ಕರಿಯನ ಪುರಾಣ

ಸಿ. ಪಿ. ನಾಗರಾಜ.

sendi

“ಏನ್ ನಾಗರಾಜಪ್ಪ ಚೆನ್ನಾಗಿದ್ದೀರಾ?“

ನನ್ನ ಒಳಿತನ್ನು ಕುರಿತು ವಿಚಾರಿಸುತ್ತಿರುವ ವ್ಯಕ್ತಿಯನ್ನು ಅರೆಗಳಿಗೆ ಅಚ್ಚರಿಯಿಂದ ನೋಡಿದ ನಂತರ –

“ಏನ್ ಕರಿಯ…  ನೀನು ಜೋರಾಗಿ ಮೀಸೆ ಬಿಟ್ಟಿರೂದರಿಂದ, ನಿನ್ನ ಗುರುತು ಹಿಡಿಯೂಕೆ ಆಗಲಿಲ್ಲ” ಎಂದೆ. ಆತ ನಗುತ್ತಾ, ತನ್ನ ತುಟಿಗಳ ಮೇಲೆ ಇಳಿಬಿದ್ದಿದ್ದ ಮೀಸೆಯ ಕೂದಲನ್ನು ಅತ್ತಿತ್ತ ತುಸು ತೀಡಿಕೊಳ್ಳುತ್ತಾ-

“ಈಗ ಹೆಂಡ ಇಳ್ಸೂಕೆ ಹೊಯ್ತ ಇದ್ದೀನಿ ಕಣ್ರಪ್ಪ. ಮರ ಹತ್ತಿದಾಗ ಒಂದೆರಡು ತೆಂಗಿನಮರದಲ್ಲಿ ಕಟ್ಟೀರೂ ಮಡಕೆಯಲ್ಲಿರೂ ಹೆಂಡನ ಅಲ್ಲೇ ಮೊದಲು ಕುಡ್ಕೋತಿನಿ. ಆಗ ಮಡಕೆ ಒಳಗೆ ಹುಳ-ಹುಪ್ಪಟ್ಟೆ ಬಿದ್ದಿರ್‍ತವಲ್ಲ…ಅವು ಸೋಸೋಗ್ಲಿ ಅಂತ ಹಿಂಗೆ ಜೋರಾಗಿ ಮೀಸೆ ಬುಟ್ಟಿವ್ನಿ” ಎಂದು ತನ್ನ ಕಲ್ಲಿಮೀಸೆಯ ಹಿನ್ನಲೆಯನ್ನು ಬಣ್ಣಿಸಿದ.

ನಮ್ಮೂರ ದಲಿತರವನಾದ ಕರಿಯ ಮತ್ತು ನಾನು… ಸರಿ ಸುಮಾರು ಒಂದೇ ವಯಸ್ಸಿನವರು. ಜಮೀನ್ದಾರರ ಮಗನಾದ ನಾನು ಶಾಲೆಯಲ್ಲಿ ಓದುತ್ತಿದ್ದಾಗ, ಆತ ಜೀತದ ಆಳಾಗಿ ದುಡಿಯುತ್ತಿದ್ದ. ಬೇಸಿಗೆ ರಜೆಯಲ್ಲಿ ನಾನು ಊರಿಗೆ ಹೋದಾಗಲೆಲ್ಲಾ, ಆತ ನನ್ನೊಡನೆ ಬಹಳ ಸರಸವಾಗಿ ಮಾತನಾಡುತ್ತಿದ್ದ. ಅದೇ ಬಗೆಯ ನಗೆನುಡಿಯ ನಡವಳಿಕೆಯನ್ನು ತನ್ನ ಕಡು ಬಡತನದ ಜೀವನದ ಉದ್ದಕ್ಕೂ ಉಳಿಸಿಕೊಂಡು ಬಂದಿದ್ದ. ಕಳೆದ ಇಪ್ಪತ್ತು ವರುಶಗಳ ಹಿಂದೆ ಕರಿಯ ಹೇಳಿದ ಕತೆಯೊಂದನ್ನು ನಾನು ಮರೆಯಲಾಗುತ್ತಿಲ್ಲ. ಮತ್ತೆ ಮತ್ತೆ ಅದು ನನ್ನ ಮನಸ್ಸನ್ನು ಕಾಡುತ್ತಿರುತ್ತದೆ. ಅಂದು ಕರಿಯನೊಡನೆ ಅದು-ಇದು ಮಾತನಾಡುತ್ತಾ-

“ಏನ್ ಕರಿಯ…ಈಗಲಾದ್ರು ಚೆನ್ನಾಗಿದ್ದೀಯಾ?”ಎಂದೆ.

“ಅಯ್ಯೋ ಬನ್ರಪ್ಪ… ನಮ್ ಚೆಂದವ ಏನ್ ಕೇಳೀರಿ? ನೀವ್ ಚೆನ್ನಾಗಿದ್ರೆ ಸರಿ… ಎಲ್ಲಾನು ಕೇಳ್ಕೊಂಡು ಬಂದಿರೂರು.”

“ಕೇಳ್ಕೊಂಡು ಬಂದಿರೂರು ಅಂದ್ರೆ… ಏನ್ ಕರಿಯ?”

“ನಿಮಗೆ ಗೊತ್ತಿಲ್ವೆ ಆ ಕತೆ?”

“ಯಾವ ಕತೆ?”

ಕರಿಯ ತನ್ನ ಕಯ್ಯನ್ನು ಮುಗಿಲ ಕಡೆಗೆ ತೋರಿಸುತ್ತಾ… ಕತೆಯನ್ನು ಹೇಳತೊಡಗಿದ.

“ಅಲ್ಲಿ ಮೇಲ್ಗಡೆ ಲೋಕದಲ್ಲಿರೋ ಬ್ರಹ್ಮನಿಗೆ ಈ ಬುವಿಯಲ್ಲಿ ಎಲ್ಲಾ ತರದ ಹಕ್ಕಿಪಕ್ಕಿ ಪ್ರಾಣಿಗಳನ್ನು ಹುಟ್ಟುವಂಗೆ ಮಾಡಿದ ಮ್ಯಾಲೆ, ನರಮನಸರನ್ನ ಕಳಿಸಬೇಕು ಅಂತ ಅನ್ನಿಸತಂತೆ. ಸರಿ, ಒಳ್ಳೆ ಮಣ್ಣು ತಕೊಂಡು ಚೆನ್ನಾಗಿ ಮಿದ್ದಿ, ಹದ ಮಾಡ್ಕೊಂಡು, ಆಮೇಲೆ ಒಸೊಸಿ ತಕೊಂಡು…. ಕಣ್ಣು ಕಿವಿ ಮೂಗು ಎಲ್ಲಾನು ತಿದ್ದಿ ತೀಡಿ, ಮನುಸನ ಆಕಾರದ ಬೊಂಬೆಗಳ ಮಾಡಿ, ಜೀವ ತುಂಬಿ… ಮೊದಲು ಕಳೂಸೂಕೆ ನಿಮ್ಮನ್ನೆಲ್ಲಾ ಅಣಿ ಮಾಡಿದನಂತೆ…”

ಕರಿಯನ ಕತೆಯ ನಿರೂಪಣೆಗೆ ನಾನು ತುಸು ತಡೆಯೊಡ್ಡುತ್ತಾ-

“ನಮ್ ಜತೇಲೆ ನಿಮ್ಮನ್ನೂ ಕಳುಹಿಸಿಲಿಲ್ಲವೇ?”

“ಇಲ್ಲ ಕಣ್ರಪ್ಪ. ನಮ್ಮ ನಿಮ್ಮನ್ನೆಲ್ಲಾ ಒಂದೇ ಮಣ್ಣಲ್ಲಿ ಕಲಸಿ ಮಾಡುದ್ರು… ಅದ್ಯಾಕೊ…. ಏನೋ…. ಮೊದಲು ನಿಮ್ಮ… ಅಂದ್ರೆ ಮೇಲು ಜಾತಿಯವರನ್ನು ಮೊದಲು ಇಲ್ಲಿಗೆ ಕಳೂಸೂಕೆ ಮನಸ್ಸು ಮಾಡಿದ.”

“ಹಂಗಾದ್ರೆ ಒಂದೊಂದು ಜಾತಿಯವರನ್ನ ಒಂದೊಂದು ಗುಂಪಾಗಿ ಬೇರೆ ಬೇರೆ ವಿಂಗಡ ಮಾಡಿ, ಆ ಬ್ರಹ್ಮ ಇಲ್ಲಿಗೆ ಕಳಸವ್ನೆ ಅಂತೀಯಾ?”

“ಹಂಗೆ ಅನ್ಕೊಳಿ… ಮೊದಲು ನಿಮ್ಮ ಮಾಡಿ ಹೋಗ್ರಪ್ಪ ನರಲೋಕಕ್ಕೆ ಅಂದ… ಆಗ ನೀವು… ನರಲೋಕಕ್ಕೆ ಹೋಗು ಅಂತೀಯಲ್ಲ, ಅಲ್ಲಿ ನಾವು ಎಲ್ಲಿರೋಣ? ಅಂತ ಕೇಳುದ್ರಿ… ತಕೊಳಿ ಮನೆ ಅಂದ. ಆಮೇಲೆ ನೀವು… ಅಲ್ಲಿ ಉಣ್ಣೋಕೆ ತಿನ್ನೋಕೆ ಏನ್ ಮಾಡ್ಮ ಅಂದ್ರಿ… ದಿನಸಿ ಬೆಳ್ಕೊಂಡು ತಿನ್ನೋಕೆ ಹೊಲ ಗದ್ದೆ ತೋಟ ಕೊಡ್ತೀನಿ ಹೋಗಿ ಅಂದ… ಮತ್ತೆ ಬಟ್ಟೆ ಬರೆ ಮೇಲ್ ವೆಚ್ಚಕ್ಕೆ ಏನ್ ದಾರಿ ಅಂತ ತಿರ್‍ಗ ಬ್ರಹ್ಮನ್ನ ಕೇಳುದ್ರಿ… ಚಿನ್ನ ಬೆಳ್ಳಿ ನಗ ನಾಣ್ಯ ತಕೊಂಡು ಇಲ್ಲಿಂದ ಹೊರಡಿ ಅಂದ. ಹಿಂಗೆ ನೀವು ಅಲ್ಲಿಂದ ಇಲ್ಲಿಗೆ ಬರೋಕ್ ಮುಂಚೇನೆ ತಲೆ ಚೆನ್ನಾಗಿ ಓಡಿಸಿ, ಇಲ್ಲಿರೂಕೆ ಏನೇನ್ ಅನುಕೂಲ ಬೇಕೋ… ಅವೆಲ್ಲಾನೂ ಕೇಳ್ಕೊಂಡು ಬಂದ್ರಿ… ನೀವೆಲ್ಲಾ ಇಲ್ಲಿಗೆ ಬಂದಾದ್ಮೇಲೆ… ನಮ್ಮನ್ನ ಅಣಿ ಮಾಡಿ, ಜೀವ ತುಂಬಿ… ಹೋಗ್ರಪ್ಪ ನರಲೋಕಕ್ಕೆ ಅಂದ… ಅವನು ಹಂಗೆ ಅಂದದ್ದೆ ತಡ… ಬಿದ್ದಂಬೀಳ ನಾವೆಲ್ಲಾ ದಡಾರನೆ ಅಲ್ಲಿಂದ ಇಲ್ಲಿಗೆ ಬಂದ್ಬುಟ್ಟೊ… ಇಲ್ಲಿಗೆ ಬಂದು ನೋಡ್ತೀವಿ… ಎಲ್ಲಾನು ನೀವೇ ಆವರಿಸ್ಕೊಂಡು ಕುಂತಿದ್ದೀರಿ! ಈಗ ಬ್ರಹ್ಮನ್ನ ಕೇಳವ ಅಂದ್ರೆ… ಅವನು ಅಲ್ಲಿ ಮೇಲವ್ನೆ… ನಾವು ಇಲ್ಲಿ ಕೆಳಗಿದ್ದೀವಿ… ಅದಕ್ಕೆ ಕಣ್ರಪ್ಪ… ನಿಮ್ಮನ್ನೆಲ್ಲಾ ಕೇಳ್ಕೊಂಡು ಬಂದಿರೂರು ಅಂತ ಅನ್ನೋದು”

ಕರಿಯ ಹೇಳಿದ ಪುರಾಣದ ನುಡಿಗಟ್ಟಿನ ಕತೆಯ ಒಡಲಾಳದಲ್ಲಿ… ಜಾತಿಯೊಂದರ ಕಾರಣದಿಂದಲೇ ನೂರಾರು ವರುಶಗಳಿಂದಲೂ ವಿದ್ಯೆ-ಸಂಪತ್ತು-ಆಡಳಿತದ ಗದ್ದುಗೆಯಿಂದ ದೂರವಾಗಿ, ಹಸಿವು-ಬಡತನ-ಅಪಮಾನಗಳಿಂದ ಬೇಯುತ್ತಿದ್ದ ಸಮುದಾಯವೊಂದರ ನೋವು ತುಂಬಿತ್ತು.

(ಚಿತ್ರ: ವಾರ‍್ತೆ ಡಾಟ್ ಕಾಂ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: