವಳಿಕೆಯ ಆದಾರಗಳನ್ನು ಅಂಕಣದ ಕೆಳಗಿನ ನಾಲ್ಕು ಕೊಂಡಿಗಳಲ್ಲಿ ಕೊಡಲಾಗಿದೆ ನೋಡಿರಿ. ರಾವ್ ಮತ್ತು ರೀಚ್ ಗುಂಪಿನ ಅರಿಮೆಯ ಅಂಕಣಗಳು ನಿಮಗೆ ಎಟುಕದಿದ್ದಲ್ಲಿ ತಿಳಿಸಿರಿ. ನಾನು ಅವುಗಳನ್ನು ನಿಮಗೆ ಮಿಂಚಿಸುತ್ತೇನೆ.

 3. Mahesh Bhat says:

  ತುಂಬಾ ವಸ್ತು ನಿಷ್ಛವಾಗಿ ಬರೆದ ಬರಹ, ಅಭಿನಂದನೆಗಳು ಸಿದ್ಧರಾಜುರವರೆ.

  ಹೀಗೊಂದು ಸಂದೇಹ. ಆರ್ಯರು ಇರಾನ್ ಮೂಲದವರಾಗಿರಬಹುದಾ ?. ಸದ್ಯಕ್ಕೆ ಪ್ರಪಂಚದಲ್ಲಿ ಆರ್ಯರ ನಾಡು ಎಂದು ಕರೆಸಿಕೊಳ್ಳುತ್ತಿರುವುದು ಇರಾನ್ ಮಾತ್ರ. (Iran = Land of the aryans) . ಹಳೆಯ ಪರ್ಷಿಯನ್ ಭಾಷ ಮತ್ತು ಸಂಸ್ಕೃತಕ್ಕೆ ತುಂಬಾ ಹೋಲಿಕೆಯಿದೆಯೆಂದು ಹೇಳುತ್ತಾರೆ. ಅಲ್ಲದೇ ಸಿಂಧೂ ನದಿಯಿಂದ ಇರಾನ್ ತುಂಬಾ ದೂರವೇನೂ ಇಲ್ಲ.

 4. ನನ್ನಿ ಮಹೇಶ್,
  ಅರಿಮೆಯ ನುಡಿಯಲ್ಲಿ ಮಾತನಾಡುವಾಗ ಆರ್ಯರು ಅಂದರೆ ಆರ್ಯನ್ ನುಡಿಯಾಡುವವರು ಅನ್ನಬಹುದು. ಅದು ನುಡಿಯರಿಮೆಯ ಮಟ್ಟದಲ್ಲಾಯಿತು. ಹಳೆಯ ಪರ್ಶಿಯನ್ ನುಡಿಗೂ ಸಂಸ್ಕ್ರುತಕ್ಕೂ (ದ್ರಾವಿಡ ನುಡಿಗಳಿಗೋಲಿಸಿದರೆ) ಹತ್ತಿರದ ನಂಟಿರುವುದರಿಂದ ಬಾರತಕ್ಕೆ ವಲಸೆ ಬಂದ ಆರ್ಯನ್ನರಿಗೂ, ಹಳೆಯ ಪರ್ಶಿಯನ್ನರಿಗೂ ಹತ್ತಿರದ ನಂಟಿತ್ತು ಅಂದುಕೊಳ್ಳಬಹುದು. ನಾನಿಲ್ಲಿ ಹೆಚ್ಚಾಗಿ ಬರೆದಿರುವ ಪೀಳಿಯರಿಮೆಯ ಆದಾರಗಳನ್ನು ಪರಿಗಣಿಸಿದಾಗ ಕೊಂಚ ಬೇರೆಯದೇ ಪದಗಳನ್ನು ಬಳಕೆ ಮಾಡಬೇಕಾಗುತ್ತದೆ. ಅಂಕಣದಲ್ಲಿ ನಂತರ ಬಂದವರನ್ನು ನಾನು ‘ಬಡಕರು’ ಎಂದು ಕರೆದಿದ್ದೇನೆ.
  ಅಚ್ಚರಿಯ ಮಾತೆಂದರೆ, ಇವತ್ತಿನ ಮಂದಿಯ ಡಿ.ಎನ್.ಎ ನಂಟನ್ನು ನೋಡುವಾಗ ಬಡಕರು ಬಂದಿರಬಹುದಾದ ಹಾದಿಯನ್ನು ನೋಡಿದಂತಾಗುತ್ತದೆ! ಮೇಲಿನ ಅಂಕಣದಲ್ಲಿ “ಅರಕೆಗೆ ಒಳಪಟ್ಟ ಗುಂಪುಗಳು” ಎಂಬ ತಿಟ್ಟವನ್ನು ಒತ್ತಿ ದೊಡ್ಡದು ಮಾಡಿ ನೋಡಿರಿ. ಅದರಲ್ಲಿ ಬಲಗಡೆಯ ಚವ್ಕದಲ್ಲಿರುವ ಚಿಹ್ನೆಗಳನ್ನು ಗುರುತಿಸಿ. ಒಂದೊಂದು ಚಿಹ್ನೆಗಳು ಒಂದೊಂದು ಗುಂಪನ್ನು ಸೂಚಿಸುತ್ತವೆ. ಚಿಹ್ನೆಗಳು ಎಲ್ಲಿರುವುವು ಎನ್ನುವುದರ ಮೇಲೆ ಆಯಾ ಗುಂಪುಗಳ ನಂಟು ಮತ್ತು ನಂಟಿನ ಹರಿವು ತಿಳಿಯುತ್ತದೆ. ಬಾಸ್ಕ್ (ಸ್ಪಾನಿಶ್, ಪ್ರೆಂಚ್), ಜಾರ್ಜಿಯನ್, ಇರಾನಿ, ಪಟಾಣ, ಸಿಂದಿ, ಕಾಶ್ಮೀರಿ ಪಂಡಿತ ಹೀಗೆ ಸಾಗುತ್ತದೆ! ಬಡಕರು ಬಂದಿರುವ ಹಾದಿಯೂ ಕೂಡ ಇದೇ!
  ಇರಾನ್ ಮತ್ತು ಅಪ್ಗಾನಿಸ್ತಾನದ ಮೇಲಿರುವ ತುರ್ಕ್ಮೇನಿಸ್ತಾನದಲ್ಲಿ ಇತ್ತೀಚೆಗೆ 4000 ವರ್ಶಗಳ ಹಳೆಯ ಪಳೆಯುಳಿಗೆಗಳು ಸಿಕ್ಕಿವೆ. ಅಲ್ಲಿ ಕುದುರೆಗಳ ಪಳೆಯುಳಿಕೆಯೂ ಸಿಕ್ಕಿವೆ. ಹರಪ್ಪದಲ್ಲಿ ಸಿಕ್ಕಿಲ್ಲ! ಇದೂ ಕೂಡ ಹರಪ್ಪ ಆರ್ಯರದಲ್ಲ ಅನ್ನುವಂತಿದೆ. ಬರೆದರೆ ಪಳೆಯುಳಿಕೆಯರಿಮೆಯದ್ದೇ ಒಂದು ಅಂಕಣವಾಗಬಹುದು.

 5. @ ಸಿದ್ದರಾಜು….ತುಂಬಾ ಚೆನ್ನಾಗ್ ಬರೆದಿದೀರ…..ಈ ಬರಹದಲ್ಲಿನ ವಿಶಯಗಳು ನನಗೆ ಬಿಡಿ-ಬಿಡಿಯಾಗಿ ತಕ್ಕ-ಮಟ್ಟಿಗೆ ತಿಳಿದಿತ್ತು. ನೀವು ಪೀಳಿಯರಿಮೆ, ಪಳೆಯುಳಿಕೆಯರಿಮೆ, ಹಾಗು ನುಡಿಯರಿಮೆಗಳನ್ನು ಒಟ್ಟುಗೂಡಿಸಿ ಬರೆದಿರುವ ರೀತಿ ತುಂಬಾ ಸೊಗಸಾಗಿದೆ.

ಅನಿಸಿಕೆ ಬರೆಯಿರಿ: