ಅಸಮಾನತೆ, ಅನಾಚಾರಗಳ ಬೇಗುದಿಯಲ್ಲಿ…

ಪ್ರಸನ್ನ ಕರ‍್ಪೂರ

churumuri-water-problem

ಸದ್ಯ ಬಾರತದ ಸ್ತಿತಿ ವಿಶಮಿಸುತ್ತಿದೆ. ಆಂತರಿಕ ತುಮುಲದಲ್ಲಿ  ಸಿಲುಕಿ ನಲಗುತ್ತಿದೆ. ಅದ್ಯಾತ್ಮವನ್ನು ಬಿಸಿನೆಸ್‍ನ ಬಂಡವಾಳವನ್ನಾಗಿಸಿಕೊಂಡಿರುವ ಡೋಂಗಿ ಬಾಬಾಗಳ ಹೆಣ್ಣು ಮತ್ತು ಬೂದಾಹ ಬಯಲಾಗುತ್ತಿದೆ. ಯಾಂತ್ರಿಕ ಬದುಕಿಗೆ ಮಾನಸಿಕ ನೆಮ್ಮದಿ ನೀಡುವ ಕ್ಲಿನಿಕ್‍ನಂತೆ ವರ್‍ತಿಸುವ ಇವರ ಕಾರ್‍ಯಸ್ತಾನಗಳು ಅನಯ್ತಿಕ ಚಟುವಟಿಕೆಗಳ ತಾಣವಾಗಿರುವ ಹೇಸಿಗೆಯ ಸುದ್ದಿ ಬಹಿರಂಗವಾಗುತ್ತಿದೆ. ಹಾಗಂತ ಇವರ ಮೇಲಿನ ನಂಬಿಕೆ ಇಟ್ಟವರಿಗೇನು ಕಮ್ಮಿಯಿಲ್ಲ. ದಿನಕ್ಕೊಂದು ಬಾಬಾರ ಬಣ್ಣ ಬಯಲಾಗುತ್ತಿದೆ. ಬ್ರಶ್ಟ ರಾಜಕಾರಣಿಗಳ ಒಡನಾಟ ಇವರ ಕರಾಳ ಚಟುವಟಿಕೆಗಳನ್ನು ರಕ್ಶಿಸುತ್ತ ಪೋಶಿಸುತ್ತ ಬಂದಿದೆ. ಈ ಅಪವಿತ್ರ ಸ್ನೇಹದ ಪರಿಣಾಮ ಇಂದಿಗೂ ಅನೇಕ ಬಾಬಾಗಳು ರಾಜಾರೋಶವಾಗಿ ತಮ್ಮ ಚಟುವಟಿಕೆ ನಿರ್‍ವಿಗ್ನವಾಗಿ ನಡೆಸಿದ್ದಾರೆ. ಇವರಿಗೆ ಆದ್ಯಾತ್ಮಿಕ ಚಿಂತಕ, ಪರಮಪೂಜ್ಯರೆಂಬ ಗವ್ರವ ಬೇರೆ !

ಜಾತ್ಯತೀತತೆ ಹಾಗೂ ಮತೀಯಶಕ್ತಿಗಳು ಅಸಹನೆಯಿಂದ ತುಂಬಿ ತುಳುಕುತ್ತಿವೆ. ಬಡಜನರ ಶೋಶಣೆಗೆ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಜತೆಗೆ ಜಾತಿಯೂ ಕಾರಣವಾಗಿದೆ. ಜಾತಿ-ವರ್‍ಗ-ಅಂತಸ್ತು ಇವುಗಳನ್ನು ನಿರಾಕರಿಸುವ ಎಲ್ಲಾ ಸ್ತಳದಲ್ಲಿ ದರ್‍ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವುದರಿಂದ ಸಂಪ್ರದಾಯವಾದಿಗಳ ಆರ್‍ಬಟ ಮುಗಿಲು ಮುಟ್ಟಿದೆ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮದ್ಯೆ ಅಪಾಯದ ದಿನಗಳು ಸಾಗುತ್ತಿವೆ. ಹಲವರ ಮೆದುಳು ಮತ್ತು ಹ್ರುದಯಕ್ಕೆ ಕೋಮುವಾದಿ ವಿಶ ಲಗ್ಗೆಇಟ್ಟಿದೆ. ಇಂದಿಗೂ ಹಳ್ಳಿಗಳಲ್ಲಿ ಸಂಪ್ರದಾಯವಾದಿಗಳು ಮತ್ತು ಕೋಮುವಾದಿಗಳ ಶಕ್ತಿಗೆ ಅಮಾಯಕ ಮಹಿಳೆಯರು ಬಲಿಯಾಗುತ್ತಿದ್ದಾರೆ.

ಜನ ತಮ್ಮ ಮೂಲ ನೆಲೆಗಳಿಂದ ದೂರವಾಗುತ್ತಿದ್ದಾರೆ. ನಂಬಿಕೆ ವಿಶ್ವಾಸದ ಆಳದಲ್ಲಿ ಬಿರುಕು ಮೂಡಲಾರಂಬಿಸಿವೆ. ಕೊಲೆ-ಸುಲಿಗೆಗಳಿಲ್ಲದ ದಿನಗಳೇ ಇಲ್ಲದಂತಾಗಿದೆ. ಮಂದಿರ-ಮಸೀದಿ ನೆಪ ತೆಗೆದು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುವವರ ಸಂಕ್ಯೆ ದಿನೇ ದಿನೇ ಏರುತ್ತಿದೆ. ಪ್ರೀತಿ-ಸಮಾನತೆಯ ಆಸೆಯಿಟ್ಟುಕೊಂಡವರ ಆಸೆ ಕಮರುತ್ತಿವೆ. ಮತಾಂದರ ಕುಣಿತ ಎಲ್ಲಡೆ ಕಂಡು ಬರುತ್ತಿದೆ. ಕಾಸಗೀಕರಣ ಎಂಬ ಬೂತ ಒಳಹೊಕ್ಕಾಗಿದೆ. ಕಾರ್‍ಪೋರೇಟ್ ಸೆಕ್ಟರ್ ಎಂಬ ವಿಶವರ್‍ತುಲದಲ್ಲಿ ಸಿಕ್ಕು ನರಳುತ್ತಿರುವ ನಾವು ನಮ್ಮ ಊರಲ್ಲೇ ಇರುವ ಸ್ಲಂ, ಗುಡಿಸಲುಗಳ ಜನರ ಹಸಿವಿನ ಆಕ್ರಂದನ ಹತಾಶೆಗಳನ್ನು ನೋಡುವ ಗೋಜಿಗೆ ಹೋಗುತ್ತಿಲ್ಲ. ನಮ್ಮ ಕಣ್ಣುಗಳಿಗೆ ಪೊರೆ ಕಟ್ಟಿದೆ. ಶೋಶಿತರ ಕೋಪತಾಪ, ಅವಮಾನ ಆಕ್ರೋಶಗಳೆಲ್ಲಾ  ತಣ್ಣಗಾಗುತ್ತಿವೆ. ಪ್ರೀತಿ-ಸಮಾನತೆಗಳು ತಬ್ಬಲಿಗಳಾಗಿವೆ. ತಾರತಮ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಹೊರಬರಲಾದ ಸ್ತಿತಿ ಇಂದಿಗೂ ಅನೇಕ ಸಮುದಾಯಗಳದ್ದಾಗಿದೆ.

ಶೋಶಿತ ಜನತೆಯ ಪರವಾದ ನಿಲುವನ್ನು ಸಾಂಸ್ಕ್ರುತಿಕ ಕ್ಶೇತ್ರದಲ್ಲಿ ಬದ್ರವಾಗಿ ನೆಲೆಗೊಳಿಸುವ ಸಾಮಾಜಿಕ ಪ್ರಜ್ನೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಯತ್ನ ನಡೆದರೂ ಸಿಕ್ಕ ಬೆಂಬಲ, ಸಹಕಾರ ಅಶ್ಟಕ್ಕಶ್ಟೇ ಎಂದರೆ ತಪ್ಪಾಗದು. ಹೊಲದಲ್ಲಿ ನಳನಳಿಸುವ ಹಸಿರಿನ ಹಿಂದಿನ ಶ್ರಮಿಕರ ಬೆವರಿಗೆ ಬೆಲೆ ಇಲ್ಲದಂತಾಗಿದೆ. ಕೆಳವರ್‍ಗದ ಬದುಕಿನ ಲಯ ತಪ್ಪಿದೆ. ಅವರ ನಿಟ್ಟುಸಿರಿನ ಹಿಂದಿರುವ ದಾರುಣತೆ ಅರ್‍ತಯ್ಸಿಕೊಳ್ಳದ ಜಮೀನ್ದಾರರೇ ಹೆಚ್ಚಿರುವ ನಮ್ಮ ಈ ವ್ಯವಸ್ತೆ ಬಹು ದೊಡ್ಡ ವಿಪರ್‍ಯಾಸವೇ ಸರಿ. ಅನ್ಯಾಯ, ಅಸಮಾನತೆಯ ಹಲವು ಆಯಾಮಗಳು ಇಂದಿಗೂ ಜಾರಿಯಲ್ಲಿದ್ದು ಸಾಮಾಜಿಕ ಕುರೂಪತೆಗೆ ಸಾಕ್ಶಿಯಾಗಿವೆ. ದರ್‍ಪದ ಅಟ್ಟಹಾಸದಿಂದ ನಲುಗುತ್ತಿರುವ  ಜನ ಇಂತಹ ಕ್ರೂರ ವ್ಯವಸ್ತೆಯಲ್ಲಿ ಸಿಕ್ಕು ಪರಿತಪಿಸುತ್ತಿದ್ದಾರೆ.

ಪ್ರಜಾಪ್ರಬುತ್ವ ವ್ಯವಸ್ತೆ ಅರ್‍ತಹೀನವಾಗುತ್ತಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಹಣದ ಹಿಂದೆ ಬಿದ್ದಿರುವ ನಾವು ಸಹಬಾಳ್ವೆಯಿಂದ ವಿಮುಕರಾಗಿದ್ದೇವೆ. ಎಲ್ಲೆಲ್ಲೂ ಜಾತಿ, ಮತದ ಅಬ್ಬರ ಕಾಣುತ್ತಿದ್ದೇವೆ. ಬಡವ ಬಲ್ಲಿದರ ಮದ್ಯೆಯ ಅಂತರ ಹಾಗೆಯೇ ಇದೆ. ವೋಟ್ ಬ್ಯಾಂಕ್ ರಾಜಕಾರಣದ ಪ್ರತಿಪಲವಾಗಿ ಪ್ರತ್ಯೇಕತೆಯ ಬೆಂಕಿಯಲ್ಲಿ ಹಲವು ರಾಜ್ಯಗಳು ಉರಿಯುತ್ತಿವೆ. ಮಿತಿಮೀರಿದ ಇಂಗ್ಲೀಶ್‍ ದಾಹದಿಂದ ಮಾತ್ರುಬಾಶಾ ಶಿಕ್ಶಣ ಮಾದ್ಯಮ ಹದಗೆಟ್ಟ ಹಯ್ದರಾಬಾದ್ ಆಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ಹಗಲುದರೋಡೆಗಿಳಿದಿರುವ ಕಾಸಗಿ ಶಿಕ್ಶಣ ಸಂಸ್ತೆಗಳ ವ್ಯಾಪಾರ ಬಲು ಜೋರಾಗಿಯೇ ಸಾಗಿದೆ. ಇವರ ಹಿತಕಾಯುವ ಸರಕಾರ ಶ್ರೀ ಸಾಮಾನ್ಯನ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕೆಸರಾದ ಕಯ್ಗಳಿಗೆ ನೆಲೆ ಕೇಳುವುದೇ ಒಂದು ದೊಡ್ಡ ಅಪರಾದವಾಗುತ್ತಿದೆ. ಜಮೀನ್ದಾರಿಕೆ ಮತ್ತು ವತನ್ದಾರಿಕೆ ಪೂರ್‍ಣಪ್ರಮಾಣದಲ್ಲಿ ಇಂತೂ ನಿಂತಿಲ್ಲ. ವ್ಯವಸ್ತೆಯ ಬದಲಾವಣೆಯ ಮಾತು ಬರೀ ಮಾತಾಗಿಯೇ ಉಳಿದಿದೆ. ಬಡತನದ ನೋವಿನ ಜತೆ ಸಿರಿತನದ ಮದ್ಯದ ವ್ಯತ್ಯಾಸ ಹುಡುಕುವ ಮನಸ್ಸುಗಳು ಎಲ್ಲೋ ದ್ರುತಿಗೆಟ್ಟಿವೆ. ಬವಿಶ್ಯದ ನೆಲೆ ಕಂಡುಕೊಳ್ಳುವ ಬರದಲ್ಲಿ ಸ್ವಾರ್‍ತಕ್ಕೆ ಸಿಕ್ಕ ಶೋಶಿತ ಸಮಾಜದ ನಾಯಕರೂ ರಾಜಕಾರಣಿಗಳ ಬಾಲಂಗೋಚಿಯಾಗುತ್ತಿರುವುದು ವಿಶಾದವೇ ಸರಿ. ಸಮಯಸಾದಕರೇ ತುಂಬಿ ತುಳುಕುತ್ತಿದ್ದು ಹೊಗಳಿಕೆ, ಜನಪ್ರಿಯತೆಗೆ ಜೋತುಬಿದ್ದ ಗುಳ್ಳೇನರಿ ಬುದ್ದಿಯ ಜನರು ಎಲ್ಲೆಡೆ ಕಂಡುಬರುತ್ತಾರೆ. ವ್ಯವಸ್ತೆಯ ಅಮಲೇರಿದ ಪರಿಣಾಮ ಮನುಶ್ಯತ್ವ ಮರೆಯಾಗಿದೆ. ತುಳಿತಕ್ಕೊಳಗಾದವರ ಪರ ದ್ವನಿ ಏನೋ ಮೊಳಗಿದೆ ಆದರೆ ಗಟ್ಟಿಯಾಗಿಲ್ಲ. ದಾರ್‍ಮಿಕ ಮವ್ಡ್ಯ ತಾಂಡವವಾಡುತ್ತಿದೆ. ದೇಶ, ಸಂಸ್ಕ್ರುತಿ, ಬಾಶೆ ಮತ್ತು ದರ್‍ಮದ ಹೆಸರಿನಲ್ಲಿ ದ್ವೇಶ ತಿರಸ್ಕಾರಗಳನ್ನು ಬೆಳೆಸುವ ಯತ್ನ ನಿರಂತರವಾಗಿ ಸಾಗಿದೆ.

ನಾವಿಂದು 21 ನೇ ಶತಮಾನದಲ್ಲಿದ್ದೇವೆ. ಇದೊಂದು ಅತ್ಯಾದುನಿಕ ಯುಗ, ಹಾಗೆ-ಹೀಗೆ ಎಂದೆಲ್ಲಾ ಬಡಾಯಿ ಕೊಚ್ಚಿಕೊಂಡರೂ ತಾರತಮ್ಯದ ರೋಗಕ್ಕೆ ಮದ್ದು ಕಂಡುಹಿಡಿಯಲಾಗಿಲ್ಲ. ಜನಪ್ರತಿನಿದಿಗಳು ಎಂದೆನಿಸಿಕೊಂಡವರು ಜನರ ಮಾತಿನ ಪ್ರತಿನಿದಿಗಳಾಗದೇ ತಮ್ಮ ಕುರ್‍ಚಿ ಬದ್ರಪಡಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಇನ್ನೊಂದೆಡೆ ಪಶುವಿನ ತರ ದುಡಿದರೂ ಸಂಸಾರ ಸಾಗಿಸಲಾಗದ ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸಲಾರದ ಅಸಹಾಯಕರು ಇಂದಿಗೂ ಕಂಡು ಬರುತ್ತಿದ್ದಾರೆ. ಕಡುಬಡತನ ಇವರು ಗಳಿಸಿದ ಆಸ್ತಿ. ಇವರ ಮತಗಳ ಮೇಲೆ ಹಲವರ ಕಣ್ಣು. ಬ್ರಿಟೀಶರ ದಾಸ್ಯದಿಂದ ಮುಕ್ತಿ ಕಂಡರೂ ಜಾತಿವ್ಯವಸ್ತೆ  ಕಪಿಮುಶ್ಟಿಯಿಂದ ಹೊರಬರಲಾಗದ ಸ್ತಿತಿ. ಅಸಮಾನತೆಯ ಕೊಳಕು ಬಳ್ಳಿ ಎಲ್ಲೆಡೆ ಹಬ್ಬಿದೆ. ಹೋರಾಟಗಳ ಶಕ್ತಿ ಕ್ಶೀಣಿಸುತ್ತಿದೆ. ಅಲ್ಲೂ ಸ್ವಾರ್‍ತ ನಾಯಕರಿಂದಾಗಿ  ಹೋರಾಟದ ದಿಕ್ಕುದೆಸೆ ಬದಲಾಗುತ್ತಿದೆ. ರಯ್ತ ಪರ ಕಣ್ಣೀರು ಹಾಕುತ್ತಲೇ ಒಳಗೊಳಗೆ ಬುಕ್ ಆಗುವ ನಾಯಕರು ಸಾಕಶ್ಟಾಗಿದ್ದಾರೆ.  ಶೋಶಿತರ ಬವಣೆಗಳಿಗೆ ಸ್ಪಂದಿಸುವ ನಾಯಕರನ್ನು ದೀಪ ಹಚ್ಚಿ ಹಡುಕಬೇಕಾದ ಪರಿಸ್ತಿತಿ ಎದುರಾಗಿದೆ. ಶರಣಾಗತಿ ಸಲ್ಲದು ಹೋರಾಟ ನಿಲ್ಲದು ಎಂದೆಲ್ಲಾ ಕೊಚ್ಚಿಕೊಂಡರೂ ವಾಸ್ತವವಾಗಿ ನಡೆಯುತ್ತಿರುವ ಹೋರಾಟಗಳ ಸ್ವರೂಪ ಮತ್ತು ಸಾಮರ್‍ತ್ಯ ನೋಡಿದರೆ ಸಾಕು ತಿಳಿದುಬರುತ್ತದೆ. ಪರಿಸ್ತಿತಿ ಹೀಗೆ ಮುಂದುವರಿದಲ್ಲಿ ಬಾರತದ ಸ್ತಿತಿ ಅಶ್ಟೇ!

(ಚಿತ್ರ ಸೆಲೆ: churumuri.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: