ಅಜ್ಜಿಯ ನೆನಪು

ಸುನಿಲ್ ಮಲ್ಲೇನಹಳ್ಳಿ

Nanna-Ajji

ಬರವಣಿಗೆಯ ಮೇಲೆ ನಾಲ್ಕು ವರುಶಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು ಸದಾ ಕಾಡುತ್ತಾ ಇದ್ದದ್ದು ನಿಜ. ಆದರೆ ಈಗ ಲೇಕನ, ಪ್ರವಾಸ ಕತನ ಅತವಾ ಕವಿತೆ ಹೀಗೆ ಯಾವುದಾದರೊಂದನ್ನು ಬರೆಯಲು ಹೋದರೆ ಹೇಗೆ ಪ್ರಾರಂಬಿಸಬೇಕು? ಹೇಗೆ ಮುಂದುವರೆಸಬೇಕು? ಹೇಗೆ ಮುಗಿಸಬೇಕು? ಹೀಗೆ ಹತ್ತಾರು ವಿಚಾರಗಳು ಮನಸ್ಸಿನಲ್ಲಿ ಮೂಡಿ ಬರುತ್ತಿವೆ.

ಹೇಗೆ ಕೆಲವೊಂದು ಸನ್ನಿವೇಶ ಮತ್ತು ಗಟನೆಗಳು ನಮ್ಮನ್ನು ಬರವಣಿಗೆ ಹಾಗು ಬಾವನಲೋಕದಿಂದ ದೂರ ಕರೆದೊಯುತ್ತವೆಯೋ, ಹಾಗೆಯೇ ಕೆಲವೊಂದು  ಸನ್ನಿವೇಶ ಮತ್ತು ಗಟನೆಗಳು ನಮ್ಮನ್ನು ಬರವಣಿಗೆ ಹಾಗು ಬಾವನಲೋಕದ ಹತ್ತಿರ ಕರೆದುತರುತ್ತವೆ.   ನಾನು ಬಹಳವಾಗಿ ಗವ್ರವಿಸುತ್ತಿದ್ದ ಹಾಗು ಪ್ರೀತಿಸುತ್ತಿದ್ದ ನನ್ನ ಅಜ್ಜಿ (ಅಮ್ಮನ ಅಮ್ಮ) ಈಗ್ಗೆ ಕೆಲವು ತಿಂಗಳುಗಳ ಕೆಳಗೆ ಸ್ವರ್‍ಗಸ್ತರಾದರು.  ಅವರ ನೆನಪಲ್ಲಿ ಒಂದು ಲೇಕನ.

ನಾವು ಹಿರಿಯವರಿಂದ ಕಲಿಯಬೇಕಾಗಿರುವುದು ಬಹಳಶ್ಟು ಇರುತ್ತೆ. ಅವರ ಜೀವನದ ಅನುಬವ, ಕಶ್ಟ-ಸುಕಗಳನ್ನು ಸರಿಸಮವಾಗಿ ತೆಗೆದುಕೊಳ್ಳುವ ಮನೋಬಾವ, ಎಲ್ಲಕ್ಕಿಂತ ಮುಕ್ಯವಾಗಿ ಸ್ವಾಬಿಮಾನ ಮತ್ತು ಸ್ವಾವಲಂಬನೆ ತುಂಬಿಕೊಂಡ ಅವರ  ಬದುಕು.

ನಮ್ಮೂರಿಂದ ಎರಡೂವರೆ ಮಯ್ಲಿ ದೂರದಲ್ಲಿ  ನನ್ನಜ್ಜಿಯ ಊರು, ಅಲ್ಲಿಗೆ ಬಸ್ಸುಗಳ ಸವ್ಕರ್‍ಯವಿಲ್ಲ, ನೆಡಿಗೆಯಲ್ಲಿ ಹೋಗಬೇಕು, ಇಲ್ಲವೇ ಸಯ್ಕಲ್ಲು, ಮೋಟಾರು ವಾಹನಗಳಲ್ಲಿ ಹೋಗಬೇಕು. ನಾನು ಚಿಕ್ಕಂದಿನಲ್ಲಿ ಸಯ್ಕಲ್ಲು ಕಲಿಯುವವರೆಗೂ ಅಜ್ಜಿಯೂರಿಗೆ ನೆಡಿಗೆಯಲ್ಲೇ ಹೋಗುತ್ತಿದ್ದೆ.  ಮನೆಯಿಂದ ಹೊರಟ ಸ್ವಲ್ಪ ಸಮಯದಲ್ಲೇ ತೆಂಗಿನ ತೋಟಗಳ ಸಾಲು, ತೋಟಗಳ ಸಾಲಿನ ಕೊನೆಯಲ್ಲಿ ಬ್ರುಹದಾಕಾರದ ನಮ್ಮೂರಿನ ಕಲ್ಲುಬಂಡೆ, ಬಂಡೆ ಕೆಳಗಡೆ “ಜಲರಕಟ್ಟೆ”ಎನ್ನುವ ಕಟ್ಟೆ. ಆ ದಿನಗಳಲ್ಲಿ ನಮ್ಮೂರಿನ ಹೆಂಗಸರು ತಮ್ಮ,ತಮ್ಮ ಮನೆಯ ಕೊಳೆತುಂಬಿದ ಬಟ್ಟೆಗಳನ್ನು ಇಲ್ಲೆಯೇ ತೊಳೆಯುತ್ತಿದ್ದದ್ದು (ಈಗ ಕಾಲ ಬಹಳಶ್ಟು ಬದಲಾಗಿದೆ!). ಆ ಕಟ್ಟೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಬಯಲು ಹೊಲಗಳು, ನಂತರದಲ್ಲಿ ನನ್ನಜ್ಜಿಯೂರಿನ ಕೆರೆ (ಅದರ ಹೆಸರು ಬೊಮ್ಮೇನಹಳ್ಳಿ ಕೆರೆ). ಆ ಕೆರೆಯನ್ನು ದಾಟಿ ಸ್ವಲ್ಪ ದೂರ ನೆಡೆದರೆ ಅಜ್ಜಿಯ ಊರು ಬೊಮ್ಮೇನಹಳ್ಳಿ. ಆ ಊರನ್ನು ಲಕ್ಶ್ಮೀಪುರ ಮತ್ತು ದಿಬ್ಬ ಅನ್ನುವ ಹೆಸರಗಳಿಂದ ಕರೆಯುತ್ತಿದ್ದದ್ದು ಉಂಟು.

ಚಿಕ್ಕಂದಿನಲ್ಲಿ ಬೊಮ್ಮೇನಹಳ್ಳಿಗೆ ಹೋದಾಗಲೆಲ್ಲ ‘ಅಜ್ಜಿಮನೆ’ಗೆ ಹೋಗದೆ ನೇರವಾಗಿ ತೋಟಕ್ಕೆ ಹೋಗುತ್ತಿದೆ. ಏಕೆಂದರೆ ಬಹಳಶ್ಟು ಸಮಯವನ್ನು ಅವರು ಅಲ್ಲೆಯೇ ಕಳೆಯುತ್ತಿದ್ದರು. ಅವಳ  ಜೀವಾಳವೇ ಅಲ್ಲಿ ಇತ್ತು. ಬಡಕಲು ಶರೀರದ ನನ್ನಜ್ಜಿ  ಬಿಸಿಲಿನ ಶಾಕ ತಲೆಗೆ ತಾಗದಂತೆ ಹರಿವೆಯೊಂದನ್ನು ಕಟ್ಟಿಕೊಂಡು, ಎರಡು-ಮೂರು ಆಕಳುಗಳನ್ನು ಹಗ್ಗದ ಸಹಾಯದಿಂದ ಹಿಡಿದುಕೊಂಡು ಬದುವಿನ ಮೇಲೆ ಬೆಳೆದ ಹಸಿರು ಹುಲ್ಲನ್ನು ಮೇಯಿಸುತ್ತಿರುತ್ತಿದ್ದರು.

ನಾನು ಅವರನ್ನು ನೋಡಲು ಹೋದಾಗಲೆಲ್ಲ, ಅಮ್ಮ ಮಲ್ಲೇನಹಳ್ಳಿಯಿಂದ ಅಜ್ಜಿಗೆ ಏನಾದರೂ ತಿನ್ನಲು  ಕೊಟ್ಟಿರುತ್ತಿದ್ದರು ಅದನ್ನು ಅಜ್ಜಿಗೆ ಕೊಡುತ್ತಿದ್ದೆ. ತೋಟದಲ್ಲಿ ಇರುತ್ತಿದ್ದ ಎಳನೀರಿನ ಕಾಯಿಯನ್ನು ಕುಡಿಯಲು ನನಗೆ ಕೊಡುತ್ತಿದ್ದರು ಅಜ್ಜಿ.  ಮಲ್ಲೇನಹಳ್ಳಿಗೆ ಹೊರಡಲು ನಾನು ಇನ್ನೇನು ಸಿದ್ದನಾಗಬೇಕು ಅನ್ನುವಶ್ಟರಲ್ಲಿ ತಮ್ಮ ಸೆರಗಿನ ಗಂಟಿನಲ್ಲಿ ಕಟ್ಟಿಇಟ್ಟುಕೊಂಡಿರುತ್ತಿದ್ದ ಒಂದು ಅತವಾ ಎರಡು ರೂಪಾಯಿ ಬಿಲ್ಲೆ ಅತವಾ ನೋಟನ್ನು ನನಗೆ ಕೊಡುತ್ತಿದ್ದರು. ಆಗ ನನಗಂತೂ ಇನ್ನೀಲ್ಲದ ಕುಶಿಯಾಗುತ್ತಿತ್ತು. ನಾನು ಗಮನಿಸಿದ ಹಾಗೆ ಅವರಲ್ಲಿದ್ದ ಒಂದು ವಿಶೇಶ ಗುಣವೆಂದರೆ ಒಬ್ಬರಿಗೆ ಕೊಟ್ಟಿದ್ದನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ. ‘ಅಜ್ಜಿಮನೆ’ಯೆಂದರೆ ಬವ್ಯವಾದ ಮನೆಯೇನು ಅದಾಗಿರಲಿಲ್ಲ ಅದು ಅಪ್ಪಟ ಗುಡಿಸಲು. ಆ ದಿನಗಳಲ್ಲಿ ಅದರಲ್ಲೇ ಅಜ್ಜಿ ಮತ್ತು ಇಬ್ಬರು ಮಾವಂದಿರು ವಾಸವಿದ್ದದ್ದು.

ನಮ್ಮಜ್ಜಿಯ ತವ್ರೂರು ನನ್ನೂರೇ. ನನಗೆ ಗೊತ್ತಿರುವ ಹಾಗೆ ನಾನು ಮೂರನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮಜಿಯ ಅಮ್ಮನಿಗೆ (ಅಂದರೆ ನನ್ನ ಮುತ್ತಜ್ಜಿ) ಆರೋಗ್ಯ ಸರಿಯಿಲ್ಲದೆ ಹಾಸಿಗೆಯನ್ನು ಹಿಡಿದಾಗ ಅವರ ಆರಯ್ಕೆ ಮಾಡಲು ನಾಲ್ಕಯ್ದು ತಿಂಗಳು ಕಾಲ ದಿನನಿತ್ಯ ನನ್ನೂರಿಗೆ (ಮಲ್ಲೇನಹಳ್ಳಿ) ಕಾಲು ನೆಡಿಗೆಯಲ್ಲೇ  ಬಂದು ಹೋಗುತ್ತಿದ್ದರು. ಅಜ್ಜಿ  ನಮ್ಮೂರಿಗೆ  ಬಂದರೆ ಏನೋ ಒಂದು ತರಹ ಕುಶಿ ನಮಗೆ, ಏನಾದರೂ ತಿನ್ನಲು ತರುತ್ತಿದ್ದರು  ಬಹಳಶ್ಟು ಸಮಯ ಸವ್ತೆಕಾಯಿ ರೂಪದ ಮ್ರುದು ಹಣ್ಣನ್ನು ತರುತ್ತಿದ್ದರು. (ನಮ್ಮ ಕಡೆ ಅದಕ್ಕೆ ಕ್ಯಾಕರಿಕೆ ಹಣ್ಣು ಎಂದು ಕರೆಯುತ್ತಾರೆ), ಅದಕ್ಕೆ ಸಕ್ಕರೆ ಮತ್ತು ತೆಂಗಿನಕಾಯಿ ತುರಿ ಮಿಶ್ರಣ ಮಾಡಿಕೊಂಡು ತಿನ್ನುತ್ತಿದ್ದೆವು. ಹಬ್ಬ,ಹರಿದಿನಗಳು ಇದ್ದಾಗ ಎದ್ದು ಹೋಳಿಗೆ, ಕೀಲ್ಸ  (ರಾಗಿಯಿಂದ ಮಾಡುವ ಸಿಹಿ ತಿನಿಸು) ಮಾಡಿಕೊಂಡು ತರುತ್ತಿದ್ದರು.

2007ರಲ್ಲಿ ನನ್ನ ಅಪ್ಪಾಜಿ ತೀರಿ ಹೋದಾಗಿನಿಂದ ಅಮ್ಮನ  ಜೊತೆಗೆ ಇರಲು ಒತ್ತಾಯ ಮಾಡಿ ಅಜ್ಜಿಯನ್ನು ನಮ್ಮೂರಿಗೆ ಕರೆದುಕೊಂಡು ಬಂದಿದ್ದೆವು. ನನ್ನ ಅಜ್ಜಿಯ ಬಗ್ಗೆ  ಮೊದಲಿಗಿಂತ ಹೆಚ್ಚು ವಿಶಯಗಳು ತಿಳಿದುಬಂದದ್ದು ಆ ಸಮಯದಲ್ಲೇ. ಬೆಳಗ್ಗೆ ಆರರಿಂದ ಅವರ ದಿನ ಶುರುವಾಗುತ್ತಿತ್ತು. ದಿನನಿತ್ಯ ಮನೆ ಮತ್ತು ಅಂಗಳದ ಕಸ ಗೂಡಿಸುವುದು, ಮನೆಯ ಮುಂದೆ ಅಂಗಳ ಮತ್ತು ಹಟ್ಟಿಯಲ್ಲಿ ನೀರನ್ನು ಚುಮುಕಿಸುವುದು ಮತ್ತು  ಹೂವನ್ನು ಹಾಕುವುದು, ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು, ಸ್ನಾನ ಮಾಡಿ ದೇವರ ಪೂಜೆ ಮಾಡುವುದು, ಅಚ್ಚುಕಟ್ಟಾದ ಅಡುಗೆ ಮಾಡುವುದು. ಅಜ್ಜಿ ನಮ್ಮೂರಿನಲ್ಲಿ ಇರುವಾಗ ಅಮ್ಮನಿಗೆ ತೋಟದ ಕೆಲಸ ಬಿಟ್ಟು ಬೇರೇನು ಕೆಲಸವೇ ಇರುತ್ತಿರಲಿಲ್ಲ! ಊಟದ ವಿಶಯದಲ್ಲೂ ಅಜ್ಜಿ ಬಹಳ ಕಟ್ಟುನಿಟ್ಟು, ಅಪ್ಪಿತಪ್ಪಿಯು ಸಹ ಮಿತಿ ತಪ್ಪಿ ಊಟ ಮಾಡುತ್ತಿರಲಿಲ್ಲ, ಊಟಕ್ಕೆ ಒಪ್ಪುವ ಹಾಗೆ ಅಶ್ಟೇ ಮಿತವ್ಯಯದ ಮಾತು ಹಾಗು ಮನೆಯಲ್ಲಿ  ಅದೇ ಎಶ್ಟೇ ಜನ ನೆಂಟರು ಇರಲಿ ಹರಟು ಮಾತಿಗೆ ಕೂರದೆ ರಾತ್ರಿ ಹತ್ತಕ್ಕೆ ಮಲಗಿಬಿಡುತ್ತಿದ್ದರು.

ನಮ್ಮಜ್ಜಿ ಅಂದರೆ ತೀರ ಸಾದಾರಣ ವ್ಯಕ್ತಿತ್ವದ ವ್ಯಕ್ತಿ ಎಂದು ನನಗೆ ಯಾವತ್ತು ಅನ್ನಿಸಿಲ್ಲ. ಏಕೆಂದರೆ ಬದುಕಲಿ ಬಹಳ ಕಶ್ಟ ಅನುಬವಿಸಿದರು, ಕಶ್ಟಗಳನ್ನು ಸಹಿಸಿ  ಸಹಿಸಿ ಕಶ್ಟಗಳಿಗೆ ಹೆದರದಶ್ಟು ಗಟ್ಟಿಯಾಗಿದ್ದ ಮನೋಸ್ತಯ್ರ್ಯ ಅವರದಾಗಿತ್ತು. ಅದರಂತೆಯೇ ಯಾವುದಕ್ಕೂ ಹೆದರದೇ, ಎಲ್ಲ ಕೆಲಸಗಳನ್ನು ತಾಳ್ಮೆ, ಶಿಸ್ತಿನಿಂದ ಮಾಡುತ್ತಿದ್ದರು. ನನ್ನ ದ್ರುಶ್ಟಿಯಲ್ಲಿ ನನ್ನಜ್ಜಿಯೆಂದರೆ ಅವರು ಸದಾ ಮಂದಸ್ಮಿತ, ಚಟುವಟಿಕೆಯಿಂದ ಇರುವಂತಹ ವ್ಯಕ್ತಿ ಹಾಗು ನನಗೆ ತಿಳಿದ ಮಟ್ಟಿಗೆ ಬದುಕನ್ನು ಅರ್‍ತಪೂರ್‍ಣವಾಗಿ ಬಾಳಿ ಹೋದ ಕೆಲವರಲ್ಲಿ ಒಬ್ಬರು.

ಕೊನೆಯಲ್ಲಿ ಹೇಳುವುದಾದರೆ ದೊಡ್ಡ, ದೊಡ್ಡ ವ್ಯಕ್ತಿಗಳನ್ನು ನಮ್ಮ ಬದುಕಿನ ಆದರ್‍ಶವಾಗಿ ಇರಿಸಿಕೊಳ್ಳುವುದಕ್ಕಿಂತ ನಮ್ಮ ಹತ್ತಿರವೇ ಇರುವ ಹಾಗು ನಮ್ಮಲ್ಲಿ ಆಗಾದವಾದ ಕನಸು ಕಟ್ಟಿಕೊಂಡಿರುವ ನಮ್ಮ ತಂದೆ, ತಾಯಂದಿರು ಅತವಾ ಅಜ್ಜ, ಅಜ್ಜಿಯಂದಿರು ಇಲ್ಲವೇ ನಮ್ಮ ಶಿಕ್ಶಕರುಗಳು ಇವರಲ್ಲಿ ಯಾರನ್ನಾದರೂ ನಮ್ಮ ಆದರ್‍ಶವಾಗಿ ನೋಡುವುದು ಹೆಚ್ಚು ಸೂಕ್ತವೆಂದು ನನಗೆ ತೋರುತ್ತೆ.

(ಚಿತ್ರ: http://kanaja.in )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. smhamaha says:

    ನಿಮ್ಮ ಈ ಅಂಕಣ ಓದಿ ನನ್ನ ಅಜ್ಜಿ ನೆನಪಿಗೆ ಬಂದರು .. ಸೊಗಸಾಗಿದೆ ನಿಮ್ಮ ಅಂಕಣ

  2. dhanyavaadagalu mecchugege

ಅನಿಸಿಕೆ ಬರೆಯಿರಿ: