ನುಡಿಯ ಕಲಿಕೆ ಮತ್ತು ಕಲಿಕೆನುಡಿ

ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 9

nudi_inuku

ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.

ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.

ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.

ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.

ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.

ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.

ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.

ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.

ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.

ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 8

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 02/10/2013

    […]  << ನುಡಿಯರಿಮೆಯ ಇಣುಕುನೋಟ – 9 […]

ಅನಿಸಿಕೆ ಬರೆಯಿರಿ:

%d bloggers like this: