ಕೆಂಪೇಗೌಡರ ಬಗ್ಗೆ ಅರಿಯೋಣ

– ರತೀಶ ರತ್ನಾಕರ.

kepegowda

ಇಂದು ಡಿಸೆಂಬರ್ 14, 2013 ಕನ್ನಡಿಗರಿಗೆ ನಲಿವಿನ ದಿನ. ಬೆಂಗಳೂರಿನ ಬಾನೋಡ ನಿಲ್ದಾಣಕ್ಕೆ ‘ನಾಡಪ್ರಬು ಕೆಂಪೇಗೌಡ ಬಾನೋಡ ನಿಲ್ದಾಣ‘ ಎಂದು ಹೆಸರಿಸುವ ದಿನ. ಸಾಕಶ್ಟು ಒತ್ತಾಯ ಮತ್ತು ಹೋರಾಟದ ಬಳಿಕ ಕರ‍್ನಾಟಕದಲ್ಲಿರುವ ನಿಲ್ದಾಣಕ್ಕೆ ಕನ್ನಡಿಗರ ಹೆಸರನ್ನು ಇಡುತ್ತಿದ್ದೇವೆ. ಇದು, ನಾಡದೊರೆಗೆ ನೀಡುತ್ತಿರುವ ಗವ್ರವವಾಗಿದೆ. ಹಾಗದರೆ, ಈ ಕೆಂಪೇಗೌಡರು ಯಾರು? ಯಾವಾಗ ಮತ್ತು ಏತಕ್ಕಾಗಿ ಬೆಂಗಳೂರನ್ನು ಕಟ್ಟಿದರು? ಹೇಗೆ ಕಟ್ಟಿದರು? ಈ ಎಲ್ಲಾ ಕೇಳ್ವಿಗಳಿಗೆ ಮರುನುಡಿ ಬೇಕಿನಿಸುತ್ತದೆ ಅಲ್ಲವೇ? ಬನ್ನಿ ಹಾಗದರೆ, ಕೆಂಪೇಗೌಡರ ಕುರಿತು ಚೂರು ಅರಿಯೋಣ.

ಕೆಂಪೇಗೌಡರು ಯಲಹಂಕ ಬಳಿಯ ಒಂದು ಹಳ್ಳಿಯ ಪಾಳೇಗಾರರ ಮನೆತನದಲ್ಲಿ 1513ರಲ್ಲಿ ಹುಟ್ಟಿದರು. ಆಗ ಯಲಹಂಕವನ್ನು ಯಲಹಂಕನಾಡು ಎಂದು ಕರೆಯಾಲಾಗುತ್ತಿತ್ತು. ಚಿಕ್ಕಂದಿನಿಂದಲೇ ಚೂಟಿಯಾಗಿದ್ದ ಇವರು ತನ್ನ ಕಲಿಕೆಯನ್ನು ಅಯ್ಗೊಂದಪುರ (ಈಗಿನ ಹೆಸರಗಟ್ಟ)ದ ಗುರುಕುಲದಲ್ಲಿ ಸುಮಾರು 9 ವರ‍್ಶಗಳ ಕಾಲ ನಡೆಸಿದರು. ಯುದ್ದದ ಚಳಕಗಳನ್ನು, ಗರಡಿಯ ಕಲಿಕೆಯನ್ನು ಮತ್ತು ಆಡಳಿತ ನಡೆಸುವ ಪಾಟಗಳನ್ನು ಗುರುಕುಲದಲ್ಲಿಯೇ ಕಲಿತರು. ಕಾಡಿಗೆ ನುಗ್ಗಿ ಬೇಟೆಯಾಡುವದನ್ನು ಅತಿಯಾಗಿ ಇಶ್ಟ ಪಡುತ್ತಿದ್ದ ಕೆಂಪೇಗೌಡರು, ಆಗಿನ ಕಾಡಾಗಿದ್ದ ಬೆಂಗಳೂರಿನ ಸುತ್ತ ಮುತ್ತಲ ಜಾಗದಲ್ಲಿ ಒಂದು ಒಳ್ಳೆಯ ನಗರವನ್ನು ಕಟ್ಟಬೇಕು ಎಂಬ ಹೆಬ್ಬಯಕೆಯನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡು ಬಂದಿದ್ದರು.

ಯಲಹಂಕನಾಡಿನ ಪಾಳೇಗಾರರಾಗಿದ್ದ ಕೆಂಪನಂಜೇಗೌಡರ ಬಳಿಕ ಆಡಳಿತದ ಚುಕ್ಕಾಣಿ ಹಿಡಿದ ಕೆಂಪೇಗೌಡರು, ಆ ಕಾಲದ ಬುದ್ದಿವಂತ, ಕಲಿತ ಮತ್ತು ಯಶಸ್ಸಿನ ಪಾಳೇಗಾರರಾಗಿದ್ದರು. ವಿಜಯನಗರದ ಕರ್‍ಣಾಟ ಅರಸರ ಅಡಿಯಲ್ಲಿ ಪಾಳೇಗಾರರಾಗಿದ್ದ ಇವರು, ತಮ್ಮ ನಾಯಕತ್ವ ಗುಣ ಹಾಗು ಆಳ್ಕೆಯ ಬುದ್ದಿವಂತಿಕೆಯಿಂದ ಮಂದಿಯ ಮತ್ತು ಅರಸರ ಮೆಚ್ಚುಗೆಯನ್ನು ಪಡೆದಿದ್ದರು. ಹಾಗಾಗಿ, ಯಲಹಂಕನಾಡಿನ ಜೊತೆ ಕೆಲವು ಅಕ್ಕಪಕ್ಕದ ಜಾಗಗಳನ್ನು ಇವರ ಆಳ್ವಿಕೆಗೆಂದು ಅರಸರು ನೀಡಿದ್ದರು.

ಮೊದಲೇ ಆಡಳಿತದಲ್ಲಿ ಬುದ್ದಿವಂತರಾಗಿದ್ದ ಕೆಂಪೇಗೌಡರು, ತಮ್ಮ ಪಾಳೇಗಾರಿಕೆಯ ಊರಿನಲ್ಲಿ ಬೆಳೆಯುವ ಬೆಳೆಗಳನ್ನು ಮಾರಲು ಹತ್ತಿರದ ಒಂದು ಜಾಗವನ್ನು ನೋಡುತ್ತಿದ್ದರು. ಬೆಳೆದ ಬೆಳೆಗಳ ಸರಿಯಾದ ವಹಿವಾಟು ಆದರೆ ಮಾತ್ರ ಬೆಳೆದವನಿಗೆ ಲಾಬ ಬರುವುದು ಮತ್ತು ಆ ಮೂಲಕ ಮಂದಿಯ ಏಳಿಗೆ ಆಗುವುದು ಎಂದು ಗಟ್ಟಿಯಾಗಿ ನಂಬಿದ್ದರು. ಇದಲ್ಲದೇ, ವ್ಯಾಪಾರ ವಹಿವಾಟಿಗಾಗಿ ಹಾಗೂ ಕಾವಲು ಪಡೆಯನ್ನು ಪಳಗಿಸುವುದಕ್ಕಾಗಿ ಒಂದು ನಗರವನ್ನು ಕಟ್ಟುವುದು ಇವರ ಚಿಕ್ಕಂದಿನಿಂದ ಬಂದ ಯೋಚನೆಯಾಗಿತ್ತು. ಇದರ ಪಲವಾಗಿ ಬೆಂಗಳೂರನ್ನು ಕಟ್ಟುವ ಕೆಲಸಕ್ಕೆ ಅಡಿಗಲ್ಲು ನೆಟ್ಟರು, ಮತ್ತು ಇದಕ್ಕೆ ವಿಜಯನಗರದ ಅರಸರ ಒಪ್ಪಿಗೆಯೂ ದೊರೆಯಿತು.

ಕಾಡಾಗಿದ್ದ ಬೆಂಗಳೂರನ್ನು ಬೇಟೆಯಾಡುವಾಗ ಚೆನ್ನಾಗಿ ತಿರುಗಿದ್ದ ಕೆಂಪೇಗೌಡರಿಗೆ, ತಾವು ಕಟ್ಟುವ ನಗರ ಎಶ್ಟು ದೊಡ್ಡದಿರಬೇಕು, ಅಲ್ಲಿ ಏನೇನು ಇರಬೇಕು ಎಂದು ಮೊದಲೇ ತಿಳಿದುಕೊಂಡಿದ್ದರು. ಇದಕ್ಕಾಗಿ, ಶಿವಗಂಗೆ (ತುಮಕೂರು ಬಳಿಯ ಶಿವಗಂಗೆ) ಮತ್ತು ದೊಮ್ಮಲೂರು ಪಾಳೇಗಾರಿಕೆ ಜಾಗಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ದಾಸರಹಳ್ಳಿಯ ಪಾಳೇಗಾರರಾಗಿದ್ದ ಅಚ್ಯುತರಾಯರ ಗೆಳೆತನ ಸಂಪಾದಿಸಿದ್ದರು. 1537ರಲ್ಲಿ ಇವರು ಬೆಂಗಳೂರು ಕಟ್ಟುವ ಕೆಲಸಕ್ಕೆ ಕಯ್ ಹಾಕಿದರು. ತಾವು ಹಾಕಿಕೊಂಡ ಯೋಜನೆಯಂತೆಯೇ ನಗರವನ್ನು ಕಟ್ಟಬೇಕು ಎಂಬ ದಿಟ್ಟ ನಿಲುವಿನಿಂದ ಕೆಲಸವನ್ನು ಆರಂಬಿಸಿದರು.

ಅಚ್ಯುತರಾಯ ಮತ್ತು ಅರಸರ ನೆರವಿನಿಂದ ಒಂದು ಮಣ್ಣಿನ ಕೋಟೆಯನ್ನು ಬೆಂಗಳೂರು ನಗರದ ನಡುಬಾಗದಲ್ಲಿ (ಈಗಿನ ಚಿಕ್ಕಪೇಟೆ ) ಮೊದಲು ಕಟ್ಟಿದರು. ಆ ಕೋಟೆಯ ಒಳಗೆ ಎರೆಡು ದೊಡ್ಡ ದಾರಿಗಳಿದ್ದವು ಅದನ್ನು ಚಿಕ್ಕಪೇಟೆ ಬೀದಿ ಮತ್ತು ದೊಡ್ಡಪೇಟೆ ಬೀದಿ (ಈಗಿನ ಅವೆನ್ಯೂ ಬೀದಿ) ಎಂದು ಹೆಸರಿಸಿದರು. ಈ ಎರೆಡು ದಾರಿಗಳು ಸುತ್ತಿವರಿದ ಕೋಟೆಯ ನಟ್ಟನಡುವೆ ಕೂಡುತ್ತಿದ್ದವು ಮತ್ತು ಇದನ್ನು ದೊಡ್ಡಪೇಟೆ ಸುತ್ತು ಎಂದು ಕರೆದರು (ಈಗಿನ ಅವೆನ್ಯೂ ಸರ‍್ಕಲ್). ಉಳಿದ ಚಿಕ್ಕ ಚಿಕ್ಕ ಬೀದಿಗಳು, ದೊಡ್ಡಪೇಟೆ ಮತ್ತು ಚಿಕ್ಕಪೇಟೆ ಬೀದಿಗಳಿಗೆ ಅಡ್ಡವಾಗಿ ಇಲ್ಲವೇ ಉದ್ದವಾಗಿ ಇದ್ದವು.

ಈ ರೀತಿ ಬೀದಿಗಳನ್ನು ಮಾಡಿ, ಚಿಕ್ಕಪೇಟೆ, ದೊಡ್ಡಪೇಟೆ ಮತ್ತು ನಗರ್‍ತಪೇಟೆಗಳನ್ನು ಸಾಮಾನ್ಯ ವ್ಯಾಪಾರಕ್ಕೆಂದು (general merchandise), ಅರಳೆಪೇಟೆ(ಈಗಿನ ಕಾಟನ್ ಪೇಟೆ), ತರಗುಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಬಳೆಪೇಟೆ ಮತ್ತಿತರ ಪೇಟೆಗಳನ್ನು ಬಟ್ಟೆ, ಹತ್ತಿ, ಅಕ್ಕಿ, ರಾಗಿ, ದಿನಸಿ ಹಾಗು ಬಳೆಗಳ ವ್ಯಾಪಾರಕ್ಕೆಂದು, ಕುರುಬರಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ, ಉಪ್ಪಾರಪೇಟೆ ಮತ್ತು ಇನ್ನಿತರ ಪೇಟೆಗಳನ್ನು ಕಂಬಳಿ, ಮಡಕೆ ಮತ್ತಿತರ ಕುಲಕಸುಬಿನ ವಸ್ತುಗಳ ವ್ಯಾಪಾರಕ್ಕೆಂದು, ಮಂದಿಯು ಉಳಿದುಕೊಳ್ಳಲು ಹಲಸೂರುಪೇಟೆ, ಮನವರ್‍ತಿಪೇಟೆ, ಮುತ್ಯಾಲಪೇಟೆ ಮತ್ತು ಅಗ್ರಹಾರಗಳನ್ನು ಕಟ್ಟಿದರು. ಈ ಎಲ್ಲಾ ಪೇಟೆಗಳ ದೆಸೆಯಿಂದ ತಮ್ಮ ಪಾಳೇಗಾರಿಕೆಯ ಅಡಿಯಲ್ಲಿದ್ದ ಮಂದಿಗೆ ಕೆಲಸ ಸಿಕ್ಕಂತಾಯಿತು. ತಾವು ಬೆಳೆದ ಬೆಳೆಗಳನ್ನು ಹಾಗೂ ಕುಲಕಸುಬಿನ ವಸ್ತುಗಳನ್ನು ಮಾರಲು ಹೇಳಿಮಾಡಿಸಿದ ಜಾಗ ಆಗಿನ ಮಂದಿಗೆ ದೊರಕಿಸಿಕೊಡಲಾಗಿತ್ತು. ಇದು ಆ ಊರಿನ ರಯ್ತರು, ವ್ಯಾಪಾರಿಗಳು ಮತ್ತು ಮಂದಿಯನ್ನಲ್ಲಶ್ಟೆ ಅಲ್ಲದೇ ಬೇರೆ ಕಡೆಯ ಮಂದಿಯನ್ನು ವ್ಯಾಪರಕ್ಕೆಂದು ಸೆಳೆಯಿತು.

ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಳ್ಳೆಯ ಏರ‍್ಪಾಡಾಗಿತ್ತು. ಮಣ್ಣಿನ ಕೋಟೆಯ ಎಂಟು ದಿಕ್ಕಿಗೆ ಎಂಟು ಬಾಗಿಲುಗಳಿದ್ದವು, ಕಾವಲು ಪಡೆಯ ಸರಿಯಾದ ಏರ‍್ಪಾಡುಗಳಿತ್ತು. ಅಲ್ಲದೇ ತನ್ನ ಕಾವಲುಪಡೆಯ ತರಬೇತಿ ಕೂಡ ಅದೇ ಊರಿನಲ್ಲಿ ನಡೆಯುತ್ತಿತ್ತು. ಬೆಂಗಳೂರಿಗೆ ಒಂದು ಗಡಿಯನ್ನು ಕೂಡ ಅವರು ಮಾಡಿದ್ದರು. ದೊಡ್ಡಪೇಟೆ ಸುತ್ತಿನಿಂದ ನಾಲ್ಕು ಎತ್ತಿನ ಗಾಡಿಗಳನ್ನು ನಾಲ್ಕು ದಿಕ್ಕಿಗೆ ಒಂದು ರಾತ್ರಿಯಿಡಿ ನಡೆಸಿ ಬೆಳಗಾಗುವುದರೊಳಗೆ ಅದು ಎಲ್ಲಿ ನಿಲ್ಲುತ್ತದೆಯೋ ಅದೇ ಈ ಊರಿನ ಗಡಿಯಾಗಿರಬೇಕು ಎಂದು ಅವರು ತೀರ‍್ಮಾನಿಸಿದ್ದರು. ಈ ನಾಲ್ಕು ಗಡಿಗಳಲ್ಲಿ ಇವರ ಬಳಿಕ ಬಂದ ಎರಡನೇ ಕೆಂಪೇಗೌಡರು ಗೋಪುರಗಳನ್ನು ಕಟ್ಟಿಸಿದರು. ಅವು ಈಗಿನ ಲಾಲ್‍ಬಾಗ್, ಕೆಂಪಾಬುದಿ ಕೆರೆ, ಮೇಕ್ರಿ ಸುತ್ತು ಮತ್ತು ಹಲಸೂರು ಕೆರೆಯ ಬಳಿ ಇವೆ.

ಕುಡಿಯಲು ಮತ್ತು ಬೇಸಾಯಕ್ಕೆ ನೀರಿನ ಕೊರತೆಯಾಗಬಾರದೆಂದು ಅರಿತ ಇವರು ಅಲ್ಲಲ್ಲಿ ಕೆರೆಗಳನ್ನು ಕಟ್ಟಿಸಿದರು. ಕೋಟೆಯ ಒಳಗೆ ಗ್ರಾನಯ್ಟ್ ಕಲ್ಲುಗಳಿಂದ ಕೆರೆಯನ್ನು ಕಟ್ಟಿಸಿದರು. ಅದು ಈಗಿನ್ ಕ್ರಿಶ್ಣರಾಜ ಮಾರುಕಟ್ಟೆಯ ತೆಂಕಣ-ಪಡುವಣ ಬಾಗದಲ್ಲಿತ್ತು. ದರ‍್ಮಾಂಬುದಿ ಕೆರೆ (ಈಗಿನ ಮೆಜೆಸ್ಟಿಕ್), ಕೆಂಪಾಬುದಿ ಕೆರೆ, ಗವಿಪುರ ಗುಟ್ಟಹಳ್ಳಿ ಕೆರೆ (ಈಗ ಆರಿಹೋಗಿದೆ), ಸಂಪಿಗಾಂಬುದಿ ಕೆರೆ, ಹೆಬ್ಬಾಳ ಕೆರೆ, ಹೀಗೆ ಹಲವಾರು ಕೆರೆಗಳನ್ನು ಕಟ್ಟಿಸಿದರು. ಇಲ್ಲಿ ಗಮನಿಸಬೇಕಾದ ವಿಶಯವೆಂದರೆ, ಈ ಯಾವ ಕೆರೆಗಳೂ ಸಹಜ ಕೆರೆಗಳಲ್ಲ. ಗುಂಡಿಯನ್ನು ತೋಡಿ, ಕಲ್ಲನ್ನು ಕಟ್ಟಿ ನೀರನ್ನು ನಿಲ್ಲಿಸಿ ಕಟ್ಟಿದ ಕೆರೆಗಳಿವು.

ಇವುಗಳಲ್ಲಿ ಹಲವು ಕೆರೆಗಳು ಈಗ ಮುಚ್ಚಿ ಹೋಗಿವೆ ಆದರೆ ಉಳಿದ ಕೆರೆಗಳು ಯಾವುದೇ ಸಹಜ ಕೆರೆಗಿಂತ ಕಡಿಮೆಯೇನಿಲ್ಲ. ಕೆಂಪೇಗೌಡರ ದೂರಾಲೋಚನೆಗೆ ಹಿಡಿದ ಕನ್ನಡಿ ಈ ಕೆರೆಗಳು. ಕೆರೆಗಳು ಹೆಚ್ಚಾದಂತೆ ಆರಂಬದ ಚಟುವಟಿಕೆಗಳು ಹೆಚ್ಚಿದವು, ಹಾಲು-ಗೊಬ್ಬರಕ್ಕಾಗಿ ದನಸಾಕಣೆಯು ಹೆಚ್ಚಿತು, ಹಣ್ಣು ತರಕಾರಿಗಳ ಬೆಳೆ ಹೆಚ್ಚಾಯಿತು ಹಾಗೆಯ ಹಸಿರು ಉದ್ಯಾನಗಳು ತಲೆ ಎತ್ತಿದವು. ಅದಕ್ಕಾಗಿಯೇ ಇಂದು ಬೆಂಗಳೂರು ಉದ್ಯಾನ ನಗರಿಯಾಗಿದೆ.

ಯಲಹಂಕದಿಂದ ಬೆಂಗಳೂರಿಗೆ ತನ್ನ ಆಡಳಿತದ ಜಾಗವನ್ನು ಬದಲಿಸಿಕೊಂಡ ಇವರು ಹಲವಾರು ದೇವಸ್ತಾನಗಳನ್ನು ಕಟ್ಟಿಸಿದರು. ವಿನಾಯಕ ಮತ್ತು ಆಂಜನೇಯ ದೇವಸ್ತಾನ (ಈಗಿನ ಮಯ್ಸೂರು ಬ್ಯಾಂಕ್ ಹತ್ತಿರ), ಬಸವನಗುಡಿಯಲ್ಲಿರುವ ಬಸವನಗುಡಿ, ದೊಡ್ಡ ವಿನಾಯಕ ದೇವಸ್ತಾನ, ದೊಡ್ಡ ಆಂಜನೇಯ ದೇವಸ್ತಾನ, ಗವಿಗಂಗಾದರೇಶ್ವರ, ಹಲಸೂರು ಸೋಮೇಶ್ವರ ಹೀಗೆ ಹಲವಾರು ದೇವಸ್ತಾನಗಳನ್ನು ಕಟ್ಟಿಸಿದರು. ಅಲ್ಲದೇ ಅಗ್ರಹಾರಗಳಲ್ಲಿ ಕಲಿಕೆಮನೆಗಳನ್ನು ಕೂಡ ಕಟ್ಟಿಸಿದರು.

ಹೀಗೆ ಒಂದು ಊರಿಗೆ ಬೇಕಾದ ಎಲ್ಲಾ ಏರ‍್ಪಾಡನ್ನು ಕಟ್ಟಿಕೊಟ್ಟು ಒಳ್ಳೆಯ ಆಡಳಿತ ನಡೆಸುತ್ತಿದ್ದ ಕೆಂಪೇಗೌಡರ ಕೆಲಸವನ್ನು ನೋಡಿ ಆಗಿನ ವಿಜಯನಗರದ ಅರಸರು ಹಲಸೂರು ಪಕ್ಕದ ಹಳ್ಳಿಗಳು, ಬೇಗೂರು, ವರ‍್ತೂರು, ಜಿಗಣಿ, ತಲಗಟ್ಟಪುರ, ಕಂಬಳಗೋಡು, ಕೆಂಗೇರಿ ಮತ್ತು ಬಾಣಾವರಗಳನ್ನು ಕೂಡ ಇವರ ತೆಕ್ಕೆಗೆ ನೀಡಿದರು.

ತನ್ನ ಆಡಳಿತದಲ್ಲಿ ಹಣಕಾಸು ಮತ್ತು ಕೂಡಣದ ಏರ‍್ಪಾಡನ್ನು ಸರಿಯಾಗಿ ರೂಪಿಸಿಕೊಂಡಿದ್ದ ಇವರು ‘ಬಂಡಿ ದೇವರು’ ಎಂಬ ಕುರುಡು ನಂಬಿಕೆಯನ್ನು ನಿಲ್ಲಿಸಿದರು. ಈ ನಂಬಿಕೆಯು ಮೊರಸು ಒಕ್ಕಲಿಗ ಪಂಗಡದಲ್ಲಿ ನಡೆದುಕೊಂಡು ಬಂದಿತ್ತು. ಇದರಲ್ಲಿ ಮದುವೆಯಾದ ಹೆಂಗಸರ ಎಡಗಯ್ ಕಿರುಬೆರಳು ಮತ್ತು ಉಂಗುರ ಬೆರಳುಗಳನ್ನು ದೇವರಿಗೆಂದು ಕತ್ತರಿಸಿ ಕೊಡಲಾಗುತ್ತಿತ್ತು. ಹೀಗೆ ಒಳ್ಳೆಯ ಆಡಳಿತ ನೀಡುತ್ತಿದ್ದ ಇವರು ಮಂದಿ-ಮೆಚ್ಚಿದ ಅರಸರಾಗಿದ್ದರು.

ಕೆಂಪೇಗೌಡರು ದಿನೇ ದಿನೇ ಹೆಚ್ಚು ಹೆಸರು ಮಾಡುತ್ತಾ ಬಂದರು, ಮಂದಿಮೆಚ್ಚುಗೆಯನ್ನು ಗಳಿಸಿದ್ದ ಅವರು ಉತ್ತಮ ಆಡಳಿತ ಮತ್ತು ತಮ್ಮ ಬುದ್ದಿವಂತಿಕೆಯಿಂದ ಗಟ್ಟಿಯಾದ ನಾಡನ್ನು ಕಟ್ಟಿದ್ದರು. ಇದರಿಂದ ಅಕ್ಕಪಕ್ಕದ ಪಾಳೇಗಾರರಿಗೆ ಆತಂಕವಾಗಿತ್ತು. ವಿಜಯನಗರದ ಅರಸರಿಗೂ ಇವರ ಬೆಳವಣಿಗೆ ಬಂಡಾಯದ ಆತಂಕ ತಂದಿತ್ತು. ಅದೇ ಹೊತ್ತಿಗೆ, ನಾಡಿನ ಹಣಕಾಸು ಏರ‍್ಪಾಡಿಗೆ ಅನುಕೂಲವಾಗಲು ತಮ್ಮದೇ ಆದ ನಾಣ್ಯಗಳನ್ನು ಕೆಂಪೇಗೌಡರು ಹೊರತಂದರು, ಇದಕ್ಕೆ ಅರಸರ ಒಪ್ಪಿಗೆಯನ್ನು ಅವರು ಪಡೆದಿರಲಿಲ್ಲ. ಆಗ ಚೆನ್ನಪಟ್ಟಣದ ಪಾಳೇಗಾರ ಜಗದೇವರಾಯರು ಅರಸರಿಗೆ ದೂರನ್ನು ನೀಡಿ ಕೆಂಪೇಗೌಡರನ್ನು ಸೆರೆಮನೆ ಸೇರುವಂತೆ ಮಾಡಿದರು. ಇವರ ಪಾಳೇಗಾರಿಕೆಯ ಊರುಗಳನ್ನು ಅರಸರಿಂದ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಕೆಂಪೇಗೌಡರ ಬೆಳವಣಿಗೆಯನ್ನು ಮಟ್ಟಹಾಕುವ ಹುನ್ನಾರವು ಇದರಲ್ಲಿ ಅಡಗಿತ್ತು. ಸುಮಾರು ಅಯ್ದು ವರುಶಗಳ ಸೆರೆವಾಸದ ಬಳಿಕ ಇವರ ಬಿಡುಗಡೆಯಾಯಿತು. ಮತ್ತು ತಮ್ಮ ಪಾಳೇಗಾರಿಕೆಯಲ್ಲಿದ್ದ ಜಾಗಗಳನ್ನು ಹಿಂದಿರುಗಿಸಲಾಯಿತು. ಸೆರೆವಾಸದ ಬಳಿಕೆ ಹಲವು ವರುಶಗಳ ಕಾಲ ನಾಡನ್ನು ಆಳಿದರು. ಹೊಸ ಊರನ್ನೇ ಕಟ್ಟಿ ಬೆಳೆಸಿದ, ಬುದ್ದಿವಂತಿಕೆಯ, ಒಳ್ಳೆಯ ಆಡಳಿತಗಾರಾಗಿದ್ದ ಕೆಂಪೇಗೌಡರು 1569 ರಲ್ಲಿ ತೀರಿಹೋದರು.

ಇಂದಿಗೂ ಚಿಕ್ಕಪೇಟೆ ಸುತ್ತಲಿನ ಊರುಗಳು ವ್ಯಾಪಾರ ಕೇಂದ್ರಗಳಾಗಿಯೇ ಬೆಳೆದಿವೆ. ಚಿಕ್ಕಪೇಟೆಯ ಸುತ್ತಲಿನ ಊರುಗಳು ಕೊಂಚ ಎತ್ತರದ ಜಾಗದಲ್ಲಿವೆ, ಮಳೆಯಾಗಿ ಅಲ್ಲಿ ಬಿದ್ದ ನೀರು ಹರಿದು ದರ‍್ಮಾಂಬುದಿ ಕೆರೆಗೆ ಸೇರಬೇಕು (ಈಗಿನ ಮೆಜೆಸ್ಟಿಕ್ ಬಸ್ ನಿಲ್ದಾಣ) ಎಂಬುದು ಕೆಂಪೇಗೌಡರ ಯೋಜನೆಯಾಗಿತ್ತು. ಆಗ ಕೆರೆಗೂ ಒಳ್ಳೆಯದು ಮತ್ತು ಹೆಚ್ಚು ಮಳೆಬಂದಾಗ ಚಿಕ್ಕಪೇಟೆಗೆ ನೀರು ನುಗ್ಗುವಂತಹ ಯಾವುದೇ ತೊಂದರೆ ಇರುವುದಿಲ್ಲ. ಕೆಂಪೇಗೌಡರ ಯೋಜನೆಗಳು ಎಶ್ಟು ಒಳ್ಳೆಯದಾಗಿತ್ತು ಎಂಬುದಕ್ಕೆ ಇದು ಒಂದು ಎತ್ತುಗೆ. ಇಂತಹ ಆಡಳಿತಗಾರನ ಹೆಸರು ಯಾವಾಗಲೂ ಮತ್ತು ಎಲ್ಲೆಲ್ಲಿಯೂ ಕಾಣಸಿಗಬೇಕು. ಕೆಂಪೇಗೌಡ ರಸ್ತೆ, ಬಸ್ ನಿಲ್ದಾಣ, ಕಲಿಕೆವೀಡು ಮತ್ತು ಈಗ ಬಾನೋಡ ನಿಲ್ದಾಣ ಇವು ನಮ್ಮ ಹೆಮ್ಮೆಯ ನಾಡದೊರೆಗೆ ನಾವು ನೀಡುತ್ತಿರುವ ಗವ್ರವ.

(ಮಾಹಿತಿ ಸೆಲೆ: en.wikipedia.org)
(ಚಿತ್ರ ಸೆಲೆ: bengalurublog.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: