ಬೆಳಗಾವಿಗೆ ಪ್ರವಾಸ

ಸಂದೀಪ್ ಕಂಬಿ.

bavuta

ಕಳೆದ ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ ಮೂಲಕ ಹೋಗಿದ್ದೆ. ಕರ್‍ನಾಟಕದ ಹಲವೆಡೆ ನಾನು ಓಡಾದಿದ್ದರೂ ಬೆಳಗಾವಿಗೆ ಹೋಗಿದ್ದು ಅದೇ ಮೊದಲು. ಅಲ್ಲಿಗೆ ತಲುಪುವ ಹೊತ್ತಿಗೆ ಕತ್ತಲಾಗಿದ್ದರಿಂದ ಅಲ್ಲಿ ಏನೊಂದನ್ನೂ ನೋಡಲಾಗಲಿಲ್ಲ. ಅದೇ ಊರಿನವನಾದ ನಮ್ಮ ಗೆಳೆಯ ಲಕ್ಯನನ್ನು (ಲಕ್ಶ್ಮಣ) ಬೇಟಿಯಾಗಿ, ಅವನ ಜೊತೆ ರುಚಿ ರುಚಿಯಾದ ಮಿಸಳ್ ತಿಂದು ಕೊಲ್ಲಾಪುರಕ್ಕೆ ಹೊರಟಿದ್ದೆವು.

ಮತ್ತೆ, ಕಳೆದ ತಿಂಗಳಲ್ಲಿ ಬೆಳಗಾವಿಗೆ ಹೋಗುವ ಅವಕಾಶ ಒದಗಿತು. ಲಕ್ಯ ಅಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದರಿಂದ ನಮ್ಮನ್ನು ಮನೆ ಒಕ್ಕಲಿನ ಒಸಗೆಗೆ ಕರೆದಿದ್ದನು. ಇರುಳು 9:30ರ ಬಸ್ಸು ಹಿಡಿದು ನಾನು ಮತ್ತು ಜಗ್ಗು ಬೆಳಗಾವಿಗೆ ಹೊರಟೆವು. ಬೆಳಿಗ್ಗೆ ಸುಮಾರು 7ಗಂಟೆಯ ಹೊತ್ತಿಗೆ ನಮ್ಮ ಬಸ್ಸು ಬೆಳಗಾವಿ ಪಟ್ಟಣವನ್ನು ಹೊಕ್ಕಿತು.

ಪಟ್ಟಣ ಹೊಕ್ಕುತ್ತಿದ್ದಂತೆಯೇ ಎತ್ತರೆತ್ತರಕ್ಕೆ ಹಾರುತ್ತಿದ್ದ ಹಳದಿ ಕೆಂಪು ಬಾವುಟಗಳು ನಮ್ಮನ್ನು ಬರಮಾಡಿಕೊಂಡವು. ಅಲ್ಲೇ ಇಳಿದುಕೊಂಡು ಕೊಂಚ ಹೊತ್ತು ಕಾದ ಬಳಿಕ ಲಕ್ಯ ಮನೆಗೆ ಕರೆದೊಯ್ಯಲು ಬಂದ. ಅವನ ಮನೆಗೆ ಹೋಗುವ ನಾಲ್ಕು ಕಿಲೋಮೀಟರ್ ಉದ್ದದ ದಾರಿಯಲ್ಲೆಲ್ಲ ಎಲ್ಲೆಡೆ ಹಳದಿ ಕೆಂಪಿನ ಸಿಂಗಾರವನ್ನೇ ಕಂಡೆವು.

ಲಕ್ಯನ ಮನೆಗೆ ಹೋಗಿ, ಸ್ನಾನ ಮುಗಿಸಿ, ಅವನ ಮನೆಯನ್ನು ನೋಡಿ ಬಳಿಕ ಗೋಕಾಕ ಅರ್‍ಬಿಗೆ ಹೋಗೋಣ ಎಂದು ನಾನು ಮತ್ತು ಜಗ್ಗು ತೀರ್‍ಮಾನಿಸಿದೆವು. ಲಕ್ಯ ನಮ್ಮನ್ನು ರಯ್ಲು ನಿಲ್ದಾಣದ ವರೆಗೆ ಬಿಟ್ಟು ಹಿಂದಿರುಗುವಾಗ ಮತ್ತೆ ಬರುತ್ತೇನೆಂದು ಹೇಳಿ ಹೊರಟ. ನಮಗೆ ಅಲ್ಲಿಂದ ಗೋಕಾಕಕ್ಕೆ ರಯ್ಲು ಸಿಗದ ಕಾರಣ ಗಟಪ್ರಬದಿಂದ ಹಾದು ಹೋಗುವ ರಯ್ಲಿಗೆ ಟಿಕೆಟ್ ಕೊಂಡು ಹತ್ತಿಕೊಂಡೆವು.

ನಾವು ಹತ್ತಿದ ಬೋಗಿ ಕಾಲಿಯಾಗಿತ್ತು. ಪಕ್ಕದ ಬೋಗಿಗಳೂ ಕಾಲಿಯಿದ್ದವು. ರಯ್ಲು ದಾರಿಯಲ್ಲಿ ಅಲ್ಲಿಂದ ಗಟಪ್ರಬ 60 ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ, ನಾನು ಮತ್ತು ಜಗ್ಗು ಇಬ್ಬರೂ ಹಾಯಾಗಿ, ಹರಟೆ ಹೊಡೆಯುತ್ತ, ಬೋಗಿಯಲ್ಲೆಲ್ಲ ಓಡಾಡುತ್ತ, ಕೆಲ ಹೊತ್ತು ಬಾಗಿಲಲ್ಲಿ ನಿಂತುಕೊಂಡು – ಹೀಗೆ ನಮ್ಮ ಸುತ್ತಾಟದ ನಲಿವಿನಲ್ಲಿ ಕಳೆದುಹೋಗಿದ್ದೆವು. ಇದ್ದಕ್ಕಿದ್ದಂತೆ ಒಬ್ಬ ಟಿ.ಸಿ. ಬಂದು ಟಿಕೆಟ್ ಕೇಳಿದ. ಅದನ್ನು ತೋರಿಸಿದಕ್ಕೆ, “ಈ ಚೀಟಿ ಎರಡನೇ ದರ್‍ಜೆಗೆ. ಆದರೆ ನೀವು ರಿಜರ್‍ವೇಶನ್ ನಲ್ಲಿ ಹತ್ತಿಕೊಂಡಿದ್ದೀರಿ, ದಂಡ ತೆರಬೇಕು” ಎಂದು ಚಕ್ಕನೆ ತನ್ನ ಕಯ್ಯಲ್ಲಿದ್ದ ದಂಡದ ಪುಸ್ತಕವನ್ನು ತೆಗೆದ. ನಮಗಿದು ಗೊತ್ತಿರಲಿಲ್ಲ, ದಂಡ ಹಾಕಬೇಡಿ ಎಂದು ಮೆಲುದನಿಯಲ್ಲೇ ಕೇಳಿಕೊಂಡೆವು. ಅದಕ್ಕೆ ಸರಿ ಎಂದು ಒಪ್ಪಿಕೊಂಡು, ಆದರೆ ಮುಂದಿನ ನಿಲ್ದಾಣದಲ್ಲಿ ಇಳಿದುಕೊಂಡು ಎರಡನೇ ದರ್‍ಜೆಗೆ ಹೋಗಬೇಕು ಎಂದು ಎಚ್ಚರಿಸಿದ. ಸದ್ಯ ಎಂದು ನಿಟ್ಟುಸಿರು ಬಿಡುತ್ತ ಮತ್ತೆ ಬೋಗಿಯೆಲ್ಲ ಹರಟೆ ಹೊಡೆಯುತ್ತ ಓಡಾಡಲು ಶುರು ಮಾಡಿದೆವು.

ಇಳಿದು ಎರಡನೇ ದರ್‍ಜೆ ಬೋಗಿಗೆ ಹೋಗೋಣ ಅಂತ ಇದ್ದರೂ ನಡುವೆ ಯಾವುದೇ ನಿಲ್ದಾಣ ಬರಲಿಲ್ಲ. ಗಟಪ್ರಬ ಬಂದೇ ಬಿಟ್ಟಿತು. ಅಲ್ಲಿ ಗಟಪ್ರಬ ಆಣೆಕಟ್ಟು ಮತ್ತು ಹಕ್ಕಿ ಕಾಹುನೆಲೆ, ಅಂದರೆ ಪಕ್ಶಿದಾಮ ಇದೆ ಎಂಬುದು ಜಗ್ಗು ಮೊದಲೇ ತಿಳಿದುಕೊಂಡಿದ್ದ. ಅಲ್ಲಿ ಇಳಿದ ಕೂಡಲೇ “ಇಲ್ಲಿ ಬರ್‍ಡ್ ಸ್ಯಾಂಕ್ಚುರಿ ಎಲ್ಲಿದೆ” ಎಂದು ಕೇಳಲು ಹೊರಟ ಜಗ್ಗುಗೆ, ನಾನು, ಹಾಗೆ ಅನ್ನಬೇಡ, ಪಕ್ಶಿದಾಮ ಅಂತ ಕೇಳು ಎಂದೆ. “ಅಯ್ಯೋ ಹವ್ದಲ್ವಾ…” ಎಂದ ಅವನು ಪಕ್ಶಿದಾಮ ಕೇಳುತ್ತ ಹೊರಟನು. ರಯ್ಲಿಂದ ಇಳಿದ ಒಬ್ಬರು “ನಾವು ಇದೇ ಊರಿನವರು, ನಮಗೇ ಗೊತ್ತಿಲ್ಲವಲ್ಲ ಪಕ್ಶಿದಾಮದ ಬಗ್ಗೆ, ನೀವು ಬೆಂಗಳೂರಿನವರಾಗಿದ್ದೂ ತಿಳಿದುಕೊಂಡಿದ್ದೀರಲ್ಲಾ?” ಎಂದು ಸೋಜಿಗ ಪಟ್ಟರು. ಮುಂದೆ, ಅಲ್ಲಿಗೆ ಹೋಗಲು ಜೀಪ್ ಸಿಗುತ್ತದೆ ಎಂಬ ವಿಶಯ ತಿಳಿಯಿತು. ಅಲ್ಲೇ ಪ್ಯಾರ್‍ಲೆ ಹಣ್ಣು ಕೊಂಡು ತಿನ್ನುತ್ತ ಗಟಪ್ರಬದ ಊರಿನೊಳಗೆ ನಡೆಯುತ್ತ ಬಂದೆವು.

ಇಲ್ಲೂ ಬೆಳಗಾವಿಯಂತೆ ರಾಜ್ಯೋತ್ಸವದ ಸಂಬ್ರಮ ಜೋರಾಗಿಯೇ ಇತ್ತು. ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತಿದ್ದವು. ಪಕ್ಶಿದಾಮದ ಕಡೆಗೆ ಹೋಗುವ ಜೀಪ್ ತುಂಬಾ ಆಗಲೇ ಜನ ತುಂಬಿದ್ದರು. ಇದರಲ್ಲಿ ಕೂತು ಹೋಗುವುದು ಹೇಗೆ ಎಂದು ಯೋಚಿಸುತ್ತಿದ್ದೆವು, ಆಶ್ಟರಲ್ಲೇ ಜೀಪಿನ ಹೊರಗೆ ಕಂಬಿ ಹಿಡಿದುಕೊಂಡು, ನೇತಾಡಿಕೊಂಡು ಹೋಗಬಹುದೆಂಬ ವಿಶಯ ಗೊತ್ತಾಯಿತು. ನಮಗೂ ಅದೇ ಬೇಕಾಗಿದ್ದಿದ್ದು. ಜೀಪ್ ಹೊರಟ ಕೂಡಲೇ ಹಿಂದೆಯಿಂದ, ಮತ್ತು ಪಕ್ಕಗಳಲ್ಲಿ ಹಲವು ಮಂದಿ ಹತ್ತಿಕೊಂಡರು. ನಾವಿಬ್ಬರೂ ಹಿಂದೆಯಿಂದ ಹತ್ತಿ ನೇತಾಡಿಕೊಂಡೇ ಆ ಹಕ್ಕಿ ಕಾಹುನೆಲೆಯ ನಿಲ್ದಾಣಕ್ಕೆ ಬಂದು ಸೇರಿದೆವು. ಅಲ್ಲಿಂದ ಸುಮಾರು ಅರೆ ಕಿಲೋಮೀಟರ್ ನಡೆದು ಹೋದರೆ ಗಟಪ್ರಬ ಅಣೆಕಟ್ಟು.

ಅಲ್ಲಿನ ಇನ್ಸ್ ಪೆಕ್ಶನ್ ಬಂಗಲೆಗೆ ಬಂದಾಗ ನಮಗೆ ತಿಳಿದಿದ್ದು, ಹಕ್ಕಿ ಕಾಹುನೆಲೆಗೆ ಹೋಗಲು ಹೊಳೆ ದಾಟಬೇಕು ಆದರೆ ಹಾಗೆ ದಾಟಲು ದೋಣಿ ಸಿಗುವುದಿಲ್ಲ ಎಂದು. ಮೊದಲು ದೋಣಿ ವಿಹಾರವಿತ್ತಂತೆ, ಆದರೆ ಪ್ರವಾಸಿಗರ ಕೊರತೆಯಿಂದಾಗಿ ಅದನ್ನು ನಿಲ್ಲಿಸಲಾಗಿದೆಯಂತೆ. ಬೇಸರಗೊಂಡ ನಾವು ಅಣೆಕಟ್ಟು ನೋಡಲು ಹೊರಟೆವು. ಅಲ್ಲೇ ಕಟ್ಟೆಯ ಮೇಲೆ ನಮಗೆ ಒಂದು ದೊಡ್ಡ ಏಡಿ ಕಂಡಿತು. ಅದನ್ನು ಕೊಂಚ ಆಟವಾಡಿಸಿ, ಕೆಲವು ಪೋಟೋಗಳನ್ನು ತೆಗೆದು, ಬೆದರಿ ಹೋಗಿದ್ದ ಅದನ್ನು ಅದರ ಪಾಡಿಗೆ ಬಿಟ್ಟು ಹೊರಟೆವು. ಕಟ್ಟೆಯ ಮೇಲೆ ಹಾಗೇ ನಡೆದುಕೊಂದು ಹೋದೆವು.

edi

ಬಹಳ ದೂರ ಹೋದ ಬಳಿಕ ನಮಗೆ ಒಬ್ಬ ಇಳಿವಯಸ್ಸಿನವರು ಮೀನು ಹಿಡಿಯುತ್ತಿರುವುದು ಕಂಡಿತು. ಅವರನ್ನು ವಿಚಾರಿಸಿದಾಗ 3 ಗಂಟೆಗಳಿಂದ ತಾಳ್ಮೆಯಿಂದ ಮೀನು ಹಿಡಿಯುತ್ತಿರುವೆನೆಂದು ಹೇಳಿದರು. ಅಶ್ಟು ಹೊತ್ತಾದರೂ ಅವರಿಗೆ ಸಿಕ್ಕಿದ್ದು ಒಂದೇ ಮೀನು. ಅದನ್ನು ನಮಗೆ ತೋರಿಸಿದರು. ಹಿಡಿದು ಮೂರು ಗಂಟೆಗಳಾಗಿದ್ದರೂ ಅದು ಇನ್ನೂ ಕೊಂಚ ಅಲುಗಾಡುತ್ತಿತ್ತು. ಅದರ ಪಾಡು ನೋಡಿ ನಮಗೆ ಕೊಂಚ ಬೇಸರವೂ ಆಯಿತು. ಮೀನು ಹಿಡಿಯುವುದಕ್ಕೆ ಅವರು ಒಂದು ಪ್ಲಾಸ್ಟಿಕ್ ಚೀಲದ ತುಂಬ ಇಟ್ಟುಕೊಂಡಿದ್ದ ಹುಳುಗಳನ್ನು ನೋಡಿ, ಇದು ಯಾವ ಜಾತಿಯ ಹುಳು ಎಂದು ಕೇಳಿದೆವು. ಅದಕ್ಕೆ ಇಲ್ಲ, ಅದು ಕೋಳಿಯ ಕರುಳು ಎಂದು ಮಾರುಲಿದರು. ಅದನ್ನೇ ಬೆರಗಿನಿಂದ, ಕುತೂಹಲದಿಂದ ನೋಡಿದೆವು.

ಪಕ್ಕದಲ್ಲೇ ಆ ಅಣೆಕಟ್ಟಿನ ನಡುಗೋಡೆ ಇತ್ತು. ಆ ಗೋಡೆಯಲ್ಲೇ ಕೆಳಗೆ ಅಣೆಕಟ್ಟಿನ ಬಾಗಿಲುಗಳು ಇವೆ. ಮೇಲಿಂದ ನಮಗೆ ಒಂದೆರಡು ಬಾಗಿಲುಗಳಿಂದ ರಬಸವಾಗಿ ಹರಿಯುತ್ತಿರುವ ನೀರು ಕಾಣಿಸುತ್ತದೆ. ಅಲ್ಲಿ ಆ ನಡುಗೋಡೆಯ ಮೇಲೆ ಹೋಗಿ, ಬೋರ್‍ಗರೆಯುವ ನೀರನ್ನು ನೋಡಿ, ಕೊಂಚ ಹೊತ್ತು ಕಳೆದೆವು.

2013-11-16 14.11.03

ಆಮೇಲೆ ಮೀನು ಹಿಡಿಯುತ್ತಿದ್ದ ಆ ಹಿರಿಯನಿಗೆ ಹೇಳಿ ಹೊರಟು ಬಂದೆವು. ಇನ್ಸ್ ಪೆಕ್ಶನ್ ಬಂಗಲೆಯ ಕಯ್ದೋಟದಲ್ಲಿ ಮರದಡಿ ಕೊಂಚ ಹೊತ್ತು ಮಲಗಿ, ಆಮೇಲೆ ಅಲ್ಲಿಂದಲೇ ಗೋಕಾಕದ ಕಡೆಗೆ ಹೋಗುವ ಜೀಪ್ ಹಿಡಿದೆವು.

ಗೊಕಾಕದಲ್ಲಿಯೂ ಮತ್ತೆ ಹಳದಿ ಕೆಂಪು ತೋರಣಗಳು, ಬಾವುಟಗಳು ನಮಗೆ ಸ್ವಾಗತ ಕೋರಿದವು. ಅಲ್ಲೇ ಒಂದು ಅಂಗಡಿಯಲ್ಲಿ ಗಿರಮಿಟ್ಟು, ಮೆಣಸಿನಕಾಯಿ ಬಜ್ಜಿ, ಟೀ ಕುಡಿದು ಗೋಕಾಕ ಅರ್‍ಬಿಯ ಕಡೆಗೆ ನಡೆದೆವು. ಅಲ್ಲಿ ಒಂದು ಅಂದವಾದ ಮರದ ಸೇತುವೆ ದಾಟಬೇಕು. ಮಳೆಗಾಲ ಮುಗಿದಿದ್ದರಿಂದ ನೀರು ತೀರಾ ಕಡಿಮೆ ಇತ್ತು. ಅದನ್ನು ದಾಟಿ ಕೆಳಗಿಳಿದು ಅರ್‍ಬಿಯು ಬೀಳುವ ಎಡೆಗೆ ಬಂದು ಕುಳಿತೆವು. ಎಂದಿನಂತೆ ಅಲ್ಲೇ ಕುಳಿತು ಸಾಕಶ್ಟು ಹರಟೆ ಹೊಡೆದೆವು. ಕತ್ತಲಾಗಲು ಶುರುವಾಯಿತು. ಚಂದಿರವೂ ಕಾಣಿಸಿಕೊಂಡಿತು. ಸಂಜೆಯ ಕೆಂಪಿಗೆ, ಮತ್ತು ತಿಂಗಳ ತಿಳಿ ಬೆಳಕಿಗೆ ಆ ಕಣಿವೆಯು ಚೆಲುವಿನಿಂದ ಕಂಗೊಳಿಸಿತು. ಅದನ್ನೇ ಕೊಂಚ ಹೊತ್ತು ನೋಡುತ್ತ ನಿಂತೆವು.

2013-11-16 18.12.47

ಅಲ್ಲಿಂದ ಗೋಕಾಕ ರಯ್ಲು ನಿಲ್ದಾಣ ಕೊಂಚವೇ ದೂರ. ಬಸ್ಸು ಹಿಡಿದು, ಅಲ್ಲಿಗೆ ಹೋಗಿ, ಮತ್ತೆ ರಯ್ಲು ಹಿಡಿದು ಬೆಳಗಾವಿ ತಲುಪಿದೆವು. ಲಕ್ಯನ ಜೊತೆ ಕೊಂಚ ಅಲ್ಲಿ ಇಲ್ಲಿ ಅಡ್ಡಾಡಿ, ಪಾನಿ ಪೂರಿ ತಿಂದು, ಕುಂದ ಕೊಂಡು, ಇರುಳು ತಡವಾಗಿಯೇ ಮನೆಗೆ ಹಿಂತಿರುಗಿದೆವು. ದಣಿದಿದ್ದರಿಂದ ಮಾರನೇ ದಿನ ಎಲ್ಲೂ ಹೋಗಲಿಲ್ಲ. ಲಕ್ಯ, ನಾನು, ಜಗ್ಗು, ಹರಟೆ ಹೊಡೆಯುತ್ತ ಮನೆಯಲ್ಲೇ ಕಾಲ ಕಳೆದು ಇರುಳಿಗೆ ಬೆಂಗಳೂರಿನ ಬಸ್ಸು ಹಿಡಿದು ಹಿಂದಿರುಗಿದೆವು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: