ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ

– ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 13

nudi_inukuಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ 48 (ಇಲ್ಲವೇ ಅದಕ್ಕಿಂತಲೂ ಹೆಚ್ಚು) ಬರಿಗೆಗಳನ್ನು ಬಳಸುತ್ತಿದ್ದೇವೆ. ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗಬಲ್ಲುದು.

ಇದನ್ನು ವಿರೋದಿಸುವವರಲ್ಲಿ ಕೆಲವರ ವಾದ ಹೀಗಿರುತ್ತದೆ: ಕನ್ನಡ ಬರಹದಲ್ಲಿ ಈ ರೀತಿ ಹೆಚ್ಚು ಬರಿಗೆಗಳಿರುವುದು ಅದರ ಶ್ರೀಮಂತಿಕೆ; ಅವನ್ನು ಕಳೆದುಕೊಳ್ಳುವುದೆಂದರೆ, ಕನ್ನಡ ಬರಹವನ್ನು ಬಡತನಕ್ಕೆ ನೂಕಿದ ಹಾಗೆ, ಮತ್ತು ಅದರ ಸಂಸ್ಕ್ರುತಿಯನ್ನು ನಾಶಮಾಡಿದ ಹಾಗೆ.

ಆದರೆ, ಈ ವಾದ ನಿಜಕ್ಕೂ ಸರಿಯಲ್ಲ; ಪದಗಳನ್ನು ಓದುವ ಹಾಗೆಯೇ ಬರೆಯಲು ಎಶ್ಟು ಬರಿಗೆಗಳು ಬೇಕಾಗುತ್ತವೆಯೋ ಅಶ್ಟನ್ನು ಮಾತ್ರ ಉಳಿಸಿಕೊಂಡಿರುವ ಬರಹವೇ ತುಂಬಾ ಒಳ್ಳೆಯ ಬರಹವೆಂದೆನಿಸುತ್ತದೆ. ಬೇಕಾದುದಕ್ಕಿಂತ ಹೆಚ್ಚು ಬರಿಗೆಗಳನ್ನು ಬಳಸುವ ಬರಹವನ್ನು ಕಲಿಯುವುದೂ ಕಶ್ಟ, ಬಳಸುವುದೂ ಕಶ್ಟ.

ಹಳೆಗನ್ನಡದಲ್ಲಿ ಱ ಮತ್ತು ೞಗಳೆಂಬ ಎರಡು ಹೆಚ್ಚಿನ ಬರಿಗೆಗಳಿದ್ದುವು; ಆ ಕಾಲದಲ್ಲಿ ರ-ಱ ಮತ್ತು ಳ-ೞಗಳ ನಡುವೆ ಓದಿನಲ್ಲಿ ವ್ಯತ್ಯಾಸವಿದ್ದ ಕಾರಣ, ಅವನ್ನು ಬರಹದಲ್ಲಿ ಬಳಸುತ್ತಿದ್ದುದು ಹಳೆಗನ್ನಡದ ಮಟ್ಟಿಗೆ ಸಿರಿತನವಾಗಿತ್ತು; ಆದರೆ, ಇವತ್ತು ನಾವು ಅವೆರಡು ಬರಿಗೆಗಳನ್ನೂ ಬಿಟ್ಟುಕೊಟ್ಟಿದ್ದೇವೆ; ಯಾಕೆಂದರೆ, ನಮ್ಮ ಓದಿನಲ್ಲಿ ಅವುಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ.

ಈ ಹೆಚ್ಚಿನ ಬರಿಗೆಗಳಿರುವುದು ಸಿರಿತನವೆಂದು, ಇಲ್ಲವೇ ಕನ್ನಡ ಬರಹದ ಸಂಸ್ಕ್ರುತಿಯೆಂದು ಅವನ್ನು ಇವತ್ತಿಗೂ ಉಳಿಸಿಕೊಂಡಿದ್ದಲ್ಲಿ, ನಮ್ಮ ಓದಿನಲ್ಲಿಲ್ಲದ ಈ ಎರಡು ಬಗೆಯ ವ್ಯತ್ಯಾಸಗಳನ್ನು ಬರಹದಲ್ಲಿ ಕಾಣಿಸುವ ಒಂದು ದೊಡ್ಡ ತೊಡಕು ನಮ್ಮದಾಗುತ್ತಿತ್ತು. ಕರೆ ‘ಬರಹೇಳು’, ಕರೆ ‘ಹಾಲು ಕರೆ’, ಊರು ‘ಹಳ್ಳಿ’, ಊರು ‘ನಿಲ್ಲಿಸು’, ತೆರೆ ‘ಕಡಲಿನ ತೆರೆ’, ತೆರೆ ‘ಬಾಗಿಲು ತೆರೆ’ ಎಂಬಂತಹ ಹಲವಾರು ಪದಗಳನ್ನು ಬರೆಯುವಾಗ, ಯಾವ ಪದದಲ್ಲಿ ರಕಾರವನ್ನು ಬಳಸಬೇಕು, ಮತ್ತು ಯಾವುದರಲ್ಲಿ ಱಕಾರವನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ, ಮೇಲಿನ ಪದಜೋಡಿಗಳಲ್ಲಿ ರಕಾರವನ್ನು ಮೊದಲನೆಯದರಲ್ಲೂ ಱಕಾರವನ್ನು ಎರಡನೆಯದರಲ್ಲೂ ಬಳಸಬೇಕಾಗುತ್ತಿತ್ತು.

ಇದೇ ರೀತಿಯಲ್ಲಿ, ಉಳಿ ‘ಕೆತ್ತುವ ಉಳಿ’, ಉಳಿ ‘ ಮನೆಯಲ್ಲಿ ಉಳಿ’, ಎಳೆ ‘ಎಳತು’, ಎಳೆ ‘ಎಳೆದಾಡು’, ಬಳಸು ‘ನೇರವಲ್ಲದ’, ಬಳಸು ‘ಉಪಯೋಗಿಸು’ ಎಂಬಂತಹ ಬೇರೆ ಹಲವಾರು ಪದಜೋಡಿಗಳಲ್ಲಿ ಳಕಾರವನ್ನು ಯಾವ ಪದದಲ್ಲಿ ಬಳಸಬೇಕು ಮತ್ತು ೞಕಾರವನ್ನು ಯಾವ ಪದದಲ್ಲಿ ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು (ಎರಡನೆಯ ಪದದಲ್ಲಿ ೞಕಾರವಿತ್ತು).

ಹೊಸಗನ್ನಡವನ್ನು ಬಳಕೆಗೆ ತಂದವರು ಈ ಸಿರಿತನದ ಇಲ್ಲವೇ ಸಂಸ್ಕ್ರುತಿಯ ಹೊರೆಯನ್ನು ನಮ್ಮ ಮೇಲೆ ಹೊರಿಸ ಹೋಗದೆ ಒಂದು ದೊಡ್ಡ ಉಪಕಾರವನ್ನೇ ಮಾಡಿದ್ದಾರೆ. ಆದರೆ, ಸಂಸ್ಕ್ರುತದಿಂದ ಬಂದ ಎರವಲು ಪದಗಳ ಮಟ್ಟಿಗೆ ಮಾತ್ರ, ಅವರು ಇಂತಹದೇ ಇನ್ನೊಂದು ಬಗೆಯ ತೊಡಕನ್ನು ಇಲ್ಲವಾಗಿಸದೆ ಹಾಗೆಯೇ ಉಳಿಸಿದ್ದಾರೆ. ಸಂಸ್ಕ್ರುತದ ವಿಶಯವಾಗಿ ಅವರಿಗಿದ್ದ ಮೇಲರಿಮೆಯೇ ಇದಕ್ಕೆ ಕಾರಣ.

ಈ ಎರವಲು ಪದಗಳಲ್ಲಿ ಬರುವ ರು-ಋ, ಶ-ಷ, ಅಲ್ಪಪ್ರಾಣ-ಮಹಾಪ್ರಾಣ ಮೊದಲಾದವುಗಳ ನಡುವಿನ ವ್ಯತ್ಯಾಸ ಹೆಚ್ಚಿನ ಕನ್ನಡಿಗರ ಓದಿನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಅವನ್ನು ಬರಹದಲ್ಲಿ ಕಾಣಿಸಬೇಕಿದ್ದರೆ, ಯಾವ ಪದದಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಹಳೆಗನ್ನಡದ ರ-ಱ ಮತ್ತು ಳ-ೞ ವ್ಯತ್ಯಾಸಗಳ ಹಾಗೆಯೇ ಇವೂ ಕೂಡ ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಹೆಚ್ಚಿನ ಕನ್ನಡಿಗರಿಗೂ ಅನವಶ್ಯಕವಾಗಿ ತೊಡಕನ್ನು ಉಂಟುಮಾಡುತ್ತವೆ.

ಸಂಸ್ಕ್ರುತ ಎರವಲುಗಳಾದ ಅವಶ್ಯ-ಮನುಷ್ಯ, ವಿಶಾಲ-ಕಷಾಯ, ಕೃಶ-ಕೃಷಿ, ಶಿಶು-ವಿಷು, ನಶಿಸು-ದೂಷಿಸು, ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಶ-ಷ ವ್ಯತ್ಯಾಸ ಕಾಣಿಸುತ್ತದೆ, ಆದರೆ ಅವುಗಳ ಓದಿನಲ್ಲಿ ಕಾಣಿಸುವುದಿಲ್ಲ; ಇದೇ ರೀತಿಯಲ್ಲಿ ಬೋಧಿಸು-ಭೇದಿಸು, ವರ್ಧಿಸು-ಮರ್ದಿಸು, ವಿಧಾನ-ವಿದಾಯ, ಸಂಪಾದಿಸು-ಸಂಬಂಧಿಸು ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಕಾಣಿಸುವ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸವೂ ಓದಿನಲ್ಲಿಲ್ಲ.

ಹಳೆಗನ್ನಡದ ವ್ಯತ್ಯಾಸಗಳ ಹಾಗೆ, ಓದಿನಲ್ಲಿಲ್ಲದ ಈ ಸಂಸ್ಕ್ರುತ ಎರವಲುಗಳ ನಡುವಿನ ವ್ಯತ್ಯಾಸವನ್ನೂ ಬಿಟ್ಟುಕೊಡುವ ಮೂಲಕ ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವ ಹಾಗೆ ಮಾಡಬೇಕಾಗಿದೆ, ಮತ್ತು ಅದು ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡಬೇಕಾಗಿದೆ. ಓದಿನಲ್ಲಿ ಕಾಣಿಸಿಕೊಳ್ಳದ ಈ ಹೆಚ್ಚಿನ ಬರಿಗೆಗಳು ಕನ್ನಡ ಬರಹದ ಸಿರಿವಂತಿಕೆಯೂ ಅಲ್ಲ, ಸಂಸ್ಕ್ರುತಿಯೂ ಅಲ್ಲ. ಕನ್ನಡ ಬರಹವನ್ನು ಬಳಸುವಲ್ಲಿ ಅವು ಒಂದು ಅವಶ್ಯವಿಲ್ಲದ ಹೊರೆ ಮಾತ್ರ.

ಓದಿನಲ್ಲಿಲ್ಲದ ಬರಿಗೆ ಒಂದು ಬರಹಕ್ಕೆ ಬೇಕಾಗುವುದಿಲ್ಲವೆಂಬುದಕ್ಕೆ ಸಂಸ್ಕ್ರುತದಿಂದಲೇ ಒಂದು ಎತ್ತುಗೆಯನ್ನು ಕೊಡಬಹುದು: ಕನ್ನಡ ಬರಹದಲ್ಲಿ ಎ-ಏ ಮತ್ತು ಒ-ಓ ಎಂಬ ವ್ಯತ್ಯಾಸ ಇದೆ; ಆದರೆ, ಸಂಸ್ಕ್ರುತ ಬರಹದಲ್ಲಿ ಈ ವ್ಯತ್ಯಾಸವಿಲ್ಲ. ಆದರೆ ಈ ಕಾರಣಕ್ಕಾಗಿ, ಕನ್ನಡ ಬರಹ ಸಂಸ್ಕ್ರುತ ಬರಹಕ್ಕಿಂತ ಹೆಚ್ಚು ಶ್ರೀಮಂತವಾದುದೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಸಂಸ್ಕ್ರುತ ಪದಗಳ ಓದಿನಲ್ಲಿ ಕಾಣಿಸದಿರುವ ಈ ವ್ಯತ್ಯಾಸ ಸಂಸ್ಕ್ರುತ ಬರಹದಲ್ಲಿ ಇಲ್ಲದಿರುವುದು ಸಂಸ್ಕ್ರುತ ಬರಹದ ಸಿರಿತನವಲ್ಲದೆ ಬಡತನವಲ್ಲ.

ಪದಗಳಲ್ಲಿ ಎಶ್ಟು ಉಲಿಗಳು ಬಳಕೆಯಾಗುತ್ತವೆ, ಮತ್ತು ಯಾವ ಉಲಿಗಳು ಬಳಕೆಯಾಗುತ್ತವೆ ಎಂಬ ವಿಶಯದಲ್ಲಿ ನುಡಿಗಳು ಒಂದರಿಂದೊಂದು ತೀರಾ ಬೇರಾಗಿರಬಲ್ಲುವು. ಆಪ್ರಿಕಾದ ಬೊತ್ಸ್‌ವಾನಾದಲ್ಲಿ ಬಳಕೆಯಲ್ಲಿರುವ ಕೆಲವು ನುಡಿಗಳಲ್ಲಿ ನೂರಕ್ಕಿಂತಲೂ ಹೆಚ್ಚು ಉಲಿಗಳು ಬಳಕೆಯಲ್ಲಿದ್ದು, ಅವನ್ನು ಓದುವಂತೆ ಬರೆಯಲು ನೂರಕ್ಕಿಂತಲೂ ಹೆಚ್ಚು ಬರಿಗೆಗಳು ಬೇಕಾಗುತ್ತವೆ. ಇದಕ್ಕೆ ಬದಲು, ಪಾಪುವಾ ನ್ಯೂಗಿನಿಯ ರೋತೋಕಸ್ ಎಂಬ ನುಡಿಯಲ್ಲಿ ಹತ್ತು-ಹನ್ನೆರಡು ಉಲಿಗಳು ಮಾತ್ರ ಬಳಕೆಯಲ್ಲಿದ್ದು, ಅವನ್ನು ಓದುವ ಹಾಗೆ ಬರೆಯಲು ಹತ್ತು-ಹನ್ನೆರಡು ಬರಿಗೆಗಳು ಮಾತ್ರ ಸಾಕಾಗುತ್ತವೆ.

ಜಗತ್ತಿನಲ್ಲಿರುವ ಎಲ್ಲಾ ನುಡಿಗಳಲ್ಲೂ ಬಳಕೆಯಲ್ಲಿರುವ ಉಲಿಗಳನ್ನು ಬರೆಯಬೇಕಿದ್ದಲ್ಲಿ ನೂರಾರು ಬರಿಗೆಗಳು ಮತ್ತು ಇನ್ನೂ ಹಲವಾರು ಬಗೆಯ ಗುರುತುಗಳು ಬೇಕಾಗುತ್ತವೆ. ಹಾಗಾಗಿ, ಯಾವುದೇ ಒಂದು ನುಡಿಯಲ್ಲೂ ಬೇಕಾದುದಕ್ಕಿಂತ ಹತ್ತೋ ಇಪ್ಪತ್ತೋ ಹೆಚ್ಚು ಬರಿಗೆಗಳಿದ್ದಲ್ಲಿ, ಅವುಗಳ ನೆರವಿನಿಂದ ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವಂತೆಯೇ ಬರೆಯಲು ಬರುತ್ತದೆಯೆಂಬುದು ಪೊಳ್ಳು ವಾದ.

ನಿಜಕ್ಕೂ ಕನ್ನಡ ಬರಹದಲ್ಲಿರುವ ಈ ಹೆಚ್ಚಿನ ಬರಿಗೆಗಳು ಸಂಸ್ಕ್ರುತ ಎರವಲುಗಳನ್ನು ಮಾತ್ರ ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ನೆರವಾಗುತ್ತವೆ; ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವ ಹಾಗೆ ಬರೆಯಬೇಕಿದ್ದಲ್ಲಿ, ಅದಕ್ಕಾಗಿ ಬೇರೆಯೇ ಹೆಚ್ಚಿನ ಬರಿಗೆಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ. ತುಳು ನುಡಿಯ ಪದಗಳನ್ನು ಅದರಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗಿರುವ ಬರಿಗೆಗಳು ಸಾಕಾಗುವುದಿಲ್ಲ; ಇನ್ನೊಂದು ಹೆಚ್ಚಿನ ಉಕಾರ ಮತ್ತು ಇನ್ನೆರಡು ಹೆಚ್ಚಿನ ಎಕಾರಗಳು ಬೇಕಾಗುತ್ತವೆ.

ನಿಜಕ್ಕೂ ಕನ್ನಡದವೇ ಆದ ಆಡುನುಡಿಗಳನ್ನೂ ಅವುಗಳಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗ ಬಳಕೆಯಾಗುತ್ತಿರುವ ಬರಿಗೆಗಳು ಸಾಕಾಗುವುದಿಲ್ಲ; ಗುಲ್ಬರ‍್ಗ ಕನ್ನಡದಲ್ಲಿ ಬರುವ ಎರಡು ಬಗೆಯ ಅಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ, ಸುಳ್ಯದ ಗವ್ಡ ಕನ್ನಡದಲ್ಲಿ ಬರುವ ಎರಡು ಬಗೆಯ ಉಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ ಬರೆದು ತೋರಿಸಲು ಕನ್ನಡ ಬರಹದಲ್ಲಿ ಬರಿಗೆಗಳಿಲ್ಲ.

ಹಾಗಾಗಿ, ಕನ್ನಡ ಬರಹದಲ್ಲಿ ಬರುವ ಪದಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ಬೇಕಾಗುವ 31 ಬರಿಗೆಗಳನ್ನು ಮಾತ್ರ ಉಳಿಸಿಕೊಳ್ಳುವುದೇ ಜಾಣತನ; ಉಳಿದುವನ್ನೆಲ್ಲ ಹೆಚ್ಚಿನ ಕನ್ನಡಿಗರೂ ಓದಬೇಕಾಗಿರುವ ಬರಹಗಳಿಂದ ತೆಗೆದುಹಾಕಬೇಕಾಗಿದೆ, ಮತ್ತು ಹಾಗೆ ಮಾಡುವ ಮೂಲಕ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಬಳಸುವಂತೆ ಮಾಡಬೇಕಾಗಿದೆ. ಸಂಸ್ಕ್ರುತಿ, ಶ್ರೀಮಂತಿಕೆ ಎಂಬಂತಹ ದೊಡ್ಡ ದೊಡ್ಡ ಪದಗಳನ್ನು ಬಳಸಿ ಓದುಗರು ಗೊಂದಲದಲ್ಲಿ ಬೀಳುವ ಹಾಗೆ ಮಾಡುವುದರಿಂದ ಕನ್ನಡಿಗರಿಗೇನೇ ಅನ್ಯಾಯವಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 12

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: