ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

ಚೇತನ್ ಜೀರಾಳ್.

ruchir_sharma

ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ “ಬ್ರೇಕವ್ಟ್ ನೇಶನ್ಸ್” ಅನ್ನುವ ಹೆಸರಿನ ಹೊತ್ತಗೆ ಪ್ರಪಂಚದಲ್ಲಿ ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿತ್ತು. ಸಾಮಾನ್ಯವಾಗಿ ಪ್ರಪಂಚದಲ್ಲಿರುವ ಹೂಡಿಕೆದಾರರಿಗೆ ಇದ್ದ ನಂಬಿಕೆಯಂದರೆ “ಬ್ರಿಕ್ಸ್” (BRICS – ಬ್ರಜಿಲ್, ರಶ್ಯಾ, ಇಂಡಿಯಾ, ಚಯ್ನಾ ಮತ್ತು ದಕ್ಶಿಣ ಆಪ್ರಿಕಾ) ದೇಶಗಳು ಉದ್ದಿಮೆಗಳಲ್ಲಿ ಮುಂದಿದ್ದು, ಹೂಡಿಕೆದಾರರಿಗೆ ಈ ದೇಶಗಳು ಹೆಚ್ಚು ಲಾಬ ತಂದುಕೊಡುತ್ತವೆ ಹಾಗೂ ಈ ದೇಶಗಳ ಹಣಕಾಸು ಏರ್‍ಪಾಡು ಬೆಳೆಯುತ್ತಾ ಹೋಗುತ್ತದೆ ಎನ್ನುವುದು. ಆದರೆ ಈ ಹೊತ್ತಗೆಯಲ್ಲಿ ಮುಕ್ಯವಾಗಿ “ಬ್ರಿಕ್ಸ್” (BRICS) ದೇಶಗಳು ಹೇಗೆ ತಮ್ಮ ನೆಲೆ ಕಳೆದುಕೊಳ್ಳುತ್ತಿವೆ ಹಾಗೂ ಯಾವ ದೇಶಗಳು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲುತ್ತಿವೆ ಎನ್ನುವುದರ ಬಗ್ಗೆ ಹೇಳಲಾಗಿತ್ತು. ಆದರೆ ಮೇಲೆ ಹೇಳಿರುವ BRICS ದೇಶಗಳ ಇಂದಿನ ಹಣಕಾಸು ಏರ್‍ಪಾಡನ್ನು ನೋಡಿದರೆ ರುಚಿರ್ ಶರ್‍ಮಾ ಅವರು ಹೇಳಿದ್ದ ಮಾತು ನಿಜವೆನ್ನಿಸುತ್ತದೆ.

ಮೊನ್ನೆ ಪೋರ್‍ಬ್ಸ್ ಸುದ್ದಿಹಾಳೆಗೆ ನೀಡಿರುವ ಸಂದರ್‍ಶನದಲ್ಲಿ ಇತ್ತೀಚಿನ ದಿನಗಳಲ್ಲಿ ಬಾರತದ ಹಣಕಾಸು ಏರ್‍ಪಾಡು ತನ್ನ ಬಲ ಕಳೆದುಕೊಳ್ಳಲು ಕಾರಣವೇನು ಅನ್ನುವುದರ ಬಗ್ಗೆ ಮಾತನಾಡಿದ್ದಾರೆ. 2003 – 2011 ರವರೆಗೂ ಇದ್ದ ಬಾರತದ ಬೆಳವಣಿಗೆಗೆ ತನ್ನ ಒಳಗಿನ ಸುದಾರಣೆಗಳಿಗಿಂತ ಜಾಗತಿಕವಾಗಿ ಇದ್ದ ಕಾರಣಗಳೇ ಹೆಚ್ಚು ಪ್ರಬಾವ ಹೊಂದಿದ್ದವು ಎಂದು ರುಚಿರ್ ಹೇಳುತ್ತಾರೆ. ಇದರ ಜೊತೆಗೆ ಬಾರತದ ಒಟ್ಟು ಬೆಳವಣಿಗೆಗಿಂತ ಬಾರತದ ಕೆಲವು ನಾಡುಗಳು ಬಾರತದ ಸರಾಸರಿಗಿಂತ ಹೆಚ್ಚಿನ ಮಟ್ಟದ ಬೆಳವಣಿಗೆಯನ್ನು ಕಳೆದ 5 ರಿಂದ 10 ವರ್‍ಶಗಳಲ್ಲಿ ತೋರಿಸುತ್ತಾ ಬಂದಿವೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಆ ನಾಡುಗಳು ತಮ್ಮ ನಿಯಮಗಳಲ್ಲಿ ಮಾಡಿಕೊಂಡಿರುವ ಬದಲಾವಣೆಗಳಿಂದ ಹಾಗೂ ಅಲ್ಲಿನ ಮುಂದಾಳುಗಳ ಕಾರಣದಿಂದ ಸರಾಸರಿಗಿಂತ ಹೆಚ್ಚಿನ ಬೆಳವಣಿಗೆ ಪಡೆಯಲು ಸಾದ್ಯವಾಯಿತು ಅನ್ನುತ್ತಾರೆ. ಅವರು ತಮ್ಮದೇ ಕೆಲವು ಸೂಚಿಗಳನ್ನು ಇಟ್ಟುಕೊಂಡು ಬಾರತದ ಕೆಲವು ನಾಡುಗಳು ತುಂಬಾ ಚೆನ್ನಾಗಿ ಬೆಳವಣಿಗೆ ಕಾಣುತ್ತಿವೆ ಎಂದು ಆರಿಸಿದ್ದಾರೆ. ಹಾಗಿದ್ದರೆ ಇದರಲ್ಲಿ ನಮ್ಮ ನಾಡಿದೆಯೇ? ಮುಂದೆ ನೋಡಿ.

ಯಾವ ನಾಡುಗಳಿವೆ?

ತುಂಬಾ ಚೆನ್ನಾಗಿ ಬೆಳವಣಿಗೆ ಕಾಣುತ್ತಿರುವ ನಾಡುಗಳೆಂದರೆ ಗುಜರಾತ, ಬಿಹಾರ, ಮದ್ಯಪ್ರದೇಶ, ಓಡಿಶಾ, ಚತ್ತೀಸಗಡ, ದೆಹಲಿ ಮುಂತಾದವುಗಳು. ಇದರಲ್ಲಿ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಕಂಡಿರುವ ನಾಡುಗಳೆಂದರೆ ಬಿಹಾರ, ಓಡಿಶಾ, ಮದ್ಯಪ್ರದೇಶ ಮತ್ತು ಚತ್ತೀಸಗಡ. ಗಮನಿಸಬೇಕಾಗಿರುವ ಅಂಶವೆಂದರೆ ಈ ಪಟ್ಟಿಯಲ್ಲಿ ನಮ್ಮ ನಾಡು ಕರ್‍ನಾಟಕ ಇಲ್ಲವೇ ಇಲ್ಲ!

ಇದಕ್ಕೆ ಕಾರಣವೇನು?

ರುಚಿರ್ ಶರ‍್ಮಾ ಹೇಳುವ ಪ್ರಕಾರ ಒಂದು ನಾಡಿನಲ್ಲಿ ಎಶ್ಟು ದೊಡ್ಡ ಊರುಗಳಿವೆ, ಅಲ್ಲಿ ಇರಬೇಕಾಗಿರುವ ಜನಸಂಕ್ಯೆಯ ಪ್ರಮಾಣವೆಶ್ಟು ಮುಂತಾದ ವಿಶಯಗಳು ನಾಡುಗಳ ಬೆಳವಣಿಗೆಯನ್ನು ನಿರ್‍ದರಿಸುತ್ತವೆ. ಎತ್ತುಗೆಗೆ ಬೆಂಗಳೂರಿನಲ್ಲಿ ಇಂದು ಸುಮಾರು 90 ಲಕ್ಶ ಜನರಿದ್ದಾರೆ. ಇದಾದ ನಂತರ ದೊಡ್ಡ ನಗರವೆಂದರೆ ಹುಬ್ಬಳ್ಳಿ, ಇಲ್ಲಿರುವ ಜನಸಂಕ್ಯೆ ಸುಮಾರು 15 ಲಕ್ಶ, ಇದಾದ ನಂತರ ಮಯ್ಸೂರು ನಗರ. ಮೊದಲನೇ ಹೆಚ್ಚು ಜನಸಂಕ್ಯೆ ಹೊಂದಿರುವ ನಗರಕ್ಕೂ ಎರಡನೇ ಹೆಚ್ಚು ಜನಸಂಕ್ಯೆ ಹೊಂದಿರುವ ನಗರಕ್ಕೂ ಹೋಲಿಕೆ ಮಾಡಿದರೆ ಇವೆರಡರ ನಡುವೆ ದೊಡ್ಡ ಕಂದಕವಿರುವುದು ಎದ್ದು ಕಾಣುತ್ತದೆ. ಈ ತರಹದ ಜನಸಂಕ್ಯೆ ದಟ್ಟಣೆಯ ವ್ಯತ್ಯಾಸ ಬೆಳೆಯುತ್ತಿರುವ ನಾಡುಗಳಿಗೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ರುಚಿರ್ ಹೇಳುತ್ತಾರೆ. ಕರ್‍ನಾಟಕದಲ್ಲಿರುವ ಎರಡನೇ ದೊಡ್ಡ ನಗರದಲ್ಲಿ ಮೊದಲ ದೊಡ್ಡ ನಗರದ ಶೇ 50 ಅತವಾ ಅದಕ್ಕಿಂತ ಹೆಚ್ಚು ಜನಸಂಕ್ಯೆ ಇರಬೇಕು. ಹಾಗಾದಾಗ ಮಾತ್ರ ಆ ನಾಡಿನ ಬೆಳವಣಿಗೆ ಕೇವಲ ಒಂದು ಊರಿನ ಮೇಲೆ ನಿಂತಿರುವುದಿಲ್ಲ. ನಮ್ಮ ನಾಡಿನಲ್ಲಿರುವ ಮಂದಿಸಂಪತ್ತು ಮತ್ತು ನಯ್ಸರ್‍ಗಿಕ ಸಂಪತ್ತನ್ನು ನೋಡಿದರೆ ಬೆಂಗಳೂರು ಹೊರತುಪಡಿಸಿ ಮಂಗಳೂರು, ಮಯ್ಸೂರು, ಹುಬ್ಬಳ್ಳಿ-ದಾರವಾಡ, ಬೆಳಗಾವಿ, ಕಲ್ಬುರ್‍ಗಿ, ಹಾಸನ, ಶಿವಮೊಗ್ಗ ಮುಂತಾದ ಊರುಗಳನ್ನು ಎರಡನೇ ಹಂತದ ದೊಡ್ಡ ನಗರಗಳನ್ನಾಗಿ ಬೆಳೆಸಲು ಅವಕಾಶವಿದೆ. ಆದರೆ ಯಾಕೋ ಇದರ ಬಗ್ಗೆ ನಮ್ಮ ಸರಕಾರ ತಲೆಕೆಡಿಕೊಂಡಂತಿಲ್ಲ.

ಇಂದು ಕರ್‍ನಾಟಕದಲ್ಲಿ ದೊಡ್ಡ ನಗರವೆಂದರೆ ಕೇವಲ ಬೆಂಗಳೂರು ಆಗಿದೆ. ಓದಿದವರಿಗೆ ಕೆಲಸ ಸಿಗುವುದು ಇಲ್ಲೇ ಅನ್ನುವಂತಾಗಿದೆ. ಹೆಚ್ಚು ಮಟ್ಟಿಗೆ ಇದು ನಿಜ ಕೂಡ! ನಮ್ಮ ರಾಜ್ಯದಶ್ಟೇ ಇರುವ ಜರ್‍ಮನಿ ದೇಶದಲ್ಲಿ ಸುಮಾರು 8 ದೊಡ್ಡ ನಗರಗಳನ್ನು ಕಟ್ಟಿಕೊಂಡಿದ್ದಾರೆ. ಬರ್‍ಲಿನ್, ಮ್ಯುನಿಕ್, ಪ್ರಾಂಕ್ ಪರ್‍ಟ್, ಹ್ಯಾಂಬರ್‍ಗ್, ಕೊಲೊನ್, ಡ್ರೆಸ್ಡೆನ್ ಮುಂತಾದವು. ಹಾಗಾಗಿ ಜನರು ಒಂದೇ ಊರನ್ನು ನೆಚ್ಚಿಕೊಂಡಿಲ್ಲ, ಅಲ್ಲಿಯ ಬೆಳವಣಿಗೆ ಕೂಡ ಒಂದೇ ಊರಿನ ಮೇಲೆ ನಿಂತಿಲ್ಲ. ಆದರೆ ಕರ್‍ನಾಟಕದಲ್ಲಿ ನಮಗೆ ಕಾಣುವುದು ಬೆಂಗಳೂರು ಮಾತ್ರ. ಹಾಗಾಗಿ ಇಡೀ ನಾಡೇ ಬೆಂಗಳೂರಿನ ಕಡೆ ಮುಕಮಾಡಿ ನಿಂತಿದೆ. ಇದು ಬದಲಾಗಬೇಕು.

ನಮ್ಮ ಊರುಗಳ ರಸ್ತೆ ಸರಿಯಾಗಬೇಕು!

ಹವ್ದು, ಒಳ್ಳೆಯ ಬೆಳವಣಿಗೆ ಕಾಣುವ ನಾಡುಗಳಲ್ಲಿ ರಸ್ತೆಗಳು ದೊಡ್ಡ ಪಾತ್ರ ವಹಿಸುತ್ತವೆ. ಆ ನಾಡಿನ ರಸ್ತೆಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಯಾವ ಸ್ತಿತಿಯಲ್ಲಿವೆ ಅನ್ನುವುದು ಬಹು ಮುಕ್ಯವಾದ ವಿಶಯ. ಇನ್ನು ನಮ್ಮ ನಾಡಿನಲ್ಲಂತೂ ಇದು ತುಂಬಾ ದೊಡ್ಡ ವಿಶಯ. ಕಾರಣ ಬೆಂಗಳೂರು, ಮಯ್ಸೂರು, ಮಂಗಳೂರು, ಹುಬ್ಬಳ್ಳಿ ಮುಂತಾದ ಊರುಗಳನ್ನು ಹೊರತುಪಡಿಸಿದರೆ ಹೆಚ್ಚಾಗಿ ಉಳಿದಿರುವ ಜಿಲ್ಲೆಗಳು ಕ್ರುಶಿ ಪ್ರದಾನವಾಗಿವೆ ಅತವಾ ಅದಿರು, ಗಣಿಗಾರಿಕೆಯನ್ನು ಹೊಂದಿವೆ. ಹಾಗಾಗಿ ಇಂದು ನಮ್ಮ ರಯ್ತನೊಬ್ಬ ಬೆಳೆಯುವ ಬೆಳೆ ಎಶ್ಟು ಬೇಗ ಮಾರುಕಟ್ಟೆ ಸೇರಲು ಸಾದ್ಯವೋ ಅವನಿಗೆ ಅಶ್ಟರ ಮಟ್ಟಿಗೆ ಲಾಬ. ಎತ್ತುಗೆಗೆ ಟೋಮ್ಯಾಟೋ ಬೆಳೆಯುವ ರಯ್ತನೊಬ್ಬ ತಾನು ಹರಿಯುವ ಟೋಮ್ಯಾಟೋ ಬೇಗ ಮಾರುಕಟ್ಟೆಗೆ ತಲುಪಿದರೆ ಅವು ತಾಜಾ ಆಗಿರುತ್ತವೆ ಮತ್ತು ಅದಕ್ಕೆ ಒಳ್ಳೆಯ ಬೆಲೆ ಬರುತ್ತದೆ. ಒಂದು ವೇಳೆ ಅವನ್ನು ಸಾಗಿಸುವ ದಾರಿ ಕೆಟ್ಟಿದ್ದರೆ ಗಾಡಿಯ ತುಳುಕಾಟಕ್ಕೆ ಹಲವಾರು ಹಣ್ಣುಗಳು ಒಡೆದು ಹಾಳಾದರೆ, ಮಾರುಕಟ್ಟೆಗೆ ಮುಟ್ಟಲು ತೆಗೆದುಕೊಳ್ಳುವ ಸಮಯವೂ ಹೆಚ್ಚಾಗಿ ಆ ರಯ್ತನಿಗೆ ತಾನು ಬೆಳೆದಿರುವ ಬೆಳೆಗೆ ಒಳ್ಳೆಯ ಬೆಲೆ ಸಿಗುವುದಿಲ್ಲ.

ಇನ್ನು ಅದಿರು ಸಾಗಿಸಲು ಅತವಾ ಯಾವುದೇ ಉದ್ದಿಮೆಯ ಉತ್ಪನ್ನವನ್ನು ಹೊರದೇಶಕ್ಕೆ ಸಾಗಿಸಲು ಹೆಚ್ಚಾಗಿ ಹಡಗನ್ನು ಬಳಸಲಾಗುತ್ತದೆ. ಅಂದರೆ ಬಂದರನ್ನು ತಲುಪುವ ಆ ಊರಿನ ರಸ್ತೆ ಚೆನ್ನಾಗಿರಬೇಕಾಗುತ್ತದೆ. ಒಂದು ವೇಳೆ ರಸ್ತೆಗಳು ಕೆಟ್ಟು ಹೋದಲ್ಲಿ ದಾರಿಯಲ್ಲೇ ಹಲವಶ್ಟು ಅದಿರು ಚೆಲ್ಲಿಹೋದರೆ, ಹಲವಾರು ಉತ್ಪನ್ನಗಳು ಸಹ ಹಾಳಾಗುವ ಸಾದ್ಯತೆ ಇದೆ. ಹಾಗಾಗಿ ಒಂದು ನಾಡಿನ ಏಳಿಗೆಯಲ್ಲಿ ರಸ್ತೆ ತುಂಬ ದೊಡ್ಡ ಪಾತ್ರವನ್ನು ವಹಿಸುತ್ತದೆ. ಇಂದು ಕರ್‍ನಾಟಕದಲ್ಲಿರುವ ರಸ್ತೆಗಳ ಪರಿಸ್ತಿತಿ ಹೇಗಿದೆ ಅನ್ನುವುದನ್ನು ನಾನು ಹೇಳಬೇಕಾಗಿಲ್ಲ ಅಲ್ಲವೇ?

ಸರಕಾರದ ನೀತಿ ಬದಲಾಗಬೇಕು

ಈ ತರಹ ಇನ್ನು ಹಲವಾರು ವಿಶಯಗಳು ಒಂದು ನಾಡಿನ ಏಳಿಗೆಯಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಅವುಗಳ ಬಗ್ಗೆ ಮುಂದೆ ಬರೆಯುತ್ತೇನೆ. ಒಟ್ಟಿನಲ್ಲಿ ಒಂದು ನಾಡು ಏಳಿಗೆ ಹೊಂದಬೇಕಾದಲ್ಲಿ ಅಲ್ಲಿ ಬೆಳವಣಿಗೆ ಹಲವು ಕಡೆ ಹಂಚಿಕೆಯಾಗಿರಬೇಕು (Distributed Development) ಒಂದೇ ಕಡೇ ಕೇಂದ್ರಿಕ್ರುತವಾಗಿ ಬೆಳವಣಿಗೆ ನಡೆದರೆ ಆ ನಾಡಿಗೆ ಹೆಚ್ಚಿನ ಬೆಳವಣಿಗೆ ಹೊಂದಲು ಅವಕಾಶಗಳು ತುಂಬಾ ಕಡಿಮೆಯಾಗಿರುತ್ತವೆ. ಇಂದಲ್ಲದಿದ್ದರೂ ಮುಂದೆ ಇದರ ಕೆಟ್ಟ ಪರಿಣಾಮಗಳು ಕಾಣಲು ಸಿಗುತ್ತವೆ. ನಮ್ಮ ನಾಡಿನಲ್ಲೇ ಇದನ್ನ ನಾವು ಈಗ ಸಣ್ಣ ಮಟ್ಟದಲ್ಲಿ ನೋಡುತ್ತಿದೇವೆ. ಇದನ್ನು ತಪ್ಪಿಸಬೇಕಾಗಿದ್ದಲ್ಲಿ ನಾಡಿನಲ್ಲಿ ಬೆಳವಣಿಗೆಗೆ ಯೋಗ್ಯವಾಗಿರುವ ಹಲವಾರು ಊರುಗಳನ್ನು ಬೆಳಸುವತ್ತ ಸರಕಾರ ತನ್ನ ಗಮನಹರಿಸಬೇಕು. ನಮ್ಮ ನಾಡಿನಶ್ಟೇ ಇರುವ ಜರ್‍ಮನಿ ನಾಡು ನಮಗೆ ಮಾದರಿಯಾಗಬೇಕು. ಒಂದೇ ಊರಿನಿಂದ (ಬೆಂಗಳೂರಿನಿಂದ) ಆದ ಬೆಳವಣಿಗೆಯಿಂದ ಇಡೀ ನಾಡು ಕಟ್ಟುತ್ತೇವೆ ಅನ್ನುವ ನಮ್ಮ ಮನಸ್ತಿತಿ, ಯೋಚನೆಯ ಶಯ್ಲಿ ಮತ್ತು ಯೋಜನೆಗಳು ಬದಲಾಗಬೇಕಾಗಿದೆ. ಬೆಳೆವಣಿಗೆಯನ್ನುವುದು ಒಂದೇ ಕಡೆ ಇರದೇ ನಾಡಿನ ತುಂಬ ಹರಡಿಕೊಂಡಿದ್ದರೆ ಮಾತ್ರ ಅದು ಗಟ್ಟಿಯಾದ ತಳಹದಿಯ ಮೇಲೆ ಕಟ್ಟಿದ ನಾಡಾಗುತ್ತದೆ.

ಮಾಹಿತಿ ಸೆಲೆ: http://forbesindia.com/article/real-issue/ruchir-sharma-analyses-indias-centrestates-equation/36083/1

(ಚಿತ್ರ ಸೆಲೆ: wkforum.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: