ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

ಜಯತೀರ‍್ತ ನಾಡಗವ್ಡ.

hyundai-ix35-fuel-cell-car

(ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು)

ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ ಹೊಗೆ ಕೊಳವೆಯ ಮೂಲಕ ಉಗುಳುವ ಕೆಡುಗಾಳಿಯಿಂದ ಉಂಟಾಗುವ ಹಾನಿ ತಡೆಯಲು ಬಂಡಿ ತಯಾರಕ ಕೂಟಗಳು ಹಲವಾರು ಚಳಕರಿಮೆ ಅಣಿಗೊಳಿಸಿ ಗಾಳಿ ಶುದ್ದವಾಗಿರಿಸಲು ಹೆಜ್ಜೆ ಹಾಕಿವೆ.

ಈ ಕೆಡುಗಾಳಿ ಕಡಿಮೆ ಮಾಡಲು ಪೋಕ್ಸ್ ವ್ಯಾಗನ್, ಜನರಲ್ ಮೋಟಾರ‍್ಸ್ , ಪೋರ‍್ಡ್, ಅವ್ಡಿ,ಬಿ.ಎಂ.ಡ್ಬ್ಲ್ಯೂ, ಮರ‍್ಸಿಡೀಸ್, ಟೊಯೊಟಾ, ನಿಸ್ಸಾನ್, ಹ್ಯೂಂಡಾಯ್ ಹೀಗೆ ಹೆಚ್ಚು ಕಡಿಮೆ ಜಗತ್ತಿನ ಎಲ್ಲ ಕಾರು ಕೂಟಗಳ ಅರಕೆಮನೆಯಲ್ಲಿ ಹಯ್ಡ್ರೋಜನ್‍ನಿಂದ ನಡೆಯುವ ಉರುವಲು ಗೂಡಿನ (fuel cell) ಕಾರು ಮಾದರಿ ಸಿದ್ದಪಡಿಸಿವೆ. ಈ ಕಾರುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

fuel cell car

ಉರುವಲು ಗೂಡು (fuel cell) ಎಂದರೆ ಉರುವಲಿನಲ್ಲಿರುವ ಇರ‍್ಪದ ಕಸುವನ್ನು (chemical energy) ಉಸಿರ‍್ಗಾಳಿ (oxygen) ಬಳಸಿ ಮಿನ್ನೊಡುಯುವಿಕೆ (electrolysis) ಮೂಲಕ ಮಿಂಚುವಿನ ಕಸುವಾಗಿ ಬದಲಾಯಿಸುವ ಸಲಕರಣೆ. ಇಂದಿನ ಹೆಚ್ಚಿನ ಹಯ್ಡ್ರೋಜನ್ ಕಾರುಗಳಲ್ಲಿ ಇದನ್ನೇ ಬಳಸಿಕೊಳ್ಳಲಾಗುತ್ತಿದೆ. ಹಯ್ಡ್ರೋಜನ್ ಹೇರಳವಾಗಿ ಸಿಗುವ ಗಾಳಿ, ಆದರೆ ಇದು ನೀರಿನಲ್ಲಿ H2O ಆಗಿ ಸಿಗುತ್ತದೆ.

ನೀರಿನಲ್ಲಿರುವ ಹಯ್ಡ್ರೋಜನ್ ಮತ್ತು ಉಸಿರ‍್ಗಾಳಿಯ ಕಣಗಳನ್ನು ಬೇರ‍್ಪಡಿಸುವದನ್ನೇ ಮಿನ್ನೊಡುಯುವಿಕೆ ಎನ್ನಲಾಗುತ್ತದೆ. ಇದರಲ್ಲಿ ಏರುಗಣೆ (Anode), ಇಳಿಗಣೆ(cathode) ಮತ್ತು ಮಿಂಚೋಡುಕ (Electrolyte) ಎಸಕದ ಮೂಲಕ ಹಯ್ಡ್ರೋಜನ್,ಉಸಿರ‍್ಗಾಳಿ ಕಣಗಳು ಬೇರ‍್ಪಡುತ್ತವೆ ಅಲ್ಲದೇ ಮಿಂಚು ಕೂಡ ಹರಿಯುತ್ತದೆ.ಈ ಮಿಂಚಿನ ಕಸುವನ್ನೇ ಬಳಸಿಕೊಂಡು ಹಯ್ಡ್ರೋಜನ್ ಬಂಡಿಗಳು ಸಾಗುತ್ತ ಹೊಗೆ ಕೊಳವೆಯಿಂದ ಕೆಟ್ಟ ಹೊಗೆ ಬರದೆ ಬರಿ ನೀರಾವಿ (steam) ಸೂಸುತ್ತವೆ.

fuel cell1

ಬಹಳಶ್ಟು ಹಯ್ಡ್ರೋಜನ್ ಉರುವಲಿನ ಕಾರುಗಳು ಪಿ.ಇ.ಎಂ ಪದರದ ಗೂಡುಗಳನ್ನು ಬಳಸುತ್ತವೆ. ಪಿ.ಇ.ಎಂ ಅಂದರೆ ಪ್ರೋಟಾನ್ ಎಕ್ಸ್ಚೇಂಜ್ ಮೆಂಬ್ರೇನ್ ಅಂತ. (ಕೂಡುವಣಿ/ಇಲೆಕ್ಟ್ರಾನ್ಸ್ ಅದಲು ಬದಲು ಮಾಡುವ ಪದರಿನಿಂದಾದ ಉರುವಲು ಗೂಡು) ಹಯ್ಡ್ರೋಜನ್ ಗಾಳಿ ಈ ಪದರ ಮೂಲಕ ಹರಿದಾಗ ಆನೋಡ್ ಬದಿ ಅಂದರೆ ಏರುಗಣೆಯ ಬದಿಯಲ್ಲಿ ಬಿರುಮಾಡುಕದ (catalyst) ನೆರವಿನಿಂದ ಹಯ್ಡ್ರೋಜನ್ ಕಣಗಳು ಕೂಡುವಣಿ (proton) ಮತ್ತು ಕಳೆವಣಿಗಳಾಗಿ (electrons) ಮಾರ‍್ಪಡುತ್ತವೆ.

ಕೂಡುವಣಿಗಳು ಆಕ್ಸಿಡೆಂಟ್ಗಳೊಂದಿಗೆ ಬೆರೆತು ಕೂಡುವಣಿಯ ಪದರ ಕಟ್ಟಿಕೊಳ್ಳುತ್ತವೆ. ಕಳೆವಣಿಗಳು ಇದರ ವಿರುದ್ದ ಹೊರಸುತ್ತಿನತ್ತ (external circuit) ಹರಿದು ಮಿಂಚಿನ ಕಸುವು ಹುಟ್ಟುಹಾಕುತ್ತವೆ. ಅತ್ತ ಕ್ಯಾತೋಡ್ ಬದಿ ಅಂದರೆ ಇಳಿಗಣೆ ಬದಿಯಲ್ಲಿ ಉಸಿರ‍್ಗಾಳಿ ಕಣಗಳು ಕೂಡುವಣಿ ಜೊತೆ ಬೆರೆತು ಕೊಂಡು ನೀರನ್ನು ತಯಾರಿಸುತ್ತವೆ ಮತ್ತು ಎಂದಿನಂತೆ ಕಳೆವಣಿಗಳು ಮಿನ್ಸುತ್ತಿನತ್ತ (electrical circuit) ಹರಿದು ಹೋಗುತ್ತವೆ. ಏರುಗಣೆಯ ಬದಿಯ ಎಸಕಕ್ಕೆ(reaction) ಪ್ಲ್ಯಾಟಿನಂ ಬಿರುಮಾಡಕ ನೆರವಾದರೆ, ಇಳಿಗಣೆಯ ಬದಿಗೆ ನಿಕ್ಕೆಲ್‍ನಂತ ಜಲ್ಲಿಯು (Metal) ಬಿರುಮಾಡಕವಾಗಿ ಎಸಕ ಪೂರ‍್ಣಗೊಳ್ಳಲು ಕೆಲಸಮಾಡುತ್ತದೆ.

fuel cell2

fuel cell3

ಇಂತ ಮಿನ್ನೊಡೆಯುವಿಕೆಯಿಂದ ಉಂಟಾದ ಮಿಂಚಿನ ಒತ್ತಾಟ (electrical voltage) 0.6 ರಿಂದ 0.7 ವೋಲ್ಟ್ ರಶ್ಟು ಮಾತ್ರವೇ ಆಗಿರುತ್ತದೆ, ಇದನ್ನು ಹೆಚ್ಚುಗೊಳಿಸಿ ಬಂಡಿಯನ್ನು ನಡೆಸಲು ಇಂತ ಪದರುಗಳ ಗೂಡನ್ನು ಜೋಡಿಯಾಗಿಯೋ ಇಲ್ಲವೇ ಸರಣಿಯಲ್ಲಿಯೋ ಒಂದಕ್ಕೊಂದು ಹುಲ್ಲಿನ ಬಣವೆಯಂತೆ ಜೋಡಣೆಗೊಳಿಸಿ ಹೆಚ್ಚು ಮಿಂಚಿನ ಒತ್ತಾಟ ಪಡೆದುಕೊಳ್ಳಲಾಗುತ್ತದೆ. ಇವನ್ನು ಜೋಡಿಸಲು ಇಬ್ಬದಿಯ ತಟ್ಟೆಗಳನ್ನು (Bipolar plates) ಬಳಕೆ ಮಾಡಲಾಗುತ್ತದೆ.

ಹೆಚ್ಚು ಮಿಂಚಿನ ಒತ್ತಾಟ ಪಡೆದಶ್ಟು ಹೆಚ್ಚು ಮಿಂಚು ಹರಿದು ಬಂಡಿಯಲ್ಲಿರುವ ಮಿಂಚುಓಡುಗೆಗೆ(Electric Motor) ಕಸು ನೀಡಿ ಬಂಡಿಯನ್ನು ಮುಂದಕ್ಕೆ ಓಡಿಸುತ್ತದೆ. ಇಂತ ಉರುವಲು ಗೂಡಿನ ಪದರು(membrane) ಮಾಡಲು ವಿವಿದ ಮಿಂಚೋಡುಕ(Electrolyte) ವಸ್ತುಗಳ ಬಳಕೆಯ ಬಗ್ಗೆ ಅರಕೆಗಾರರು ಸಾಕಶ್ಟು ಕೆಲಸದಲ್ಲಿ ತೊಡಗಿದ್ದಾರೆ.

ಜಗತ್ತಿನಲ್ಲಿ ರಬಸದಲ್ಲಿ ಮುನ್ನುಗ್ಗುತ್ತಿರುವ ತೆಂಕಣ ಕೊರಿಯಾದ ಪ್ರಮುಕ ಹ್ಯೂಂಡಾಯ್ ತಾನೋಡ ಕೂಟ ವಾತಾವರಣ ಹಸಿರಾಗಿಸಿರಲು ಇದೇ ಚಳಕದ ಹಲಬಳಕೆಯ ಟಸ್ಕಾನ್ ಬಂಡಿ ತಯಾರಿಸಿ ಜಿನೀವಾ ತೋರ‍್ಪಿನಲ್ಲಿ ಗಮನಸೆಳೆದಿತ್ತು. ಟಸ್ಕಾನ್ ಆಯ್ ಎಕ್ಸ್-35 ಎಂದು ಕರೆಯಲಾಗುವ ಈ ಮಾದರಿಯ ಕೆಲವು ವಿಶೇಶಗಳೆಂದರೆ: ಇದು 12.3 ಪವಂಡ (ಸುಮಾರು 5.5 ಕೆ.ಜಿ) ತೂಕದ ಹಯ್ಡ್ರೋಜನ್ ಗಾಳಿ ಚೀಲ ಹೊಂದಿದೆ, ಇದರ ಮೂಲಕವೇ ಹಯ್ಡ್ರೋಜನ್ ಉರುವಲು ಗೂಡುನಲ್ಲಿ ಬೆರೆತು ಕಸು ಉಂಟುಮಾಡುತ್ತದೆ.

134 ಕುದುರೆಬಲ (134hp=98.5 ಕಿಲೋವ್ಯಾಟ್) ಮತ್ತು 300 ನ್ಯೂಟನ್-ಮೀಟರ್ ಸೆಳೆಬಲದ (torque) ಈ ಬಂಡಿ ಗಂಟೆಗೆ 158 ಕಿ.ಮೀ. ಗಿಂತಲೂ ಹೆಚ್ಚು ವೇಗದಲ್ಲಿ ಓಡಬಲ್ಲದು. 5.5 ಕೆ.ಜಿ ತೂಕದ ಉರುವಲಿನ ಚೀಲ ಇದನ್ನು 400 ಮಯ್ಲಿ ಅಂದರೆ 640 ಕಿ.ಮೀ.ವರೆಗೆ ಸುಲಬವಾಗಿ ನಡೆಸಬಲ್ಲದು. ಈ ಮೊದಲೇ ಉರುವಲ ಗೂಡಿನ ಕಾರಿನ ಮಾದರಿ ಸಿದ್ದಪಡಿಸಿದ್ದ ಹ್ಯೂಂಡಾಯ್ ಆಯ್ ಎಕ್ಸ್-35 ರಲ್ಲಿ ಸಾಕಶ್ಟು ಬದಲಾವಣೆ ಮಾಡಿ ಕಡಿಮೆ ವೆಚ್ಚದಲ್ಲಿ ಕಾರು ತಯಾರಿಸುವ ಯತ್ನಕ್ಕೆ ಕಯ್ ಹಾಕಿದಂತೆ ತೋರುತ್ತದೆ.

ಉರುವಲು ಗೂಡುಗಳ ಬಣವೆ ಜೋಡಿಸಲು ತಟ್ಟೆಯಂತೆ ಬಳಸಲಾಗುತ್ತಿದ್ದ ಗ್ರಾಪಯ್ಟ್ ಬದಲು ಜಲ್ಲಿಯನ್ನು (metal), ಸೆಳೆಗಲ್ಲಿನ (magnet) ಮಿಂಚು ಓಡುಗೆಯ ಬದಲು ಉಂಟುಮಾಡಿಕೆಯ ಓಡುಗೆಯನ್ನು (Induction motor) ಬಳಸಿ ಕಾಸಿಗೆ ಕತ್ತರಿ ಹಾಕಿ ಕಡಿಮೆ ದುಡ್ಡಿನ ಕಾರಿಗಿಸಲು ಹೊರಟಿದೆ ಹ್ಯೂಂಡಾಯ್.

ಹಯ್ಡ್ರೋಜನ್ ಬಂಡಿಗಳು ಇಶ್ಟೊಂದು ಒಳಿತಿನದಾಗಿರುವಾಗ ನಮಗೇಕೆ ಡೀಸಲ್, ಪೆಟ್ರೋಲ್ ಬಂಡಿಗಳು ಎಂಬ ಕೇಳ್ವಿ ಹಲವರಲ್ಲಿದೆ. ಇದಕ್ಕೆ ಪ್ರಮುಕ ಕಾರಣಗಳು ಈ ರೀತಿಯಾಗಿರುತ್ತವೆ. ಮೊದಲನೆಯದಾಗಿ ಈ ಚಳಕದ ವೆಚ್ಚ. ಪ್ಯಾಟಿನಂ ಜಲ್ಲಿ ದುಬಾರಿ ವೆಚ್ಚದ್ದಾಗಿದ್ದು ಇದನ್ನು ಮಿನ್ನೊಡೆಯುವಿಕೆಗೆ ಬಿರುಮಾಡುಕನಾಗಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ಹಯ್ಡ್ರೋಜನ್ ಬಂಡಿ ವೆಚ್ಚ ಡೀಸಲ್,ಪೆಟ್ರೋಲ್ ಬಂಡಿಗಿಂತ ಸಾಕಶ್ಟು ಏರುಮುಕವಾಗುತ್ತದೆ.

ಹಯ್ಡ್ರೋಜನ್ ಗಾಳಿಯನ್ನು ಉರುವಲು ಚೀಲದಲ್ಲಿ ಶೇಕರಿಸಿಡುವುದು ಕಶ್ಟದ ಕೆಲಸವೇ ಆಗಿದೆ. ಇದನ್ನು ಹೆಚ್ಚು ಕೂಡಿಟ್ಟರೆ ಬೆಚ್ಚಗಾಗಿ ಹಿಗ್ಗಲು (expand) ಆರಂಬಿಸುತ್ತದೆ. ಹಿಗ್ಗಿದ ಹಯ್ಡ್ರೋಜನ್ ಅನ್ನು ಮೇಲಿಂದ ಮೇಲೆ ಹೊರಹಾಕಲು ತಕ್ಕ ಏರ‍್ಪಾಟನ್ನು ಮಾಡಬೇಕಿರುತ್ತದೆ.

ಹಯ್ಡ್ರೋಜನ್ ಉರಿದುಕೊಳ್ಳಲು ತಕ್ಕುದಾದ ಗಾಳಿಗಳಲ್ಲೊಂದು, ಇದು ವಾತಾವರಣಕ್ಕೆ ಸೇರಿಕೊಂಡರೆ ಸ್ಪೋಟಗೊಳ್ಳುವುದುಂಟು. ಇತರೆ ಪೆಟ್ರೋಲಿಯಂ ಉತ್ಪನ್ನಗಳಶ್ಟು ಕೆಡುಕಾಗಿದ್ದರೂ ಸ್ಪೋಟದಿಂದ ಹಾನಿ ಸಾದ್ಯವಿದೆ. ಇನ್ನೂ ಹಯ್ಡ್ರೋಜನ್ ಕಾರು ಅಣಿಗೊಂಡರೆ ಸಾಕಾಗಿಲ್ಲ, ಅದಕ್ಕೆ ಬೇಕಾದ ಎಲ್ಲ ಸವ್ಕರ‍್ಯಗಳನ್ನು ಒದಗಿಸಬೇಕಾಗುತ್ತದೆ.

ಪೆಟ್ರೋಲ್ ತುಂಬಿಸಿಕೊಳ್ಳಲು ಬಂಕ್ ಗಳು ಇರುವಂತೆ ಹಯ್ಡ್ರೋಜನ್ ಬಂಕ್ ಗಳು ಬರಬೇಕಿದೆ. ಇಂತ ಸವ್ಕರ‍್ಯ ಒದಗಿಸಲು ಹತ್ತಾರು ಪಟ್ಟು ಹಣದ ಅವಶ್ಯಕತೆ ಇದ್ದರೆ ಪಳಗಿದ ಕೆಲಸಗಾರರು ಕೂಡ ಅಶ್ಟೇ ಮುಕ್ಯ. ಕ್ಯಾಲಿಪೋರ‍್ನಿಯಾ ನಗರದ ಆಳ್ವಿಗ ಹಾಲಿವುಡ್ ನ ನಟ ಅರ‍್ನಾಲ್ಡ್ ಶ್ವಾರ‍್ಜಿನೆಗ್ಗರ್ ಈ ಸವ್ಕರ‍್ಯ ಒದಗಿಸಲು ಮುಂದಾಗಿರುವುದು ಇಲ್ಲಿ ನೆನೆಸಿಕೊಳ್ಳಬಹುದು.

ಹಯ್ಡ್ರೋಜನ್ ಕಾರು ಕೆಡುಗಾಳಿ ಹೊರಗಡೆ ಹಾಕದೇ ಇರಬಹುದು, ಆದರೆ ಹಯ್ಡ್ರೋಜನ್ ಗಾಳಿಯನ್ನು ಕಲಿದ್ದಲನ್ನು ಸುಟ್ಟು ಪಡೆಯಲಾಗುತ್ತದೆ. ಇದರಿಂದ ಸಾಕಶ್ಟು ವಿಶದ ಗಾಳಿಗಳು ವಾತಾವರಣ ಸೇರಿಕೊಳ್ಳುವುದು ಕಂಡಿತ.

ಹಲವು ಅಡೆತಡೆಗಳಿದ್ದರೂ ಮುಂಬರುವ ವರುಶಗಳಲ್ಲಿ ಹಯ್ಡ್ರೋಜನ್, ಹೊಸ ಉರುವಲಾಗಿ ಹೊಮ್ಮಲಿವೆ ಮತ್ತು ಇದರಿಂದ ಡಿಸೇಲ್, ಪೆಟ್ರೋಲ್‍ನಂತಹ ಮುಗಿದುಹೋಗುತ್ತಿರುವ ಉರುವಲಗಳನ್ನು ನೆಚ್ಚಿಕೊಂಡಿರುವುದು ಕಡಿಮೆಯಾಗಲಿದೆ.

 (ತಿಟ್ಟಸೆಲೆ: inhabitat.com

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಈ ಬರಹ ಮಾಡಿದ ಕೆಲದಿನಗಳ ನಂತರ ಹ್ಯೂಂಡಾಯ್ ಆಯ್ ಎಕ್ಸ್-35 ಮಾದರಿಗೆ ಹೆಸರುವಾಸಿ “ಆಟೋ ಬಿಲ್ಡ್” ಪತ್ರಿಕೆಯ ಟರ‍್ಕಿ ನಾಡಿನ ಸಂಚಿಕೆಯ ಪ್ರಶಸ್ತಿ ಸಂದಿದೆ.ಹೆಚ್ಚಿನದನ್ನು ಇಲ್ಲಿ ಓದಬಹುದು:
    http://www.automotiveworld.com/news-releases/hyundai-ix35-fuel-cell-receives-green-steering-wheel-2013-award-turkey/

  1. 12/12/2013

    […] ಅಣಿಗೊಳಿಸಿದ್ದಾರೆ. ಹ್ಯುಂಡಾಯ್ ಕೂಟದ ಹಯ್ಡ್ರೋಜನ್ ಕಾರಿನ ಬೆಳವಣಿಗೆಯಲ್ಲೂ ಇದೇ ಕಲಿಕೆವೀಡಿನ […]

  2. 23/12/2013

    […] ಆರಯ್ಕೆ ಹಿಂದಿರುವ ಅರಿಮೆ: ಈ ಮುಂಚಿನ ಬರಹದಲ್ಲಿ ತಿಳಿಸಿದಂತೆ ಇಲ್ಲಿಯೂ […]

ಅನಿಸಿಕೆ ಬರೆಯಿರಿ: