ಮಿಂಬಲೆಯನ್ನು ಬಳಸಲು ಇಂಗ್ಲೀಶ್ ಒಂದೇ ಮದ್ದಲ್ಲ!

– ರತೀಶ ರತ್ನಾಕರ.

languages-540x238-q90

ನನಗೆ ಮೊತ್ತ ಮೊದಲ ಬಾರಿಗೆ ಮಿಂಬಲೆಯನ್ನು ಬಳಸುವ ಅವಕಾಶ ಸಿಕ್ಕಿದ್ದು ನನ್ನ ಎಸ್.ಎಸ್.ಎಲ್.ಸಿ. ಪಲಿತಾಂಶ ಬಂದಾಗ. ಪ್ರತಿಯೊಂದು ಮಾಹಿತಿಯು ಕೇವಲ ಇಂಗ್ಲೀಶಿನಲ್ಲಿ ಮಾತ್ರ ಇದ್ದುದರಿಂದ ಮೊದಲ ಬಾರಿ ಬಳಸುವಾಗ ಏನೋ ಒಂದು ಹೆದರಿಕೆ ಹಾಗೂ ಮುಜುಗರಗಳಿದ್ದವು. ಮಿಂಬಲೆಯೊಳಗೆ ಓಡಾಡಬೇಕೆಂದರೆ ಇಂಗ್ಲೀಶ್ ಗೊತ್ತಿರಲೇ ಬೇಕೆಂಬ ನಂಬಿಕೆ ಮನದಲ್ಲಿ ಮನೆ ಮಾಡಿತ್ತು. ಅದಕ್ಕೆ ತಕ್ಕ ಹಾಗೆ ನಾನು ನೋಡುತ್ತಿದ್ದ ಮಿಂದಾಣವು ಕೇವಲ ಇಂಗ್ಲೀಶಿನಲ್ಲಿತ್ತು.

ಹೀಗೆ, ನಮ್ಮಲ್ಲಿ ಹಲವಾರು ಮಂದಿಯಲ್ಲಿ ಇಂಗ್ಲೀಶ್ ಗೊತ್ತಿದ್ದರೆ ಮಾತ್ರ ಮಿಂಬಲೆಯನ್ನು ಬಳಸಬಹುದು ಎಂಬ ಅನಿಸಿಕೆ ಮನೆಮಾಡಿದೆ. ಹಾಗದರೆ, ಈಗಿನ ಕಾಲದಲ್ಲಿ ಮಿಂಬಲೆ ಬಳಕೆಗೆ ಇಂಗ್ಲೀಶ್ ಅನಿವಾರ‍್ಯವೇ ಎಂದು ಹುಡುಕುತ್ತ ಹೋದರೆ ಕೆಲವು ಬೆರಗಿನ ಸುದ್ದಿಗಳು ಕಣ್ಣೆದುರು ಬರುತ್ತವೆ.

ಒಟ್ಟು ಮಿಂಬಲೆ ಬಳಕೆದಾರರನ್ನು ಲೆಕ್ಕ ಹಾಕಿದಾಗ ಇಂಗ್ಲೀಶಿನಲ್ಲಿ ಇದನ್ನು ಬಳಸುತ್ತಿರುವವರ ಎಣಿಕೆ ಹೆಚ್ಚೇ ಇದೆ. ಆದರೆ ಇತ್ತೀಚಿನ ವರ‍್ಶಗಳಲ್ಲಿ ಇತೆರೆ ನುಡಿಗಳಲ್ಲಿ ಮಿಂಬಲೆಯನ್ನು ಬಳಸಲು ಬರುತ್ತಿರುವವರ ಎಣಿಕೆ, ಆಯಾ ವರ‍್ಶದಲ್ಲಿ ಇಂಗ್ಲೀಶಿನಲ್ಲಿ ಮಿಂಬಲೆ ಬಳಸಲು ಬರುವವರ ಎಣಿಕೆಗಿಂತ ಹೆಚ್ಚಿದೆ.

ಈ ಕೆಳಗಿನ ಚಿತ್ರವನ್ನು ನೋಡಿ:

chart

2010 ಮತ್ತು 2011ನೇ ವರ‍್ಶಗಳಲ್ಲಿ ಇಂಗ್ಲೀಶಿನಲ್ಲಿ ಮಿಂಬಲೆಯನ್ನು ಬಳಸಲು ಹೊಸದಾಗಿ ಸೇರಿದವರು ಸುಮಾರು 300%ರಶ್ಟು ಏರಿಕೆ ಕಂಡಿದೆ. ಆದರೆ ಅರೇಬಿಕ್ ಮತ್ತು ಚೀನಿ ನುಡಿಗಳಲ್ಲಿ ಮಿಂಬಲೆಯನ್ನು ಬಳಸಲು ಹೊಸದಾಗಿ ಸೇರಿದವರು 1000% ಗಿಂತಲೂ ಹೆಚ್ಚು ಏರಿಕೆ ಕಂಡಿದೆ! ಇದೇ ರೀತಿ, ಸ್ಪ್ಯಾನೀಶ್, ಪೋರ್‍ಚುಗೀಸ್, ರಶ್ಯನ್ ನುಡಿಗಳಲ್ಲಿಯೂ ಕೂಡ ಇಂಗ್ಲೀಶಿಗಿಂತ ಬಳಕೆಯಲ್ಲಿ ಹೆಚ್ಚು ಏರಿಕೆ ಇರುವುದನ್ನು ಕಾಣಬಹುದು.

ಇನ್ನೊಂದು ಇದೇ ಬಗೆಯ ಮಾಹಿತಿ ಈ ಕೊಂಡಿಯಲ್ಲಿ ಇದೆ. ಇಲ್ಲಿ 2010ರಿಂದ 2012ರಲ್ಲಿ ಪೇಸ್‍ಬುಕ್ ಬಳಕೆಗೆ ಸೇರಿಕೊಂಡ ನುಡಿಗಳ ವಿವರ ನೀಡಲಾಗಿದೆ. ಮತ್ತೊಮ್ಮೆ , ಇಂಗ್ಲೀಶಿಗಿಂತ ಅರೇಬಿಕ್, ಜರ‍್ಮನ್, ಸ್ಪ್ಯಾನಿಶ್, ಪೋರ‍್ಚುಗೀಸ್, ಚೀನಿ, ಪ್ರೆಂಚ್ ಮತ್ತು ಇಂಡೋನೇಶಿಯಾದ ನುಡಿಗಳಲ್ಲಿ ಪೇಸ್‍ಬುಕ್ ಬಳಸಲು ಹೊಸದಾಗಿ ಸೇರಿಕೊಳ್ಳುತ್ತಿರುವವರ ಎಣಿಕೆ ಹೆಚ್ಚಿದೆ.

ಇಂಗ್ಲೀಶ್, ಸ್ಪ್ಯಾನೀಶ್, ಪೋರ‍್ಚುಗೀಸ್ ಹಾಗೂ ರಶ್ಯನ್ ನುಡಿಗಳ ಬಳಕೆಯ ಬೆಳವಣಿಗೆಯಲ್ಲಿ ಬೆರಗಾಗುವಂತಹ ಸುದ್ದಿ ಏನಿಲ್ಲ. ಏಕೆಂದರೆ, ಹಲವಾರು ವರುಶಗಳ ಹಿಂದೆ ಈ ನುಡಿಗಳ ಮೂಲನಾಡುಗಳು ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ವಸಾಹತುಗಳನ್ನು ಮಾಡಿ, ತಮ್ಮ ನುಡಿಯನ್ನು ಆ ಜಾಗದ ಮಂದಿಗೆ ಹೇರಿದ್ದಾರೆ ಇಲ್ಲವೇ ಪರಿಚಯಿಸಿದ್ದಾರೆ. ಎತ್ತುಗೆಗೆ, ಇಂಗ್ಲೆಂಡ್‍ನವರು ಇಂಡಿಯಾದ ಹಲವು ಬಾಗಗಳನ್ನು ಹಲವಾರು ವರುಶಗಳ ತನಕ ವಸಾಹತನ್ನಾಗಿ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿ ಈಗ ಇಂಗ್ಲೀಶಿನ ಬಳಕೆ ಇಂಡಿಯಾದಲ್ಲಿ ನಡೆಯುತ್ತಿದೆ.

ಜಪಾನಿ, ಜರ‍್ಮನ್, ಇಂಡೋನೇಶಿಯಾ ಹಾಗು ಕೊರಿಯನ್ ನುಡಿಗಳ ಬೆಳವಣಿಗೆ ಇಲ್ಲಿ ಗಮನ ಸೆಳೆಯುತ್ತದೆ. ತಾವು ಬೆಳೆದು ಬಂದ ನುಡಿಯಲ್ಲಿಯೇ ಮಿಂಬಲೆ ಬಳಸಲು ಸಿಗುತ್ತಿರುವುದರಿಂದ ಆ ನುಡಿಯನ್ನೇ ಬಳಸುತ್ತಿದ್ದಾರೆ. ಅವರದೇ ನುಡಿಯಲ್ಲಿನ ಮಿಂಬಲೆಯ ಬಳಕೆ ಅವರಿಗೆ ಅನುಕೂಲವಾಗಿದೆ ಹಾಗೂ ಮಿಂಬಲೆಯ ಸಾದ್ಯತೆಗಳ ಎಲ್ಲಾ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಾಹಿತಿ, ಮನರಂಜನೆ, ಮಿನ್ನೇರ ಸೇವೆಗಳು (online services) ಹೀಗೆ ಮಿಂಬಲೆಯು ಹಲವಾರು ಸಾದ್ಯತೆಗಳನ್ನು ಹೊತ್ತುಕೊಂಡಿದೆ. ಇವುಗಳ ಬಳಕೆ ಮಂದಿಯ ಬದುಕಿನ ಮಟ್ಟವನ್ನು ಮೇಲ್‍ಮಟ್ಟಕ್ಕೆ ಕೊಂಡುಹೋಗಿದೆ. ಇಂತಹ ಸಾದ್ಯತೆಗಳಿಗೆ ಬೇರೆ ಬೇರೆ ನುಡಿಯ ಮಂದಿ ತೆರೆದುಕೊಳ್ಳುತ್ತಿದ್ದಾರೆ. ಇಂಗ್ಲೀಶ್ ಗೊತ್ತಿದ್ದರೆ ಮಾತ್ರ ಮಿಂಬಲೆ ಬಳಸಲು ಆಗುತ್ತದೆ ಎಂಬ ಮಾತು ಈಗ ಸುಳ್ಳಾಗಿದೆ. ಮಂದಿಯ ನುಡಿಯಲ್ಲಿಯೇ ಮಿಂಬಲೆ ಸಿಗುತ್ತಿರುವುದು ಕೂಡ ಮಿಂಬಲೆಯ ಒಂದು ಸಾದ್ಯತೆ. ಇನ್ನು, ಹೆಚ್ಚು ಮಿಂಬಲೆ ಬಳಕೆದಾರರ ಪಟ್ಟಿಯಲ್ಲಿ ಕನ್ನಡವು ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಕರ‍್ನಾಟಕ ಸರಕಾರದ ಪಾತ್ರ ದೊಡ್ಡದಿದೆ. ಇಂದಿಗೂ ಕರ‍್ನಾಟಕ ಸರಕಾರದ ಹಲವು ಮಿಂಬಲೆ ಪುಟಗಳು ಕನ್ನಡದಲ್ಲಿಲ್ಲ. ಕನ್ನಡದಲ್ಲೇ ಮಿಂಬಲೆ ಪುಟಗಳನ್ನು ನೀಡುವುದರ ಮೂಲಕ ಕನ್ನಡ ಬಳಕೆಯನ್ನು ಹೆಚ್ಚಿಸಬೇಕಿದೆ. ಈ ಮೂಲಕ ಮಂದಿಯ ಬದುಕಿನ ಮಟ್ಟವನ್ನು ಮೇಲೇರಿಸಬಹುದಾಗಿದೆ.

(ಮಾಹಿತಿ ಸೆಲೆ: internetworldstats.com)
(ಚಿತ್ರ ಸೆಲೆ: kaplaninternational.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: