ಗೂಗಲ್ ಕನ್ನಡಕದ ಹೊಸ ಚಳಕ!

 ಪ್ರಶಾಂತ ಸೊರಟೂರ.

Google-Glass1

ಮಿಂಬಲೆಯ ದೊರೆ ಗೂಗಲ್, ಇತ್ತೀಚಿಗೆ ಹೊಮ್ಮಿಸಿದ್ದ ಗೂಗಲ್ ಗ್ಲಾಸ್ ಮತ್ತೇ ಹೊಸ ಸುದ್ದಿ ಮಾಡಿದೆ. ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಯ್ಮದ್ದು (operation) ಮಾಡುವಾಗ ಗೂಗಲ್ ಗ್ಲಾಸಿನ ನೆರವು ಪಡೆಯಲಾಗಿದೆ. ಚೆನ್ನಯ್ ಲಯ್ಪ್ ಲಯನ್ ಆಸ್ಪತ್ರೆಯ ಡಾ.ರಾಜಕುಮಾರ್ ಈ ಕೆಲಸ ಮಾಡಿದ ಮಾಂಜುಗರು.

ಗೂಗಲ್ ಗ್ಲಾಸ್, ಕನ್ನಡಕದಂತೆ ಹಾಕಿಕೊಳ್ಳಬಹುದಾದ ಕಿರು ಕಂಪ್ಯೂಟರ್! ಹವ್ದು, ಮೇಜಿನಿಂದ ಮಡಿಲಿಗೆ, ಮಡಿಲಿನಿಂದ ಕಯ್ ತುದಿಯವರೆಗೆ ಬೆಳೆದು ಬಂದ ಎಣ್ಣುಕಗಳ (computer) ಮುಂದಿನ ತಲೆಮಾರು ಇದು. ಕನ್ನಡಕದ ಎರಡು ಬದಿಯ ಕಡ್ಡಿಗಳಲ್ಲಿ ಎಣ್ಣುಕವನ್ನು ಅಳವಡಿಸಿದ್ದು, ಚಳಕರಿಮೆಯಲ್ಲಿ ಆಗುತ್ತಿರುವ ಏಳಿಗೆಗಳಿಗೆ ಹಿಡಿದ ಕಯ್ಗನ್ನಡಿ.

ಕನ್ನಡಕದ ಅಡಕಗಳು:

google_glass_1

ಗೂಗಲ್ ಗ್ಲಾಸಿನ ಮುಂದಿನ ಬಾಗದಲ್ಲಿ ತಿಟ್ಟುಕ (camera) ಅಳವಡಿಸಿದ್ದು, ಇದರಿಂದ ಓಡುತಿಟ್ಟ (video) ಇಲ್ಲವೇ ತಿಟ್ಟಗಳನ್ನು (pictures) ಸೆರೆಹಿಡಿಯಬಹುದು. ಕನ್ನಡಕದ ಕಡ್ಡಿಯ ನಡುವಿನಲ್ಲಿ ಚಿಕ್ಕದಾದ ಸಿ.ಪಿ.ಯು. ಇದ್ದು, ಎಣ್ಣುಕದ ಮಿದುಳಿನಂತೆ ಇದು ಕೆಲಸ ಮಾಡುತ್ತದೆ. ಕನ್ನಡಕಕ್ಕೆ ಕಸುವು ಒದಗಿಸುವ ಬ್ಯಾಟರಿ ಕಡ್ಡಿಯ ಹಿಂಬಾಗದಲ್ಲಿದೆ.

ಕನ್ನಡಕದ ಮುಂದಿನ ಬಾಗದಲ್ಲಿರುವ ತಿಟ್ಟುಕಕ್ಕೆ ಹೊಂದಿಕೊಂಡಿರುವಂತೆ ತೋರ‍್ಪುಗೆ (projector) ಮತ್ತು ಪಟ್ಟಕಗಳನ್ನು (prism) ಅಳವಡಿಸಲಾಗಿದೆ. ತಿಟ್ಟುಕ ಹೊಮ್ಮಿಸುವ ತಿಟ್ಟ ಮತ್ತು ತಿಳಿಹಗಳನ್ನು (data) ಇವು ಪುಟ್ಟ ತೆರೆಯ ಮೇಲೆ ಕಾಣುವಂತೆ ಮಾಡುತ್ತವೆ. ಕನ್ನಡಕವು ಬ್ಲೂಟೂತ್ (Bluetooth), ವಯ್-ಪಯ್ (WiFi) ಮತ್ತು ಜಿ.ಪಿ.ಎಸ್. ಏರ‍್ಪಾಡುಗಳನ್ನೂ ಹೊಂದಿರುವುದರಿಂದ, ಮಿಂಬಲೆ (internet) ಬೆಸುಗೆಯಾದರೆ ಸಾಕು ಇಡಿ ಜಗತ್ತನ್ನೇ ಗೂಗಲಿಸಿಬಹುದು!

ಗೂಗಲ್ ಗ್ಲಾಸಿನ ಇನ್ನೊಂದು ಗಮನ ಸೆಳೆಯುವ ವಿಶಯವೆಂದರೆ, ಈ ಕಿರು ಕಂಪ್ಯೂಟರನ್ನು ಬರೀ ಮಾತಿನಿಂದ ನಡೆಸಬಹುದು. ’ಕಡತ ತೆರೆ’ ಅಂತಾ ಉಲಿದರೆ ಸಾಕು ಕಂಪ್ಯೂಟರ್ ಗೂಡಿನಲ್ಲಿ ಕಡತ ತೆರೆದುಕೊಂಡು ಬಳಸುಗರ ಕಣ್ಣ ತೆರೆಯ ಮೇಲೆ ಕಾಣಿಸುತ್ತದೆ. ಬಳಸುಗರ ಮಾತನ್ನು ಕಂಪ್ಯೂಟರಿಗೆ ತಲುಪಿಸಲು ಕನ್ನಡಕದ ಮುಂದಿನ ಬಾಗದಲ್ಲಿ ಚಿಕ್ಕ ಉಲಿಪು (micro phone) ಇರಿಸಲಾಗಿದೆ.

ಸರಿ. ಗೂಗಲ್ ಕನ್ನಡಕದ ಬಾಗಗಳ ಬಗ್ಗೆ ತಿಳಿದುಕೊಂಡೆವು ಈಗ ಮದ್ದರಿಮೆಯಲ್ಲಿ ಅದರ ಕೆಲಸವೇನಂತ ತಿಳಿದುಕೊಳ್ಳೋಣ. ಒಬ್ಬ ನುರಿತ ಮಾಂಜುಗ (doctor) ಈ ಕನ್ನಡಕವನ್ನು ಹಾಕಿಕೊಂಡು ಕೊಯ್ಮದ್ದಿನ ಕೆಲಸಕ್ಕೆ ಇಳಿದಾಗ, ಮದ್ದರಿಮೆಯನ್ನು ಕಲಿಯುತ್ತಿರುವ ಮರಿ-ಮಾಂಜುಗರು (junior doctors) ನುರಿತದಿಂದ ಕೊಯ್ಮದ್ದಿನ ಕೆಲಸವನ್ನು ಹೇಗೆ ಮಾಡಬೇಕಂತ ದೂರದಲ್ಲಿ ಕುಳಿತು ‘ಗೂಗಲ್ ಒಡನಾಟ’ದಲ್ಲಿ (Google hangout) ಕಲಿಯಬಹುದು!

ಹಾಗೇನೇ, ಚಿಕ್ಕ ಊರೊಂದರಲ್ಲಿ ರೋಗಿಯ ಗುಂಡಿಗೆಯನ್ನು ಸರಿಪಡಿಸಲು ಅಣಿಯಾದ ಮಾಂಜುಗರಿಗೆ ದೊಡ್ಡ ಊರಿನಲ್ಲಿರುವ ನುರಿತ ಮಾಂಜುಗರಿಂದ ಸಲಹೆ ಸೂಚನೆಗಳು ದೊರೆತರೆ ಎಶ್ಟೊಂದು ಮಂದಿಯ ಜೀವ ಉಳಿಸಬಹುದಲ್ಲವೇ? ಇದರ ಜತೆಗೆ ರೋಗಿಯ ಕುತ್ತದ ಹಿನ್ನೆಲೆ, ಸೀಳ್ಕದಿರು (X-ray) ಕಡತ, ಮದ್ದುಗಳ ಪಟ್ಟಿ ಮುಂತಾದ ಮಾಹಿತಿಗಳು ಕೊಯ್ಮದ್ದು ಮಾಡುವಾಗಲೇ ನೇರವಾಗಿ ಮಾಂಜುಗರ ಕಣ್ಣ ಮುಂದೆ ಕಾಣುವಂತಾದರೆ ಕೆಲಸ ತುಂಬಾ ಸುಲಬವಾಗಬಲ್ಲದು.

ಗೂಗಲ್ ಕನ್ನಡಕ ಇಂತ ಹಲವಾರು ಅವಕಾಶಗಳ ಬಾಗಿಲು ತೆರೆದಿದೆ, ಕಯ್ ಚಾಚಿ ಅವುಗಳನ್ನು ಬಾಚಿಕೊಳ್ಳಲು ಜಗತ್ತು ಅಣಿಯಾಗುತ್ತಿದೆ.

(ತಿಟ್ಟಸೆಲೆಗಳು: geeky-gadgetslasikon.de)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: