ವಚನಗಳ ಕನ್ನಡ ಮೂಲ

ಸಂದೀಪ್ ಕಂಬಿ.

jedaraDasimayyaDuggale

ಸುಮಾರು 11-12ನೇ ನೂರ್‍ಮಾನದ ಹೊತ್ತಿಗೆ ಕನ್ನಡದಲ್ಲಿ ಮೂಡಿತೆಂದು ಹೇಳಲಾಗುವ ಒಂದು ವಿಶೇಶವಾದ ಸಾಹಿತ್ಯದ ಬಗೆಯೆಂದರೆ ‘ವಚನ’. ಬೇರೆ ಯಾವುದೇ ನುಡಿಯ ಸಾಹಿತ್ಯದ ಬಗೆಗಿಂತ ಬೇರೆಯಾಗಿಯೇ ಕಾಣುವ ಈ ಬಗೆ ಎಲ್ಲಿಂದ ಪ್ರೇರಣೆ ಪಡೆಯಿತು ಎಂಬುದು ಒಂದು ಪ್ರಶ್ನೆಯಾದರೆ ‘ವಚನ’ ಪದದ ಹುಟ್ಟು ಏನು ಎಂಬುದು ಇನ್ನೊಂದು ಪ್ರಶ್ನೆಯಾಗಿದೆ. ಈ ವಿಶಯಗಳ ಬಗ್ಗೆ ಈಗಾಗಲೇ ಸಾಕಶ್ಟು ಚರ್‍ಚೆಗಳಾಗಿವೆ. ಡಾ|| ಚಿದಾನಂದ ಮೂರ್‍ತಿಯವರು ತಮ್ಮ ‘ವಚನ ಸಾಹಿತ್ಯ’ ಎಂಬ ಪುಸ್ತಕದಲ್ಲಿ ಈ ಸಾಹಿತ್ಯದ ಬಗೆಯ ಹುಟ್ಟಿನ ಸುತ್ತ ಹಲವು ಮಂದಿ ನಡೆಸಿದ ಅರಕೆಗಳನ್ನು ಮತ್ತು ಚರ್‍ಚೆಗಳನ್ನು ಚಿಕ್ಕದಾಗಿ ಹೆಸರಿಸಿದ್ದಾರೆ. ಅವುಗಳು, ತಮಿಳಿನ ನಾಯಾನ್ಮಾರ ತೇವಾರಂ, ಸಂಸ್ಕ್ರುತದ ಗದ್ಯಪ್ರಕಾರ, ವೇದ-ಉಪನಿಶತ್ತು-ಬ್ರಾಹ್ಮಣಗಳ ಗದ್ಯದ ಸರಣಿ ಮುಂತಾದವು. ಆದರೆ ಇವೆಲ್ಲವೂ ಈ ಪ್ರಕಾರದ ಸೆಲೆಯನ್ನು ಹುಡುಕುವ ಪ್ರಯತ್ನಗಳು ಮಾತ್ರ, ಯಾವುದೇ ಗಟ್ಟಿಯಾದ ಪುರಾವೆಗಳಿಲ್ಲ ಎಂಬುದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಡಾ|| ಎಂ. ಎಂ. ಕಲಬುರ್‍ಗಿಯವರು ತಮ್ಮ ‘ಮಾರ್‍ಗ’ ಕಂತೆ 3ರಲ್ಲಿ ಬರೆದಿರುವ ವಚನ ಸಾಹಿತ್ಯದ ಕೆಲವು ವಿಶಯಗಳು ಮತ್ತು ಆ ಪದಬಳಕೆಯ ಹುಟ್ಟಿನ ಬಗ್ಗೆ ಮಾಹಿತಿ ಕುತೂಹಲಕಾರಿಯಾಗಿದೆ. ಅವರೇ ಎತ್ತುಗೆಯಾಗಿ ಕೊಟ್ಟಿರುವ ಜೇಡರ ದಾಸಿಮಯ್ಯನ ಒಂದು ವಚನವನ್ನು ನೋಡೋಣ:

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ
ನಿಮ್ಮ ನಿತ್ತೆ ಕಾಣಾ ರಾಮನಾಥಾ!

ಇಲ್ಲಿ ಸೂಳ್ನುಡಿ ಎಂಬುದಕ್ಕೆ ವಚನಸಾಹಿತ್ಯದ ಒಂದು ಬಗೆ ಎಂಬ ಹುರುಳಿದೆ ಎಂಬುದು ಅವರ ವಾದ. ಜೇಡರ ದಾಸಿಮಯ್ಯನು ಮೊದಲ ವಚನಕಾರರಲ್ಲಿ ಒಬ್ಬನೆನಿಸಿಕೊಂಡರೂ ಅವನ ಕಾಲದಲ್ಲಿಯೂ ಮತ್ತು ಅದಕ್ಕೆ ಮುಂಚೆಯೂ ಶರಣರು ವಚನಗಳನ್ನು ಬರೆದಿದ್ದರಲ್ಲದೇ, ಅವುಗಳನ್ನು ಸೂಳ್ನುಡಿ ಎಂದು ಕರೆಯಲಾಗುತ್ತಿತ್ತು ಎಂಬುದು ಈ ವಚನದಿಂದ ತಿಳಿಯಾಗುತ್ತದೆ. ಈ ‘ಸೂಳ್’ ಪದದ ಹುಟ್ಟಿನ ಬಗ್ಗೆ ಹಲವು ಸದ್ಯತೆಗಳನ್ನು ತಿಳಿಸಿದ್ದಾರೆ. ‘ಸೂರುಳ್ + ನುಡಿ’ ಇಂದ ಬಂದಿರಬಹುದೆಂದು ಒಂದು ಸಾದ್ಯತೆ ಇದೆ. ಇಲ್ಲಿ ‘ಸೂರುಳ್’ ಎಂದರೆ ಆಣೆ ಎಂದು. ‘ಸೂಡ’ (ಹಾಡು/ ಸಂಗೀತ), ‘ಸೂಳ್’ (ಸರದಿ) ಇನ್ನೂ ಮುಂತಾದ ಸಾದ್ಯತೆಗಳ ಬಗ್ಗೆ ಕಲಬುರ್‍ಗಿಯವರು ಚರ್‍ಚಿಸಿದ್ದಾರೆ. ಅದೇನೇ ಇರಲಿ, ಈ ‘ಸೂಳ್ನುಡಿ’ ಎಂಬ ಪದ ಕನ್ನಡ ಮೂಲದ ಪದ ಎಂಬುದು ಮಾತ್ರ ತಿಳಿಯಾಗಿದೆ. ಇದೇ ಪದ ಮುಂದೆ ಸಂಸ್ಕ್ರುತಕ್ಕೆ ನುಡಿಮಾರ್‍ಪುಗೊಂಡು ‘ವಚನ’ ಆಗಿರಬಹುದು.

ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆದು, ನಮ್ಮೆಲ್ಲರ ಹೆಮ್ಮೆ ಎನಿಸಿಕೊಂಡಿರುವ ವಚನ ಸಾಹಿತ್ಯಕ್ಕೆ ಕನ್ನಡದ್ದೇ ಆದ ಹೆಸರೂ ಇದೆ ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ. ಇಂದಿಗೂ ಹಲವರು, ಪದಗಳ ವಿಶಯವನ್ನು ಮೊದಲ್ಗೊಂಡು, ಕನ್ನಡದಲ್ಲಿ ಅದಾಗುವುದಿಲ್ಲ, ಇದಾಗುವುದಿಲ್ಲ ಎಂದು ವಾದಿಸುತ್ತಾರೆ. ತತ್ವ, ದರ್‍ಮ, ವಯ್ಚಾರಿಕತೆ ಎಲ್ಲವನ್ನೂ ಕನ್ನಡದಲ್ಲಿಯೇ ಹೇಳಲು ಸಾದ್ಯ ಎಂಬುದನ್ನು ವಚನಕಾರರು ತೋರಿಸಿ ಕೊಟ್ಟಿರುವುದು ಜಗತ್ತಿಗೇ ತಿಳಿದಿರುವ ವಿಶಯ. ಆದರೆ ವಚನದಂತಹ ಗಂಬೀರವಾದ ಸಾಹಿತ್ಯದ ಬಗೆಗೆ ಅವರು ಕನ್ನಡದೇ ಹೆಸರೂ ಇಟ್ಟಿದ್ದರೆಂಬುದು ವಿಶೇಶವಾಗಿ ತಿಳಿದುಕೊಳ್ಳಬೇಕಿದೆ.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: