ಏಕೀಕರಣ: ಕೆಚ್ಚೆದೆಯ ಕನ್ನಡಿಗರ ದಿಟ್ಟತನದ ಕತೆ

ರತೀಶ ರತ್ನಾಕರ.

IMG_0131

ನವೆಂಬರ್ 1, ಕರ‍್ನಾಟಕದೆಲ್ಲೆಡೆ ರಾಜ್ಯೋತ್ಸವದ ನಲಿವು, ಎಲ್ಲೆಲ್ಲೂ ಹಳದಿ ಕೆಂಪು ಬಣ್ಣಗಳ ಆಟ. ಕರುನಾಡ ತುಂಬೆಲ್ಲಾ ಕನ್ನಡದ ಕಲರವ. ಹಾಗದರೆ, ಈ ಹಬ್ಬದ ಹುಟ್ಟಿನ ಹಿಂದಿನ ಹಳಮೆಯೇನು? ಯಾತಕ್ಕಾಗಿ ಈ ಕನ್ನಡದ ಹಬ್ಬವನ್ನು ನಾವು ಆಚರಿಸುತ್ತಿದ್ದೇವೆ? ಈ ಎಲ್ಲಾ ಕೇಳ್ವಿಗಳನ್ನು ಬಗೆಹರಿಸಲು ನಾವು ಕರುನಾಡ ಹಳಮೆಯ ಪುಟಗಳನ್ನು ತಿರುವಿ ಹಾಕಬೇಕಿದೆ. ರೋಚಕವಾಗಿರುವ ಈ ಹಳಮೆಯಲ್ಲಿ ಹಿರಿಯ ಕನ್ನಡಿಗರ ತ್ಯಾಗ, ಒಗ್ಗಟ್ಟು, ಎದೆಗಾರಿಕೆ ಹಾಗೂ ಹಿಡಿದ ಪಟ್ಟನ್ನು ಬಿಡದೆ ಸಾದಿಸಿದ ಹಟದ ಹಿರಿಮೆಯಿದೆ. ಬನ್ನಿ, ಕರುನಾಡ ಕೆಚ್ಚೆದೆಯ ಕನ್ನಡಿಗರ ಕತೆಯನ್ನು ಹೇಳುವ ಈ ಪುಟಗಳನ್ನು ಒಮ್ಮೆ ತಿರುವಿ ಹಾಕಿ ನೋಡೋಣ.

ಹಳಮೆಯ ಪುಟಗಳನ್ನು ತಿರುವಿದರೆ, ಶಾತವಾಹನರು ಕನ್ನಡದ ಮೊದಲ ದೊಡ್ಡ ಅರಸು ಮನೆತನದವರು. ಬಳಿಕ ಈಗಿನ ತಮಿಳುನಾಡಿನ ಪಲ್ಲವರ ತೆಕ್ಕೆಗೆ ಹಲವು ವರುಶಗಳ ಕಾಲ ಕರುನಾಡು ಸಿಕ್ಕಿ ಹಾಕಿಕೊಂಡಿತ್ತು. ಪಲ್ಲವರ ಆಳ್ವಿಕೆಯಡಿ ತೊಂದರೆಗೊಳಗಾಗಿದ್ದ ಕನ್ನಡಿಗರಿಗೆ ಕದಂಬರ ಹೆಸರಾಂತ ಅರಸು ಮಯೂರವರ‍್ಮನಿಂದಾಗಿ ಬಿಡುಗಡೆ ಸಿಕ್ಕಿತು. ಕದಂಬರ ಆಳ್ವಿಕೆಯಡಿಯಲ್ಲಿ ಕರುನಾಡು ಗಟ್ಟಿಯಾಗಿ ನೆಲೆಗೊಂಡಿತು. ಆ ಬಳಿಕ ಬಂದ ಚಾಲುಕ್ಯರು, ಗಂಗರು, ರಾಶ್ಟ್ರಕೂಟರು, ಹೊಯ್ಸಳರು ಹಾಗೂ ಕರ‍್ಣಾಟ ಸಾಮ್ರಾಜ್ಯದ (ವಿಜಯನಗರ) ಅರಸರ ಕಾಲಗಳು ಕರುನಾಡ ಹಳಮೆಯಲ್ಲಿ ಬಂಗಾರದ ಬರಿಗೆಗಳಲ್ಲಿ ಬರೆದಿಡುವಂತಹ ಕಾಲಗಳು. ಕನ್ನಡ ಹಾಗು ಕನ್ನಡಿಗರ ಸಿರಿತನವು ಉತ್ತುಂಗಕ್ಕೇರಿದ ಕಾಲವದು.

ಸುಮಾರು 17ನೇ ನೂರೇಡಿನವರೆಗು ಹೆಚ್ಚಿನ ಕನ್ನಡಿಗರೆಲ್ಲಾ ಹೆಚ್ಚುಕಡಿಮೆ ಒಂದೇ ಸಾಮ್ರಾಜ್ಯ / ಅರಸು ಮನೆತನದಡಿ ಇದ್ದರು.  ಕರ‍್ಣಾಟ ಸಾಮ್ರಾಜ್ಯದ ಅರಸರ ಆಳ್ವಿಕೆಯು ಕೊನೆಯಾದ ಮೇಲೆ ಕನ್ನಡಿಗರು ಬೇರೆ ಬೇರೆ ಅರಸರ ಕೆಳಗೆ ಹರಿದು ಹಂಚಿಹೋದರು. ಕನ್ನಡದ ಅರಸರು ಅಲ್ಲಲ್ಲಿ ಇದ್ದರೂ ಎಲ್ಲಾ ಕನ್ನಡಿಗರು ಒಂದೇ ಅರಸನ ಆಳ್ವಿಕೆಯಡಿ ಬರುತ್ತಿರಲಿಲ್ಲ. 18 ನೇ ನೂರೇಡಿನಲ್ಲಿ, ಬ್ರಿಟೀಶರ ಆಳ್ವಿಕೆ ಬಂದಾಗ ಸುಮಾರು 20 ಬೇರೆ ಬೇರೆ ಆಳ್ವಿಕೆಗಳಡಿ ಕನ್ನಡಿಗರೆಲ್ಲಾ ಹಂಚಿ ಹೋದರು. ಅದರಲ್ಲಿ, ಮಯ್ಸೂರು ಅರಸರು, ಹಯ್ದರಾಬಾದ್ ನಿಜಾಮರು, ಕೊಡಗು, ಮದ್ರಾಸು ಮತ್ತು ಬಾಂಬೆ ಪ್ರೆಸಿಡೆನ್ಸಿ ಅಡಿಯಲ್ಲಿ ಈಗಿನ ಕರ‍್ನಾಟಕದ ಹೆಚ್ಚಿನ ಬಾಗಗಳು ಹಂಚಿಹೋಗಿದ್ದವು. ನಿಜಾಮರು, ಮದ್ರಾಸು ಮತ್ತು ಬಾಂಬೆ ಪ್ರೆಸಿಡೆನ್ಸಿ ಅಡಿಯಲ್ಲಿದ್ದ ಕರುನಾಡ ಬಾಗಗಳಲ್ಲಿ ದಿನೇ ದಿನೇ ಕನ್ನಡದ ಜೊತೆ ಕನ್ನಡಿಗರೂ ಕಳೆಗುಂದುತ್ತ ಹೋದರು. ಬಾಂಬೆ ಪ್ರೆಸಿಡೆನ್ಸಿಯ ಆಡಳಿತ ನುಡಿ ಮರಾಟಿ, ನಿಜಾಮರದ್ದು ಉರ‍್ದು ಹಾಗೂ ತೆಲುಗು ಮತ್ತು ಮದ್ರಾಸಿನವರದ್ದು ತಮಿಳು, ಹೀಗುರುವಾಗ ಕನ್ನಡಿಗರಿಗೆ ಎಲ್ಲಿಯ ಸ್ತಾನಮಾನ? ಕನ್ನಡಕ್ಕೆ ಯಾರ ದೊರೆತನ? ಆ ಆಳ್ವಿಕೆಗಳಿಂದ ಕನ್ನಡಿಗರಿಗಾದ ಅನ್ಯಾಯಗಳೇ ಹೆಚ್ಚು. ಕನ್ನಡಿಗನೊಬ್ಬ ತನ್ನ ಇರುವಿಕೆಯನ್ನೇ ಕಳೆದುಕೊಳ್ಳುವ ಪರಿಸ್ತಿತಿ ಎದುರಾಗುತ್ತ ಬಂತು.

ಇನ್ನೇನು ಕೇಲವೇ ವರುಶಗಳಲ್ಲಿ ಕನ್ನಡವು ಕಾಣೆಯಾಗಲಿದೆ, ಜೊತೆಗೆ ಕನ್ನಡಿಗರ ಕೊನೆಯಾಗಲಿದೆ ಎನ್ನುವಂತಹ ಕೆಟ್ಟ ಪರಿಸ್ತಿತಿ ಬಂದೊದಗಿತ್ತು. ಕನ್ನಡವನ್ನು ಕಾಪಾಡಲು ಕಟ್ಟಾಳುಗಳ ತಂಡವೇ ಬೇಕಿತ್ತು, ತನ್ನದೆಲ್ಲವನ್ನು ತೊರೆದು, ಕೇವಲ ನಾಡು-ನುಡಿಗಾಗಿ ದುಡಿಯುವ ಬಿಸಿ ರಕ್ತದ ಕನ್ನಡಿಗರು ಬೇಕಿತ್ತು. ಕನ್ನಡ ತಾಯಿ ಬಂಜೆಯಾಗಿರಲಿಲ್ಲ, ತನ್ನ ಒಡಲು ಕಾಪಾಡುವ ಹಲವು ಮಕ್ಕಳನ್ನು ತನ್ನ ಮಡಿಲಿನಲ್ಲಿ ಬೆಳೆಸಿದಳು. ಈ ಕಟ್ಟಾಳುಗಳ ಹೋರಾಟದ ಕತೆಯೆ ‘ಕರ‍್ನಾಟಕ ಏಕೀಕರಣದ ಹಳಮೆ’. ನಾಡು-ನುಡಿಯ ಏಳಿಗೆಗೆಂದು ಕನ್ನಡಿಗರನ್ನೆಲ್ಲಾ ಒಂದೇ ಆಳ್ವಿಕೆಯ ತೆಕ್ಕೆಗೆ ತರಲು, ಮಾಡಿದ ದಿಟ್ಟ ಹೋರಾಟದ ಕತೆಯೇ ಈ ಮುಂದಿನದು.

ಕನ್ನಡದ ದಾರಿದ್ರ್ಯದ ಹೊತ್ತಿನಲ್ಲಿ, ಕನ್ನಡ ನುಡಿಯನ್ನು ಮತ್ತೆ ತಲೆ ಎತ್ತುವಂತೆ ಮಾಡುವ ಸಲುವಾಗಿ ಹುಟ್ಟಿಕೊಂಡಿತು ‘ಕರ‍್ನಾಟಕ ವಿದ್ಯಾವರ‍್ದಕ ಸಂಗ’. 1890ರಲ್ಲಿ, ಆರ್. ಎಚ್. ದೇಶಪಾಂಡೆಯವರು ದಾರವಾಡದಲ್ಲಿ ಈ ಸಂಗವನ್ನು ಹುಟ್ಟು ಹಾಕಿದರು. ಕನ್ನಡದ ಮೊತ್ತ ಮೊದಲ ಸಂಗ ಎಂಬ ಹೆಗ್ಗಳಿಕೆಯು ಈ ಸಂಗಕ್ಕಿದೆ. ಇದರ ಸ್ಪೂರ‍್ತಿಯಿಂದ ಹಲವಾರು ಕನ್ನಡ ಬಳಗಗಳು ಹುಟ್ಟಿಕೊಂಡವು. ಕನ್ನಡವನ್ನು ಮೇಲೆತ್ತ ಬೇಕೆಂದರೆ ಕನ್ನಡಿಗರನ್ನು ತಲೆ ಎತ್ತುವಂತೆ ಮಾಡಬೇಕು. ಕನ್ನಡಿಗರ ಕೂಗಿಗೆ ಮರುನುಡಿ ಸಿಗಬೇಕೆಂದರೆ ಕನ್ನಡಿಗರು ಒಗ್ಗಟ್ಟಾಗಿರಬೇಕು, ಹಾಗಾಗಿ ಕರುನಾಡು ಒಂದಾಗಬೇಕು ಎಂಬ ಅರಿವನ್ನು ಆಗಿನ ಹಿರಿಯರು ಅರಿತರು. ಕರ‍್ನಾಟಕ ಏಕೀಕರಣದ ಬೀಜವನ್ನು ಬಿತ್ತಿದರು.

ಈ ಚಳುವಳಿಗೆ ಓಟ ಸಿಕ್ಕಿದ್ದು ಆಲೂರ ವೆಂಕಟ ರಾಯರು ಎಂಬ ದಿಟ್ಟ ಹೋರಾಟಗಾರರು ಕಾಲಿಟ್ಟ ಮೇಲೆ. ಕರುನಾಡಿನ ಮೂಲೆ ಮೂಲೆಯನ್ನು ತಿರುಗಿ, ಲೆಕ್ಕವಿಲ್ಲದಶ್ಟು ಸಬೆಗಳನ್ನು ನಡೆಸಿ, ಕನ್ನಡಿಗರಲ್ಲಿ ಏಕೀಕರಣದ ಕಿಚ್ಚನ್ನು ಹೊತ್ತಿಸಿದರು. ಕರ‍್ನಾಟಕದ ಹಳಮೆಯನ್ನು ವಿವರಿಸುವ, ಹಳೆಯ ಸಿರಿತನವನ್ನು ಹೇಳುವ, ಮತ್ತು ಕರ‍್ಣಾಟ ಸಾಮ್ರಾಜ್ಯ ಕೊನೆಯಾದ ಬಳಿಕ ಕನ್ನಡಿಗರಿಗೆ ಒದಗಿ ಬಂದ ಕೆಟ್ಟ ಸ್ತಿತಿಯ ಕುರಿತು ಅರಿವು ಮೂಡಿಸುವ ‘ಕರ‍್ನಾಟಕ ಗತ ವಯ್ಬವ’ ಹೊತ್ತಗೆಯನ್ನು 1912 ರಲ್ಲಿ ಬರೆದರು. ಈ ಹೊತ್ತಗೆಯು ಕನ್ನಡಿಗ ಯುವಕರಿಂದ ಹಿಡಿದು ಹಿರಿಯರವರೆಗೂ ಕರುನಾಡನ್ನು ಒಂದು ಮಾಡಲು ಹೋರಾಡುವಂತೆ ಹುರಿದುಂಬಿಸಿತು. ಹೋರಾಟದ ತಂಡದವರೊಡನೆ ಸೇರಿ ಕನ್ನಡ ಸಾಹಿತ್ಯ ಪರಿಶತ್ತನ್ನು ಹುಟ್ಟುಹಾಕಲು ಕೂಡ ಆಲೂರರು ನೆರವಾದರು. ಆಲೂರರ ಜೊತೆ ಮತ್ತಶ್ಟು ಕಟ್ಟಾಳುಗಳು ಕೂಡ ಕಯ್ ಜೋಡಿಸಿದರು. ಗುದ್ಲೆಪ್ಪ ಹುಲ್ಲಿಕೇರಿ, ಸಿದ್ದಪ್ಪ ಕಾಂಬ್ಳಿ, ಆರ್. ಎಚ್. ದೇಶಪಾಂಡೆ, ರಂಗರಾವ್ ದಿವಾಕರ್, ಕವ್ಜಲಗಿ ಶ್ರೀನಿವಾಸ ರಾವ್, ಶ್ರೀನಿವಾಸ ರಾವ್ ಮಂಗಳವಾಡೆ, ಕೆಂಗಲ್ ಹನುಮಂತಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಸ್. ನಿಜಲಿಂಗಪ್ಪ, ಟಿ. ಮರಿಯಪ್ಪ, ಸುಬ್ರಮಣ್ಯ, ಸಾವುಕಾರ್ ಚೆನ್ನಯ್ಯ, ಎಚ್. ಕೆ. ವೀರಣ್ಣ ಗವ್ಡ, ಎಚ್. ಸಿ. ದಾಸಪ್ಪ, ಎಚ್. ಸಿದ್ದಯ್ಯ, ಅನಕ್ರು ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ನಾಡು-ನುಡಿಯ ಏಳಿಗೆಗಾಗಿ ಕರುನಾಡು ಒಂದಾಗಲೇ ಬೇಕೆಂಬ ಬಯಕೆಯನ್ನು ಹೊತ್ತು ಅದಕ್ಕಾಗಿ ಹೋರಾಡಲು ಟೊಂಕಕಟ್ಟಿ ನಿಂತವರು ಇವರೆಲ್ಲ.

ಕರ‍್ನಾಟಕ ವಿದ್ಯಾವರ‍್ದಕ ಸಂಗದ ಬಳಿಕ ನಾಡಿನ ಉದ್ದಗಲಕ್ಕೂ ಹಲವು ಕನ್ನಡ ಸಂಗಗಳು ಹುಟ್ಟಿಕೊಂಡವು. ಅವುಗಳಲ್ಲಿ ಕನ್ನಡ ಸಾಹಿತ್ಯ ಪರಿಶತ್ತು (ಬೆಂಗಳೂರು), ಕರ‍್ನಾಟಕ ಸಂಗ(ಶಿವಮೊಗ್ಗ), ಕರ‍್ನಾಟಕ ಸಮಿತಿ(ಕಾಸರಗೋಡು)ಗಳು ಮುಕ್ಯವಾದವು. ಹೋರಾಟಕ್ಕೆ ಬೇಕಾದ ಬಳಗಗಳು ಹುಟ್ಟಿದ್ದಾಯ್ತು, ಕನ್ನಡಿಗರ ಎದೆಯಲ್ಲಿ ಏಕೀಕರಣದ ಬೀಜ ಬಿತ್ತಿದ್ದಾಯ್ತು, ಕನ್ನಡಿಗರೊಂದಾಗ ಬೇಕೆಂಬ ಅರಿವನ್ನು ನೆಟ್ಟಾಯ್ತು. ಇನ್ನು ಉಳಿದಿದ್ದು ಬೀದಿಗಿಳಿದು ಮಾಡಬೇಕಿದ್ದ ಹೋರಾಟ. ಕೆಚ್ಚೆದೆಯ ಕನ್ನಡಿಗರು ದಂಡು ದಂಡಾಗಿ ಸಬೆಗಳನ್ನು ಸೇರಿದರು. ಬ್ರಿಟೀಶರು, ನಿಜಾಮರು ಹಾಗೂ ಮದರಾಸು ಆಳ್ವಿಕೆಗಳು ಮಾಡುತ್ತಿದ್ದ ಅನ್ಯಾಯಗಳನ್ನು ವಿರೋದಿಸಿದರು. ನುಡಿಯ ಆದಾರದ ಮೇಲೆ ಕರುನಾಡನ್ನು ಒಂದಾಗಿಸಲೇ ಬೇಕೆಂಬ ಕರೆ ಕೊಟ್ಟರು. ಇದರ ಜೊತೆ, ನಾವೇನು ಕಮ್ಮಿ ಇಲ್ಲ ಎಂದು ಕುವೆಂಪು, ಬೇಂದ್ರೆ, ಗೋಕಾಕ್, ಎಸ್. ಬಿ. ಜೋಶಿ, ಬೆಟೆಗೆರಿ ಕ್ರಿಶ್ಣ ಶರ‍್ಮ, ಗೋವಿಂದ ಪಯ್, ಶಿವರಾಮ ಕಾರಂತ, ಕಯ್ಯಾರ ಕಿನ್ನಣ್ಣ ರಯ್‍ ಅವರಂತಹ ಹಲವು ನಲ್ಬರಹಗಾರರು ತಮ್ಮ ಹರಿತವಾದ ಬರಹಗಳಿಂದ ಏಕೀಕರಣದ ಕಿಚ್ಚಿಗೆ ತುಪ್ಪವನ್ನು ಸುರಿದರು.

ಕರುನಾಡು ಒಂದಾಗಬೇಕೆಂಬ ಹೋರಾಟದ ಕಾವು ಹೆಚ್ಚುತ್ತಿದ್ದಂತೆ ಇದು ರಾಜಕೀಯ ಮಟ್ಟದಲ್ಲೂ ಚರ‍್ಚೆ ಬರತೊಡಗಿತು. 1920ರಂದು ದಾರವಾಡದಲ್ಲಿ ನಡೆದ ಕರ‍್ನಾಟಕ ರಾಜ್ಯ ರಾಜಕೀಯ ಸಬೆಯಲ್ಲಿ ಕರ‍್ನಾಟಕವನ್ನು ಒಂದಾಗಿಸುವ ಬೇಡಿಕೆಯನ್ನು ಯಾವುದೇ ತಕರಾರಿಲ್ಲದೆ ಜಾರಿಮಾಡಲಾಯಿತು. ಇದರಿಂದ ಹುರಿದುಂಬಿದ ಕನ್ನಡಿಗರು ನಾಗಪುರದಲ್ಲಿ ನಡೆದ ಕಾಂಗ್ರೆಸ್ ಸಬೆಯಲ್ಲಿ ಪಾಲ್ಗೊಂಡರು. ಈ ಸಬೆಯಲ್ಲಿ ಕರ‍್ನಾಟಕ ಪ್ರದೇಶ ಕಾಂಗ್ರೆಸ್ ಅನ್ನು ಬೇರೆಯದಾಗಿ ಹುಟ್ಟು ಹಾಕಾಲಾಗುವುದು ಎಂಬ ನಿರ‍್ದಾರವನ್ನು ಕಯ್ಗೊಂಡರು. ಈ ಎಲ್ಲಾ ಬೆಳವಣಿಗಗಳು ಕರ‍್ನಾಟಕವನ್ನು ಒಗ್ಗೂಡಿಸುವ ಕೆಲಸಕ್ಕೆ ರಾಜಕೀಯವಾಗಿ ಮುಂದಿನ ದಾರಿಯನ್ನು ಹಾಕಿ ಕೊಟ್ಟವು. ಹೀಗೆ ಹುಟ್ಟಿದ ಕರ‍್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು 1924ರಲ್ಲಿ ಬೆಳಗಾವಿಯಲ್ಲಿ ಸಮ್ಮೇಳನ ನಡೆಸಿ ಏಕೀಕರಣದ ನಿಲುವನ್ನು ಮತ್ತಶ್ಟು ಗಟ್ಟಿಗೊಳಿಸಿತು. ಕರುನಾಡ ಮೂಲೆ ಮೂಲೆಯಿಂದ ಬಂದು ಸಬೆ ಸೇರಿದ ಮಂದಿಯೆದುರು, ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಸಾಲುಗಳನ್ನು ಬರೆದು ಈ ಸಬೆಯಲ್ಲಿ ಹಾಡಿದ ಹುಯಿಲಗೋಳ ನಾರರಾಯಣ ರಾಯರು ಕನ್ನಡಿಗರ ಎದೆಯೊಳಗಿದ್ದ ಏಕೀಕರಣದ ಬೇರನ್ನು ಮತ್ತಶ್ಟು ಗಟ್ಟಿಗೊಳಿಸಿದರು.

ಹೋರಾಟದ ಬಿಸಿ ನಾಡುಗಳನ್ನು ದಾಟಿ ದೂರದ ದೆಹಲಿಗೂ ಮುಟ್ಟಿತು. 1928ರಲ್ಲಿ ಕಾಂಗ್ರೆಸ್ ಮೇಲುಗರಾಗಿದ್ದ ನೆಹರೂರವರು ಒಂದು ತಂಡವನ್ನು ಮಾಡಿ ಬೇಡಿಕೆಯ ಪರಿಶೀಲನೆಗೆ ಕಳಿಸಿದರು. ಏಕೀಕರಣದ ಹೋರಾಟದ ಬಗೆ ಹಾಗೂ ಅದರ ಹಿಂದಿರುವ ಕನ್ನಡಿಗರ ಏಳಿಗೆಯ ಗುರಿಯನ್ನು ಅರಿತ ಈ ತಂಡವು ಕರುನಾಡನ್ನು ಒಂದಾಗಿಸಬೇಕೆಂಬ ಸಲಹೆಯನ್ನು ನೀಡಿತು. ಆದರೂ ಸುಮಾರು 9 ವರುಶಗಳಾದರೂ ಏಕೀಕರಣಗೊಳಿಸುವ ಯಾವ ಕೆಲಸವು ರಾಜಕೀಯವಾಗಿ ಆಗಲಿಲ್ಲ. ಅದಕ್ಕೆ ಹಲವು ಕಾರಣಗಳಿದ್ದವು. ಮೊದಲೇ ಒಡೆದು ಆಡಳಿತ ನಡೆಸುತ್ತಿದ್ದ ಬ್ರಿಟಿಶರಿಗೆ ಕರುನಾಡನ್ನು ಒಂದಾಗಿಸುವ ಯಾವ ಮನಸ್ಸೂ ಇರಲಿಲ್ಲ, ಅಲ್ಲದೇ ಏಕೀಕರಣಗೊಂಡ ನಾಡಿನ ಆಡಳಿತದ ಬಗ್ಗೆ ಹಲವು ಗೊಂದಲಗಳು ಬ್ರಿಟೀಶರಲ್ಲಿತ್ತು. ಈ ನಡುವೆ, 1937ರ ಚುನಾವಣೆಯಲ್ಲಿ ಏಕೀಕರಣದ ಬೇಡಿಕೆಯನ್ನು ಈಡೇರಿಸುವುದಾಗಿ ಬರವಸೆಯನ್ನಿತ್ತು ಕರ‍್ನಾಟಕದ ಬಾಗಗಳಲ್ಲಿ ಗೆಲ್ಲುವ ಹಂಬಲ ಕಾಂಗ್ರೆಸ್ಸಿಗಿತ್ತು. ಇದೆಲ್ಲದರಿಂದ ಕನ್ನಡಿಗರು ಒಂದಾಗುವ ಕನಸು ಕನಸಾಗೇ ಉಳಿದಿತ್ತು.

ಆದರೆ ಕನ್ನಡಿಗರ ಹೋರಾಟದ ಹಸಿವು ನೀಗಿರಲಿಲ್ಲ, ಎದೆಯಲ್ಲಿದ್ದ ಕಿಚ್ಚು ಆರಿರಲಿಲ್ಲ. ಮುಂದಡಿಯ ಹಿಂದಿಡದೆ, ಎಡೆಬಿಡದೆ ನಡೆದಿತ್ತು ಹೋರಾಟ. ಹೋರಾಟದ ಕಾವು ಮತ್ತೊಮ್ಮೆ ರಾಜಕೀಯು ಮಂದಿಯನ್ನು ಮುಟ್ಟಿತು. ಕನ್ನಡಿಗರು ಹಿಡಿದ ಪಟ್ಟನ್ನು ಬಿಡುವವರಲ್ಲ ಎಂಬುದು ರಾಜಕೀಯ ನಾಯಕರ ಅರಿವಿಗೆ ಬಂದಿತು. ಹಾಗಾಗಿ 1946ರಲ್ಲಿ, ಮಂಬಯಿಯಲ್ಲಿ ನಡೆದ ಏಕೀಕರಣ ಸಬೆಯಲ್ಲಿ ಸರ‍್ದಾರ ವಲ್ಲಬಾಯಿ ಪಟೇಲರು, ಇನ್ನೇನು ಕೆಲವೇ ದಿನಗಳಲ್ಲಿ ಬ್ರಿಟೀಶರಿಂದ ಬಿಡುಗಡೆ ಸಿಗಲಿದೆ, ಆಗ ಕರ‍್ನಾಟಕದ ಏಕೀಕರಣವೇ ಸ್ವತಂತ್ರ ಇಂಡಿಯಾ ಸರಕಾರದ ಮೊದಲ ಕೆಲಸವಾಗಲಿದೆ ಎಂದು ಹೇಳಿಕೆ ಕೊಟ್ಟರು. ಅದರಂತೆ 1947ಕ್ಕೆ ಬ್ರಿಟೀಶರ ತೆಕ್ಕೆಯಿಂದ ಬಿಡುಗಡೆಯಾಯಿತು. ಇನ್ನೇನು ಕರುನಾಡು ಒಂದಾಗಲಿದೆ, ಹೊಸ ನಾಡು ಹೊಸ ಹುರುಪಿನೊಂದಿಗೆ ಮಿನುಗಲಿದೆ, ಹಲವು ವರುಶಗಳಿಂದ ಎಡೆಬಿಡದೇ, ಎದೆಗುಂದದೇ, ಹಗಲಿರುಳೆನ್ನದೇ ದುಡಿದಕ್ಕೂ ಕೊನೆಗೆ ಒಳ್ಳೆಯದಾಗಲಿದೆ ಎಂದು ಕನ್ನಡಿಗರು ಕಾಯುತ್ತಿದ್ದರು.

ಆದರೆ ರಾಜಕೀಯ ಉದ್ದೇಶಗಳೇ ಬೇರೆಯಿದ್ದವು. ಬ್ರಿಟೀಶರಿಂದ ಬಿಡುಗಡೆಯಾದ ಕೂಡಲೇ ಕರುನಾಡನ್ನು ಒಂದಾಗಿಸುತ್ತೇವೆ ಎಂದವರು ಕಯ್ ಕೊಟ್ಟರು. ಅದಕ್ಕೆ ಹಯ್ದರಬಾದ್ ನಿಜಾಮರ ಆಳ್ವಿಕೆಯಡಿ ಕರುನಾಡಿನ ಹಲವು ಬಾಗಗಳು ಇದ್ದದ್ದು ಒಂದು ಕಾರಣವಾಯಿತು. ನಿಜಾಮರ ತೆಕ್ಕೆಯಲ್ಲಿದ್ದ ಕರುನಾಡಿನ ಕೆಲವು ಬಾಗಗಳನ್ನು ಅವರು ಬಿಟ್ಟುಕೊಡಲು ಸಿದ್ದರಿರಲಿಲ್ಲ. ಹಲವು ಸುತ್ತಿನ ಮಾತುಕತೆ ಮತ್ತು ಹೋರಾಟದ ದಸೆಯಿಂದ 1948ರಲ್ಲಿ ನಿಜಾಮರ ಅರಸಾಳ್ವಿಕೆಯಿಂದ ಬಿಡುಗಡೆ ಸಿಕ್ಕಿತು. ಹಯ್ದರಬಾದ್ ನಿಜಾಮರ ಅಡಿಯಲ್ಲಿದ್ದ ಬಾಗಗಳು ಒಕ್ಕೂಟದ ಸರಕಾರದಡಿ ಬರಲು ಸಿದ್ದವಾದವು.

ನಾಡನ್ನು ಒಂದಾಗಿಸುವ ಕೆಲಸಕ್ಕೆ ಇನ್ನ್ಯಾವ ಅಡ್ಡಿ ಆತಂಕಗಳು ಒಕ್ಕೂಟ ಸರಕಾರಕ್ಕೆ ಇರಲಿಲ್ಲ. ಅದಕ್ಕಾಗಿ ರಾಜ್ಯದ ರಚನೆಯ ಕೆಲಸವನ್ನು ಕಯ್ಗೆತ್ತಿಕೊಂಡ ಆಗಿನ ಒಕ್ಕೂಟ ಸರಕಾರವು ಕರುನಾಡ ಏಕೀಕರಣದ ಬೇಡಿಕೆಯನ್ನು ಪರಿಶೀಲಿಸಲು ‘ದಾರ್‍‘ ಕಮಿಟಿಯನ್ನು ಮಾಡಿತು. ಈ ಕಮಿಟಿಯು ನುಡಿಯ ಆದಾರದ ಮೇಲೆ ರಾಜ್ಯಗಳನ್ನಾಗಿ ಮಾಡುವುದನ್ನು ವಿರೋದಿಸಿತು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಯಿತು. ಕನ್ನಡಿಗರೆಲ್ಲ ಒಂದಾಗಬೇಕೆಂದು ಹಲುಬುತ್ತಿದ್ದಾಗ ಈ ಕಮಿಟಿಯ ಮಾತುಗಳು ಹೊಟ್ಟೆಗೆ ಕೊಳ್ಳಿಯನ್ನಿಟ್ಟ ಹಾಗೆ ಆಗಿತ್ತು. ಆದರೂ ಹೋರಾಟ ನಿಲ್ಲಿಸಲಿಲ್ಲ, ಅದು ನಡೆಯುತ್ತಲೇ ಇತ್ತು. ಈ ಹೋರಾಟದ ಬಿಸಿಯನ್ನು ತಣಿಸಲು ಒಕ್ಕೂಟ ಸರಕಾರವು, ನೆಹರು, ವಲ್ಲಬಾಯಿ ಪಟೇಲ್, ಪಟ್ಟಾಬಿ ಸೀತಾರಾಮರನ್ನು ಒಳಗೊಂಡ “ಜೆವಿಪಿ” ಕಮಿಟಿಯನ್ನು ಮಾಡಿ ಮತ್ತೊಮ್ಮೆ ಏಕೀಕರಣದ ಬೇಡಿಕೆಯನ್ನು ಪರಿಶೀಲಿಸಿತು. ಆಗಲೂ ಕರ‍್ನಾಟಕವನ್ನು ಒಂದಾಗಿಸುವ ಮನಸನ್ನು ಈ ಕಮಿಟಿ ತೋರಲಿಲ್ಲ.

ಬ್ರಿಟೀಶರಿಂದ ಬಿಡುಗಡೆ ಸಿಕ್ಕರೂ, ನುಡಿಯ ಆದಾರದ ಮೇಲೆ ನಾಡನ್ನು ಕಟ್ಟಲು ಒಕ್ಕೂಟ ಸರಕಾರ ಮೂಗು ಮುರಿಯುತ್ತಿತ್ತು. ಏಕೀಕರಣದ ಹೋರಾಟದ ಬಿಸಿಯನ್ನು ತಣಿಸುವದಕ್ಕಾಗಿ ಇಲ್ಲವೇ ಹೆಚ್ಚಿದ ಏಕೀಕರಣದ ಒತ್ತಡದಿಂದಾಗಿ, ಆಗಾಗ ಕಮಿಟಿಗಳನ್ನು ಮಾಡಿ ಪರಿಶೀಲನ ಮಾಡಿಸುತ್ತಿತ್ತು. ಆದರೆ ಏಕೀಕರಣ ಮಾಡುವ ಗೋಜಿಗೆ ಹೋಗಲಿಲ್ಲ. ಈ ರಾಜಕೀಯ ದೊಂಬರಾಟ ಕನ್ನಡಿಗರನ್ನು ಕೆರಳಿಸಿತು. ಇದಕ್ಕೆ ತಕ್ಕ ಬುದ್ದಿಯನ್ನು ಕಲಿಸಲು ಕನ್ನಡಿಗರು ಹವಣಿಸುತ್ತಿದ್ದರು. ಅದಕ್ಕಾಗಿ, ಕರ‍್ನಾಟಕ ಏಕೀಕರಣ ಪಕ್ಶ ಎಂಬ ರಾಜಕೀಯ ಪಕ್ಶವನ್ನು ಹುಟ್ಟು ಹಾಕಿದರು. ರಾಜಕೀಯವಾಗಿ ಗಟ್ಟಿಯಾಗಿ ಬೆಳೆದು ಕರುನಾಡನ್ನು ಒಂದಾಗಿಸುವ ಕೆಲಸಕ್ಕೆ ಮುಂದಾದರು. ಇದರ ಪರಿಣಾಮ ಇಲ್ಲಿದೆ ನೋಡಿ, 1953ರಲ್ಲಿ ನಡೆದ ಕಾಂಗ್ರೆಸ್ ಸಬೆಯಲ್ಲಿ, ಕರುನಾಡು ಒಂದಾಗುವುದಕ್ಕೆ ಕಾಂಗ್ರೆಸ್ ಮನಸ್ಸು ತೋರಲಿಲ್ಲ. ಇದರಿಂದ ಸಿಟ್ಟುಗೊಂಡ ಕಾಂಗ್ರೆಸ್ಸಿನ ಹಿರಿಯರಾದ ಎ. ಜೆ. ದೊಡ್ಡಮೇಟಿ ರಾಜಿನಾಮೆಯನ್ನು ಕೊಟ್ಟರು. ಇದರಿಂದ ತೆರವುಗೊಂಡ ಹುಬ್ಬಳ್ಳಿಯ ಸ್ತಾನಕ್ಕಾಗಿ 1953ರಲ್ಲಿ ಬಯ್ ಎಲೆಕ್ಶನ್ ನಡೆಯಿತು. ಈ ಎಲೆಕ್ಶನ್‍ನಲ್ಲಿ ಕಾಂಗ್ರೆಸ್ಸಿಗೆ ಹೀನಾಯ ಸೋಲಾಗಿ ಏಕೀಕರಣ ಪಕ್ಶದವರು ಹೆಚ್ಚು ಓಟನ್ನು ಪಡೆದು ಗೆದ್ದು ಬಂದರು. ರಾಜಕೀಯವಾಗಿಯೂ ಹೋರಾಟಗಾರರು ನೆಲೆಗೊಳ್ಳುತ್ತಾ ಬಂದರು.

ಕನ್ನಡಿಗರು ಎಲೆಕ್ಶನ್‍ನಲ್ಲಿ ಕೊಟ್ಟ ಪೆಟ್ಟಿನ ಬಿಸಿ ಮುಟ್ಟಿ ನೋಡಿಕೊಳ್ಳುವ ಹಾಗಿತ್ತು ಒಕ್ಕೂಟ ಸರಕಾರಕ್ಕೆ. ಕರುನಾಡು ಒಂದಾಗುವವರೆಗೂ ಏಕೀಕರಣದ ಹೋರಾಟ ನಿಲ್ಲುವುದಿಲ್ಲ ಎಂಬ ಸೂಚನೆಯನ್ನು ಕನ್ನಡಿಗರು ಪದೇ ಪದೇ ಕೊಡುತ್ತಿದ್ದರು. ಈ ಹೋರಾಟಕ್ಕೆ ಆಗ ಅಯ್ವತ್ತು ವರುಶಗಳೇ ದಾಟಿತು! ಇನ್ನು ಸುಮ್ಮನೆ ಕೂತರೆ ಆಗುವುದಿಲ್ಲ, ಹೋರಾಟವನ್ನು ಮತ್ತಶ್ಟು ಗಟ್ಟಿಗೊಳಿಸ ಬೇಕೆಂದು ಆಗಿನ ಹಿರಿಯರು ಅರಿತರು. ಅಲ್ಲಲ್ಲಿ ಉಪವಾಸದ ಹೋರಾಟಗಳನ್ನು ಕಯ್ಗೆತ್ತಿಕೊಂಡರು. ಏಕೀಕರಣದ ಬೇಡಿಕೆ ಈಡೇರಿಸುವಂತೆ, ಅನ್ನ ನೀರನ್ನು ಬಿಟ್ಟು ಎಶ್ಟೋ ದಿನಗಳನ್ನು ಹೋರಾಟಗಾರರು ಕಳೆದರು. 1953 ಕಾಂಗ್ರೆಸ್ ಸಬೆಯಲ್ಲಿ ಏಕೀಕರಣದ ಪರವಾಗಿ ಕಾಂಗ್ರೆಸ್ ತನ್ನ ನಿಲುವನ್ನು ಪ್ರಕಟಿಸಿದಾಗ ರಾಜಿನಾಮೆ ನೀಡಿದ ಎ. ಜೆ. ದೊಡ್ಡಮೇಟಿಯವರು ದಾರವಾಡದಲ್ಲಿ ಉಪವಾಸವನ್ನು ಆರಂಬಿಸಿದರು. ಇದರ ಬಳಿಕ ನಾಡಿನ ಹಲವು ಕಡೆ ಉಪವಾಸ ಸತ್ಯಾಗ್ರಹಗಳು ನಡೆಯತೊಡಗಿದವು. ಅದರಲ್ಲಿ ಹುಬ್ಬಳ್ಳಿಯಲ್ಲಿ ನಡೆಸಿದ ಶಂಕರಗವ್ಡ ಪಾಟೀಲರ ಉಪವಾಸ ಏಕೀಕರಣದ ಹೋರಾಟದ ಹಳಮೆಯಲ್ಲಿ ದಪ್ಪ ಬರಿಗೆಗಳಲ್ಲಿ ಬರೆಯಬೇಕಾದ್ದು.

1953ರಲ್ಲಿ, ಶಂಕರ ಗವ್ಡರು ಏಕೀಕರಣವನ್ನು ಒತ್ತಾಯಿಸಿ ಉಪವಾಸವನ್ನು ಆರಂಬಿಸಿದರು. ಸರಕಾರವು ಇವರ ಉಪವಾಸವನ್ನು ಮೊದ ಮೊದಲು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಎಡೆಬಿಡದೆ 23 ದಿನಗಳಿಗೂ ಹೆಚ್ಚು ಇವರ ಉಪವಾಸ ನಡೆಯಿತು! ಈ ಉಪವಾಸದ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಟನೆ ಕನ್ನಡಿಗರ ದಿಟ್ಟತನ ಹಾಗೂ ಎದೆಗಾರಿಕೆಯನ್ನು ಹೇಳುತ್ತದೆ. ಶಂಕರಗವ್ಡರ ಉಪವಾಸ ಸುಮಾರು 23 ದಿನಗಳನ್ನು ದಾಟಿತ್ತು. ಇದೇ ಹೊತ್ತಿನಲ್ಲಿ, ಅಂದರೆ 1953 ಏಪ್ರಿಲ್ 19ರಂದು ಕಾಂಗ್ರೆಸ್ ಕಾರ‍್ಯಕಾರಿಣಿ ಸಬೆಯೊಂದು ಹುಬ್ಬಳ್ಳಿಯಲ್ಲಿ ನಡೆದಿತ್ತು. ಇದನ್ನು ತಿಳಿದ ಏಕೀಕರಣದ ಹೋರಾಟಗಾರರು, ತಮ್ಮ ಹೋರಾಟದ ಬಿಸಿಯನ್ನು ಸರಕಾರಕ್ಕೆ ಮುಟ್ಟಿಸಲು ಹಾಗೂ ಹಲವು ದಿನಗಳಿಂದ ಉಪವಾಸವಿದ್ದರೂ ಲೆಕ್ಕಕ್ಕೆ ತೆಗೆದು ಕೊಳ್ಳದ ಸರಕಾರಕ್ಕೆ ತಕ್ಕ ಬುದ್ದಿ ಕಲಿಸಲು ಮುಂದಾದರು. ದೊಡ್ಡ ದೊಡ್ಡ ದಂಡನ್ನು ಮಾಡಿಕೊಂಡು ಕಾಂಗ್ರೆಸ್ ಸಬೆ ನಡೆಯುತ್ತಿದ್ದ ಜಾಗಕ್ಕೆ ಮುತ್ತಿಗೆ ಹಾಕಿದರು. ಕರುನಾಡನ್ನು ಒಂದಾಗಿಸುವವರೆಗು ಹೋರಾಟ ನಿಲ್ಲದು ಎಂಬ ಸಂದೇಶವನ್ನು ಸರಕಾರಕ್ಕೆ ನೀಡಿದರು.

ಹೋರಾಟವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ರಾಜಕಾರಣಿಗಳಿಗೆ, ಅಂದು ಮುತ್ತಿಗೆ ಹಾಕಿದ 25000ಕ್ಕೂ ಹೆಚ್ಚಿನ ಕನ್ನಡಿಗರನ್ನು ನೋಡಿ ಬೆವರಿಳಿದು ಹೋಯಿತು. ಸಬೆಯಲ್ಲಿದ್ದ ಕಾಂಗ್ರೆಸ್ ಮೇಲುಗರಾದ ಎಸ್. ನಿಜಲಿಂಗಪ್ಪ ಹಾಗೂ ಇನ್ನಿತರ ಮೇಲುಗರಿಗೆ ’ಬಳೆಯನ್ನು ತೊಡಿಸಿ ಚಪ್ಪಲಿ ಸೇವೆಯನ್ನು’ ಮಾಡಿದರು. ಕಾಂಗ್ರೆಸ್ಸಿಗರಾದ ಗುದ್ಲೇಪ್ಪ ಹಳ್ಳಿಕೇರಿಯವರ ಜೀಪಿಗೆ ಬೆಂಕಿಯಿಟ್ಟು ತಮ್ಮ ಸಿಟ್ಟನ್ನು ತೋರ‍್ಪಡಿಸಿದರು. ಕರುನಾಡನ್ನು ಒಂದಾಗಿಸದಿದ್ದರೆ ರಾಜಿನಾಮೆ ಕೊಡಿ ಎಂದು ಹೋರಾಟಗಾರರು ಕರೆಕೊಟ್ಟರು.

ಪರಿಸ್ತಿತಿಯು ಕಯ್ ಮೀರಿ ಹೋಗುತ್ತಿದೆ ಎಂದೆನಿಸಿ ಪೋಲಿಸಿನವರು ಲಾಟಿ ಚಾರ‍್ಜ್ ಮಾಡುವುದಾಗಿ ಗದರಿಸಿದರು. ಎದೆಗುಂದದ ಹೋರಾಟಗಾರರು ತಮ್ಮ ಹೋರಾಟವನ್ನು ಮುಂದುವರಿಸಿದರು. ನೆತ್ತರ ಕೋಡಿ ಹರಿದರೂ ಪರವಾಗಿಲ್ಲ, ಕರುನಾಡು ಒಗ್ಗೂಡುವವರೆಗೂ ಹೋರಾಡುವೆವು ಎಂದು ಪೋಲೀಸರ ಎದುರು ಕಾಳಗಕ್ಕೆ ನಿಂತರು. ಕೊನೆಗೆ ಪೋಲೀಸ್ ಲಾಟಿ ಚಾರ‍್ಜ್ ಆಗಿಯೇ ಬಿಟ್ಟಿತು. ಪೋಲಿಸರು, ಮಂದಿಯ ಮೇಲೆಲ್ಲಾ ಮನಬಂದಂತೆ ಹೊಡೆಯಲಾರಂಬಿಸಿದರು. ಬಾಸುಂಡೆ ಬರುವ ಹಾಗೆ ಲಾಟಿ ಏಟುಗಳು ಬಿದ್ದವು. ಹೋರಾಟಕ್ಕೆ ಮೀಸಲಿಟ್ಟ ಕನ್ನಡಿಗರ ಮಯ್‍ನಿಂದ ನೆತ್ತರು ಹರಿಯಲಾರಂಬಿಸಿತು. ಆದರೂ ಹೋರಾಟ ನಿಲ್ಲಲಿಲ್ಲ, ಎಲ್ಲದಕ್ಕೂ ಎದೆಯೊಡ್ಡಿ ನಿಂತಿದ್ದರು ಕೆಚ್ಚೆದೆಯ ಕನ್ನಡಿಗರು.

ಹೊಡೆದು ಹೊಡೆದು ಕಯ್ ನೋಯಿಸಿಕೊಂಡ ಪೋಲೀಸರು ಹುಬ್ಬಳ್ಳಿಯಲ್ಲಿ 144 ಸೆಕ್ಶನ್ ಜಾರಿ ಮಾಡಿ, ಕಂಡಲ್ಲಿ ಗುಂಡು ಎಂಬ ಆದೇಶ ಹೊರಡಿಸಿ ಗುಂಪನ್ನು ಚದುರಿಸಿದರು. ಹಲವು ಹಿರಿಯ ಹೋರಾಟಗಾರರನ್ನು ಸೆರೆಹಿಡಿದರು. ಅಂತೂ ಇಂತೂ ಆ ಗಲಾಟೆಯನ್ನು ಕಡಿಮೆ ಮಾಡುವಲ್ಲಿ ಪೋಲೀಸರಿಗೆ ಸಾಕಾಗಿ ಹೋಗಿತ್ತು. ಇತ್ತ ರಾಜಕೀಯ ನಾಯಕರುಗಳಿಗೆ ನಡುಕ ಹುಟ್ಟಿತ್ತು. ಹಳಮೆಯ ಯಾವ ಹೋರಾಟದಲ್ಲೂ ಹುದ್ದೆಯಲ್ಲಿರುವ ರಾಜಕಾರಣಿಗೆ ಬಳೆಯನ್ನು ತೊಡಿಸಿ ಚಪ್ಪಲಿ ಸೇವೆಯನ್ನು ಮಾಡಿದ ಎತ್ತುಗೆಗಳು ಇರಲಾರವು. ಆ ಮಟ್ಟದ ಹೋರಾಟದ ಕಾವು ಕನ್ನಡಿಗರಲ್ಲಿ ಮನೆಮಾಡಿತ್ತು. ಅಲ್ಲದೇ ಅಶ್ಟೊಂದು ಎದೆಗಾರಿಕೆ ಕೂಡ ಇತ್ತು.

ಇನ್ನು, ಸೆರೆಹಿಡಿದ ಹೋರಾಟಗಾರರನ್ನು ಕೋರ‍್ಟಿನಲ್ಲಿ ವಾದ ಮಾಡಿ ಬಿಡಿಸಿದ್ದು ಒಂದು ಸ್ವಾರಸ್ಯದ ಸಂಗತಿ. ಹೋರಾಟಗಾರರ ಪರವಾಗಿ, ಯಾವ ಹಣವನ್ನೂ ಪಡೆಯದೆ ವಾದ ಮಾಡಿದ ಎಸ್. ಆರ್. ಬೊಮ್ಮಾಯಿ ತಮ್ಮ ಜಾಣ್ಮೆಯಿಂದ ಅವರನ್ನೆಲ್ಲಾ ಬಿಡಿಸಿದರು. ಎಸ್. ನಿಜಲಿಂಗಪ್ಪನವರನ್ನು ಕೋರ‍್ಟಿಗೆ ಕರೆಸಿ, ಗಲಾಟೆಯಲ್ಲಿ ಪೋಲಿಸರಿಗೆ ಸಿಕ್ಕ ಚಪ್ಪಲಿಯ ದೊಡ್ಡರಾಶಿಯನ್ನು ತೋರಿಸಿ, ತಮಗೆ ಏಟು ಬಿದ್ದ ಚಪ್ಪಲಿಯನ್ನು ಗುರುತಿಸಲು ಹೇಳಿದರು. ಅಶ್ಟು ದೊಡ್ಡ ಚಪ್ಪಲಿಯ ರಾಶಿಯಲ್ಲಿ ನಿಜಲಿಂಗಪ್ಪನವರು ಏಟು ಬಿದ್ದ ಚಪ್ಪಲಿಯನ್ನು ಗುರುತಿಸದೇ ಹೋದರು. ಹಾಗೆಯೇ, ಗುದ್ಲೇಪ್ಪ ಹಳ್ಳಿಕೇರಿಯವರಿಗೆ ಜೀಪಿಗೆ ಬೆಂಕಿಯಿಟ್ಟವರನ್ನು ಗುರುತಿಸಲು ಹೇಳಿದರು. ಅಶ್ಟು ದೊಡ್ಡ ಗುಂಪಿನಲ್ಲಿ ಅವರು ಯಾರನ್ನು ಗುರುತಿಸಲಾಗಲಿಲ್ಲ. ಹಾಗಗಿ ಕೇಸು ಬಿದ್ದು ಹೋಯಿತು. ಹೋರಾಟಗಾರರಿಗೆ ಬಿಡುಗಡೆಯಾಯಿತು.

ಹುಬ್ಬಳ್ಳಿಯ ಗಲಾಟೆ ಆದ ಮೇಲೆ ಒಕ್ಕೂಟ ಸರಕಾರಕ್ಕೆ ಹೋರಾಟದ ಬಿಸಿ ಸುಡಲಾರಂಬಿಸಿತು. ಎಡಬಿಡದೆ ನಡೆಯುತ್ತಿದ್ದ ಸಬೆಗಳು, ಉಪವಾಸ, ಗಲಾಟೆ ಹಾಗೂ ರಾಜಕೀಯ ಒತ್ತಡವನ್ನು ನೋಡಿದ ಸರಕಾರವು ಅಲ್ಲಾಡತೊಡಗಿತು. ಹೋರಾಟವು ಮತ್ತೊಂದು ದಾರಿಯನ್ನು ಹಿಡಿಯುವ ಮೊದಲು ಇದನ್ನು ಬಗೆಹರಿಸುವತ್ತ ಗಮನಹರಿಸಿತು. ರಾಜಕೀಯವಾಗಿಯು ಕಯ್ ಸುಟ್ಟುಕೊಂಡ ಮೇಲೆ ಒಕ್ಕೂಟ ಸರಕಾರಕ್ಕೆ ಬುದ್ದಿ ಬಂದಿತು. ರಾಜ್ಯಗಳ ಮರುವಿಗಂಡನೆಯನ್ನು ಪರಿಶೀಲಿಸಲು ಮತ್ತೊಮ್ಮೆ ‘ಪಜಲ್ ಆಲಿ‘ ಕಮಿಟಿಯನ್ನು ಮಾಡಿತು. ಈ ಕಮಿಟಿಯು ಯಾವ ತಕರಾರನ್ನೂ ಮಾಡದೆ ನುಡಿಯ ಆದಾರದ ಮೇಲೆ ರಾಜ್ಯಗಳನ್ನು ಮಾಡಲು ಸಲಹೆ ನೀಡಿತು.

ಕರುನಾಡು ಕೊನೆಗೆ ಒಂದಾಯಿತು. 1956 ನವೆಂಬರ್ 1 ರಂದು ಹೊಸ ನಾಡು ಮೂಡಿತು. ಹೀಗೆ, ಕರುನಾಡಿನ ಹುಟ್ಟಿನ ಹಿಂದೆ ದಿಟ್ಟ ಹೋರಾಟದ ಹಳಮೆಯಿದೆ. ನಮಗಿದು ಬಿಟ್ಟಿ ಬಂದ ನಾಡಲ್ಲ. ಇದಕ್ಕಾಗಿ ಅನ್ನ, ನೀರು, ನಿದ್ದೆಯನ್ನು ಬಿಟ್ಟು ಹೋರಾಡಿದ ಹಿರಿಯರು ಹಲವರು. ಅವರೆಲ್ಲರ ತ್ಯಾಗದ ಉಡುಗೊರೆಯಾಗಿ ನಮಗೆ ಈ ನಾಡು ದಕ್ಕಿದೆ. ಹೋರಾಟವೆಂದರೆ ಹತ್ತು ಇಪ್ಪತ್ತು ವರುಶಗಳ ಹೋರಾಟವಲ್ಲ ಎಡಬಿಡದೆ ಎಪ್ಪತ್ತಯ್ದು ವರುಶಗಳಿಗೂ ಹೆಚ್ಚು ನಡೆದ ಹೋರಾಟ. ಇದರಲ್ಲಿ ತಮ್ಮ ಬಾಳನ್ನೇ ಮುಡಿಪಾಗಿಟ್ಟ ಹಿರಿಯರು ಹಲವರು. ಅನ್ನ, ನೀರನ್ನು ಬಿಟ್ಟು ಹಸಿದ ಹೊಟ್ಟೆಯಲ್ಲೆ ಹೋರಾಡಿದವರು ಹಲವರು. ಪೋಲೀಸರ ಲಾಟಿ ಏಟಿಗೆ ನೆತ್ತರು ಹರಿಸಿದ ಮಯ್‍ಗಳು ಹಲವು. ಇವರೆಲ್ಲರೂ ಸೇರಿ ಕಟ್ಟಿದ ನಾಡು ನಮ್ಮದು.

(ಚಿತ್ರ ಸೆಲೆ: ಕನ್ನಡಕವಿ)

ನಿಮಗೆ ಹಿಡಿಸಬಹುದಾದ ಬರಹಗಳು

4 Responses

  1. ತುಂಬಾ ಚೆನ್ನಾಗಿದೆ ಬರಹ
    ನನ್ನಿ

  2. cennaagide baraha
    nanni. eekiikaraNada badalu naaDonduguuDike enabahudu!

  3. bkrs setty says:

    ಬಹಳ ಅತ್ಯಮೂಲ್ಯ ವಿಷಯಗಳಿಗಾಗಿ ವಂದನೆಗಳು.

  4. Sachin Kumar R says:

    Kannadada bagge thumba thilisiddakke dhanyavadagalu

ಅನಿಸಿಕೆ ಬರೆಯಿರಿ:

%d bloggers like this: