ಮನುಶ್ಯರ ಮಯ್ಯಿ – ಒಳನೋಟ

ಯಶವನ್ತ ಬಾಣಸವಾಡಿ.

 

ಹಿಂದಿನ ಕೆಲವು ಬರಹಗಳಲ್ಲಿ ಮದ್ದರಿಮೆಯ ಇತ್ತೀಚಿನ ಸುದ್ದಿಗಳು ಮತ್ತು ಅಮೇರಿಕಾದಲ್ಲಿ ನಾನು ಅರಕೆ ಮಾಡುತ್ತಿರುವ ಮಿದುಳಿನ ಏಡಿಹುಣ್ಣು ಗ್ಲಿಯೊಬ್ಲಾಸ್ಟಾಮಾ ಕುರಿತು ಬರೆದಿದ್ದೆ. ಮದ್ದರಿಮೆಯಲ್ಲಿ ಆಗುತ್ತಿರುವ ಬೆಳವಣಿಗಳನ್ನು ತಿಳಿಸುವುದರ ಜೊತೆಗೆ ಎಲ್ಲ ಕನ್ನಡಿಗರ ತಿಳುವಳಿಕೆಗೆ ನೆರವಾಗಲೆಂದು ಮನುಶ್ಯರ ಮಯ್ಯಿ ಅಂದರೆ ನಮ್ಮದೇ ಮಯ್ಯಿ ಬಗ್ಗೆ ಮೊದಲ ಹಂತದ ಬರಹಗಳನ್ನು ಕೆಲವು ಕಂತುಗಳಲ್ಲಿ ಬರೆಯಲಿರುವೆ.

ಜಗತ್ತಿನ ಹಲವು ವಿಶಯಗಳನ್ನು ಅರಗಿಸಿಕೊಂಡು ಮುನ್ನಡೆಯುವ ನಾವು ನಮ್ಮ ಮಯ್ಯಿ ಬಗ್ಗೆ ತಕ್ಕಮಟ್ಟಿಗಾದರೂ ತಿಳಿದುಕೊಂಡಿದ್ದರೆ ನಮ್ಮದೇ ಮಯ್ಯಿ ಬಗ್ಗೆ ಇರುವ ಮುಜುಗರ, ತಪ್ಪು ಅರಿವುಗಳು ಇಲ್ಲವಾಗುವುದರ ಜೊತೆಗೆ ಮಯ್ಯಿಗೆ ಎರಗುವ ಹಲವು ಕುತ್ತುಗಳನ್ನು ತಡೆಹಿಡಿಯುವ ತಿಳುವಳಿಕೆ ಹೆಚ್ಚುವುದರಲ್ಲಿ ಅನುಮಾನವಿಲ್ಲ ಹಾಗಾಗಿ ಮದ್ದರಿಮೆಯ ಬಿಸಿ ಸುದ್ದಿಗಳ ಜೊತೆಗೆ ಅದಕ್ಕೆ ಅಡಿಪಾಯವಾಗಿರುವ ಅರಿಮೆಯ ವಿಶಯಗಳನ್ನು ನಿಮ್ಮ ಮುಂದಿಡುವುದು ನನ್ನ ಹೆಬ್ಬಯಕೆ. ಬನ್ನಿ ಹಾಗಾದ್ರೆ ನಮ್ಮ ಮಯ್ಯೊಳಗೆ ಇಳಿಯೋಣ ಅದರ ಬೆರಗುಗೊಳಿಸುವ ಏರ‍್ಪಾಟುಗಳ ಬಗ್ಗೆ ತಿಳಿಯೋಣ!

ಮನುಶ್ಯನು ಒಂದು ಬಗೆಯ ಉಸಿರುಗ (organism), ಕೂಟುಗೆಯ ಉಸಿರುಗ (social animal) ಎಂದೂ ಕರೆಯಬಹುದು. ಮನುಶ್ಯನೆಂಬ ಉಸಿರುಗದ ಬಾಗಗಳನ್ನು ಇಡಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಾಗ ಸಿಗುವುದೇ ’ಮನುಶ್ಯರ ಮಯ್ಯಿ’.

ಹೊರಗಿನಿಂದ ಮಯ್ಯಿ ಆಕಾರವನ್ನು ತಲೆ, ಕುತ್ತಿಗೆ, ಸೊಂಟ, ಎರಡು ಕಾಲು ಹಾಗು ಎರಡು ಕಯ್ಯಿಗಳಾಗಿ ಗುಂಪಿಸಬಹುದು. ಮೇಲಿನಿಂದ ಕಾಣುವ ಇವೆಲ್ಲವುಗಳನ್ನು ಹಿಡಿತದಲ್ಲಿಡಲು ಮಯ್ಯಿಯ ಒಳಗೆ ಹಲವು ಬಗೆಯ, ತುಂಬಾ ಅಚ್ಚುಕಟ್ಟಾದ ಏರ‍್ಪಾಟುಗಳಿವೆ.

ನಮ್ಮ ಮಯ್ಯಿಯೊಳಗಿನ ಮುಕ್ಯವಾದ ಏರ‍್ಪಾಟುಗಳು ಮತ್ತು ಅವುಗಳ ಕೆಲಸ ಈ ಕೆಳಗಿನಂತಿದೆ,

1) ಹುರಿಕಟ್ಟಿನ ಏರ‍್ಪಾಟು (musculo-skeletal system): 

ಈ ಏರ‍್ಪಾಟು ಮುಕ್ಯವಾಗಿ ಮೂಳೆಗಳು, ಮೂಳೆ ಕೀಲುಗಳು, ಮೂಳೆಗಳಿಂದ ಮಾಡಲ್ಪಟ್ಟ ಎಲುಬಿನ ಗೂಡುಗಳನ್ನು ಹೊಂದಿರುತ್ತದೆ. ಮಾಂಸ, ಮಾಂಸವನ್ನು ಎಲುಬಿಗೆ ಅಂಟಿಸುವ ಕಂಡರಗಳು (tendons), ಎಲುಬನ್ನು ಎಲುಬಿಗೆ ಜೋಡಿಸುವಲ್ಲಿ ನೆರವಾಗುವ ತಂತುಗಟ್ಟುಗಳು (ligaments) ಹಾಗು ಎರಡು ಮೂಳೆಗಳ ನಡುವೆ ಉಂಟಾಗುವ ಒತ್ತಡವನ್ನು ಹೀರಿಕೊಳ್ಳುವ ಮೆಲ್ಲೆಲುಬುಗಳೂ (cartilage) ಹುರಿಕಟ್ಟಿನ ಇತರ ಬಾಗಗಳಾಗಿವೆ.

ಒಬ್ಬ ಹರೆಯ ತುಂಬಿದ ಮನುಶ್ಯನಲ್ಲಿ 206 ಮೂಳೆಗಳು ಮತ್ತು 230 ಮೂಳೆ ಕೀಲುಗಳಿದ್ದು, ಅವುಗಳ ಮೇಳಯ್ಸಿದ ಕೆಲಸದಿಂದಾಗಿ ಮನುಶ್ಯನು ತನ್ನ ಇತರ ಮಯ್ ಬಾಗಗಳನ್ನು ಅಲುಗಾಡಿಸಲು ಇಲ್ಲವೇ ಬಳಸುವಂತಾಗುವುದು.

2) ನರಗಳ ಏರ‍್ಪಾಟು (nervous system):

ಇದು ಉಸಿರುಗದ ಸುತ್ತ-ಮುತ್ತಲಿನ ತಿಳುವಳಿಕೆಯನ್ನು ಉಸಿರುಗಕ್ಕೆ ಅರಿವು ಮೂಡಿಸುವ ಸೂಚನೆಗಳನ್ನು ಸಾಗಿಸುವ ಗೂಡುಗಳನ್ನು ಹೊಂದಿರುತ್ತದೆ. ಮಿದುಳು, ಮಿದುಳು ಬಳ್ಳಿ (spinal cord) ಹಾಗು ಇವುಗಳಿಗೆ ಹೊಂದಿಕೊಂಡ ನರಗಳು ಇದರ ಮುಕ್ಯ ಬಾಗಗಳು.

mayyi_1

3) ಉಸಿರಾಟದ ಏರ‍್ಪಾಟು (respiratory system):

ಉಸಿರಾಟದ ಏರ‍್ಪಾಟು ಮೂಗು, ಮುನ್ಗಂಟಲು (pharynx), ಉಲಿಪೆಟ್ಟಿಗೆ/ಗಂಟಲಗೂಡು (larynx), ಉಸಿರುಗೊಳವೆ (trachea), ಕವಲುಗೊಳವೆ (bronchial tube), ನವಿರ‍್ಗೊಳವೆಗಳು (bronchioles) ಹಾಗು ಗಾಳಿಗೂಡುಗಳನ್ನು (alveoli) ಹೊಂದಿರುತ್ತದೆ. ಮನುಶ್ಯನೊಬ್ಬ 70 ವರುಶದ ಹರೆಯ ಮುಟ್ಟುವಶ್ಟರಲ್ಲಿ ಒಟ್ಟು 600 ಮಿಲಿಯನ್ ಸಲ ಉಸಿರಾಡುತ್ತಾನೆಂದರೆ ಈ ಏರ‍್ಪಾಟು ಎಶ್ಟು ಮುಕ್ಯ ಅನ್ನುವುದು ಗೊತ್ತಾಗುತ್ತದೆ.

4) ನೆತ್ತರು ಹರಿಸುವಿಕೆಯ ಏರ‍್ಪಾಟು (circulatory system) ಇಲ್ಲವೆ ಗುಂಡಿಗೆ-ಕೊಳವೆಗಳ ಏರ‍್ಪಾಟು (cardio-vascular system):

ಇದು ಎದೆ-ಗುಂಡಿಗೆ (heart), ತೊರೆಗೊಳವೆ (arteries), ಸೇರುಗೊಳವೆ (veins), ನವಿರು-ನೆತ್ತರಗೊಳವೆಗಳು (capillaries), ಹಾಗು ನೆತ್ತರನ್ನು (blood) ಒಳಗೊಂಡಿರುತ್ತದೆ. ಎದೆಗುಂಡಿಗೆಯ ಮುಕ್ಯ ಕೆಲಸವೆಂದರೆ ನೆತ್ತರನ್ನು ನಮ್ಮ ಮಯ್ ಬಾಗಗಳಿಗೆ ಹರಿಸುವುದು. ನೆತ್ತರನ್ನು ಸುತ್ತಾಡಿಸುತ್ತಾ ಗೂಡು,ಗೂಡುಕಟ್ಟು ಮತ್ತು ಇತರ ಏರ‍್ಪಾಟುಗಳಿಗೆ ಬೇಕಾದ ಉಸಿರುಗಾಳಿ (oxygen) ಹಾಗು ಆರಯ್ವಗಳನ್ನು (nutrients) ತಲುಪಿಸುವುದೇ ಈ ಏರ್‍ಪಾಟಿನ ಗುರಿ.

5) ತೊಗಲಿನ ಏರ‍್ಪಾಟು (integumentary system):

ಇದು ನಮ್ಮ ಮಯ್ಯಿಯ ದೊಡ್ಡ ಏರ್‍ಪಾಟು. ಇದು ನಮ್ಮ ಮಯ್ಯನ್ನು ಹೊರಗಿನ ಅಂಶಗಳಿಂದ ಕಾಪಾಡುತ್ತದೆ ಹಾಗು ಮಯ್ ಕಾವನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ. ಈ ಏರ್‍ಪಾಟು ತೊಗಲಿನ ಜೊತೆಗೆ, ಬೆವರು ಸುರಿಕೆಗಳು (sweat glands), ಮಯ್ ಜಿಡ್ಡಿನ ಸುರಿಕೆಗಳು ( sebaceous glands) , ಕೂದಲು, ಉಗುರುಗಳು, ಕೂದಲಿನ ಬುಡದಲ್ಲಿರುವ ಅರ್‍ರೆಕ್ಟೊರೆಸ್ ಪಯ್ಲೋರಂ (arrectores pillorum) ಎಂಬ ನವಿರಾದ ಮಾಂಸಗಳನ್ನು ಒಳಗೊಂಡಿದೆ.

mayyi_2

6) ಹಾಲಿರ‍್ಪಿನ ಏರ‍್ಪಾಟು (lymphatic system):

ಗೂಡುಗಳ ನಡುವೆ ಇರುವು ಹರಿಕಗಳನ್ನು (fluids) ತೆಗೆಯುವುದು, ಸಾಗಿಸುವುದು, ತರುಮಾರ‍್ಪಿಸುವುದು (metabolization) ಈ ಏರ‍್ಪಾಟಿನ ಗುರಿ. ಇದರ ಮುಕ್ಯ ಬಾಗಗಳೆಂದರೆ ಹಾಲ್ರಸಗಡ್ಡೆ (lymph nodes), ಹಾಲ್ರಸದ ಕೊಳವೆಗಳು (lymphatic vessels), ಮತ್ತು ಹಾಲ್ರಸ (lymph).

7) ಸುರಿಕೆ ಏರ‍್ಪಾಟು (endocrine system):

ಈ ಏರ್‍ಪಾಟು ಬಗೆಬಗೆಯ ಸುರಿಗೆಗಳನ್ನು (glands) ಒಳಗೊಂಡಿದೆ. ಇವು ಉಸಿರುಗದ ಗೆಯ್ಮೆಗಳು ಮಾರ್‍ಪಡದಂತೆ (homeostasis) ಕಾಯ್ದುಕೊಳ್ಳಲು ಬೇಕಾಗುವ ಸುರಿಕೆಗಳನ್ನು (hormones) ಸುರಿಸುತ್ತವೆ. ಈ ಏರ್‍ಪಾಟಿನ ಮುಕ್ಯ ಅಂಗಗಳೆಂದರೆ ಕೆಳಶಿರಗುಳಿ/ಕಿರುಮಿದುಳು (hypothalamus), ತೆಮಡಿಕ ಸುರಿಕೆ (pituitary gland), ಗುರಾಣಿಕ ಸುರಿಕೆ (thyroid gland) ಮತ್ತು ಬಿಕ್ಕು (kidneys).

8) ಅರಗಿಸುವ ಏರ‍್ಪಾಟು (digestive system):

ನಾವು ತಿನ್ನುವ ಕೂಳನ್ನು ಅರಗಿಸುವುದು, ಅರಗಿದ ಕೂಳನ್ನು ಆರಯ್ವಗಳನ್ನಾಗಿ ಮಾರ‍್ಪಡಿಸುವುದು ಹಾಗು ತಿಂದ ಕೂಳಿನ ಕಸವನ್ನು ಹೊರಗೆಡುವುದು ಅರಗೇರ್‍ಪಾಟಿನ ಮುಕ್ಯ ಗೆಯ್ಮೆ. ಈ ಏರ‍್ಪಾಟು ಬಾಯಿ ( buccal cavity), ಅನ್ನನಾಳ (esophagus), ಹೊಟ್ಟೆ ( stomach), ಸಣ್ಣ ಕರುಳು (small intestine), ದೊಡ್ಡ ಕರುಳು ( large intestine), ನೆಟ್ಟಗರುಳು (rectum) ಮತ್ತು ಗೊಳ್ಳೆ (anus) ಎಂಬ ಬಾಗಗಳನ್ನು ಒಳಗೊಂಡಿದೆ.

mayyi_3

9) ಉಚ್ಚೆಕಟ್ಟಿನ ಏರ‍್ಪಾಟು (urinary system):

ನಾವು ತಿನ್ನುವ ಕೂಳನ್ನು ಕಸುವನ್ನಾಗಿ ಮಾರ‍್ಪಡಿಸಿದ ಮೇಲೆ ಕೆಲವು ನಂಜಿನ ಅಂಶಗಳು ಉಳಿಯುತ್ತವೆ. ಇದನ್ನು ನಮ್ಮ ಮಯ್ಯಿಯಿಂದ ಹೊರಹಾಕಲು ಅಣಿಗೊಂಡಿರುವುದೇ ಉಚ್ಚೆಕಟ್ಟಿನ ಏರ‍್ಪಾಟು. ಉಚ್ಚೆಕಟ್ಟಿನ ಏರ‍್ಪಾಟಿನ ಮುಕ್ಯ ಬಾಗಗಳೆಂದರೆ ಬಿಕ್ಕು (kidney), ಮೇಲಿನ ಉಚ್ಚೆಗೊಳವೆ (ureters), ಉಚ್ಚೆಚೀಲ (urinary bladder), ಮತ್ತು ಕೆಳಗಿನ ಉಚ್ಚೆಗೊಳವೆ (urethera).

10) ಹುಟ್ಟಿಸುವಿಕೆಯ ಏರ‍್ಪಾಟು (reproductive system):

ಈ ಏರ‍್ಪಾಟು ಗಂಡು ಮತ್ತು ಹೆಣ್ಣುಗಳಲ್ಲಿ ಬೇರೆಯಾಗಿದ್ದು ಅವರಿಬ್ಬರ ಕೂಡುವಿಕೆಯಿಂದ ಹೊಸ ಹುಟ್ಟು ಮಯ್ದಾಳುತ್ತದೆ. ತುಣ್ಣೆ (penis), ತರಡುಗಳು (testicles) ಗಂಡಿನಲ್ಲಿರುವ ಹುಟ್ಟಿಸುವ ಏರ‍್ಪಾಟಿನ ಮುಕ್ಯ ಬಾಗಗಳಾದರೆ ಒರೆತೆರ (vagina), ಬಸಿರುಚೀಲ (uterus) ಮತ್ತು ಮೊಟ್ಟೆದಾಣಗಳು ಹೆಣ್ಣಿನಲ್ಲಿರುವ ಮುಕ್ಯ ಬಾಗಗಳಾಗಿವೆ.

11) ಕಾಪುವಿಕೆಯ ಏರ‍್ಪಾಟು (immune system):

ತನಿಬಗೆಯ (special) ಗೂಡುಗಳು, ಮುನ್ನುಗಳು (proteins), ಗೂಡಿನಕಟ್ಟು (tissues) ಹಾಗು ಅಂಗಗಳನ್ನು ಹೊಂದಿರುವ ಈ ಏರ್‍ಪಾಟು ದಂಡಾಣು (bacteria), ನಂಜುಳ (virus) ಹಾಗು ಇನ್ನಿತರ ಅಂಶಗಳಿಂದ ನಮ್ಮ ಮಯ್ಯಯಿಗೆ ಕೆಡುಕುಂಟಾಗದಂತೆ ಕಾವಲು ಕಾಯುತ್ತದೆ.

mayyi_4

ಈ ಎಲ್ಲ ಏರ‍್ಪಾಟುಗಳ ಬಗ್ಗೆ ಒಂದೊಂದಾಗಿ ಮತ್ತು ವಿವರವಾಗಿ ಮುಂದಿನ ಬರಹಗಳಲ್ಲಿ ತಿಳಿದುಕೊಳ್ಳೋಣ.

ನನ್ನಿ ಸಲ್ಲಿಕೆ:

ಮದ್ದರಿಮೆ ಕುರಿತಾದ ಬರಹಗಳನ್ನು ಬರೆಯಲು ಹೇರಳವಾದ ಕನ್ನಡದ್ದೇ ಪದಗಳು ಬೇಕು. ಇದಕ್ಕೆ ನನಗೆ ದಾರಿದೀವಿಗೆಯಾಗಿರುವುದು ಡಾ.ಡಿ.ಎಸ್. ಶಿವಪ್ಪ ಅವರ ’ವಯ್ದ್ಯ ಪದಕೋಶ’. 1973 ರಶ್ಟು ಮುಂಚೆಯೇ ಕನ್ನಡದ್ದೇ ಪದಗಳನ್ನು ಒಳಗೊಂಡ ಪದನೆರಕೆಯನ್ನು ಹೊರತಂದು ಕನ್ನಡಿಗರ ಹೆಮ್ಮೆಯಾಗಿರುವ ಶಿವಪ್ಪ ಅವರಿಗೆ ನನ್ನ ಮನದುಂಬಿದ ನನ್ನಿಗಳು.

(ತಿಟ್ಟ ಸೆಲೆಗಳು: cnx.org )

ಇವುಗಳನ್ನೂ ನೋಡಿ

4 ಅನಿಸಿಕೆಗಳು

  1. ಡಾ.ಡಿ.ಎಸ್. ಶಿವಪ್ಪರವರು ಅಣಿಗೊಳಿಸಿದ ಪದನೆರಕೆ ಎಲ್ಲಿ ದೊರೆಯುತ್ತದೆ ತಿಳಿಸಿ.

  2. ಶಿವಪ್ಪ ಅವರ ಪದನೆರಕೆ ನನಗೆ “ಲಾವಣ್ಯ” ಅಂತ ಒಂದು ಅಂಗಡಿಯಲ್ಲಿ ದೊರೆಯಿತು. ಅಲ್ಲಿ ಬಳಸಿದ ಹೊತ್ತಗೆಗಳು ದೊರೆಯುತ್ತವೆ. ನವರಂಗ್ ಚಿತ್ರಮಂದಿರದ ಬಳಿ ಆ ಹೊತ್ತಗೆಯಂಗಡಿ ಇದೆ. ಅದು ಬಿಟ್ಟು ಬೇರೆ ಕಡೆ ನನಗೆ ಆ ಪದನೆರಕೆ ಸಿಕ್ಕಿಲ್ಲ. ಅವರಿಗೆ ಕೇಳಬೇಕು ಅಂತ ನನಗೆ ಅನ್ನಿಸುತ್ತದೆ.

  1. 15-10-2013

    […] ಮನುಶ್ಯರ ಮಯ್ಯಿ ಕುರಿತಾದ ಬರಹಗಳ ಸರಣಿಯನ್ನು ಮುಂದುವರೆಸುತ್ತಾ ಹುರಿಕಟ್ಟಿನ ಏರ‍್ಪಾಟಿನ ಬಗ್ಗೆ ಈ ಬರಹದಲ್ಲಿ ತಿಳಿದುಕೊಳ್ಳೋಣ ಬನ್ನಿ. […]

  2. 03-02-2014

    […] ಮಯ್ಯಿ ಕುರಿತಾದ ನನ್ನ ಹಿಂದಿನ ಬರಹಗಳ (1, 2, 3) ಮುಂದುವರೆದ ಬಾಗವಾಗಿ ಕಂಡಗಳ (muscles) ಬಗ್ಗೆ […]

ಅನಿಸಿಕೆ ಬರೆಯಿರಿ: