ಸರೋಜಿನಿ ಮಹಿಶಿ ವರದಿ ಜಾರಿಯಾಗಲಿ

ಚೇತನ್ ಜೀರಾಳ್.

steel_948816f

ಬಾರತದ ಬಿಡುಗಡೆಯ ನಂತರ ಹಿಂದಿನ ಮಯ್ಸೂರು ಮಹಾರಾಜರ ಮುಂದಾಲೋಚನೆಯಿಂದಾಗಿ ಹಲವಾರು ಉದ್ದಿಮೆಗಳು ಕನ್ನಡ ನಾಡಿನಲ್ಲಿ ಶುರುವಾಗುತ್ತಿದ್ದವು, ಉದ್ದಿಮೆಗಳಲ್ಲಿ ಕನ್ನಡ ನಾಡು ತನ್ನ ಸ್ವಂತಿಕೆಯನ್ನು ಗುರುತಿಸಿಕೊಳ್ಳತೊಡಗಿತ್ತು. ಸುಮಾರು 80ರ ಸಮಯದಲ್ಲಿ ಕೇಂದ್ರದ ಅಡಿಯಲ್ಲಿದ್ದ ಬಹುತೇಕ ಉದ್ದಿಮೆಗಳಲ್ಲಿ ಹೊರ ರಾಜ್ಯದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅಸಮಾದಾನದ ಹೊಗೆ ಏಳಲು ಶುರುವಾಗಿತ್ತು. ಇದರ ಕಾವು ಸರಕಾರಕ್ಕೂ ಬಡಿಯಿತು. ಹಾಗಾಗಿ ಕನ್ನಡ ನಾಡಿನಲ್ಲಿರುವ ಕೇಂದ್ರ, ರಾಜ್ಯ ಸರಕಾರದ ಉದ್ದಿಮೆಗಳು, ಬ್ಯಾಂಕುಗಳು ಮತ್ತು ಕಾಸಗಿ ಸಂಸ್ತೆಗಳು ಹೀಗೆ ಎಲ್ಲಾ ಕಡೆಗಳಲ್ಲಿ ಇರುವ ಕೆಲಸಗಳಲ್ಲಿ ಕನ್ನಡಿಗರ ಸಂಕ್ಯೆ, ಅವರ ಸಮಸ್ಯೆಗಳು ಮತ್ತು ಇರುವ ಕೊರತೆಗಳನ್ನು ಅದ್ಯಯನ ಮಾಡಿ ಅದಕ್ಕೆ ತಕ್ಕ ಪರಿಹಾರಗಳನ್ನು ಸೂಚಿಸಲು ಕರ್‍ನಾಟಕ ಸರಕಾರ 1983ರಲ್ಲಿ ಡಾ. ಸರೋಜಿನಿ ಮಹಿಶಿ ಅವರ ಮುಂದಾಳ್ತನದಲ್ಲಿ ಸಮಿತಿಯೊಂದನ್ನು ರಚಿಸಿತು.

ಈ ಸಮಿತಿಯು ರಾಜ್ಯಾದ್ಯಂತ ಇರುವ ಹಲವಾರು ಕೇಂದ್ರ ಸರಕಾರಿ ಉದ್ದಿಮೆಗಳು, ರಾಜ್ಯ ಸರಕಾರದ ಉದ್ದಿಮೆಗಳು, ಬ್ಯಾಂಕುಗಳು, ಕೇಂದ್ರ ಕಚೇರಿಗಳಿಗೆ ಬೇಟಿ ನೀಡಿ ತಮಗೆ ಬೇಕಿರುವ ಮಾಹಿತಿ ಪಡೆಯಿತು. ಇದರ ಪರಿಣಾಮವಾಗಿ 58 ಶಿಪಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಆದರೆ ಈ ಸಮಿತಿ ಸಲ್ಲಿಸಿದ ನಂತರ ಬಂದ ಹಲವಾರು ಸರಕಾರಗಳು ಸರೋಜಿನಿ ಮಹಿಶಿ ವರದಿಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಜನರ ಕಿವಿಯಲ್ಲಿ ಹೂವಿಡುತ್ತಲೇ ಬಂದಿವೆ. ಈ ಹಿಂದೆ ಇದ್ದ ಬಿ.ಜೆ.ಪಿ ಸರಕಾರ “ಬದಲಾದ ಕಾಲಗಟಕ್ಕೆ ಅನುಗುಣವಾಗಿ ಸರೋಜಿನಿ ಮಹಿಶಿ ವರದಿಯನ್ನು ಪರಿಶ್ಕರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಸಂಬಂದ ಸಮಿತಿ ರಚಿಸಲು ಸರಕಾರ ಚಿಂತನೆ ನಡೆಸಿದೆ”ಎಂದು ಹೇಳಿ ಕಯ್ ತೊಳೆದುಕೊಂಡಿತು.

ವರದಿಯನ್ನು ಬದಲಿಸಬೇಕು

ಮೂವತ್ತು ವರುಶಗಳ ಹಿಂದೆ ತಯಾರಿಸಲಾದ ಸರೋಜಿನಿ ಮಹಿಶಿ ವರದಿಯನ್ನು, ಕಳೆದ 15 ವರ್‍ಶಗಳಲ್ಲಿ ರಾಜ್ಯದಲ್ಲಿ ಆಗಿರುವ ಉದ್ದಿಮೆಗಾರಿಕೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂದಿನ ದಿನಮಾನಕ್ಕೆ ತಕ್ಕಂತೆ ಶಿಪಾರಸ್ಸುಗಳನ್ನು ಬದಲಾಯಿಸಬೇಕಾಗಿದೆ. ಇಶ್ಟರಲ್ಲಾಗಲೇ ಈ ಕೆಲಸ ಮಾಡಬೇಕಾಗಿದ್ದ ಸರಕಾರಗಳು ಇನ್ನೂ ಸಮಿತಿ ರಚಿಸುವಲ್ಲಿ, ಚಿಂತನೆ ನಡೆಸುವಲ್ಲಿ, ಬೇಡಿಕೆ ಪರಿಶೀಲಿಸುವುದರಲ್ಲಿ ಮೀನಾಮೇಶ ಎಣಿಸುತ್ತ ಜನರ ತಾಳ್ಮೆಯನ್ನು ಪರೀಕ್ಶೆ ಮಾಡುತ್ತಾ ಬಂದಿವೆ.

ಸರೋಜಿನಿ ಮಹಿಶಿ ವರದಿಯಲ್ಲಿ ಹೇಳಿರುವ ಕೆಲಸದಲ್ಲಿನ ಮೀಸಲಾತಿಯ ಬಗ್ಗೆ ನೋಡುತ್ತಿದ್ದಾಗ, ಈ ಬಗೆಯ ಯೋಚನೆಯನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಮಾಡಿದ್ದಾರೆಯೇ? ಇದರ ಅನುಶ್ಟಾನ ಬಲು ಕಶ್ಟವಾದ ಕೆಲಸವೇ? ಈ ತರಹದ ಯೋಜನೆಗಳನ್ನು ಬೇರೆ ರಾಜ್ಯದಲ್ಲಿ ಮಾಡಲಾಗಿದೆಯೆ? ಅಂತ ಕುತೂಹಲದಿಂದ ಹುಡುಕಿದರೆ ನಮಗೆ ಅಚ್ಚರಿ ಕಾದಿದೆ. ಬಿ.ಜೆ.ಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಶಗಳು ಅದಿಕಾರದಲ್ಲಿರುವ ವಿವಿದ ರಾಜ್ಯಗಳಲ್ಲಿ ತಮ್ಮ ರಾಜ್ಯದ ಜನರ ಹಿತಾಸಕ್ತಿಗಾಗಿ ಎಲ್ಲಾ ಹಂತದ ಕೆಲಸಗಳಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಅಂತಹ ಕೆಲವು ರಾಜ್ಯಗಳ ಮಾಹಿತಿಯನ್ನು ನಾವು ಇಲ್ಲಿ ನೋಡೋಣ

ಮಹಾರಾಶ್ಟ್ರ

ನವೆಂಬರ್ 2008 ರಲ್ಲಿ ಮಹಾರಾಶ್ಟ್ರ ಸರಕಾರ ರಾಜ್ಯದಲ್ಲಿನ ಎಲ್ಲ ಕೆಲಸಗಳಲ್ಲೂ 80% ನಶ್ಟು ಹುದ್ದೆಗಳನ್ನು ನಾಡಿನ ಮಕ್ಕಳಿಗೆ ಮೀಸಲಿಡಬೇಕು ಎಂದು ತೀರ್‍ಮಾನಿಸಲಾಯಿತು. ಅದರಲ್ಲೂ ಮುಂಬರುವ 140 ಎಸ್.ಇ.ಜೆಡ್.ಗಳಲ್ಲಿ ಆರಂಬವಾಗುವ ಎಲ್ಲ ಕಂಪನಿಗಳ ಹುದ್ದೆಗಳಲ್ಲಿ 80%ರಶ್ಟು ಕೆಲಸಗಳನ್ನು ನಾಡಿನ ಮಕ್ಕಳಿಗೆ ಕೊಡಬೇಕು ಎಂದು ಆದೇಶ ಹೊರಡಿಸಿತು. ಇದು, ನಾಡಿನ ಮಕ್ಕಳಿಗೆ ಕೆಲಸಗಳಲ್ಲಿನ ಮೀಸಲಾತಿಯ ಬಗ್ಗೆ 1968 ನಂತರ, ಮಹಾರಾಶ್ಟ್ರ ಸರಕಾರ ಹೊರಡಿಸಿದ 6ನೇ ಸರ್‍ಕಾರಿ ಆದೇಶ.

ಒಡಿಶಾ

ಅಕ್ಟೋಬರ್ 2008 ರಲ್ಲಿ ಒಡಿಶಾ ಸರಕಾರ ಕೂಡ ನಾಡಿನ ಮಕ್ಕಳಿಗೆ ಕೆಲಸಗಳಲ್ಲಿ ಆದ್ಯತೆ ನೀಡಲು ಒಡಿಶಾದಲ್ಲಿನ ಎಲ್ಲ ಗ್ರೂಪ್ ’ಸಿ’ ಮತ್ತು ’ಡಿ’ ಕೆಲಸಗಳಲ್ಲಿ 90%ರಶ್ಟು ಹುದ್ದೆಗಳನ್ನು, ಹಾಗೂ ಗ್ರೂಪ್ ’ಎ’ ಮತ್ತು ’ಬಿ’ ಹುದ್ದೆಗಳಲ್ಲಿ 65%ರಶ್ಟು ನಾಡಿನ ಮಕ್ಕಳಿಗೆ ಮೀಸಲಿಡಬೇಕು ಎಂದು ತೀರ್‍ಮಾನಿಸಿತು. ಹೊಸ ಉದ್ಯೋಗ ನೀತಿಗಳನ್ನು ಅಳವಡಿಸಿ, ಕಂಪನಿಗಳೊಡನೆ ಆಗಿದ್ದ ಒಪ್ಪಂದ (MoU) ಗಳನ್ನು ಮರುಪರಿಶೀಲಿಸಿ, ಅವಶ್ಯವೆನಿಸಿದರೆ ತಿದ್ದುಪಡಿ ಮಾಡಲಾಗುವುದು ಎಂದು ಒಡಿಶಾ ಸರಕಾರ ಹೇಳಿತು.

ತಮಿಳುನಾಡು

2009ರ ಸರ್‍ಕಾರಿ ಆದೇಶದಲ್ಲಿ ತಮಿಳುನಾಡಿನಲ್ಲಿ ಸ್ತಾಪಿಸಲಾಗುವ ಎಲ್ಲಾ ಕಾರ್‍ಕಾನೆಗಳಲ್ಲಿ ಶೇ 75 ರಶ್ಟು ಕೆಲಸಗಳನ್ನು ತಮಿಳುನಾಡಿನ ಜನರಿಗೆ ನೀಡಬೇಕೆಂಬ ನಿಯಮ ಮಾಡಲಾಗಿದೆ. ಜೊತೆಗೆ ಈ ನಿಬಂದನೆಗೆ ಒಪ್ಪಿಕೊಳ್ಳುವ ಸಂಸ್ತೆಗಳಿಗೆ ರಿಯಾಯಿತಿ ದರದಲ್ಲಿ ವಿವಿದ ಸವಲತ್ತುಗಳನ್ನು ಒದಗಿಸಲಾಗುತ್ತದೆ. ಈ ಹಿಂದೆ ಸ್ತಾಪಿಸಲಾಗಿರುವ ಸಂಸ್ತೆಗಳು ಸಹ ಸರ್‍ಕಾರಿ ಅದೇಶವನ್ನು ಪಾಲಿಸಿದಲ್ಲಿ ಅವರಿಗೂ ಸಹ ಸವಲತ್ತುಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಗುಜರಾತ

ಗುಜರಾತ ಸರಕಾರವು ತನ್ನ ಉದ್ಯಮ ನೀತಿಯಲ್ಲಿ, ತನ್ನ ರಾಜ್ಯದಲ್ಲಿ ಸ್ತಾಪಿಸಲಾಗುವ ಉದ್ದಿಮೆಗಳಿಂದ ಹುಟ್ಟುವ ಕೆಲಸಗಳಲ್ಲಿ ಹೆಚ್ಚಿನ ಪಾಲು ದೊರಕುವಂತೆ ಮಾಡಲು ಯೋಜನೆಯೊಂದನ್ನು ಮಾಡಿದೆ. ಇದರ ಮೂಲಕ ನಾಡಿನ ಮಕ್ಕಳಿಗೆ ಹೆಚ್ಚಿನ ಕೆಲಸ ದೊರಕುವಂತೆ ಮಾಡಿದೆ.

ಈ ಮೇಲಿನ ಉದಾಹರಣೆಗಳನ್ನು ನೋಡಿದಾಗ, ಆಯಾ ರಾಜ್ಯಗಳು ತನ್ನ ರಾಜ್ಯದ ಜನರ ಹಿತಕ್ಕಾಗಿ ಕೆಲಸಗಳಲ್ಲಿ ನಾಡಿನ ಮಕ್ಕಳಿಗೆ ಮೀಸಲಾತಿ ನೀಡಬೇಕೆಂಬ ಕಾನೂನು ಮಾಡಿಕೊಂಡಿರುವುದು ತಿಳಿಯಾಗಿ ಕಾಣುತ್ತದೆ. ಇಂಡಿಯಾ ದೇಶದ ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ರಾಜ್ಯ ಸರಕಾರವನ್ನು ಹೊಂದಿವೆ. ಜನರಿಂದ ಆರಿಸಲಾಗುವ ಈ ಸರ್‍ಕಾರಗಳು, ತನ್ನನ್ನು ಆರಿಸಿ ಕಳುಹಿಸಿದ ಜನರಿಗೆ ಸವಲತ್ತುಗಳನ್ನು ಒದಗಿಸುವುದು ಸರಿಯಾದ ನಡೆ, ಇದಲ್ಲದೇ ಆಯಾ ರಾಜ್ಯದಲ್ಲಿ ಸ್ತಾಪಿಸಲಾಗುವ ಉದ್ದಿಮೆಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ದರದಲ್ಲಿ ವಿದ್ಯುತ್, ನೀರು, ನೆಲ ಎಲ್ಲವನ್ನೂ ನೀಡುವಾಗ ಕರ್‍ಚಾಗುವುದು ಜನರ ತೆರಿಗೆಯ ಹಣ. ಹಾಗಾಗಿ ಅಲ್ಲಿಯ ಜನರಿಗೆ ಕೆಲಸಗಳಲ್ಲಿ ಮೀಸಲಾತಿ ನೀಡುವುದು ಸಹಜ ನ್ಯಾಯವಾಗಿ ಕಾಣುತ್ತದೆ. ಈಗಿರುವ ನಮ್ಮ ರಾಜ್ಯ ಸರಕಾರವಾದರೂ ಸರೋಜಿನಿ ಮಹಿಶಿ ವರದಿಯನ್ನು ಒಂದು ಕಾಲಮಿತಿಯುಳ್ಳ ಯೋಜನೆಯನ್ನಾಗಿ ಮಾಡಿಕೊಂಡು ಜಾರಿಗೆ ತರುವ ಕೆಲಸವನ್ನು ಮಾಡಲಿ, ತನ್ನ ನಾಡಿನ ಮಕ್ಕಳಿಗೆ ತಮ್ಮ ನೆಲದಲ್ಲೇ ಬದುಕು ಕಂಡುಕೊಳ್ಳಲು ಬೇಕಿರುವ ಬರವಸೆ ನೀಡಲಿ.

(ಚಿತ್ರ ಸೆಲೆ: www.thehindubusinessline.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: